ಓದು ಬಜಾರ್

ಓದಿ ಇಲ್ಲಾ ಓಡಿ…

ಇಲ್ಲಿವೆ ಹೊಸ ಕೋಟು- ತೊಟ್ಟುಕೊಂಡು ನಡೆಯಿರಿ

August 31, 2008 Posted by odubazar | ಹೀಗೆ ಸುಮ್ಮನೆ.. | | No Comments Yet

ನನ್ನ ಗೋಪಾಲ

ನಿರೀಕ್ಷಿಸಿ

ಜೋಗಿ ಬರೆಯುತ್ತಾರೆ


ಇತ್ತೀಚಿಗೆ ಬಿಡುಗಡೆಯಾದ

ಪ್ರಸನ್ನ ಅವರ
ಬಾಲ ಗೋಪಾಲ

ಕಾದಂಬರಿಯ ಬಗ್ಗೆ

ಫಸ್ಟ್ ನೈಟ್ ಅಂಕಣದಲ್ಲಿ

August 29, 2008 Posted by odubazar | ಬುಕ್ ಬಜಾರ್ | | 2 Comments

ನಿಮ್ಮಮ್ಮ ಅಂದ್ರೆ ನಂಗಿಷ್ಟ

ಪ್ರಿಯರೆ,

ಇಂಥದೊಂದು ಅಭಿನಂದನೆಯನ್ನು ತಿಳಿಸಬೇಕೆಂದು ನನಗೆ ತೀವ್ರವಾಗಿ ಅನಿಸುತ್ತಿದೆಯಾದ್ದರಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ.ಬಹುಶಃ ನಾಳೆ ಇದೆಲ್ಲವನ್ನು ನಾನು ಲ್ಯಾಪ್ ನಲ್ಲಿ ಮತ್ತೆ ಟೈಪ್ ಮಾಡಿ ನಿಮಗೆ ಮೇಲ್ ಮಾಡಬಹುದು.ಸಮಯ ರಾತ್ರಿ ಒಂದು ಗಂಟೆ.ನನಗೆ ತುಂಬ ಬೇಜಾರಾದಾಗ,shattered ಅನಿಸಿದಾಗಲೆಲ್ಲ ನಿಮ್ಮ “ನಮ್ಮಮ್ಮ ಅಂದ್ರೆ ನಂಗಿಷ್ಟ” ಓದುತ್ತೇನೆ.
ಯಾಕೆಂದರೆ ಪ್ರತಿಸಾರಿ ನಾನು ಅದನ್ನು ಓದಿದಾದಗಲೂ ನಾನು ಹೊಸ ಹೊಸ ತೆರನಾದ unexplainable ಅನುಭೂತಿ ಪಡೆದಿದ್ದೇನೆ.ಅದನ್ನು ನೀವು ಸಮಾಧಾನ ಅಂತಲೋ releif ಅಂತಲೋ ಅಥವಾ re-emerging ಅಂತಲೂ ಭಾವಿಸಬಹುದು..ಅದೇನೇ ಇರಲಿ,ರಸ್ತೆ ಬದಿಯ ಹೋಟೇಲಿನಲ್ಲಿ ಅಪರೂಪಕ್ಕೊಮ್ಮೆ ತಿಂಡಿ ರುಚಿಯಾಗಿದೆ ಅಂತ ಅನಿಸಿದರೆ ನೇರವಾಗಿ ಅಡುಗೆಭಟ್ಟನಿಗೇ ಥ್ಯಾಂಕ್ಸ್ಹೇಳಿಬರುವ ನನ್ನಂಥವನಿಗೆ ನಿಮಗಿನ್ನೂ ಚಿಕ್ಕದೊಂದು ಅಭಿನಂದನೆ ಕೂಡ ತಿಳಿಸಲಾಗಲಿಲ್ಲವೆಂದು ನಾಚಿಕೆಯಾಗುತ್ತಿದೆ.
Realy sorry..ಇನ್ನು “ನಮ್ಮಮ್ಮ…” ಪುಸ್ತಕದ ಬಗ್ಗೆ ಹೇಳುವದಾದರೆ,mostly ಮುಂದೊಮ್ಮೆ ಯಾವತ್ತಾದರೂ ನೀವು ಆತ್ಮಕಥೆ ಬರೆದುಕೊಂಡರೆ ಅದರ ಬಹುಮುಖ್ಯಭಾಗ ಇದರಲ್ಲೇ ಇದೆಯೆಂದು ನಿಸ್ಸಂದೇಹವಾಗಿ ಹೇಳಬಹುದು..ಮೊದಲ ಮೂರು-ನಾಲ್ಕು ಅಧ್ಯಾಯಗಳಲ್ಲಿ ಬರುವ ನಿಮ್ಮಮ್ಮ-ನಮ್ಮೆಲ್ಲರ ಲೋಕಲ್ ಅಮ್ಮನಾಗಿಯೇ ಹೊರ ಹೊಮ್ಮಿದ್ದಾಳೆ..ಮಣಭಾರದ ಪದಗಳಿಲ್ಲ:ಶಬ್ದಗಳ ನಿರರ್ಥಕ ಕಸರತ್ತಿಲ್ಲ.ಆದರೂ ಎಷ್ಟೊಂದು ಗಟ್ಟಿಯಾಗಿ,ಜೀವಂತವಾಗಿ ಅಮ್ಮನನ್ನು ಚಿತ್ರಿಸಿಬಿಟ್ಟಿದ್ದೀರಿ..!ನೀವು ಹಾಗೆ ಬರೆದಿದ್ದೇ ಸರಿ.
ಅಮ್ಮ ಹಾಗಿದ್ದರೇ ಸರಿ.ಮನೆಯೊಳಗಿದ್ದ ಪಾತ್ರೆ ಕಾಣದಾದಾಗ ಕೆಲಸದವಳ ಮೇಲೆ ಅನುಮಾನಪಟ್ಟಿದ್ದು,ಸ್ಕೂಲ್ ಮೇಷ್ಟ್ರು ವಿಹಾರಕ್ಕೆಂದು ಕರೆದೊಯ್ದಾಗ ಒಬ್ಬಂಟಿಯಾಗಿದ್ದ ನಿಮ್ಮನ್ನು ಹುಡುಕಿಕೊಂಡು ಬಂದ ನಿಮ್ಮಮ್ಮ ಮೇಷ್ಟ್ರಿಗೆ (ಪಾಪ,ಅವರದೇನೂ ತಪ್ಪಿರದಿದ್ದರೂ ಕೂಡ!) ಹಿಡಿಶಾಪ ಹಾಕಿದ್ದು,ಮದುವೆಯಾದ ಹೊಸತರಲ್ಲಿ ಗಂಡ ಕೊಡಿಸಿದ್ದ ಸ್ಟೀಲ್ ಪಾತ್ರೆ ಹಿಡಿದುಕೊಂಡು ಊರತುಂಬೆಲ್ಲ ಪತಿರಾಯನ ಬಗ್ಗೆ ಡಾಣಾಡಂಗೂರ ಬಾರಿಸಿದ್ದ ನಿಮ್ಮಮ್ಮ-ನಿಮ್ಮ ಕಾಲೇಜಿನ ಸಮಾರಂಭದಲ್ಲಿ ನಿಮ್ಮ ತಂದೆಗೆ ಮೈಕಿನ ಮುಂದೆ ಮಾತಲಾಡಲಾಗದೇ ಬಾಯಿಕಟ್ಟಿದಾಗ ಅದೇ ಗಂಡನಿಗೆ ಛೇಡಿಸಿದ್ದು,ಟೀವಿ ರಿಪೇರಿಯ ಗೊಂದಲದಲ್ಲಿ ನೀವು ಸಿಕ್ಕಿಹಾಕಿಕೊಂಡಿದ್ದಾಗ ಥೇಟ್ ಹೆಂಟೆ(ಕೋಳಿಗಳ ಅಮ್ಮ?)ಯಂತೆ ಬಂದುನಿಮ್ಮನ್ನು ರಕ್ಷಿಸಿದ್ದು…ತುಂಬ ಸರಿ.
ಅಮ್ಮ ಹಾಗಿದ್ದರೇನೇ ಅಮ್ಮ. ಹಾಗಿರಲೇಬೇಕು ಕೂಡ. ಇನ್ನು ಪುಸ್ತಕದ ಇನ್ನೊಂದು ಭಾಗದಲ್ಲಿ ನೀವು ಕಟ್ಟಿಕೊಡುವ ವಿಮಾನ ನಿಲ್ದಾಣದ ದೄಶ್ಯಗಳು ಕೆಲವು ಕಪೋಲಕಲ್ಪಿತ ಎನಿಸಿದರೆ ಇನ್ನು ಕೆಲವು ರೋಚಕವಾಗಿವೆ. ಆದರೆ ಇವೆಲ್ಲವೂ ವಾಸ್ತವಕ್ಕೆ ಹಿಡಿದ ಕನ್ನಡಿಗಳು ಎಂದು ಮಾತ್ರ ಹೇಳಬಲ್ಲೆ…ತುಂಬ ತಡವಾಗಿ ಅಭಿನಂದನೆ ವ್ಯಕ್ತಪಡಿಸುತ್ತಿರುವದಕ್ಕೆ ಮತ್ತೊಮ್ಮೆ ಸ್ಸಾರಿ!
ಅನಂತ ಪ್ರೀತಿಯೊಂದಿಗೆ,

-ರಾಘವೆಂದ್ರ ಜೋಶಿ


+++ವಸುಧೇಂದ್ರರಿಗೆ ನನ್ನ ಒಂದು ಅಭಿನಂದನೆಯನ್ನು ತಲುಪಿಸಿ ಬಿಡಿ…. ಮೊದಲನೆಯದಾಗಿ ಕನ್ನಡ ಸಾಹಿತ್ಯದ ಬಗ್ಗೆ ಗೀಳು ಹಚ್ಚಿಸಿಕೊಂಡವರಿಗೆ ನಾನು ಕೊಡುವ ಪುಸ್ತಕಗಳಲ್ಲಿ ನಮ್ಮಮ್ಮ …. ಕೂಡ ಒಂದು. ನೀವು ಬರೆದಿರುವ ಒಂದೊಂದು ಅನುಭವವವು ನನ್ನ ಮಟ್ಟಿಗೂ ನಿಜ.

-ಅಮರ

+++ಇತ್ತೀಚಿಗೆ ನನ್ನ ಹಳೆಯ ಗೆಳೆಯನೊಬ್ಬ ಸಿಕ್ಕಿದ್ದ. ಮಾತುಕತೆ ಪುಸ್ತಕಗಳತ್ತ ಹೊರಳಿತು. ವಸುದೇಂದ್ರ ಪುಸ್ತಕ ನಮ್ಮಮ್ಮ.. ಓದಿದ್ದೀರಾ ಎಂದ. ‘ಹು’ ಅಂದೆ. ಆ ಪುಸ್ತಕ ಇಬ್ಬರು ವ್ಯಕ್ತಿಗಳಿಗಂತೂ ಮರೆಯಲಾಗದ ಪುಸ್ತಕ ಅಂದ. ಯಾರು ಅಂದೇ. ನಾನು ಮತ್ತು ನನ್ನಮ್ಮ ಅಂದ. ‘ಹೋ’.. ಅಂದೆ.ಆ ಪುಸ್ತಕ ಓದುವವರೆಗೆ ನಾನು ಅಮ್ಮನ ಮೇಲೆ ಎಷ್ಟೇ ಪ್ರೀತಿ ಇದ್ರೂ ಆಗಾಗ ಸಿಡುಕ್ತಿದ್ದೆ. ಪುಸ್ತಕ ನನ್ನನ್ನ ಸಂಪೂರ್ಣ ಬದಲು ಮಾಡಿಬಿಡ್ತು. ಈಗ ನನಗೂ ಅಷ್ಟೆ- ನಮ್ಮಮ್ಮ ಅಂದ್ರೆ ನಂಗಿಷ್ಟ ಅಂದ.ಆ ನಂತರ ನಾನೂ ನಾನಾಗಿ ಉಳಿದಿಲ್ಲ. ನಾನು ಅಮ್ಮನ ಜೊತೆ ಮಾತಾಡುವಾಗ ಸ್ವಲ್ಪ ದನಿ ದೊಡ್ಡದು ಮಾಡಿದರೂ ತಪ್ಪು ಅನಿಸಿಬಿಡುತ್ತೆ. ಯಾಕೆ ಅಂದ್ರೆ ನಾನೂ ನಮ್ಮಮ್ಮ ಅಂದ್ರೆ ನಂಗಿಷ್ಟ ಓದಿದೀನಿ ಅಲ್ವ?
-ಜಿ ಎನ್ ಮೋಹನ್

August 29, 2008 Posted by odubazar | ಓದು ಜನಮೇಜಯ | | 2 Comments

ಬೀದಿಯ ಹೆಣ್ಣುಗಳ ತಳಮಳದ ಕಥೆಗಳು


ಕಾಯದ ಕಾರ್ಪಣ್ಯ
ಲೇ: ಕುಸುಮಾ ಶಾನಭಾಗ
ಪ್ರ: ಹೇಮಾಂಶು ಪ್ರಕಾಶನ, ದೃಶ್ಯ, ದೇರೆಬೈಲು, ಮಂಗಳೂರು-೫೭೫೦೦೬
ಬೆಲೆ: ೭೫ ರೂ. ಪುಟಗಳು: ೧೦೦

————————————–

ಶ್ರಾವಣಿ

ವೇಶ್ಯೆಯರ ಬಗ್ಗೆ ಮಾತನಾಡಲೂ ಹಿಂಜರಿಯುವ ಸ್ಥಿತಿಯಿರುವಾಗ, ಆ ನತದೃಷ್ಟೆಯರ ಲೋಕವನ್ನು ಮಾತನಾಡಿಸಲು ಮುಂದಾದವರು ಪತ್ರಕರ್ತೆ ಕುಸುಮಾ ಶಾನಭಾಗ. ಸುಮಾರು ಹತ್ತು ವರ್ಷಗಳ ಕಾಲ ಅವರು ಬೀದಿ ವೇಶ್ಯೆಯರ ಬದುಕಿನ ಬಗ್ಗೆ ಅಧ್ಯಯನ ನಡೆಸಿದರು. ವೇಶ್ಯೆಯರ ನಿಕೃಷ್ಟ ಬದುಕಿನ ಕಥೆಗಳನ್ನು ಕುಸುಮಾ ಅವರು ಓರ್ವ ಆಪ್ತಳಂತೆ ಆಲಿಸಿದ್ದಾರೆ. ಆ ನೋವಿನ ಕಥೆಗಳಿಗೆ ಅವರು ಕೊಟ್ಟ ಅಕ್ಷರ ರೂಪವೇ “ಕಾಯದ ಕಾರ್ಪಣ್ಯ”.

ವೇಶ್ಯಾವೃತ್ತಿ ಪ್ರಾಚೀನತೆಯನ್ನು ಹೊಂದಿರುವಷ್ಟೇ ಕರಾಳತೆಯನ್ನೂ ಹೊಂದಿರುವಂಥದ್ದು. ಇವತ್ತಿನ ಸಮಾಜದಲ್ಲಿ ಎಂಥ ವಿಪರ್ಯಾಸವಿದೆಯೆಂದರೆ, ನಿರ್ಗತಿಕ ಹೆಣ್ಣುಮಗಳಿಗೆ ಇದು ವೃತ್ತಿಯಾಗಿರುವಾಗಲೇ ಶ್ರೀಮಂತಿಕೆಯ ಅಟ್ಟಹಾಸವಿರುವಲ್ಲಿ ಇದು ಸ್ವೇಚ್ಛೆಯ ಬಾಗಿಲು. ಬೀದಿಯ ಹೆಣ್ಣುಗಳ ಬದುಕಿನ ಕರಾಳತೆ ತಿಳಿಯಹೊರಟ ಕುಸುಮಾ ಅವರಿಗೆ ಕೂಡ ಸಮಾಜದ ಶ್ರೀಮಂತ ವರ್ಗದವರ ಇಂಥದೊಂದು ಹುಳುಕಿನ ದರ್ಶನವಾಯಿತೆಂಬುದು ಈ ಕೃತಿಯಲ್ಲಿ ಸೂಚ್ಯವಾಗಿ ಪ್ರಸ್ತಾಪವಾಗಿದೆ.

ಕುಸುಮಾ ಅವರು ಬೀದಿ ಹೆಣ್ಣುಮಕ್ಕಳ ಬದುಕನ್ನು ಆ ಪಾಪಕೂಪದಿಂದ ಎತ್ತಿ, ಅವರಿಗಾಗಿ ಏನಾದರೂ ಮಾಡಲು ಸಾಧ್ಯವೇ ಎಂದು ಹೊರಟಿದ್ದವರು. ಇಪ್ಪತ್ತು ವರ್ಷಗಳ ಹಿಂದೆ ನಡೆಸಿದ ಈ ಯತ್ನದಲ್ಲಿ ಅವರು ಕಂಡದ್ದು ಸೋಲು; ಮತ್ತು ಎದುರಿಸಿದ್ದು ಇದನ್ನೆಂದಿಗೂ ಬದಲಿಸಲು ಸಾಧ್ಯವಿಲ್ಲ ಎಂಬ ಕಟು ಸತ್ಯ.

ಅನಿವಾರ್ಯ ಸ್ಥಿತಿಯಲ್ಲಿ ಬೀದಿಗಿಳಿದ ಹೆಣ್ಣುಮಗಳು ಮತ್ತೆ ಆ ವಿಷಚಕ್ರದಿಂದ ಹೊರಬರಲಾರದ ಹಂತವನ್ನು ಮುಟ್ಟಿಬಿಡುತ್ತಾಳೆ; ಮೊದಲು ದುಡ್ಡಿಗಾಗಿ ಎಂದುಕೊಂಡದ್ದು ಆಮೇಲೆ ದುಡ್ಡಿನ ಜೊತೆಗೇ ಚಟವೂ ಆಗಿಬಿಡುತ್ತದೆ ಎಂಬ ವಿವರಗಳು ಕುಸುಮಾ ಅವರು ಕೇಳಿದ ಬೀದಿ ಹುಡುಗಿಯರ ಕಥೆಗಳಲ್ಲಿ ಬರುತ್ತವೆ. ವೇಶ್ಯೆಯರ ಕಥೆಗಳನ್ನು – ಅವುಗಳಲ್ಲಿ ಸೇರಿಕೊಂಡಿರಬಹುದಾದ ಸುಳ್ಳುಗಳ ಬಗೆಗೆ ಅನುಮಾನವಿಟ್ಟುಕೊಂಡೂ – ಹಲವು ಮನಸ್ಸುಗಳಿಗೆ ದಾಟಿಸುತ್ತದೆ ಈ ಕೃತಿ.

ಇಲ್ಲಿ ಕಥೆ ಹೇಳಿಕೊಂಡವರು ಸಮಾಜದ ಪ್ರಧಾನ ಧಾರೆಯೆಂಬುದು ತಮ್ಮನ್ನು ಹೇಗೆ ತುಚ್ಛವಾಗಿ ನೋಡುತ್ತದೆ ಎಂಬ ಕಟು ವಾಸ್ತವದ ಮುಂದೆ ಕಂಗೆಟ್ಟವರಾಗಿದ್ದಾರೆ. ಒಂದು ಹಂತದಲ್ಲಿ ಇದೆಲ್ಲ ಸಾಕಾಗಿ ಕೂಲಿಯನ್ನಾದರೂ ಮಾಡಿಕೊಂಡು ಬದುಕಲು ಹೊರಟು ಅಲ್ಲೂ ತಮ್ಮನ್ನು ಸೂಳೆಯೆಂದೇ ನೋಡುವ ಕಣ್ಣುಗಳ ಮುಂದೆ ಜರ್ಜರಿತರದವರಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಈ ಸಮಾಜ ತಮ್ಮನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬ ಸಿಟ್ಟಿನಲ್ಲಿ ಪ್ರಶ್ನೆ ಎತ್ತಿದವರಿದ್ದಾರೆ.

ಈ ಕೃತಿಯಲ್ಲಿನ ಹಲವು ಕಥೆಗಳ ನಡುವೆ, ಬೀದಿಯ ಹುಡುಗಿಯೊಬ್ಬಳು ನಿತ್ಯ ಡೈರಿ ಬರೆವ ರೂಢಿ ಇಟ್ಟುಕೊಂಡಿದ್ದಳೆಂಬ ವಿವರವಂತೂ ಮಿಂಚಿನಂತೆ ಸೆಳೆಯುತ್ತದೆ. ಆ ಮಿಂಚಿನ ಒಂದು ಕ್ಷಣದಲ್ಲಿ ಗೋಚರವಾಗುವ ಕತ್ತಲ ಲೋಕದ ಕರಾಳ ಮುಖ ಮಾತ್ರ ಮೈನಡುಗಿಸುವಂಥದ್ದು. ಆ ಹುಡುಗಿಯ ತಳಮಳದ ದಾಖಲಾತಿಗಳ ಒಂದು ತುಣುಕನ್ನು ಇಲ್ಲಿ ಗಮನಿಸುವುದರೊಂದಿಗೆ, ಅದನ್ನು ನಮ್ಮವರೆಗೆ ತಲುಪಿಸಿದ ಈ ಕೃತಿಯ ಮಹತ್ವವನ್ನು ಮನವರಿಕೆ ಮಾಡಿಕೊಳ್ಳಬಹುದು:

“ಗೂಂಡಾಗಳಿಂದ ತಪ್ಪಿಸಿಕೊಳ್ಳುವುದು ನಮಗೆ ಯಾರಿಗೂ ಸುಲಭವಲ್ಲ. ಯಾರು ಗೂಂಡಾಗಳು ಎಂದು ಗುರುತಿಸುವುದು ಕಷ್ಟ. ಕೆಲವು ಸಲ ಮೆಜೆಸ್ಟಿಕ್ ಗೂಂಡಾಗಳು ರಿಚ್ ಮಂಡ್ ಸರ್ಕಲ್ ಕಡೆಗೆ ಬರುತ್ತಾರೆ, ಹುಡುಗಿಯರು ಬೇಕೂಂತ. ಆದರೆ ಗೂಂಡಾಗಳು ನಾವು ಓಡಾಡುವ ರಸ್ತೆಗಳಿಗೆ ಪೊಲೀಸರ ಕಣ್ಣು ತಪ್ಪಿಸಿ ಹಾಜರಾಗುತ್ತಾರೆ. ಎಷ್ಟೋ ಸಲ ಅವರು ಪೊಲೀಸರನ್ನೂ ಕ್ಯಾರ್ ಮಾಡೋದಿಲ್ಲ. ನನ್ನನ್ನು ಕೆಲವು ಹುಡುಗರು ಕರೆದರು. ಅವರು ದುಡ್ಡು ಕೊಡುವುದಿಲ್ಲವೆಂದು ನಾನು ಹೋಗಲು ಒಪ್ಪದೆ ಮಾರ್ಕ್ ರಸ್ತೆಯಿಂದ ಚರ್ಚ್ ಸ್ಟ್ರೀಟ್ ಗೆ ತಿರುಗಿಕೊಂಡೆ. ಕಾರಿನಲ್ಲಿ ಎಂ.ಜಿ. ರೋಡಿನಿಂದ ಬಂದ ಈ ಹುಡುಗರು ನನ್ನನ್ನು ಎತ್ತಿ ಕಾರೊಳಗೆ ಹಾಕಿಕೊಂಡರು. ಕರೆದಾಗ ಬರಲಿಲ್ಲವೆಂದು ಮುಖದ ಮೇಲೆ ಬ್ಲೇಡಿನಿಂದ ಗೀರಿದರು. ರಕ್ತ ಬರುತ್ತಿತ್ತು, ಒರೆಸಲೂ ಬಿಡಲಿಲ್ಲ. ಅಶ್ಲೀಲವಾಗಿ ಮಾತಾಡಿಕೊಂಡು ಕಬ್ಬನ್ ಪಾರ್ಕಿನೊಳಗೆ ಕರೆದುಕೊಂಡು ಹೋದರು. ಒಬ್ಬರಾದ ಮೇಲೆ ಒಬ್ಬರು ಉಪಯೋಗಿಸಿಕೊಂಡರು. ನನ್ನ ಬಟ್ಟೆಗಳನ್ನೆಲ್ಲಾ ಸುತ್ತಿ ಕಾರೊಳಗೆ ಹಾಕಿಕೊಂಡು ನನ್ನನ್ನು ಅಲ್ಲೇ ಬಿಟ್ಟು ಹೋಗಿಬಿಟ್ಟರು. ನಾನು ಕಿರುಚಿಕೊಂಡೆ. ಗೋಗರೆದೆ. ಕೇಳಲಿಲ್ಲ. ಮೈ ಮೇಲೆ ಬಟ್ಟೆಯೇ ಇಲ್ಲ. ಬೆಳಗಾದರೆ ಜನ ತಿರುಗಾಡುತ್ತಾರೆ. ದಿಕ್ಕು ತೋಚದಂತೆ ಆಯಿತು.

“ಇನ್ನೂ ಬೆಳಕಾಗಿರಲಿಲ್ಲ. ಪೊಲೀಸರು ಹೋಗುತ್ತಿರುವುದು ನೋಡಿದೆ. ಅವರನ್ನು ಜೋರಾಗಿ ಕರೆದೆ. “ಅಣ್ಣಾ, ಗೂಂಡಾಗಳು ಹೀಗೆ ಮಾಡಿವೆ. ಮೈ ಮೇಲೆ ಬಟ್ಟೆಯಿಲ್ಲ. ಮನೆಗೆ ಹೋಗಬೇಕು, ಸ್ವಲ್ಪ ಸಹಾಯ ಮಾಡಣ್ಣ.” ಪೊಲೀಸರಲ್ಲೂ ಒಳ್ಳೆಯವರಿರುತ್ತಾರೆ. ಬೆಡ್ ಶೀಟ್ ತಂದುಕೊಟ್ಟರು. ಆಟೋ ಮಾಡಿಕೊಟ್ಟು, ಡ್ರೈವರನಿಗೆ ನನ್ನನ್ನು ಮನೆಗೆ ಬಿಡುವಂತೆ ಹೇಳಿದರು. ಆ ಪೊಲೀಸಣ್ಣನಿಗೆ ಒಳ್ಳೇದಾಗಲೀಂತ ದೇವರನ್ನು ಬೇಡಿಕೊಂಡೆ. ನಾನು ದೇವರ ಪೂಜೆ ಮಾಡುವಾಗೆಲ್ಲಾ ಆ ಪೊಲೀಸಣ್ಣನಿಗೆ ಒಳ್ಳೇದಾಗಲೀಂತ ಪ್ರಾರ್ಥಿಸುತ್ತೇನೆ. ನಾವು ಸೂಳೆಯರೇ ಇರಬಹುದು. ಹಾಗೇಂತ ಮೈಮೇಲೆ ಬಟ್ಟೆಯಿಲ್ಲದೆ ರಸ್ತೆಯಲ್ಲಿ ಓಡಾಡಲಿಕ್ಕಾಗುತ್ತಾ?”

August 29, 2008 Posted by odubazar | ಬುಕ್ ಬಜಾರ್ | | 1 Comment

ಈ ಬ್ಲಾಗ್ …

ಈ ಬ್ಲಾಗ್

ನಮ್ಮನ್ನು ಮೌನವಾಗಿಯೇ ಬೆಳಸಿದ

ಜಿ ಎಸ್ ಸದಾಶಿವ

ಅವರಿಗೆ ಅರ್ಪಿತ-

August 29, 2008 Posted by odubazar | ನೆನಪು | | 1 Comment