ಓದು ಬಜಾರ್

ಓದಿ ಇಲ್ಲಾ ಓಡಿ…

ಗೋಕುಲದಿಂದ ನಿರ್ಗಮಿಸಿದ ಪು ತಿ ನ

img_8522img_8485img_8476img_84861img_8500img_8504img_8490ಗೋಕುಲದಿಂದ ನಿರ್ಗಮಿಸಿದ ಕೃಷ್ಣ ನ ಕಥೆ ಹೇಳಿದ ಪು ತಿ ನ ಅವರ ನೆನಪು ಮೊನ್ನೆ ಮೊನ್ನೆ ಬೆಂಗಳೂರಿನಲ್ಲಿ.

ಪು ತಿ ನ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಲ್ಲೆಲ್ಲೂ ಆ ಕೃಷ್ಣ ಬಿಸುಟಿ ಹೋದ ಆ ಕೊಳಲಿನದ್ದೆ ನೆನಪು.

ಅದರ ಕ್ಷಣಗಳು ಸುಘೋಷ್ ನಿಗಳೆ ಕಣ್ಣಿನ ಮೂಲಕ ಇಲ್ಲಿ-

January 31, 2009 Posted by odubazar | ಕ್ಲಿಕ್.., ಬುಕ್ ಬಜಾರ್ | | 1 Comment

ಶಿವಪ್ರಸಾದ್ ಅವರ ‘ಕನ್ನಡ ಬುಕ್’

kannada-book21

ಸ್ನೇಹಿತರೆ,
ಪುಸ್ತಕಗಳಿಗಾಗಿ ಒಂದು ಬ್ಲಾಗ್ ಆರಂಭಿಸಬೇಕು ಎಂಬ ಆಸೆಯಿತ್ತು. ಆಗಿರಲಿಲ್ಲ.
ಈಗ ಚಿತ್ರದುರ್ಗದಲ್ಲಿ ನಡೆಯುತ್ತಿರುವ 75 ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪುಸ್ತಕಗಳಿಗಾಗಿ ಈ ಬ್ಲಾಗ್ ಆರಂಭಿಸಲಾಗಿದೆ. ಕನ್ನಡ, ಇಂಗ್ಲೀಷ್ ಸೇರಿದಂತೆ ಯಾವುದೇ ಭಾಷೆಯ ಪುಸ್ತಕಗಳ ವಿವರ ಇಲ್ಲಿ ನೀಡಬಹುದು. ಕನ್ನಡಕ್ಕೆ ಆದ್ಯತೆ.

ನಿಮ್ಮ ಗಮನಕ್ಕಾಗಿ ಕೆಲ ಅಂಶಗಳು:
1. ಈ ಬ್ಲಾಗ್ ನಿಮ್ಮದು. ನೀವೇ ಇದನ್ನು ಮುನ್ನಡೆಸಿಕೊಂಡು ಹೋಗಬೇಕು.
2. ಯಾವುದೇ ಹೊಸ ಪುಸ್ತಕದ ಪರಿಚಯ ಇಲ್ಲಿ ಮಾಡಿಕೊಡಬಹುದು. ಮರೆತುಹೋದ, ಅಪರೂಪದ ಪುಸ್ತಕಗಳನ್ನೂ ಸಹ ಪರಿಚಯಿಸಬಹುದು.
3. ಪುಸ್ತಕದ ವಿಮರ್ಶೆ ಅಥವಾ ಪರಿಚಯ ವಸ್ತುನಿಷ್ಠವಾಗಿರಲಿ.
4. ಶಬ್ಧಗಳಿಗೆ ಮಿತಿ ಇಲ್ಲ. ಆದರೆ 200-300 ಶಬ್ಧಗಳ ಒಳಗೆ ಕೃತಿ ಪರಿಚಯ ಅಥವಾ ವಿಮರ್ಶೆ ಇದ್ದರೆ ಚಂದ.
5. ವ್ಯಕ್ತಿಗತ ಟೀಕೆಗಳು ಬೇಡ. ಆದಷ್ಟು ಪುಸ್ತಕದ ಪಾಸಿಟಿವ್ ಅಂಶಗಳನ್ನು ಮಾತ್ರ ಹೇಳಿ.
6. ಅಲ್ಲಿ ತಪ್ಪಾಗಿದೆ, ಇಲ್ಲಿ ಹೀಗಾಗಿದೆ, ಹೀಗೆ ಮಾಡಿದ್ದರೆ ಇನ್ನೂ ಪುಸ್ತಕ ಚನ್ನಾಗಿರುತ್ತಿತ್ತು ಎಂಬ ಫ್ರೀ ಸಲಹೆಗಳು ಬೇಡ.
7. ತೀರಾ ಸಿಲ್ಲಿ, ಸಿಲ್ಲಿ ಪುಸ್ತಕಗಳ ಪರಿಚಯ ಕಳುಹಿಸಬೇಡಿ.
8. ವಸ್ತುನಿಷ್ಠವಾಗಿರುವ, ಸಮಕಾಲೀನ ವಿಚಾರದ ಪುಸ್ತಕಗಳ ಬಗ್ಗೆ ಬರೆದರೆ ಉತ್ತಮ.
9. ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ವಿಮರ್ಶೆಗಳನ್ನು ಸ್ಕ್ಯಾನ್ ಮಾಡಿ ಕಳುಹಿಸಬಹುದು.
10. ಆದರೆ ಆ ರೀತಿ ಸ್ಕ್ಯಾನ್ ಮಾಡಿದ ಪುಟಗಳು ಜೆಪಿಇಜಿ ಫಾರ್ಮ್ಯಾಟ್ ಹಾಗೂ ಉತ್ತಮ ರೆಸಲ್ಯೂಷನ್ ಇರಲಿ.
11. ನೀವೇ ಟೈಪ್ ಮಾಡಿದ್ದರೆ ನುಡಿಯಲ್ಲಿ ಟೈಪ್ ಮಾಡಿ ಕಳುಹಿಸಿ.
12. ಪುಸ್ತಕ ಪರಿಚಯ-ವಿಮರ್ಶೆ ಜೊತೆಗೆ ಪುಸ್ತಕದ ಲೇಖಕರು, ಫೋಟೋ, ವಿಳಾಸ, ದೂರವಾಣಿ, ಇ-ಮೇಲ್ ಇರಲಿ.
13. ಪುಸ್ತಕದ ಮುಖಪುಟ, ಬೆಲೆ, ಪುಟಗಳ ಸಂಖ್ಯೆಯಂತಹ ವಿವರಗಳನ್ನು ಮರೆಯದೇ ಕಳುಹಿಸಿ.
14. ಪುಸ್ತಕ ಬಿಡುಗಡೆ ಸಮಾರಂಭದ ಆಹ್ವಾನ ಪತ್ರಿಕೆಗಳನ್ನೂ ಕಳುಹಿಸಬಹುದು.
15. ಇದರಲ್ಲಿ ಕೆಲವು ಪ್ರಕಾಶಕರ ಬ್ಲಾಗ್ ಹಾಗೂ ವೆಬ್ ಸೈಟ್ ವಿವರ ನೀಡಲಾಗಿದೆ. ನಿಮಗೆ ತಿಳಿದ ಇತರೆ ಪ್ರಕಾಶಕರ ವಿವರಗಳನ್ನು ಕಳುಹಿಸಿ.

ಬರಹಗಳನ್ನು shivaprasadtr@gmail.com ಈ ಇ-ಮೇಲ್ ಗೆ ಕಳುಹಿಸಿ.
ಸಾಹಿತ್ಯಾಸಕ್ತರಿಗೆ, ನಿಮ್ಮ ಸ್ನೇಹಿತರಿಗೆ ತಾವು ಓದಿದ ಪುಸ್ತಕಗಳ ಬಗ್ಗೆ ಎಲ್ಲರೊಂದಿಗೆ ಹಂಚಿಕೊಳ್ಳಲು ಹೇಳಿ, ಬ್ಲಾಗ್ ವಿವರ ನೀಡಿ.
ನಿಮ್ಮ ಓದುವ, ಹಾಗೂ ಇತರರಿಗೆ ಓದಿಸುವ ಆಸಕ್ತಿ ನಿರಂತರವಾಗಿರಲಿ.

-ಶಿವಪ್ರಸಾದ್

January 25, 2009 Posted by odubazar | Uncategorized | | No Comments Yet

ಬರಲಿದೆ ಆಹಾ ದೂರದಿ ಬರಲಿದೆ…

dhare-hatti-prahladsandhakathajagattu-new3‘ಅಪಾರ’ನಿಂದ ಹೆಕ್ಕಿದ್ದು

January 19, 2009 Posted by odubazar | ಬುಕ್ ಬಜಾರ್ | | No Comments Yet

ಬದುಕು ಪ್ರೀತಿಸುವ ‘ಹಳ್ಳ ಬಂತು ಹಳ್ಳ’

 

-ಎಂ.ಎಸ್. ಆಶಾದೇವಿ

hallapreviewಸಾಮಾನ್ಯವಾಗಿ ಮಹತ್ವದ ಲೇಖಕನೊಬ್ಬನ ಬರವಣಿಗೆಯ ಪ್ರಕ್ರಿಯೆಯಲ್ಲಿ ಓದುಗರೂ ಅವಿನಾ ಸಂಬಂಧವೊಂದನ್ನು ಕಟ್ಟಿಕೊಂಡಿರುತ್ತಾರೆ. ಕೆಲವು ಸಂದರ್ಭಗಳಲ್ಲಂತೂ ಅದೊಂದು ಸಾವಯವ ಸಂಬಂಧ ಎನಿಸುವಷ್ಟು ಕ್ರಿಯಾಶೀಲವಾಗಿರುತ್ತದೆ. ಆದರೆ ಕೆಲವು ಅಪರೂಪದ ಮಹತ್ವದ ಲೇಖಕರಿರುತ್ತಾರೆ. ಅವರು ಆ ಪ್ರಕ್ರಿಯೆಯ ಹಂಗೇ ಇಲ್ಲದವರಂತೆ ತಮ್ಮ ಮಹತ್ವದ ಕೃತಿಯೊಡನೆ ಓದುಗರೆದುರಿಗೆ ಪ್ರತ್ಯಕ್ಷರಾಗುತ್ತಾರೆ. ಕೃತಿಯೊಂದಿಗೆ ಅನುಸಂಧಾನ ನಡೆಸುತ್ತಿರುವಾಗಲೇ ಓದುಗರಿಗೆ ಇದಕ್ಕೆ ನಾವು ಬಹುದಿನದಿಂದ ಕಾಯುತ್ತಿದ್ದೆವಲ್ಲಾ, ಇದರೊಂದಿಗಿನ ಅನುಸಂಧಾನಕ್ಕೆ ಸಿದ್ಧರಾಗಿದ್ದೆವಲ್ಲಾ ಎನಿಸತೊಡಗುತ್ತದೆ.

ಮಹತ್ವದ ಕೃತಿಯೊಂದಕ್ಕೆ ಆಸಕ್ತ ಓದುಗ ಸಮುದಾಯ ನಡೆಸುವ ಅಮೂರ್ತ ಸಿದ್ಧತೆ ಈ ಬಗೆಯದು. ಸಾಹಿತ್ಯದಲ್ಲಿ ಇಂಥ ಅಪರೂಪದ ಉದಾಹರಣೆಗಳು ಹಲವಿವೆ. ಶ್ರೀನಿವಾಸ ವ್ಯೆದ್ಯರ ‘ಹಳ್ಳ ಬಂತು ಹಳ್ಳ’ ಕೃತಿ ಹೀಗೆ ಕನ್ನಡ ಓದುಗರಿಗೆ ಅಚಾನಕ್ ಎನ್ನುವಂತೆ ಒದಗಿಬಂತು. ಅವರ ಇದಕ್ಕೆ ಮುಂಚಿನ ಬರವಣಿಗೆಗಳನ್ನು ನಿರ್ಲಕ್ಷಿಸಿ ಈ ಮಾತನ್ನು ಹೇಳುತ್ತಿಲ್ಲ. ಹಾಗೆ ನೋಡಿದರೆ ಅವರ ‘ಮನಸುಖರಾಯನ ಮನಸು’ ಕೃತಿಯನ್ನು ಅನೇಕ ಕಾರಣಗಳಿಗಾಗಿ ಕನ್ನಡದ ಮುಖ್ಯ ಕೃತಿಗಳಲ್ಲಿ ಒಂದೆಂದೇ ನಾನು ತಿಳಿದಿದ್ದೇನೆ. ಲಲಿತ ಪ್ರಬಂಧ ಮತ್ತು ಸಣ್ಣ ಕಥೆಗಳ ಪ್ರಕಾರವನ್ನು ಅಭಿನ್ನವಾಗಿ ಬೆಸೆದು ನೋಡುವ ಪ್ರಯೋಗಶೀಲ ಕೃತಿ ಇದು. ಆದರೆ ‘ಹಳ್ಳ ಬಂತು ಹಳ್ಳ’ ಕೃತಿಯನ್ನು ಓದುಗರು ಅಚ್ಚರಿ ಮತ್ತು ಸಂಭ್ರಮಗಳಲ್ಲಿ ಸ್ವೀಕರಿಸಿದ ಬಗೆಯನ್ನು ಗಮನಿಸಿದಾಗ ಈ ಮಾತು ಹೇಳುವುದು ಅನಿವಾರ್ಯ.

ಶ್ರೀನಿವಾಸ ವ್ಯೆದ್ಯರ ಮುಖ್ಯ ಕಾಳಜಿಗಳೆಂದರೆ ಕಾಲದ ಸ್ಥಿತ್ಯಂತರಗಳು ಮತ್ತು ಮನುಷ್ಯನ ನಡುವಿನ ಸಂಘರ್ಷ ಪೂರ್ಣ ಸಂಬಂಧ, ಮನುಷ್ಯ ಸ್ವಭಾವದ ನಿಗೂಢ ವಿಲಕ್ಷಣಗಳು, ಸಂಗತವೆನ್ನುವಂತೆ ಕಾಣುತ್ತಲೇ ತನ್ನೊಳಗೆ ಅಸಂಗತವಾಗಿರುವ ಬದುಕು, ಶಾಶ್ವತವೆನ್ನುವಂತೆ ಕಾಣುವ ಮೌಲ್ಯಗಳು, ನಿಧಾನವಾಗಿ ತಮ್ಮ ಸ್ವರೂಪ ಮತ್ತು ಕೇಂದ್ರವನ್ನು ಬದಲಿಸಿಕೊಳ್ಳುವ ಕ್ರಮ ಮತ್ತು ಮನುಷ್ಯ ಸಂಬಂಧಗಳ ಬಿಡಿಸಬರದ ಗೋಜಲುಗಳು. ಈ ಎಲ್ಲವನ್ನೂ ವ್ಯೆದ್ಯರು ಚಿಕಿತ್ಸಕ ದೃಷ್ಟಿಯಿಂದಲ್ಲ, ತಾತ್ವಿಕ ದೃಷ್ಟಿಕೋನದಿಂದಲೂ ಅಲ್ಲ ಬದಲಿಗೆ ಅಪ್ಪಟ ಮಾನವೀಯಾನುಕಂಪ ಎನ್ನುವ ನೆಲೆಯಲ್ಲಿ ನಿಂತು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. 

ದೈನಂದಿನ ಕ್ಷುದ್ರವೆಂದೂ ಸಹಜವೆಂದೂ ಕಾಣುವ ವ್ಯಕ್ತಿಗಳ ಬದುಕು ಮತ್ತು ನಿರ್ಣಾಯಕ ಪಲ್ಲಟಗಳ ನಡುವಿನ ಒಳ ಸಂಬಂಧದ ಎಳೆಗಳನ್ನು ‘ಹಳ್ಳ ಬಂತು ಹಳ್ಳ’ ಕೃತಿ ಸೂಕ್ಷ್ಮವಾಗಿ ಶೋಧಿಸುತ್ತದೆ. ಕಾಲದ ಚಲನೆ ಮತ್ತು ಪಲ್ಲಟಗಳಿಗೆ ವ್ಯಕ್ತಿ ಸ್ಪಂದಿಸುವುದು ಆಸೆಯಿಂದಲೋ ಅನಿವಾರ್ಯ ಒತ್ತಡದಿಂದಲೋ ಎನ್ನುವ ಪ್ರಶ್ನೆಯೊಂದು ಇವರ ಕೃತಿಗಳಲ್ಲಿ ಸತತವಾಗಿ ಅನುರಣಿಸುತ್ತದೆ, ಶೋಧಕ್ಕೊಳಗಾಗುತ್ತದೆ. ಒಂದು ಬೀಸಿನಲ್ಲಿ ಕಳೆದು ಹೋದ ಕಾಲಘಟ್ಟವೊಂದು ಎದುರಿಸಿದ ತಲ್ಲಣಗಳು ಸ್ಥೂಲವಾಗಿ ಈ ಕಾದಂಬರಿಯ ವಸ್ತು. ಆದರೆ ಕಾಲ ಬದ್ಧತೆಯನ್ನು ಮೀರಿ ‘ಸದ್ಯೋಜಾತ’ವಾಗುವ ಆವರನವೊಂದು ಈ ಕಾದಂಬರಿಯಲ್ಲಿ ಸೃಷ್ಟಿಯಾಗುತ್ತದೆ.

ಇದು ಸಾಧ್ಯವಾಗುವುದು ಪಲ್ಲಟಗಳ ಮೂಲ ನೆಲೆಗಳನ್ನು ಹಿಡಿಯುವಲ್ಲಿ ಶ್ರೀನಿವಾಸ ವ್ಯೆದ್ಯರು ಯಶಸ್ವಿಯಾಗಿರುವುದರಿಂದ. ಪಲ್ಲಟಗಳನ್ನು ಚಾರಿತ್ರಿಕ ಅನಿವಾರ್ಯತೆಯಲ್ಲಿ ಗುರುತಿಸುವ ಪ್ರಯತ್ನಕ್ಕಿಂತ ಹೆಚ್ಚಾಗಿ ಬದುಕಿನ ಅನಿವಾರ್ಯತೆಯಲ್ಲಿ ಮತ್ತು ಮನುಷ್ಯ ಸ್ವಭಾವದ ನಿಜದಲ್ಲಿ ಲೇಖಕರು ಇಡುತ್ತಾರೆ. ‘ಹಳ್ಳ ಬಂತು ಹಳ್ಳ’ ಮಹತ್ವದ ಕೃತಿಯಾಗಿರುವುದು ಈ ಕಾರಣಕ್ಕಾಗಿಯೇ. ವಾಸುದೇವಾಚಾರ್ಯರು ಮಕ್ಕಳನ್ನ ಧಾರವಾಡದಲ್ಲಿ ಓದಿಸಲು ಕಳುಹಿಸುವ ಪ್ರಸಂಗ ಇದಕ್ಕೆ ಅತ್ಯುತ್ತಮ ಉದಾಹರಣೆ. ಅವರು ಮಕ್ಕಳನ್ನು ವಿದ್ಯಾಭ್ಯಾಸದ ಮೇಲಿನ ಆಕರ್ಷಣೆಯಿಂದಲೋ ಕಳುಹಿಸುವುದಲ್ಲ. ಆರ್ಥಿಕ ಅಸಹಾಯಕತೆ ಮತ್ತು ಜೀವನೋಪಾಯದ ಹುಡುಕಾಟದಲ್ಲಿ ಅವರಿಗೆ ಆಧುನಿಕ ವಿದ್ಯಾಭ್ಯಾಸ ಉಪಯುಕ್ತ, ಏಕೈಕ ಪರಿಹಾರವಾಗಿ ಕಾಣಿಸುತ್ತದೆ. ಇಷ್ಟಾಗಿಯೂ ಆ ಮಕ್ಕಳು ಧಾರವಾಡಕ್ಕೆ ಹೊರಡುವುದು ಆ ಇಡೀ ಊರನ್ನು ಕಾಡುವ ಪ್ರಸಂಗವೂ ಆಗಿದೆ. ಇಂಥ ಪ್ರಸಂಗಗಳ ಸರಮಾಲೆಯೇ ಕಾದಂಬರಿಯಲ್ಲಿದೆ. ಕೂಡು ಕುಟುಂಬದ ಸೌಷ್ಟವದಂತೆಯೇ ಅದರ ಒಡಕುಗಳು, ಸ್ವಾತಂತ್ರ್ಯ ಹೋರಾಟದ ಶಕ್ತ, ದುರ್ಬಲ ಮಾದರಿಗಳು, ಎಲ್ಲಿಂದಲೋ ಬಂದು ಇನ್ನೆಲ್ಲೋ ಬೇರು ಬಿಟ್ಟು ಬದುಕಿನ ಅರ್ಥ ಹುಡುಕುವ ಮನುಷ್ಯ ಪ್ರಯತ್ನಗಳು ತಲೆಮಾರುಗಳ ತಳಮಳಗಳು ಈ ಎಲ್ಲವನ್ನೂ ಶ್ರೀನಿವಾಸ ವ್ಯೆದ್ಯರು ಸಂಕ್ರಮಣ ಘಟ್ಟ ಎನ್ನುವ ‘ವಿಶಿಷ್ಟ ನೆಲೆ’ಯಲ್ಲಿ ಇಡದೆ ಬದುಕಿನ ‘ಗತಿ’ಯ ‘ಸಹಜನೆಲೆ’ಯಲ್ಲಿ ಇಟ್ಟು ಶೋಧಿಸುತ್ತಾರೆ. ಕಾಲ-ಸಂಧರ್ಭಗಳು ಬೇರೆಯಾಗಬಹುದು. ಆದರೆ ಮನುಷ್ಯನ ‘ಅವಸ್ಥೆ’ಮತ್ತು ಸಮುದಾಯಗಳು ಎದುರಿಸುವ ಬಿಕ್ಕಟ್ಟಿನ ಮೂಲ ವಿನ್ಯಾಸ ಇದೇ ಅಲ್ಲವೇ ಎನ್ನುವ ಪ್ರಬಂಧ ಧ್ವನಿ ಕಾದಂಬರಿಯ ಮುಖ್ಯ ಸಾಧನೆಗಳಲ್ಲಿ ಒಂದು.

ಶ್ರೀನಿವಾಸ ವ್ಯೆದ್ಯರ ಬರವಣಿಗೆಯ ಇನ್ನೊಂದು ಮುಖ್ಯ ನೆಲೆಯೆಂದರೆ ಅದು ಮಹತ್ವಾಕಾಂಕ್ಷೆ ಮತ್ತು ಹಠಮಾರಿತನವನ್ನು ಬಿಟ್ಟುಕೊಟ್ಟದ್ದು. ಈ ಕಾದಂಬರಿಯೂ ಸೇರಿದಂತೆ ಇತರ ಕೃತಿಗಳಲ್ಲಿಯೂ ಈ ಅಂಶ ಎದ್ದು ಕಾಣುತ್ತದೆ. ತಾರ್ಕಿಕತೆಯ ಭಾರವಿಲ್ಲದ ಆದರೆ ಬದುಕಿನ ಬದ್ಧತೆಯನ್ನು ಆಸ್ಥೆಯನ್ನು ಕ್ಷಣಕ್ಕೂ ಕಳೆದುಕೊಳ್ಳದ ಜೀವಪರ ನಿಲುವೊಂದು ಇವರ ಬರವಣಿಗೆಯ ಸ್ಥಾಯಿ ಭಾವವಾಗಿದೆ. ‘ಮನಸುಖರಾಯನ ಮನಸು’ ಸಂಕಲನದ ಶ್ರದ್ಧಾ, ತ್ರಯಸ್ಥ, ಗಾಯಕವಾಡ ದಾದಾ ಮೊದಲಾದ ಕಥಾ ಲೇಖನಗಳಲ್ಲಿನ(?) ಮನುಷ್ಯ ಸಂಕಟದ ಬದುಕನ್ನೇ ಛಿದ್ರಗೊಳಿಸುವ ದಾರುಣ ಸತ್ಯಗಳನ್ನು ಕಹಿಯಿಲ್ಲದೆ, ವ್ಯಗ್ರತೆಯಿಲ್ಲದೆ ನೋಡುವುದು ಸಾಧ್ಯವಾಗಿರುವುದು ಇದೇ ಕಾರಣದಿಂದ. ವಾಸ್ತವನ್ನು ಅದರ ಕರಾಳ ಮುಖಗಳಲ್ಲಿ ಎದುರಿಸುತ್ತಲೇ ಬದುಕಿನ ಬಗೆಗಿನ ಪ್ರೀತಿಯನ್ನು ಹೆಚ್ಚಿಸುವುದೇ ಶ್ರೀನಿವಾಸ ವ್ಯೆದ್ಯರ ಬರವಣಿಗೆಯ ಶಕ್ತಿ.

 ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ

January 17, 2009 Posted by odubazar | Uncategorized | | 1 Comment

‘ಪುಸ್ತಕವೆಂದರೆ ಪುಸ್ತಕವಲ್ಲ, ಅರಿವಿನ ಗೂಡು…’

chinthanaa3

‘ಚಿಂತನ’ ಪುಸ್ತಕ ಲೋಕದಲ್ಲೊಂದು ವಿಶಿಷ್ಟ ಹೆಸರು. ಪುಸ್ತಕಕ್ಕಾಗಿ ಪುಸ್ತಕ ಎನ್ನುವ ಸಂಸ್ಥೆ ಇದಲ್ಲ. ‘ಪುಸ್ತಕವೆಂದರೆ ಪುಸ್ತಕವಲ್ಲ, ಅರಿವಿನ ಗೂಡು…’ ಎಂಬ ಗೀತೆಯಂತೆ ಪುಸ್ತಕ ನಮ್ಮೊಳಗಿನ ಬದಲಾವಣೆಗೆ ತುಡಿಯಬೇಕು ಎಂಬ ಹಂಬಲವುಳ್ಳದ್ದು. ಈಗಾಗಲೇ ಪುಸ್ತಕ ಪ್ರೀತಿ ಬ್ಲಾಗ್ ನೀವೆಲ್ಲಾ ಓದುತ್ತಲೇ ಬಂದಿದ್ದೀರಿ. ಆ ಸಾಲಿಗೆ ಅದೇ ಬಳಗ ಸೇರಿಸುತ್ತಿರುವ ಇನ್ನೊಂದು ಕೊಂಡಿ ಚಿಂತನ ಪುಸ್ತಕ. ಹಲವು ಗಮನಿಸಬೇಕಾದ ಪುಸ್ತಕಗಳು ಈಗ ಪ್ರಕಟಣೆಯ ಹಂತದಲ್ಲಿದೆ.

ತಮ್ಮ ಬ್ಲಾಗ್ ಅನ್ನು ಚಿಂತನ ಪರಿಚಯಿಸಿಕೊಳ್ಳುವುದು ಹೀಗೆ-

ನಾವು ಹಲವು ವರ್ಷಗಳಿಂದ ಉತ್ತಮ ಅಭಿರುಚಿಯಜನಪರ-ಪ್ರಗತಿಪರ ಆಶಯ ಮತ್ತು ಮೌಲ್ಯಗಳನ್ನು ಬಿಂಬಿಸುವ ಪುಸ್ತಕಗಳ ಪ್ರಕಾಶನದಲ್ಲಿ ತೊಡಗಿದ್ದೇವೆ. ಇದಕ್ಕಾಗಿ ಚಿಂತನ‘ ಎಂಬ ಸಂಸ್ಥೆ ಸ್ಥಾಪಿಸಿ ಕೆಲಸ ಮಾಡುತ್ತಿದ್ದೇವೆ. ಅದನ್ನು ದೊಡ್ಡ ಪ್ರಮಾಣದಲ್ಲಿ ಪ್ರಬಲವಾದ ಸಂಸ್ಥೆಯಾಗಿ ಬೆಳೆಸಿ ಜನಪರ-ಪ್ರಗತಿಪರ ಕೃತಿಗಳ ರಚನೆ-ಪ್ರಕಾಶನಮತ್ತು ಕರ್ನಾಟಕದ  ಸಾಂಸ್ಕೃತಿಕ ಲೋಕದ ಆರೋಗ್ಯಕರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕನಸು ಕಾಣುತ್ತಾ ಬಂದಿದ್ದೇವೆ. ಆ ಹಾದಿಯಲ್ಲಿ ಬರುವ ಅಡಚಣೆಗಳನ್ನು ನಿವಾರಿಸಿಕನಸನ್ನು ನನಸು ಮಾಡಲು ಭರದ ಸಿಧ್ಧತೆ ನಡೆಸುತ್ತಿದ್ಧೇವೆ. ಈ ನಡುವೆ ಕರ್ನಾಟಕದ ಸಾಂಸ್ಕೃತಿಕ ಲೋಕದ ಹರವು ಮತ್ತು ಸವಾಲುಗಳು ಇನ್ನಷ್ಟು ಹೆಚ್ಚಿವೆ.

1. ಕರ್ನಾಟಕದ  ಬದುಕಿನಲ್ಲಿ ಜನ-ಪರಪ್ರಗತಿಪರ ಮೌಲ್ಯಗಳನ್ನು ಎತ್ತಿ ಹಿಡಿಯುವ ಉತ್ತಮ ಅಭಿರುಚಿಯ ಕೃತಿಗಳ ರಚನೆ,ಪ್ರಕಟಣೆ ಹಾಗೂ ಪ್ರಸಾರಕ್ಕೆ ಶ್ರಮಿಸುವುದು.

2. ಕನ್ನಡ ಪುಸ್ತಕ ಪ್ರಕಾಶನ ಲೋಕವನ್ನು ಪುಸ್ತಕಗಳ ವಿಷಯಶೈಲಿಮುದ್ರಣವಿನ್ಯಾಸಗಳಲ್ಲಿ ಇನ್ನಷ್ಟು ಹೊಸಸಾಮಯಿಕ ಮತ್ತು ಸೃಜನಶೀಲ ಬಳವಣಿಗೆಗಳಿಂದ ಶ್ರೀಮಂತಗೊಳಿಸುವುದು

3. ಕನ್ನಡದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳ ರಚನೆಯಲ್ಲಿ ತೊಡಗಿರುವ ಉದಯಮಾನ ಮತ್ತು ಪ್ರಭುದ್ದ ಲೇಖಕರನ್ನು ಪ್ರೋತ್ಸಾಹಿಸಿ ಅವರ ಕೃತಿಗಳು ಜನತೆಯನ್ನು ತಲುಪುವಂತೆ ಎಲ್ಲಾ ಪ್ರಯತ್ನಗಳನ್ನು ಮಾಡುವುದು

4. ಕನರ್ಾಟಕದಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆ ಬೆಳೆಸುವ ಕೃತಿಗಳ ರಚನೆಪ್ರಕಟಣೆ ಹಾಗೂ ಪ್ರಸಾರಕ್ಕೆ ಶ್ರಮಿಸುವುದು.

ಇವೇ ಮುಂತಾದವುಗಳನ್ನು ಗುರಿಯಾಗಿಸಿಕೊಂಡು ಹೊರಟ ನಮ್ಮ ಹಾದಿ ಹೆಜ್ಜೆಗಳನ್ನು ದಾಖಲಿಸಲು ಈ ಬ್ಲಾಗ್ ಪ್ರಯತ್ನಿಸುತ್ತದೆ.

 

January 17, 2009 Posted by odubazar | ಬುಕ್ ಬಜಾರ್ | | No Comments Yet