Skip to content
ಸೆಪ್ಟೆಂಬರ್ 4, 2008 / odubazar

‘ಕನ್ನಡಪ್ರಭ’ದ ‘ಓದಿನ ಮನೆ’

ಆ ಒಂದು ದಿನ

ಇದು ಅನುವಾದಗಳ ವರ್ಷ. ಬಹುಷಃ ಈ ವರ್ಷ ಬಿಡುಗಡೆಯಾದಷ್ಟು ಅನುವಾದಿತ ಕಾದಂಬರಿಗಳು   ಹಿಂದೆಂದೂ ಹೊರಬಂದಿರಲಿಲ್ಲವೇನೋ? ಯಂಡಮೂರಿ ವೀರೇಂದ್ರನಾಥ್, ಮಲ್ಲಾಡಿ ವೆಂಕಟಕೃಷ್ಣ ಮುಂತಾದವರು ತುಂಬಾ ಸಕ್ರಿಯರಾಗಿದ್ದ ದಿನಗಳಲ್ಲಿ ಅವರ ಕಾದಂಬರಿಗಳು ದಂಡಿಯಾಗಿ ಬಿಡುಗಡೆ ಆಗುತ್ತಿದ್ದವು. ಆದರೆ, ಕ್ಲಾಸಿಕ್ ಎನ್ನಬಹುದಾದ ಕೃತಿಗಳ ಹೆಗ್ಗಳಿಕೆ ಈ ವರ್ಷದ್ದು.

ಇಂಥ ಅನುವಾದಿತ ಕೃತಿಗಳ ಪೈಕಿ ಥಟ್ಟನೆ ನೆನಪಿಗೆ ಬರುವುದು  ಕೆ ವಿ ತಿರುಮಲೇಶ್ ಅನುವಾದಿಸಿದ ರಿಲ್ಕೆಯ ‘ಟಿಪ್ಪಣಿ ಪುಸ್ತಕ’, ದೇವಕೀನಂದನ ಖತ್ರೀ ಅವರ ‘ಚಂದ್ರಕಾಂತಾ’ದ ಆರು ಸಂಪುಟಗಳು, ಪಿ ವಿ  ನಾರಾಯಣ ಅನುವಾದಿಸಿದ  ರಸೆಲ್..

ಇದೀಗ ಜಿ ಎನ್ ರಂಗನಾಥ ರಾವ್ ಅವರು ಅಲೆಕ್ಸಾಂಡರ್ ಸೋಲ್ಜೆನಿತ್ಸಿನ್‌ನ ಕಾದಂಬರಿಯನ್ನು   ಅನುವಾದಿಸಿಕೊಟ್ಟಿದ್ದಾರೆ. ಇದನ್ನು ಅವರು ಅನುವಾದಿಸಿ ಇಪ್ಪತ್ತು ವರುಷಗಳಾಗಿವೆ. ಆಗ ಪ್ರಕಟಗೊಂಡ ಕೃತಿ ಈಗ ಮರುಮುದ್ರಣ ಕಾಣುತ್ತಿದೆ.

‘ವನ್ ಡೇ ಇನ್ ದಿ ಲೈಫ್ ಆಫ್ ಇವಾನ್ ದೆನಿಸೋವಿಚ್’ ಒಂದರ್ಥದಲ್ಲಿ ಸೋಲ್ಜೆನಿತ್ಸಿನ್‌ನ ಆತ್ಮಕತೆ. ಸ್ಟಾಲಿನ್ ವಿರುದ್ಧ ಮಾತಾಡಿದ ಎಮ್ಬ ಆರೋಪಕ್ಕೆ ಅವನನ್ನು ಕಾನ್ಸಂಟ್ರೇಷನ್ ಕ್ಯಾಂಪಿಗೆ ಕಳುಹಿಸುತ್ತಾರೆ. ಅಲ್ಲಿ ಆತ ಕಳೆದ ಎಂಟು ವರುಷಗಳ ಅನುಭವದ ಸಾರ ಇದು.

ಕಾದಂಬರಿಯಲ್ಲಿ ಇವಾನ್ ಕೂಡ ಹತ್ತು ವರುಷ ಕಠಿಣ ಶಿಕ್ಷೆಗೆ ಒಳಗಾಗುತ್ತಾನೆ. ಆತನ ಒಂದು ದಿನದ ಅನುಭವವೇ ಸುದೀರ್ಘ ಕಾದಂಬರಿಯಾಗಿ ರೂಪಿತವಾಗಿದೆ. ಹೀಗಾಗಿ ತಂತ್ರದ ದೃಷ್ಟಿಯಿಂದಲೂ ಇದು ಮಹತ್ವಪೂರ್ಣ ಕೃತಿ.

ಜಿ ಎನ್ ರಂಗನಾಥರಾವ್ ಇದನ್ನು ನವಿರಾಗಿ ಕನ್ನಡಕ್ಕೆ ತಂದಿದ್ದಾರೆ.

ಇವಾನ್ ದೆನಿಸೋವಿಚ್‌ನ ಜೀವನದಲ್ಲಿ ಒಂದು ದಿನ
ಅನು: ಜಿ ಎನ್ ರಂಗನಾಥ ರಾವ್‌
ಸುಧಾ ಎಂಟರ್‌ಪ್ರೈಸಸ್, ಬೆಂಗಳೂರು
ಪುಟ ೧೬೧ ಬೆಲೆ  ೯೦ ರು.

ಉಪಮೆಯ ರೋಗಿ
 
 

-೧-

ಮೂರು ಜೀವದ ಗೆಳೆಯರು

ಮೂರು ಮಂದಿ ಕುರುಡರು

ಮೂರು ಕಾಲದ ಸೋಸಿನೋಡಲು

ಮೂರು ದಿಕ್ಕಿಗೆ ಹೋದರು.

 

-೨-

ಐದು ಮಂದಿ ಕುರುಡರು

ಆನೆ ಮುಟ್ಟಿ ನೋಡಿದಾಗ

ಐದು ಮಂದಿ ಕುರುಡರ

ಆನೆ ಮೂಸಿನೋಡಿತು

ಕವಿ ಎಚ್ ಎಸ್ ಶಿವಪ್ರಕಾಶರ ‘ಮಬ್ಬಿನ ಹಾಗೆ ಕಣಿವೆಯಾಸಿ’ ಕವನ ಸಂಕಲನದ ಎರಡು ಕವಿತೆಗಳ ತುಣುಕುಗಳಿವು. ಭಾಷೆಯಲ್ಲಿ ಹೊಸ ಪ್ರಯೋಗ ಮಾಡುತ್ತಾ ಸಾಗಿರುವ ಶಿವಪ್ರಕಾಶ್, ನುಡಿಯ ನುಡಿಗಟ್ಟಿನ ಎಲ್ಲೆಗಳನ್ನು ಉಲ್ಲಂಘಿಸುವುದಕ್ಕೆ ತವಕಿಸುವುದನ್ನು ಈ ಸಂಕಲನದಲ್ಲೂ ಕಾಣಬಹುದು.

ಇದು ಶಿವಪ್ರಕಾಶರ ಅನುಭವಗಳ, ಅನುಬಂಧಗಳ, ಅನುಮಾನಗಳ, ಅನ್ವೇಷಣೆಗಳ, ಅನುಕಂಪಗಳ ಹೂರಣ ಎಂದಿದ್ದಾರೆ ಮುನ್ನುದಿಕಾರ ಕೆ ಎಸ್ ಸಚ್ಚಿದಾನಂದ ಮೂರ್ತಿ.

ಪೆನು?, ಕಾಗದ, ಹೋದರೂ ತೊಲಗಿ

ಶಿವಪ್ರಕಾಶ ಉಪಮೆಯ ರೋಗಿ

ಎಂಬ ಸಾಲೊಂದು ಅವರ ಮುಕ್ತಕದ ಕೊನೆಯಲ್ಲಿದೆ. ರೋಗಗ್ರಸ್ತ ಸಮಾಜವೊಂದರ ಕವಿ ತನ್ನ ಕಾಲದೇಶಗಳನ್ನು  ಕಾಲದೇಶಗಳಿಂದ ಬೇರ್ಪಡಿಸಿ ನೋಡಲು, ಅಂದರೆ, ಆಧುನಿಕ, ವಸಾಹತುಶಾಹಿ, ಅಭಿವೃದ್ಧಿವಾದಿ ಪರಿಕಲ್ಪನೆಯ ಕಾಲದೇಶಗಳಿಂದ ಬೇರ್ಪಡಿಸಿ ನೋಡಲು ಉಪಮೆ ಅನಿವಾರ್ಯ ಎಂದಷ್ಟೇ ಅವರು ಹೇಳುತ್ತಿದ್ದಾರೆ ಎನ್ನುತ್ತಾರೆ ಬೆನ್ನುದಿಕಾರ ಜಿ. ರಾಜಶೇಖರ.

‘ಎಂದಷ್ಟೇ ಹೇಳುತ್ತಿದ್ದಾರೆ’ ಎನ್ನುವ ಮೂಲಕ ಕವಿತೆಯ ಸಾಲುಗಳನ್ನು  ತನ್ನ ಮೂಗಿನ ನೇರಕ್ಕೆ, ತನ್ನ  ವಾದವನ್ನು  ಸಮರ್ಥಿಸಿಕೊಳ್ಳುವ ವಿಫಲ ಪ್ರಯತ್ನವನ್ನು  ರಾಜಶೇಖರ್ ಮಾಡಿದ್ದಾರೆ. ಕವಿಗಿಂತ ತಾನು ದೊಡ್ಡವನು ಎಂದು ವಿಮರ್ಶಕ ಹೇಳಿಕೊಳ್ಳಲು ಯತ್ನಿಸಿದಂತೆಯು ಈ ಸಾಲು ಕಾಣಿಸುತ್ತದೆ.

ಮಬ್ಬಿನ ಹಾಗೆ ಕಣಿವೆಯಾಸಿ
ಎಚ್ ಎಸ್ ಶಿವಪ್ರಕಾಶ್‌  

ಅಭಿನವ  

ಪುಟ ೯೬  ಬೆಲೆ  ೫೦ ರು.

 

ಪ್ರಬಂಧ  ಕೈಪಿಡಿ

 

ಪತ್ತೇದಾರಿ ಕಾದಂಬರಿಗಳನ್ನು ಅನುವಾದಿಸುತ್ತಿದ್ದ ಎಂ ವಿ ನಾಗರಾಜರಾವ್ ವಿದ್ಯಾರ್ಥಿಗಳಿಗೆ ೧೦೦ ಪ್ರಬಂಧಗಳು ಎಂಬ ಸುಲಭ ಕೈಪಿಡಿಯನ್ನು ಹೊರತಂದಿದ್ದಾರೆ. ಇದರ ಉಪಶೀರ್ಷಿಕೆಯಲ್ಲೇ ಒಂದು ವಿಪರ್ಯಾಸವಿದೆ. ‘ವಿದ್ಯಾರ್ಥಿಗಳು ಸ್ವತಂತ್ರವಾಗಿ ಮತ್ತು ಸಮರ್ಥವಾಗಿ ಪ್ರಬಂಧ  ಬರೆಯುವ ಸುಲಭ ಕೈಪಿಡಿ ಎನ್ನುವಾಗ ಸ್ವತಂತ್ರವಾಗಿ ಪ್ರಬಂಧ ಬರೆಯುವುದಕ್ಕೆ ಕೈಪಿಡಿ ಕಾರ ಮುನ್ನುಡಿಯಲ್ಲಿ  ನಾಗರಾಜ ರಾವ್ ಹೆಸರಿಸಿರುವ ಪ್ರಬಂಧಕಾರರಿಗೆ ಯಾವ ಕೈಪಿಡಿಯಿತ್ತು?

ಸಾಹಿತ್ಯ ಪ್ರಬಂಧಗಳ  ಬಗ್ಗೆ ನಾಗರಾಜರಾವ್ ಎರಡು ಮಾತು ಆಡಿದ್ದಾರೆ. ಆದರೆ, ಅವರು ಅಲ್ಲಿ ಹೆಸರಿಸಿರುವ ಪ್ರಬಂಧಕಾರರಾದ ವಿಸೀ, ರಾಕು, ಕುವೆಂಪು, ಮೂರ್ತಿರಾವ್ ಪ್ರಬಂಧಗಳಿಗೂ  ಕೃತಿಯಲ್ಲಿ ಅವರು ಉದಾಹರಿಸಿರುವ ಪ್ರಬಂಧಗಳಿಗೂ  ಸಂಬಂಧವಿಲ್ಲ. ಆ ಶೈಲಿಯೇ ಬೇರೆ, ಈ ಪ್ರಬಂಧಗಳೇ  ಬೇರೆ . ಇವು ಮಾಹಿತಿ ನೀಡುವ ವಿದ್ಯಾರ್ಥಿಗಳಷ್ಟೇ ಬರೆಯಬಹುದಾದ  ಪ್ರಬಂಧ -ಲೇಖನಗಳು.

ವಿದ್ಯಾರ್ಥಿಗಳಿಗೆ ೧೦೦ ಪ್ರಬಂಧಗಳು
ಎಂ ವಿ ನಾಗರಾಜ ರಾವ್‌ 

ವಸಂತ ಪ್ರಕಾಶನ
ಪುಟ ೧೮೮  ಬೆಲೆ ೬೫ ರು.


ಬಿರಿಯಾನಿ ಮತ್ತು ಬಿಳಿಗೋಡೆ

 

ಯಾರೂ ಮುಟ್ಟದ ಹುಲ್ಲುಗಾವಲಿನಂತಿದ್ದ ‘ಮುಸ್ಲಿಂ ಸಮಾಜದ ಸಾಹಿತ್ಯ ಕ್ಷೇತ್ರಕ್ಕೆ’ ಸಾರಾ ಅಬೂಬಕರ್, ಬೊಳುವಾರು, ಫಕೀರ್ ಮಹಮ್ಮದ್, ರಶೀದ್, ಭಾನು ಮುಷ್ತಾಕ್, ಬಿಎಂ ಬಷೀರ್  ಮುಂತಾದವರು ಕಾಲಿಟ್ಟು ಅದನ್ನು ಸಾಕಷ್ಟು ಸಮೃದ್ಧವಾಗಿಸಿದ್ದಾರೆ. ತಮ್ಮ ಎರಡನೆಯ ಸಂಕಲನದ ಮೂಲಕ ಅದನ್ನು  ಮತ್ತಷ್ಟು ಹುಲುಸಾಗಿಸಿದ್ದಾರೆ ಹಮೀದ್ ಪಕ್ಕಲಡ್ಕ.

 ‘ಬಿಳಿಗೋಡೆ’ ಸಂಕಲದಲ್ಲಿ ಒಂಬತ್ತು ಕತೆಗಳಿವೆ. ಸಣ್ಣಸಣ್ಣ ಕತೆಗಳೂ ಒಂದೆರಡು ಸುದೀರ್ಘ ಸಣ್ಣಕತೆಗಳೂ ಇರುವ ಈ ಸಂಕಲನಕ್ಕೆ ಮುನ್ನುಡಿ  ಬರೆಯುತ್ತಾ ಹಿರಿಯ ಲೇಖಕಿ ಸಾರಾ ಅಬೂಬಕರ್  ‘ಮತಾಂಧತೆ ಇಲ್ಲದೇ ಮಾನವೀಯತೆಯಿಂದ ತುಡಿಯುವ ಹೃದಯ ಇವರದಾಗಿದೆ. ಹೀಗಾಗಿಯೇ ಇವರನ್ನು ಯಾವುದೇ ಧಾರ್ಮಿಕ ಗುಂಪುಗಳಲ್ಲಿ ಗುರುತಿಸಿಕೊಳ್ಳದೇ ಕೇವಲ ಓರ್ವ ಒಳ್ಳೆಯ ಮನುಷ್ಯರಾಗಿ, ಗುರುತಿಸಿಕೊಳ್ಳಲು ಸಾಧ್ಯ’ ಎಂದಿದ್ದಾರೆ.

ಹಮೀದ್ ಅವರ ಭಾಷೆ, ಶೈಲಿ ಸೊಗಸಾಗಿದೆ. ಅವರು ಕತೆಗಳ ಕ್ಷಿತಿಜ ವಿಸ್ತಾರಗೊಂಡರೆ ಮತ್ತಷ್ಟು ವೈವಿಧ್ಯಮಯ ಕತೆಗಳನ್ನು ನಾವು ನಿರಿಕ್ಶಿಸಬಹುದು.

ಬಿಳಿಗೋಡೆ  ಅಬ್ದುಲ್ ಹಮೀದ್ ಪಕ್ಕಲಡ್ಕ
ಗಾಯತ್ರಿ ಪ್ರಕಾಶನ, ಕಿನ್ನಿಗೋಳಿ 
ಪುಟ ೧೦೫  ಬೆಲೆ  ೬೦ ರು

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: