Skip to content
ಸೆಪ್ಟೆಂಬರ್ 11, 2008 / odubazar

‘ಸಹಿಸುವುದೇ ಸರಿಯಾದ ರೀತಿ ಎಂಬ ವಾದದಲ್ಲಿ ಏನೋ ತಪ್ಪಿದೆ’

ಒಂದು ಬ್ಲಾಗ್ ನ ಅಕಾಲಿಕ ಸಾವು’ ಲೇಖನ ನರೇಂದ್ರ ಪೈ ಅವರು ನಡೆಸುತ್ತಿದ್ದ ‘ಓದುವ ಹವ್ಯಾಸ’ ಎಂಬ ಬ್ಲಾಗ್ ಇನ್ನಿಲ್ಲವಾದದ್ದರ ಬಗ್ಗೆ ಗಮನ ಸೆಳೆದಿತ್ತು. ಈ ಬ್ಲಾಗ್ ಮತ್ತೆ ಪುಸ್ತಕ ಪ್ರೀತಿ ಹಂಚುವಲ್ಲಿ ನಿರತವಾಗಲಿ ಎಂದು ಕಳಕಳಿ ವ್ಯಕ್ತಪಡಿಸಿತ್ತು. ಅದಕ್ಕೆ ನರೇಂದ್ರ ಪೈ ಪ್ರತಿಕ್ರಿಯಿಸಿದ್ದಾರೆ.

ಚರ್ಚೆಗೆ ಸ್ವಾಗತ-

ನರೇಂದ್ರ
narendra.pai@manipal.edu

ಹಲವರಿಂದ ನನಗೆ ಬರೆಯುವುದನ್ನು ನಿಲ್ಲಿಸಬಾರದು, ಇಂಥ ಟೀಕೆಗಳನ್ನು ನಿರ್ಲಕ್ಷಿಸುವುದೇ ಸರಿಯಾದುದು ಎಂಬೆಲ್ಲ ಈಮೇಲ್‌ಗಳು ಬರುತ್ತಿರುವುದರಿಂದ ಇಲ್ಲಿಯೇ ನಾನು ಕೆಲವೊಂದು ವಿಚಾರಗಳನ್ನು ಸ್ಪಷ್ಟಪಡಿಸುವುದು ಉತ್ತಮ ಎನಿಸುತ್ತದೆ. ವಾಸ್ತವವಾಗಿ ನನಗೆ ನನ್ನ ಬರಹಗಳ ಬಗ್ಗೆ ಹಲವರಿಂದ ಸಾಕಷ್ಟು ಒಳ್ಳೆಯ ಮಾತುಗಳು, ಉತ್ತೇಜನ, ಬೆಂಬಲ, ಪ್ರೋತ್ಸಾಹ ಎಲ್ಲವೂ ಸಿಕ್ಕಿದ್ದಿದೆ. ಈ ವಿಚಾರದಲ್ಲಿ ಉದ್ದಕ್ಕೂ ನಾನು ಸ್ವಲ್ಪ ಹೆಚ್ಚೇ ಎನಿಸುವಷ್ಟು ಅದೃಷ್ಟವಂತನಾಗಿದ್ದೆ. ನನ್ನ ಬರಹಗಳಿಗೆ ಸಿಕ್ಕಿದ ಧನಾತ್ಮಕ ಪ್ರತಿಕ್ರಿಯೆಗಳ ಎದುರು ಈ ಒಂದು ಕಾಮೆಂಟ್ ಏನೂ ಅಲ್ಲ ಎನ್ನುವುದು ಕೂಡ ವಾಸ್ತವವಾಗಿದೆ. ಈಗಲೂ ಬರುತ್ತಿರುವ ಈಮೇಲ್‌ಗಳ ಹಿಂದಿನ ಮನಸ್ಸುಗಳ ಕಾಳಜಿ, ಪ್ರೀತಿಗೆ ನನ್ನಲ್ಲಿ ಮಾತುಗಳಿಲ್ಲ. ನಾನು ಅನಗತ್ಯವಾಗಿ ಇದೆಲ್ಲದರ ಕೇಂದ್ರವಾಗಿ ಹಲವರ ಗಮನಸೆಳೆದುಕೊಳ್ಳುತ್ತಿರುವುದು ನನಗೇ ಮುಜುಗರದ ವಿಷಯ. ಈ ಹಿನ್ನೆಲೆಯಲ್ಲಿ ಮೇಲ್ನೋಟಕ್ಕೆ ನಾನು ಕೊಂಚ ಅತಿಯಾಗಿ ಪ್ರತಿಕ್ರಿಯಿಸಿದಂತೆ ಕಾಣುವ ನನ್ನ ವರ್ತನೆಯ ಬಗ್ಗೆ ಎರಡು ಮಾತು.

ಹಾಗೆ ನೋಡಿದರೆ ಇಂಥ ಕ್ಷುಲ್ಲಕ ಟೀಕೆಗಳನ್ನು ನಿರ್ಲಕ್ಷಿಸುವುದು ಸರಿಯಾದ ನಿಲುವು ಎಂದೇ ನಾವೆಲ್ಲ ತಿಳಿಯುತ್ತೇವೆ. ಹಾಗೆ ತಿಳಿದು ನಿರ್ಲಕ್ಷಿಸುತ್ತೇವೆ ಎಂದೇ ಈ ಸಣ್ಣತನದ, ಕಾಲೆಳೆಯುವ ಬುದ್ಧಿಯವರು ಇದೆಲ್ಲ ಸರಳ, ಸುಲಭ ಎಂದು ತಿಳಿದು ಬೇಕೆನಿಸಿದಾಗ ಇನ್ನೊಬ್ಬರ ಮೂತಿಗೆ ಇಕ್ಕುವುದಕ್ಕೆ ಭಂಡ ಧೈರ್ಯದಿಂದ ಮುಂದಾಗುತ್ತಾರೆ. ಎಲ್ಲೋ ಒಂದು ಕಡೆ ಇದು ಇಂಟರ್ನೆಟ್, ಇಲ್ಲಿ ಇದೆಲ್ಲ ಸಾಮಾನ್ಯ, ತಲೆಕೆಡಿಸಿಕೋ ಬೇಡ ಎಂಬ ಸಲಹೆ ಕೂಡಾ ಸಿಗುತ್ತದೆ. ಇದು ಇಂಟರ್ನೆಟ್ ಎಂಬ ಒಂದೇ ಕಾರಣಕ್ಕೆ ನಾವಿದನ್ನು ಸಹಿಸುವುದೇ ಸರಿಯಾದ ರೀತಿ ಎಂಬ ವಾದದಲ್ಲಿ ಏನೋ ತಪ್ಪಿದೆ ಅನಿಸುತ್ತದೆ ನನಗೆ. ಹಾದಿಯಲ್ಲಿ ಮುಖಾಮುಖಿಯಾಗಿ ತದಕುವುದಕ್ಕೂ ಇಲ್ಲಿ ಹೀಗೆ ಮುಖೇಡಿಯಂತೆ ಮರೆಯಾಗಿ ನಿಂತು ತದಕುವುದಕ್ಕೂ ಸಂವೇದನೆಗಳಲ್ಲಿ ವ್ಯತ್ಯಾಸವಿಲ್ಲ ಎನ್ನುವುದನ್ನು ನಾವು ಮನಗಾಣುವುದು ಮುಖ್ಯ. ಅನಾಮಿಕ ಕಾಮೆಂಟುಗಳಿಗೆ ಅವಕಾಶ ನೀಡುವುದಿಲ್ಲ, ಡಮ್ಮಿ ವ್ಯಕ್ತಿಯ ಹೆಸರಿನಲ್ಲಿ ಯಾರನ್ನೂ ನೋಂದಾಯಿಸಲು ಬಿಡುವುದಿಲ್ಲ ಎಂದೆಲ್ಲ ಹೇಳಿಕೊಳ್ಳುವ ಸಂಪದದಂಥ ತಾಣದಲ್ಲೇ ಇಂಥದ್ದು ಸಂಭವಿಸಿದ್ದು ಆಘಾತಕರ, ಅನಪೇಕ್ಷಿತ ಕೂಡ.

ಇದಲ್ಲದೆ ನನ್ನ ಸ್ವಂತ ಅನುಭವ, ಸಾಹಿತ್ಯ-ಸಾಹಿತಿಗಳ ಜಗತ್ತಿನಲ್ಲಿ ತುಂಬ ಕಹಿಯಾದದ್ದು. ಕಳೆದ ಹತ್ತು ವರ್ಷಗಳಲ್ಲಿ ನಾನು ಇಲ್ಲಿ ಎದುರಿಸಿದ ಸಣ್ಣತನ, ಚಿತಾವಣೆ, ಕಾಲೆಳೆಯುವುದು ಮತ್ತು ಅವಕಾಶ ಸಿಕ್ಕರೆ ಅವಮಾನಿಸುವುದು ಸಾಕಷ್ಟಿದೆ. ಇದರಲ್ಲಿ ನಮ್ಮ ನಿಯರ್ ಎಂಡ್ ಡಿಯರ್‌ಗಳು ಇರುವುದನ್ನೂ, ಬರೆಯುವುದೇ ಒಂದು ಆಡುವುದೇ ಇನ್ನೊಂದು ಮಾಡುವ ಗಣ್ಯ ಬರಹಗಾರರು ಇರುವುದನ್ನೂ, ತುಂಬ ಪ್ರಬುದ್ಧ ಎಂದು ನಾವೆಲ್ಲ ನಂಬಿದವರು ಕೂಡ ಇರುವುದನ್ನು ಕಂಡು ಕನ್ನಡ, ಸಾಹಿತ್ಯ, ಸಾಹಿತಿ ಮುಂತಾದುವುದರ ಕುರಿತ ನನ್ನ ಮನೋಧರ್ಮ ಕೂಡ ತುಂಬ ಬದಲಾಗಿದೆ. ಎಲ್ಲದರಿಂದ ದೂರ ಇರುವುದು ಯಾವುದೋ ಅನಪೇಕ್ಷಿತ ವಸ್ತುವಿನಿಂದ ದೂರವುಳಿಯುವಷ್ಟೇ ಸಮಾಧಾನ ನೀಡುತ್ತಿರುವುದು ಕೂಡ ವಿಚಿತ್ರವಾಗಿದೆ! ಹಾಗೆ ನನ್ನದು ಒಂದು ದುಡುಕಿನ ಅಥವಾ ಅತಿಯಾಗಿ ಪ್ರತಿಕ್ರಿಯಿಸಿದ ವಿದ್ಯಮಾನವಲ್ಲ, ಒಂದರ್ಥದಲ್ಲಿ ತೀರ ತಡವಾಗಿಯೇ ತೆಗೆದುಕೊಂಡ, ಸಾಕಷ್ಟು ಸಂಯಮ ಮತ್ತು ಸಮಾಧಾನದ ಸರಿಯಾದ ನಿರ್ಧಾರ ಎನ್ನುವ ನಂಬುಗೆಯೇ ನನ್ನಲ್ಲಿದೆ.

ಪ್ರಸ್ತುತ ಕಾಮೆಂಟ್ ಕಾಣಿಸಿದ್ದು ಸಂಪದ.ನೆಟ್ ತಾಣದಲ್ಲಿ, ನನ್ನ ವೈಯಕ್ತಿಕ ಬ್ಲಾಗ್‌ನಲ್ಲಿ ಅಲ್ಲ. ಅದು ಅಂಥ ಗಮನಾರ್ಹವಾದ ಏನನ್ನೂ ಹೇಳುತ್ತಿರಲಿಲ್ಲ. ಅದು ನನ್ನ ಶೈಲಿಯನ್ನು ಕುಹಕದಿಂದ ಪ್ರಶ್ನಿಸುತ್ತ ನಾನು ಕೆಲವು ಶಬ್ದಗಳನ್ನು ಮತ್ತೆ ಮತ್ತೆ ಬಳಸಿರುವುದು ವಿಮರ್ಶೆಯ ಅನಿವಾರ್ಯತೆಯೆ ಎಂದೆಲ್ಲ ಲೇವಡಿಯ ಧ್ವನಿಯಲ್ಲಿ ಟೀಕಿಸಿತ್ತು. ಉದ್ದೇಶ ಕೇವಲ ನೋಯಿಸುವುದು, ವಸ್ತುನಿಷ್ಠ ಚರ್ಚೆಯಲ್ಲ. ನಾನು ಅಬ್ದುಲ್ ರಶೀದರ ಒಂದು ಪುಸ್ತಕದ ಬಗ್ಗೆ ಬರೆದಿದ್ದೆ. ಅಬ್ದುಲ್ ರಶೀದರ `ಕೆಂಡಸಂಪಿಗೆ’ ದಿನದಿಂದ ದಿನಕ್ಕೆ ಸಾಕಷ್ಟು ಮೆಚ್ಚುಗೆ, ಯಶಸ್ಸು ಗಳಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಕಾಮೆಂಟ್ ಹಾಕಿದ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚಿನ ಉದ್ದೇಶಗಳಿದ್ದವು ಎನ್ನುವುದು ಕೂಡ ಈ ಕಾಮೆಂಟನ್ನು ಕೊಂಚ ಗಂಭೀರವಾಗಿ ನೋಡಲು ಕಾರಣ. ಸಂಪದದ ನಾಡಿಗರ ಜೊತೆ ಮಾತನಾಡಿದ ಮೇಲೆ ಸ್ಪಷ್ಟವಾದ ಕೆಲವು ಸಂಗತಿಗಳ ಅರಿವಿಲ್ಲದೇ ಹೋಗಿದ್ದರೆ ಬಹುಷಃ ನಾನು ಈ ಕಾಮೆಂಟನ್ನು ನಿರ್ಲಕ್ಷಿಸುತ್ತಿದ್ದೆ ಎಂಬುದು ಮಾತ್ರ ಸತ್ಯ.

ಕನ್ನಡದ ಕೆಲವು ಒಳ್ಳೆಯ ಪುಸ್ತಕಗಳ ಬಗ್ಗೆ ಪುಸ್ತಕಪ್ರಿಯರ ಗಮನಸೆಳೆಯುವುದು ನನ್ನ ಬರವಣಿಗೆಯ ಉದ್ದೇಶವಾಗಿತ್ತು. ಸದ್ಯಕ್ಕಂತೂ ಸಾಕಷ್ಟು ಬ್ಲಾಗುಗಳು, ಸ್ವತಂತ್ರ ತಾಣಗಳು ಇಂಥ ಕೆಲಸವನ್ನು ಅಚ್ಚುಕಟ್ಟಾಗಿ ಮತ್ತು ಒಂದೇ ಕಡೆ ಮಾಹಿತಿ ಸಿಗುವಂತೆ ಮಾಡುತ್ತಿವೆ. ನಾನು ಬರೆಯುವುದು ಬರೆಯದಿರುವುದು ಮುಖ್ಯ ಸಂಗತಿಯಲ್ಲ. ಸಣ್ಣತನ ಎಂಬ ಕಳೆಗಿಡ ಅಂತರ್ಜಾಲದ ಕನ್ನಡ ಬಳ್ಳಿಯ ಎಡೆಯಲ್ಲಿ ಚಿಗುರುವುದಕ್ಕೆ, ಅರಳುವುದಕ್ಕೆ ಬಿಡದಿರುವುದು ಮುಖ್ಯ. ಓದುಬಜಾರ್ ಮತ್ತು ತನ್ಮೂಲಕ ಸ್ಪಂದಿಸಿದ ಎಲ್ಲ ಹಿತೈಷಿಗಳಿಗೆ ಅನಂತ ಧನ್ಯವಾದಗಳು.

 1. ಸಂದೀಪ್ ಕಾಮತ್ / ಸೆಪ್ಟೆಂ 11 2008 10:27 ಫೂರ್ವಾಹ್ನ

  ಪೈ ಮಾಮ್,
  ನಿಮಗಾದ ಮಾನಸಿಕ ತುಮುಲದ ಅರಿವು ನನಗಿದೆ .ಆದ್ರೆ ನೀವು ಬ್ಲಾಗ್ ಡಿಲೀಟ್ ಮಾಡಬಾರದಿತ್ತು .ಸ್ವಲ್ಪ ಸಮಯ ಬ್ಲಾಗ್ ಬರೆಯದೆ ನಿಮ್ಮ ಪಾಡಿಗೆ ನೀವು ಇದ್ದಿದ್ರೇನೂ ಆಗ್ತಾ ಇತ್ತು !
  ಈಗ ನೋಡಿ ಬ್ಲಾಗ್ ರಿಕವರಿ ಮಾಡ್ಬೇಕು ಅಂದ್ರೆ ಸಾಧ್ಯನಾ??
  ನಾನು ತುಂಬಾ ಹಿಂದೆ ನನ್ನ ಗೆಳತಿಯೊಬ್ಬಳು ಬರೆದ ಪತ್ರಗಳನ್ನೆಲ್ಲಾ ಸುಟ್ಟು ಹಾಕಿದ್ದೆ ಏನೋ ಬೇಜಾರಾಗಿ.

  ಈಗ ಜಗಜೀತ್ ಸಿಂಗ್ ಹಾಡು ’ತೆರೆ ಖತ್ ಮೆ ಗಂಗಾ ಮೆ ಬಹಾ ಆಯಾ ’ ಕೇಳಿ ಅಳೋದೊಂದೆ ಬಾಕಿ !!!(ಆಕೆ ನನ್ನ ಪ್ರಿಯತಮೆ ಆಗಿರ್ಲಿಲ್ಲ ಅನ್ನೊದೇ ಸಮಾಧಾನ !)

 2. ಜಗದೀಶ / ಸೆಪ್ಟೆಂ 11 2008 5:41 ಅಪರಾಹ್ನ

  ನರೇಂದ್ರ ಪೈಯವರೆ,
  ನಿಮ್ಮ ಪುಸ್ತಕದ ಲೇಖನಗಳನ್ನು ಸಂತೋಷದಿಂದ ಓದುತ್ತಿದ್ದೆ. ನಿಮ್ಮ ಪುಸ್ತಕಗಳ ಪರಿಚಯ ಇಷ್ಟಪಟ್ಟವ. ನಿಮ್ಮ ವಿರ್ಮಶೆ ಚೆನ್ನಾಗಿರುತ್ತದೆ.

  ಆದರೆ, ಈಗ ನೀವು ಬರೆಯುವುದನ್ನು ನಿಲ್ಲಿಸಿದ್ದಲ್ಲದೆ ಸಂಪದದ ಬಗ್ಗೆ ಅನುಮಾನದಿಂದ ಮಾತಾಡುತ್ತಿರುವುದು ಯಾಕೋ ಸರಿ ಅನಿಸುತ್ತಿಲ್ಲ. ನಿಮಗೆ ಏನು ಗೊತ್ತಿದೆಯೋ ಏನೋ. ಆದರೆ, ಸಂಪದ ಒಂದು ಕಮ್ಯುನಿಟಿ ಸ್ಥಳ. ಅಲ್ಲಿ ಏನು ಕಾಮೆಂಟು ಹಾಕುತ್ತಾರೆ ಎಂದು ತಲೆ ಕೆಡಿಸಿಕೊಳ್ಳುವುದು ಎಷ್ಟು ಸಮಂಜಸ? ಅದನ್ನು ಸೀರಿಯಸ್ಸಾಗಿ ತಗೊಂಡು ಬರೆಯುವುದುನ್ನೇ ನಿಲ್ಲಿಸುವುದು ಕನ್ನಡದ ಬಗ್ಗೆ, ಕನ್ನಡ ಪುಸ್ತಕಗಳ ಬಗ್ಗೆ ನಿಮ್ಮ ಬದ್ಧತೆಯನ್ನು ಅನುಮಾನಿಸುವಂತೆ ಮಾಡುವುದಿಲ್ಲವೆ? ನೀವು ಬರೆಯುವ ವಸ್ತುವಿನ ಬಗ್ಗೆ ನೀವು ಗಂಭೀರವಾಗಿಬೇು(ನೀವು ಇರುತ್ತೀರ) ಆದರೆ sadly, self-importance does not work on the internet.

 3. ನರೇಂದ್ರ / ಸೆಪ್ಟೆಂ 12 2008 10:24 ಫೂರ್ವಾಹ್ನ

  ಜಗದೀಶ್, ನೀವು ಹೇಳ್ತಿರುವುದು ಸರಿ. ಕನ್ನಡದ ಬಗ್ಗೆ, ಕನ್ನಡ ಪುಸ್ತಕಗಳ ಬಗ್ಗೆ ನನ್ನ ಬದ್ಧತೆಯನ್ನು ಸ್ವತಃ ಅನುಮಾನಿಸುವಂತಾಗಿರುವುದು ನಿಜ. ಆದರೆ ಸಂಪದದ ಬಗ್ಗೆ ಅನುಮಾನದಿಂದ ಮಾತನಾಡುತ್ತಿಲ್ಲ. ಸಂಪದದ ಮೂಲಕವೇ ನಾನು ಬರೆಯಲು ತೊಡಗಿದ್ದು. ಸಂಪದದ ಬಗ್ಗೆ ನನಗೆ ಈಗಲೂ ವಿವರಿಸಲಾಗದ ಮೋಹ, ಬಾಂಧವ್ಯ ಮತ್ತು ಎಲ್ಲರಿಗಿಂತ ಹೆಚ್ಚು ಗೌರವವಿದೆ. ನಾಡಿಗ್ ತುಂಬ ಬದ್ಧತೆ, ನಿರಂತರ ಪ್ರಯೋಗಶೀಲತೆ ಮತ್ತು ಸ್ಪಷ್ಟವಾದ ನಿಲುವುಗಳಿದ್ದ ವ್ಯಕ್ತಿ. ಅವರ ಬಗ್ಗೆಯೂ ಗೌರವವಿದೆ. ಆದರೆ ಇದು ಬರೇ ಒಂದು ಕಮೆಂಟ್ ಅಷ್ಟೇ ಆಗಿರಲಿಲ್ಲ ಮತ್ತು ಇಂಥದ್ದಕ್ಕೆ ಸಂಪದವನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗಿದ್ದು ನನ್ನ ಬೇಸರ. ಇನ್ನು self importance ಏನೂ ಇಲ್ಲ. ನನ್ನ ಬರಹಗಳ ಬಗ್ಗೆ ಅಂಥ ಈಗೋ ಸಮಸ್ಯೆ ನನಗಿಲ್ಲ ಅಂತ ನಂಬಿದ್ದೇನೆ. ಆದರೂ ನಿಮಗೆ ಹಾಗೆ ಕಂಡರೆ ಅದು ನಿಜವಿರಬಹುದು, ನನ್ನ ಬೆನ್ನು ನನಗಿಂತ ಬೇರೆಯವರಿಗೆ ಸರಿಯಾಗಿ ಕಾಣಿಸುತ್ತದೆ, ಅಲ್ಲವೆ. ಈಗೋ ಇರಬಾರದು ಅನಿಸುತ್ತದೆ ನನಗೂ.

 4. ವಿಕಾಸ್ ಹೆಗಡೆ / ಸೆಪ್ಟೆಂ 15 2008 2:58 ಅಪರಾಹ್ನ

  ಸಂಪದದಲ್ಲಿ ಇದಕ್ಕೆ ಕಾರಣವಾದ ಬರಹದ ಲಿಂಕ್ ಕೊಡಲು ಸಾದ್ಯವೆ ಪೈ ಸರ್?

 5. ಸಂದೀಪ್ ಕಾಮತ್ / ಸೆಪ್ಟೆಂ 15 2008 6:30 ಅಪರಾಹ್ನ

  ಸಂಪದದಲ್ಲಿ ಇದಕ್ಕೆ ಕಾರಣವಾದ ವಿಚಾರಧಾರೆಯನ್ನು ಕಡತದಿಂದ ನಿರ್ಮೂಲನಗೊಳಿಸಲಾಗಿದೆ .ಅದಾಗ್ಯೂ ನಿಮಗೆ ಕುತೂಹಲವಿದ್ದಲ್ಲಿ ಅದನ್ನೊ ಗೂಗಲಣ್ಣನ ಜೋಳಿಗೆಯಿಂದ ಆವಾಹಿಸಬಹುದು .

Trackbacks

 1. ಓದುಬಜಾರ್ ಓದಿ « ಅವಧಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: