Skip to content
ಸೆಪ್ಟೆಂಬರ್ 13, 2008 / odubazar

‘ಯಾಮಿನಿ’ಯಲ್ಲಿ ಜಾನಕಿ ಮಿಣುಕು

-ವಿಕ್ರಮ್ ಹತ್ವಾರ್
ಹೊರಳಾಡಿ ನರಳಿದೆ, ಇದ್ದು ಇರಲಾರದೆ-
ಇದೇ ಇರಬೇಕು ಕವಿತೆ.
ಧ್ಯಾನಸ್ಥ ಸ್ಥಿತಿ ಅನ್ನುವುದು ಓಬೀರಾಯನ ಮಾತಾಯಿತು. ಒಂದೊಂದು ಸಾಲು ಬರೆಯಬೇಕಾದರು ಒದ್ದಾಡುತ್ತೇನೆ ಅನ್ನುವುದು ಲೇಟಸ್ಟ್ ಫ್ಯಾಶನ್ನು. ಯಾಕೆ ಬರೆಯಬೇಕು ಅಂತ ಲೇಖಕ ತನ್ನನ್ನು ತಾನೇ ಕೇಳಿಕೊಂಡರೆ ಓದುಗರಿಗೆ ಕ್ಷೇಮ. ಹೇಗೆ ಬರೆಯಬೇಕು ಅಂತ ಕೇಳಿಕೊಂಡರೆ ಅದು ಅವನ ಪ್ರಾರಬ್ಧ ಕರ್ಮ.
ಜೋಗಿ ಬರೆದ ಹೊಸ ಕಾದಂಬರಿ ‘ಯಾಮಿನಿ’ ಹೊರಬಂದಿದೆ. ಇದರ ಕಥಾನಾಯಕ ಚಿರಾಯು ಜ್ಞಾನಪೀಠಿ. ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಜ್ಞಾನಪೀಠ ಪುರಸ್ಕೃತ ಅನಂತಮೂರ್ತಿಯವರು- ‘ನೀವು ನನ್ನ ಏನು ಜ್ಞಾನಪೀಠಿ ಅಂತೆಲ್ಲ ಕರೀತೀರಿ. ಆದರೆ, ಇವತ್ತು ಒಂದು ಕಥೆ ಬರೆಯುವುದಕ್ಕೆ ಕೂತಾಗ ಒದ್ದಾಡಿಬಿಡುತ್ತೇನೆ. ಆಗುವುದೇ ಇಲ್ಲ’ ಅಂದರು. ಆಮೇಲೆ ಮಾತಾಡಿದ ನಾಗೇಶ್ ಹೆಗಡೆಯವರು- ‘ಈಗ ಅನಂತಮೂರ್ತಿಯವರೇನು ಹೇಳಿದ್ರಲ್ಲ- ಅದೇ ಈ ಕಾದಂಬರಿಯ ಕಥಾವಸ್ತು’ ಅಂದರು. ಆದರೆ, ಅನ್ಯಾಯವಾಗಿದ್ದು ಜೋಗಿ ಮಾತಾಡುವುದಕ್ಕೆ ನಿಂತಾಗ. ಎಲ್ಲಾ ಸೂಚನೆಗಳನ್ನು ಧಿಕ್ಕರಿಸುವಂತೆ, ‘ಕಾದಂಬರಿ ಬರೆಯುವಾಗ ನನ್ನ ಮನಸ್ಸಿನಲ್ಲಿದ್ದದ್ದು ಸಲ್ಮಾನ್ ರಶ್ದಿ’ ಅಂದುಬಿಟ್ಟರು. ಅಲ್ಲಿಗೆ ಎಲ್ಲ ಥಂಡ ಆಯಿತು ಎಂದುಕೊಂಡು ಜ್ಞಾನಪೀಠಿಯನ್ನು ಮಿಸ್ ಮಾಡಿಕೊಳ್ಳುವಂತಿಲ್ಲ.
*
ಇಡೀ ಜಗತ್ತಿಗೇ ಸುದ್ದಿಯಾಗಬೇಕೆಂದು ತನ್ನ ಜೀವಿತದ ಮಹತ್ವಾಕಾಂಕ್ಷೆಯ ಕಾದಂಬರಿ ಬರೆಯಲು ತೊಡಗುವ ಜ್ಞಾನಪೀಠಿಗೆ ಆ ಎಲ್ಲ ಆಕರ್ಷಣೆ ಅಗತ್ಯಗಳಿಗಿಂತ  ತೀವ್ರವಾಗಿ ಬಾಲ್ಯದ ನೆನಪುಗಳು ಕಾಡುವುದಕ್ಕೆ ಶುರುವಾಗುತ್ತದೆ. ಅಲ್ಲಿಂದಲೇ ನಿರರ್ಥಕತಾವಾದವೂ ಆರಂಭವಾಗುತ್ತದೆ. ಅಲ್ಲಲ್ಲಿ ಅವರಿವರನ್ನು ಉದಾಹರಿಸುತ್ತ, ಸಂಬಂಧಗಳು, ಬ್ಲಾಗು,  ಪುಸ್ತಕ, ಪುಕುವೋಕಾ, ಮಾಧ್ಯಮ, ಸಿನಿಮಾಗಳನ್ನೆಲ್ಲ ನ್ಯಾನೋ ಕಾರಿನಲ್ಲಿ ಸುತ್ತು ಹಾಕಿ ನಿರರ್ಥಕಾವಾದದಲ್ಲೆ ಕಾದಂಬರಿ ಕೊನೆಗೊಳ್ಳುತ್ತದೆ. ಇದು ಬರೆಯುವುದೇ ನಿರರ್ಥಕ ಅಂತಲ್ಲ. ಬರೆಯುವುದಷ್ಟೇ ಮುಖ್ಯ ಉಳಿದದ್ದೆಲ್ಲ ನಿರರ್ಥಕ. ಅದು ಚಿರಾಯುವಿಗೆ ಅನ್ನಿಸುವುದು ಹೀಗೆ- ಸಾಹಿತ್ಯದಲ್ಲೂ ಪುಕುವೋಕಾ ಥರದ ಸಹಜ ಕೃಷಿ ಯಾಕೆ ಶುರುವಾಗಬಾರದು. ತಿಣುಕಿ ಬರೆಯುವ, ಕಂಡಕಂಡ ರಸಗೊಬ್ಬರ ಬಳಸುವ, ಭಾರಿ ಫಸಲು ತೆಗೆಯುವ ಹುನ್ನಾರ ಯಾಕೆ ಬೇಕು. ಸುಮ್ಮನೆ ಬರೆದಾಗ ಅದರಲ್ಲಿ ಸತ್ವವಿದ್ದರೆ ತಾನಾಗೇ ಅದು ಫಸಲು ಕೊಡುತ್ತದೆ. ರಸಗೊಬ್ಬರ ಬಳಸುತ್ತ ಹೋದಂತೆ ಅದೇ ಅಭ್ಯಾಸ ಆಗಿಬಿಡುತ್ತದೆ. ಆಮೇಲೆ ರಸಗೊಬ್ಬರ ಇಲ್ಲದೆ ಯಾವ ಕೃತಿಯೂ ಹುಟ್ಟುವುದಿಲ್ಲ, ಬೆಳೆಯುವುದಿಲ್ಲ.
ಬರವಣಿಗೆ ಅನಿವಾರ್ಯ ಕರ್ಮ ಆಗಿಬಿಟ್ಟರೆ ಎಂಥ ಹಿಂಸೆ? ಅದರ ಅನುಭವ ನನ್ನಂಥವರಿಗೆ ಇರುವುದಿಲ್ಲ. ವಾರವಾರಕ್ಕೆ ಮೂಟೆಗಟ್ಟಲೆ ಬರೆದು ಗುಡ್ಡೆ ಹಾಕುವ, ಬರವಣಿಗೆ ಉದ್ಯೋಗ ಆದವರ ಬವಣೆ ಅದು. ಬರೆಯದೆ ಇರಲಾರೆ ಅಂತ ಅನ್ನಿಸಿದಾಗ ಏನೋ ಬರೆದು ಸುಖಿಸುವ, ಅಷ್ಟಕ್ಕೇ ತೃಪ್ತರಾಗಿಬಿಡುವ ನಮಗೆ ಬರವಣಿಗೆಯ ಬಗ್ಗೆಯೇ ಒಂದು ರೀತಿಯ ವೈರಾಗ್ಯ ಹುಟ್ಟಿಬಿಡುವ ಅನುಭವ ದಕ್ಕಲಾರದು. ಅದು ಅನಿವಾರ್ಯ ಬರಹಗಾರರಿಗೆ ಮಾತ್ರ ಸಾಧ್ಯವೇನೋ (ಬರವಣಿಗೆ ಬಿಟ್ಟು ಉಳಿದೇನನ್ನೂ ಮಾಡಲಾರೆ ಅನ್ನುವ ಅರ್ಥದಲ್ಲು ಸಹ ಇವರಿಗದು ಅನಿವಾರ್ಯ ಕರ್ಮ ಅನ್ನುವುದು ನೆನಪಿರಲಿ). ಅಂತಹ ಹಿಂಸೆಯಿಂದ ಬಿಡುಗಡೆ ಬಯಸುವ ಚಿರಾಯು, ಕನ್ನಡದ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ನಾನು ಯೋಚಿಸುತ್ತಿದ್ದೇನೆ ಎಂಬ ಅಹಂಕಾರದಲ್ಲೆ ಬರೆಯಬೇಕು ಎನ್ನುವ ಚಿರಾಯು, ಕೊನೆಗೆ ‘ಇಲ್ಲ ನಾನಿನ್ನು ಬರೆಯುವುದಿಲ್ಲ. ಖಂಡಿತಾ ಬರೆಯುವುದಿಲ್ಲ. ಹಾಗಿದ್ದರೆ ಮುಂದೇನು……….ಕಿವಿ ನೆಟ್ಟಗೆ ಮಾಡಿ ಜಿಗಿಯುವ ಪುಟ್ಟ ಕರುವನ್ನು ನೋಡುತ್ತಾ ಪುಳಕಿತನಾಗುವುದು’ ಎಂಬ ಸ್ಥಿತಿ ತಲುಪಿಬಿಡುತ್ತಾನೆ. ಬರಹಗಾರ ಕಟ್ಟಿಕೊಂಡಿರುವ ಸುತ್ತಗಲ ಕೋಟೆ, ಸೇನೆ-ಭಂಡಾರ, ಉತ್ತಮ ಪ್ರಭುತ್ವ, ಎಲ್ಲಾ ಲೊಳಲೊಟ್ಟೆಯಾಗಿಬಿಡುತ್ತದೆ. ಬರೆದು ಕೊಡಿ ಬರೆದು ಕೊಡಿ ಅಂತ ಪೀಡಿಸುವವರಿಗೆ ‘ತಗೊಂಡು ಸಾಯಿ’ ಅಂತ ‘ಶ್ರ್‍ಅದ್ಧಾಂಜಲಿ’ ಅರ್ಪಿಸುವ ಜೋಗಿಯ ವಿನೋದಾವಳಿಯಲ್ಲಿ ಕಾದಂಬರಿ ಅಂತ್ಯ ಕಾಣುತ್ತದೆ.
ಯಾಮಿನಿಯ ಸಂಗದಲ್ಲಿ ಪಾತ್ರಗಳ ಹಂಗಿಲ್ಲ. ಜೋಗಿ ಚೈನ್ ಸ್ಮೋಕರ್. ತೇಲಿಬಿಡುವ ಸಿಗರೇಟಿನ ಹೊಗೆಯಲ್ಲಿ ಜೀವಿಸುವುದಕ್ಕೆ ಆಗಾಗ ಲೈಟರ್ ಹೊತ್ತಿಕೊಳ್ಳುವಂತೆ ಈ ಕಾದಂಬರಿಯಲ್ಲಿ ಪಾತ್ರಗಳು ಕಾಣಿಸಿ ಕಣ್ಮರೆಯಾಗಿಬಿಡುತ್ತವೆ. ಚಿರಾಯುವಿನ ನೆನಪಿನ ಪುಸ್ತಕದಲ್ಲಿ ಎರಡೆರಡು ಪುಟಕ್ಕೊಂದು ಪಾತ್ರ. ಕೆಲವು ಪಾತ್ರಗಳ ಆಯಸ್ಸು ಎರಡು ಪ್ಯಾರಾ ದಾಟುವುದಿಲ್ಲ. ಅಸಲಿ ನೆನಪಿನ ದೋಣಿ ಹಾಯುವುದೇ ಹಾಗೇ. ಉಳಿದಂತೆ ಚಿರಾಯು, ಯಾಮಿನಿ, ಎಲ್ಲವೂ ರೂಪಕಗಳು. ಎಲ್ಲಿವರೆಗೆ ಅಂದರೆ ಚಿರಾಯು ಮುದ್ದಿಸಿದ ಮೊಲೆಗಳು ಸಹ ರೂಪಕ. ಬಹುಶಃ ಅದೇ ಕಾರಣಕ್ಕೆ ಪಾತ್ರಗಳು ಕಾಡುವುದೇ ಇಲ್ಲ. ಕೊನೆಯಲ್ಲಿ ಕೇವಲ ವಿಚಾರಗಳು, ಪ್ರಶ್ನೆಗಳು ಉಳಿಯುತ್ತವೆ. ಅವುಗಳ ಮಥನದಲ್ಲಿ ಓದಿನರಮನೆ ಬೆಳಗುತ್ತದೆ. ಆದರೆ ಯಾಮಿನಿಯಲ್ಲಿ ತರ್ಕದ ಭಾರವಿಲ್ಲ. ಒಮ್ಮೆ ಅನಿಸಿದ್ದನ್ನು ಮತ್ತೊಮ್ಮೆ ತಾನೇ ನಿರಾಕರಿಸಿಕೊಳ್ಳುತ್ತ, ಒಮ್ಮೆ ಹೀಗೂ ಇರಬಹುದೆ ಎಂದುಕೊಳ್ಳುತ್ತ ಮತ್ತೊಮ್ಮೆ ಹೀಗೇ ಇರತಕ್ಕದ್ದು ಎನ್ನುತ್ತ ಕಾದಂಬರಿ ಸಾಗುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ- ಯಾಮಿನಿ ಈಸ್ ಮಿನಿ; ಅಲ್ಲಲ್ಲಿ ಜಾನಕಿ ಮಿಣುಕು.
Advertisements
  1. avani / ಸೆಪ್ಟೆಂ 13 2008 5:34 ಅಪರಾಹ್ನ

    ಅನುಭವ ದಟ್ಟವಾಗಿರದೆ ಬರೆದುದನ್ನು`ಕಾದಂಬರಿ’ ಅಂತ ಕರೆಯುವುದು ಹೇಗೆ? I think its quite bizzare to call so. It is all about narrating a sequence of events with pause and pause-lessness (continuity). ಆದರೆ ಯಾಮಿನಿಯಲ್ಲಿ ಪಾತ್ರಗಳು `ಚಲಿಸುವ’ ಕನ್ನಡಿಯೊಳಗೆ ಬಿಂಬಿತಗೊಂಡು ಹಾಗೇ ಮರೆಯಾಗಿಬಿಡುತ್ತವೆ. ಯಾವುವೂ ಅಚ್ಚೊತ್ತಿಕೊಳ್ಳುವುದಿಲ್ಲ. ಓದಿ ಮುಗಿಸಿದ ಮೇಲೆ- ಅರೆ! ಇಲ್ಲಿನ ಕತೆಯಾದರೂ ಏನು? ಅಂತ ತಲೆ ಕೆರೆದುಕೊಳ್ಳುವಂತಾಗುತ್ತದೆ. ಇದನ್ನು ಕಾದಂಬರಿ ಅನ್ನುವುದಕ್ಕಿಂತ ಮಿಣುಕುಗಳ `ಸೀರಿಯಲ್’ ಅನ್ನಬಹುದೇನೋ. ನನಗಂತೂ ನಿರಾಶೆಯಾಯಿತು. ವಿಕ್ರಮ್, ನೀವು ಅಗತ್ಯಕ್ಕಿಂತ ಹೆಚ್ಚು ಪ್ರೋ-ಯಾಮಿನಿ(ಜೋಗಿ)ಯಾಗಿ ಕಣ್ಣು ಕಾಮಾಲೆಗೊಂಡು ಕತೆಯನ್ನು ನೋಡಿದ್ದೀರಿ. ಅದೇನೇ ಇರಲಿ- ಜೋಗಿ ನಮ್ಮ ನಡುವಿನ ಅದ್ಭುತ `ಕತೆ’ಗಾರ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: