Skip to content
ಸೆಪ್ಟೆಂಬರ್ 14, 2008 / odubazar

‘ಅನಾದಿ’ಯ ಬಗ್ಗೆ ಕೆ ಟಿ ಶಿವಪ್ರಸಾದ್

ಅಮಾಸೆ ಅಸ್ಪೃಶ್ಯರಲ್ಲಿಯೆ ಅಸ್ಪೃಶ್ಯ . ಅವನ ಜನಾಂಗ ಅಲೆಮಾರಿ ಜನಾಂಗ . ಅವನಿಗೆ ಸಿಕ್ಕ ಆರು ಹಳ್ಳಿಗಳಲ್ಲಿ ಅವನು ಅಸ್ಪೃಶ್ಯರ ಆಳು ಮಗ. ಎರಡು ತಿಂಗಳ ಅವಧಿಗೆ ಮಾತ್ರ ಅವನ ಪಾಲಿಗೆ ಬಂದ ಒಂದೂಂದು ಹಳ್ಳಿಯ ಹೊಲೆಯರ ಕೆಲಸ ಮಾಡುವುದು ಅವನ ಕಾಯಕ . ಅವನ ಹೆಂಡತಿ ಮಾಯ ಮೋಡಿ  ಮಾಡುವವನ ಮಗಳು. ಅವಳು ಕೂಡ ಮಾಟ ಮಂತ್ರದಲ್ಲಿ ಪರಿಣಿತಳು. ಅವರಿಗೆ ಇಬ್ಬರು ಮಕ್ಕಳು ಒಂದು ಗಂಡು ಒಂದು ಹೆಣ್ಣು. ಈ ನಿರೂಪದಲ್ಲಿ ಅಮಾಸೆ ಎಂದಿನಂತೆ ಕಾದಂಬರಿಕಾರರ ಊರಿಗೆ ಎರಡು ತಿಂಗಳಿಗೆ ಬಂದು ತಂಗುತ್ತಾನೆ. ಈ ಅವಧಿಯಲ್ಲಿ ನಡೆಯುವಂತಹ ಘಟನೆಯೇ ಕಾದಂಬರಿಯ ವಸ್ತು. ಹಿಂದೂ ಧರ್ಮದ ಜಾತಿ ಪದ್ಧತಿಗೆ ಒಳಗಾಗಿ ಅದರ ಕ್ರೌರ್ಯಕ್ಕೆ ದಣಿದು ಅಮಾಸೆ ಮತ್ತು ಅವನ ಹೆಂಡತಿ ಈ ಕ್ರೌರ್ಯದ ವಿರುದ್ದ ಅವರದೇ ಆದ ರೀತಿಯಲ್ಲಿ ಅಪ್ರಜ್ಞಾಪೂರ್ವಕವಾಗಿ ಬಂಡೇಳುತ್ತಾರೆ. ಹಳ್ಳಿಯ ಅಸ್ಪೃಶ್ಯರು  ಮತ್ತು ಮೇಲುಜಾತಿಯವರು ಅವರ ಈ ರೀತಿಗೆ ಪ್ರತಿಕ್ರಿಯಿಸುತ್ತಾರೆ.

ಕಾದಂಬರಿಕಾರರು ಜೀವನವನ್ನು ಅರ್ಥೈಸುವ ರೀತಿ, ತಾಳುವ ನಿಲುವು ಹಿಂದಿನ ಕಲಾಮೀಮಾಂಸೆಗಿಂತ ಭಿನ್ನವಾಗಿದೆ. ಆ ನಿಲುವಿಗೆ ಕಷ್ಟವೂ ಇಲ್ಲ. ಸುಖವೂ ಇಲ್ಲ. ಯಾರು ಗೆಲ್ಲುವುದೂ ಇಲ್ಲ. ಸೋಲುವುದೂ ಇಲ್ಲ. ಹಿಂಸೆಯು ಇಲ್ಲ. ಅಹಿಂಸೆಯು ಇಲ್ಲ. ಹೀಗೆ ಬುದ್ಧಗುರುವಿನ  ಮಧ್ಯಮ ಮಾರ್ಗದಂತೆ ಅವಳಿ ವೈರುಧ್ಯಗಳನ್ನು ಮೀರುತ್ತಾರೆ. ಇದು ಈ ಕಾದಂಬರಿಯ ಶಕ್ತಿ.  ಹಾಗೆಯೇ ಅಮಾಸೆಯು ವ್ಯವಸ್ಥೆಯ ವ್ಯೂಹಕ್ಕೆ ಸಿಲುಕಿಯೂ
ಮಾಯಾವಿಯಾಗಿ ಕಣ್ಮರೆಯಾಗುತ್ತಾನೆ.

ಅಮಾಸೆ ಮೇಲು ಜಾತಿ ಹೆಂಗಸೊಬ್ಬಳ ಜೊತೆ ಸಂಬಂಧ ಮಾಡುವುದರೊಂದಿಗೆ  ಮನುಷ್ಯ ಸಂಬಂಧಗಳ  ನಿರ್ಮಿತ ತಡೆಗೋಡೆಗಳನ್ನು ನೈಸರ್ಗಿಕವಾಗಿ ಮೀರುತ್ತಾನೆ. ಅವನ ಹೆಂಡತಿ ಅವನ ಇಬ್ಬರು ದರೋಡೆಕೋರ ತಮ್ಮಂದಿರ ಜೊತೆ ಸೇರಿ ದರೋಡೆ ಮಾಡುತ್ತ ಬಂಡೆದ್ದು ಅವಸಾನ ತಲುಪುತ್ತಾಳೆ. ಅಮಾಸೆಯ ವಯಸ್ಸಿಗೆ ಬಂದ ಮಗಳು ಹೂವಿನ ರೀತಿ ಕೋಮಲೆ . ಅಮಾಸೆ ತಾವರೆ ಹೂ ಕಿತ್ತರೂ ಸಹಿಸದ ಜೀವ. ಈ ಪಾತ್ರವೂ ಮಾನವತ್ವದ ದುರಂತದ ಸಂಕೇತ ಹಾಗು ಹೆಣ್ಣಿನ ಭಾವನಾತ್ಮಕ ಕನಸಿನ ಪ್ರತೀಕ . ಅವನ ಮಗ ಪುಂಡ ಪೋಕರಿ. ಜತಿ ಧರ್ಮಗಳ ಸಂಕೋಲೆಯಲ್ಲಿ ರೂಪುಗೂಳ್ಳುವ ವಿರೂಪದ ದ್ಯೋತಕ . ಕಾದಂಬರಿಯಲ್ಲಿ ಬರುವ ಎರಡು ಕತ್ತೆಗಳು, ಅಮಾಸೆಯ ಕುದುರೆಗಳು , ಕೋಳಿಗಳು ಮತ್ತು  ಊರನಾಯಿಗಳು ಮನುಷ್ಯರ ಬಗ್ಗೆ ಪ್ರತಿಕ್ರಿಯಿಸುತ್ತಾ ನಮ್ಮ ಸಂವೇದನೆಯಲ್ಲಿ  ಬೆರೆಯುವ ಪರಿಯು ಗಾಢವಾಗಿದೆ.

ಹಾಗೆಯೇ ಈ ಕಾದಂಬರಿಯಲ್ಲಿ ಪಾತ್ರಗಳಂತೆ  ಬೆಸೆದುಕೊಂಡಿರುವ ಕತ್ತಲು, ನೀಲಾಕಾಶ , ತಾರಾಮಂಡಲ, ಗಿಡ, ಮರ, ಬೆಟ್ಟ, ಕೆರೆ, ಸುಳಿವ ಗಾಳಿ, ಬೆಳಕು, ಬಿಸಿಲು, ಹರಿವ ಹೂಳೆ, ಹೂ …ಎಲ್ಲವೂ ಕಥೆಯ ಅಂತರ್ಗತಭಾವಕ್ಕೆ ಚೈತನ್ಯವಾಗಿ ಬಂದು ಕೂಡುತ್ತವೆ. ಇದು ಕನ್ನಡದ ಗದ್ಯ ನಿರೂಪಣೆಗೆ ಹೊಸ ಬಗೆಯದ್ದಾಗಿದೆ . ಇವನ್ನೆಲ್ಲಾ ಅಂತರ್ಗತಿಸಿಕೊಂಡು ಬರೆವ ಕಾದಂಬರಿಕಾರರ ಭಾಷೆ ತುಂಬಾ ಅದ್ಭುತವಾದುದು . ಶ್ರೇಷ್ಠ ಕಾದಂಬರಿಯ ಭಾಷೆ ನನ್ನ ಪ್ರಕಾರದಲ್ಲಿ ನಮ್ಮಲ್ಲ  ಪಂಚೇಂದ್ರಿಯಗಳನ್ನು ತಣಿಸಬೇಕು. ಈ ರೀತಿ ಕನ್ನಡದಲ್ಲಿ ಭಾಷೆಯನ್ನು ಉಪಯೋಗಿಸುವವರು ಬಹಳ ವಿರಳ. ಕುವೆಂಪು, ಪೂರ್ಣಚಂದ್ರ ತೇಜಸ್ವಿ ಅವರನ್ನು  ಬಿಟ್ಟರೆ ಮೊಗಳ್ಳಿ ಗಣೇಶ್ ಅವರೇ ಈ ರೀತಿಯ ಗದ್ಯಕ್ಕೆ ವಾರಸುದಾರರು.

ಈ ಕಾದಂಬರಿಯ ನಿರಂತರ ಚಲನೆ ಕ್ಷಣ ಕ್ಷಣಕ್ಕೂ ಹೂಸದನ್ನು ಹುಟ್ಟುಹಾಕುತ್ತಾ ಪರಂಪರೆಯ ಸ್ಥಗಿತತೆಯನ್ನು ಭೇದಿಸಿ ಒಂದು ಹೂಸ ಕಲಾಮೀಮಾಂಸೆಯನ್ನು ಹೇಳುವಲ್ಲಿ ಯಶಸ್ವಿಯಾಗುತ್ತದೆ. ಕಾದಂಬರಿಕಾರರ ತಾತ ಅಮಾಸೆಯ ಒಡೆಯ. ಕೊನೆಯಲ್ಲಿ ಅಮಾಸೆ ಅವನ ಮೇಲು ಜಾತಿಯ ಪ್ರೇಯಸಿ ಮತ್ತು ಅವರ ಆಗ ತಾನೆ ಹುಟ್ಟಿದ  ಮಗು ಅಮಾಸೆ ಇಲ್ಲದ ಪರಿಸ್ಥಿತಿಯಲ್ಲಿ ತಾತನ ಪಂಚಾಯಿತಿಯ ತೀರ್ಮಾನದ ಮೂಲಕ ಕಾದಂಬರಿ ನಿರಂತರ ಚಲನೆಗೆ ಒಳಪಡುತ್ತದೆ. ತಾತ ಜನರ ಅಭಿಪ್ರಾಯಕ್ಕೆ ವಿರುದ್ದವಾಗಿ, ನೀವು ಮೇಲುಕೇರಿಯವರು. ಅವಳ್ನ ಓಡ್ಸಿದ್ರೆ ಸಂತೋಷ.  ಓಡ್ಸಿ, ನಿಮ್ಮ ನ್ಯಾಯ. ಅದನ್ನು ನೀವು ಕಾಪಾಡಿಕೊಳ್ಳಿ . ಅಮಾಸೆ ನನಗೆ ಆಳು ಮಗ ಅವನ ಹೆಂಡತಿ ನನಗೆ ಸೂಸೆ . ನಮ್ಮ ಕೇರಿಯವರು ಅವಳ್ನ ನಮ್ಮ ಸೂಸೆ ಅಂತ ಸಾಕುತಿವಿ. ಇಲ್ಲಿಂದ ಅವಳ ಬಗ್ಗೆ  ಕೆಟ್ಟದಾಗಿ ಯಾರೂ ಮಾತಾಡಕೂಡದು . ಇದು ನಮ್ಮ ಕೇರಿಯ ತೀರ್ಮಾನ. ಇದನ್ನು ಹೇಳುವುದರೊಂದಿಗೆ ಮಾನವತ್ವದ ಚಲನೆ ಅನಂತವಾದುದು ಎಂಬುದನ್ನು ಕಾದಂಬರಿ ಸಾರುತ್ತದೆ. ಇಂಥ ಕಾದಂಬರಿಯನ್ನು ಬರೆದ ಮೂಗಳ್ಳಿ ಗಣೆಶ್ ಅವರನ್ನು ನಾನು ಅಭಿನಂದಿಸುತ್ತೇನೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: