Skip to content
ಸೆಪ್ಟೆಂಬರ್ 27, 2008 / odubazar

ಪ್ರತಿಭಾ ಇರೋದೇ ಹೀಗೆ…

ಶ್ರೀದೇವಿ ಕಳಸದ ಸಂಗೀತದ ಹುಡುಗಿ. ಧಾರವಾಡದ ಕಂಪು ಮಣ್ಣಲ್ಲಿ ಬೆಳೆದವಳು. ಈಗ ಮಾಧ್ಯಮದ ಜೊತೆ ಒಡನಾಟ. ಸುವರ್ಣ ಚಾನಲ್ ನಲ್ಲಿ ಪತ್ರಕರ್ತೆ. ಒಬ್ಬ ಪತ್ರಕರ್ತೆಯಾಗಿ -ಸಾಹಿತ್ಯದ ಒಡನಾಡಿಯಾಗಿ ಶ್ರೀದೇವಿ ಅವರು ಪ್ರತಿಭಾ ನಂದಕುಮಾರ್ ಅವರನ್ನು ಕಂಡ ಬಗೆ ಇಲ್ಲಿದೆ.

ಮಾಧ್ಯಮ ಲೋಕದ ಬಗ್ಗೆ ಬೆರಗುಗಣ್ಣಿರುವವರಿಗೆ ಶ್ರೀದೇವಿ ಬರೆದ ಈ ಲೇಖನ (ಅಲ್ಲ, ಸ್ಕ್ರಿಪ್ಟ್)  ಒಂದು ಪಾಠ. ಒಬ್ಬ ಸಾಹಿತಿ ಮಾಧ್ಯಮದ ಬರಹದಲ್ಲಿ ಅರಳುತ್ತಾ ಹೋಗುವ ಬಗ್ಗೆ ಇದು ಉದಾಹರಣೆ-

VO – 1

ನಡುರಾತ್ರಿಯಲ್ಲಿ ಹೊರಳಿ ಕೈಚಾಚಿ ಹುಡುಕಿ
ಸ್ನಾನದ ನಂತರ ಸೀರೆ ಉಟ್ಟು ಕೊರಳ ಮಣಿಸರಕ್ಕೆ ಕೈಚಾಚಿ
ಅದಿನ್ನೂ ಅಲ್ಲೇ ಹಾಸಿಗೆಯಲ್ಲಿ ದಿಂಬಿನ ಕೆಳಗಿರಬೇಕಂದು ತಡಕಿ,
ಬಾಗಿಲ ಬೆಲ್ ಸದ್ದಿಗೆ ಮರೆತು ಹೊರಟು
ಎರಡು ಲೀಟರ್‍ ಹಾಲು ಕೇಳಿ ತಲೆ ಚಚ್ಚಿಕೊಂಡು
ಯಾರು ನೆನೆಸಿಟ್ಟರು ದೋಸೆಗೆ ರುಬ್ಬಲು ಒಂದು ಕೇಜಿ ಅಕ್ಕಿ?
 
ಅಭ್ಯಾಸಬಲ, ಮರೆತೇ ಹೋಗುತ್ತದೆ
ಎಷ್ಟು ವರ್ಷವಾದವು ಅವನು ಮನೆ ಬಿಟ್ಟು?
 
V O-2
 
ಹಾಗಂತ ಬಾಗಿಲು ತೆರೆಯದೇ ಇರಲಾದೀತೆ, ಬಂದವರಿಗೆ?
 

ಬೈಟ್ : (ಪ್ರೂಫ್ ನೋಡ್ತಿದ್ದೆ ಬನ್ನಿ ಬನ್ನಿ…)
 
V O-3 
 
1979ರಿಂದಲೇ ಕವನ ಬರೆಯಲಾರಂಭಿಸಿದ ಪ್ರತಿಭಾ ನಂದಕುಮಾರ್ ಮೊದಲ ಕವನ ಸಂಕಲನ ‘ನಾವು ಹುಡುಗೀರೇ ಹೀಗೆ’ ಪ್ರಕಟಿಸಿದ್ದು ೧೯೮೩ರಲ್ಲಿ. ಅಲ್ಲಿಂದ ಶುರುವಾದ ಪ್ರತಿಭಾಯನ ಕನ್ನಡ ಕವಿತಾ ಪ್ರಪಂಚವನ್ನು ಬೆಚ್ಚಿಸುತ್ತಲೇ ಮೆಚ್ಚಿಸಿತು. ಕವನದೊಳಗಿನ ಬದುಕನ್ನ ಬಿಚ್ಚಿಡುತ್ತ ಸಂಚಲನ ಮೂಡಿಸುತ್ತ ಹೊರಟ ಪ್ರತಿಭಾ ನಂದಕುಮಾರ ತೆರೆದುಕೊಳ್ಳುವ ರೀತಿಯೇ ಸೊಗಸು, ಹೊಸತು ಥೇಟ್ ತಟ್ಟಿದ ಬಾಗಿಲನ್ನು ಬಿಡಿಸಿದಂತೆ. ಮುಖ ಈಚೆಗಿಟ್ಟು ನಕ್ಕಂತೆ. ಬನ್ನಿ ಎಂದು ಕರೆದಂತೆ. ಚಿಲುಕಕ್ಕೆ ಸಿಕ್ಕಿಸಿದ ಮಲ್ಲಿಗೆಯನ್ನು ಎತ್ತಿ, ದೇವಿಗೇರಿಸಿ, ಕೂತರೆ ನಿಧಾನವಾಗಿ ಅನಾವರಣಗೊಳ್ಳುತ್ತ ಹೋಗುತ್ತಾರೆ.
 
ಬೈಟ್ : (ಅಡುಗೆ, ಅತ್ತೆ, ಮಕ್ಕಳು, ಗಂಡನ ಕರ್ತವ್ಯದ ನಂತರವೇ ‘ತನ್ನ ಸಮಯ’ ದೊರೆಯುತ್ತಿತ್ತು… ಎಲ್ಲ ಕ್ಷಣಗಳನ್ನೂ ಅನುಭವಿಸಿದ್ದೇನೆ. ಕರ್ತವ್ಯಗಳನ್ನು ಪೂರೈಸುತ್ತ….. ಇತ್ಯಾದಿ)
 

V O- 4
 
ಅಚ್ಚಿನೊಳಗೆ ಮುಚ್ಚಿಕೊಂಡ ಮನಸನೊಮ್ಮೆ ಮೆಚ್ಚಿ, ಬಿಚ್ಚಿ ತೋರಿಸುವ ತವಕ ಅವರದು.
 
‘ದೊಡ್ಡ ದೊಡ್ಡ ಮನೆಗಳಲ್ಲಿ
ಚಿಕ್ಕ ಚಿಕ್ಕ ಕುಟುಂಬಗಳು
ದೂರ ದೂರದ ಮೊಬೈಲ್‌ಗಳಲ್ಲಿ
ಹತ್ತಿರವಾಗದ ಸಂದೇಶಗಳು
ಊರ ತುಂಬಾ ಫಾಸ್ಟ್ ಫುಡ್‌ಗಳು, ಚಡಪಡಿಸುವ ಸ್ಲೋ ಜೀರ್ಣಾಂಗಗಳು’
 
ಎಂದು ‘ದಿ ಯುಗ ಕವಿತೆಯಲ್ಲಿ ಬರೆದ ಪ್ರತಿಭಾ ಮನಸ್ಸು ಫಿನ್‌ಲ್ಯಾಂಡ್‌, ರಷ್ಯನ್ ಅಂಗಳದಲ್ಲಿ ಅಲೆದಾಡುತ್ತಿದ್ದರೂ ಮೆಲ್ಲಗೆ ಶೃತಿ ಹಿಡಿದೇ ಇದೆ ಲಲಿತೆಯ ಸಹಸ್ರನಾಮ, ಅನುಭಾವ ಹೇಳುತ್ತಲೇ ಇವೆ ಅಕ್ಕನ ವಚನಗಳು.
 
ಬೈಟ್ (ಅವರು ಮೆಚ್ಚಿದ ಇಂಗ್ಲಿಷ್ ಕವಿತೆ, ಪುಸ್ತಕ, ಲಲಿತಾ ಸಹಸ್ರನಾಮ, ಅಕ್ಕನ ವಚನ ಇತ್ಯಾದಿ)
 
V O -5 
 
ಬರೆಯಬೇಕು ಆ ಒಳಗಿನಿಂದ ಗುದ್ದಿಬರುವ ಒದ್ದೆ ಹಾಡಿನ ಬಗ್ಗೆ.
ಒಂಟಿ ನಿಂತರೂ ಗುಂಪೆನ್ನಿಸುವ, ಗುಂಪಿನಲ್ಲಿ ಒಂಟಿ ಎನ್ನಿಸುವ ಬಗ್ಗೆ
 
ಉಸಿರಿಗೆ ಉಸಿರು ನೀಡಿದವರೂ ಕಟ್ಟಿ ಹಾಕಲಾಗಲಿಲ್ಲ. ಒಡಲಿಗೆ ಒದ್ದವರೂ ಕದಿಯಲಾಗಲಿಲ್ಲ ಸಮಯದ ಕುದುರೆಯನ್ನ. ಪ್ರತಿ ರಾತ್ರಿಯೂ ಹೆಪ್ಪುಗಟ್ಟುತ್ತ, ಹರಳುಗಟ್ಟುತ್ತ, ಹುರಿಗಟ್ಟುತ್ತಲೇ ಸಾಗಿತು ಕಾವ್ಯಯಾನ. ಅನಿಸಿದಂತೆ ಬದುಕುತ್ತ, ಬದುಕಿದಂತೆ ಬರೆಯುತ್ತ, ಅಡುಗೆಮನೆಯಿಂದ ‘ಕಾಫಿ ಹೌಸ್‌’ ಗೆ ಬಂದಿದ್ದಾರೆ. ಅದೊಂದು ವಿಚಿತ್ರ ರಸಪಾಕ.
 
ಬೈಟ್ (ಅಂದಿನ ಹಾಗೂ ಇಂದಿನ ಮನಃಸ್ಥಿತಿ ಕುರಿತು)
 

V O- 6
 
ವೈವಾಹಿಕ ಜೀವನ ಅವರ ಕವಿತ್ವಕ್ಕೆ ಹೊಸ ಹೊಳಪು ಕೊಟ್ಟಿದೆ. ಜೀವನ ದೃಷ್ಟಿಯನ್ನು ಸ್ಫುಟಗೊಳಿಸಿದೆ.
 
ಅದೊಂದು ವ್ರತವೇ ಆಗಿದ್ದಲ್ಲಿ ದೇವರೆ
ಮರಳಿನ ಮಡಕೆಯಲ್ಲಿ ನೀರು ತುಂಬಿ ತಂದು
ಶೂನ್ಯಲಿಂಗಕ್ಕೆ ಅಭಿಷೇಕ ಮಾಡಿ ಉರಿಸಿ ಕಲ್ಲಿನ ಕರ್ಪೂರ
ತೊಡೆ ಉಜ್ಜಿ ಬಂದ ಕಸದಲ್ಲಿ ಗಣಪನನ್ನು ಸೃಷ್ಟಿಸಿ ಕಾವಲಿಗಿಡುತ್ತಿದ್ದೆ
 
ಮಜ್ಜನಕ್ಕಿಳಿದಾಗ ಸಜ್ಜನಳಂತೆ ಮರೆಯಾಗುತ್ತಿದ್ದೆ
 
ಎಂದು ‘ಪತಿವ್ರತೆ’ ಕವನದಲ್ಲಿ ಬರೆದ ಪ್ರತಿಭಾ, ‘ಮೊಳ ಹೂ ಕಾಸಿಗೆ ಕೈಯೊಡ್ಡಬೇಕಿಲ್ಲ. ಹೂವು ಮುಡಿಸುವವನಿಗಾಗಿ ಕಾಯಬೇಕಿಲ್ಲ. ಅವ ಆ ತೀರ. ಆದರೂ ನನ್ನ ಹೆಸರ ಮುಂದೆ ಅವನ ಹೆಸರು. ಇಂದಿಗೂ ಎಂದಿಗೂ’ ಎನ್ನುತ್ತಾರೆ ಪತಿ ನಂದಕುಮಾರ್‍ ಬಗ್ಗೆ
 
ಬೈಟ್ : (ಗಂಡನ ಬಗ್ಗೆ…)
 
V O -7
 
ಗೊತ್ತಿರುವುದು ಒಂದೇ ಮಂತ್ರ. ಪೂಜಿಸಲೊಂದೇ ದೇವರು. ಆ ದೇವರಿಗೊಂದು ಪುಟ್ಟ ಗೂಡು. ಕೈ ಮುಗಿಯುವವರ ಕೈ ಕಟ್ಟಲು ನಾನ್ಯಾರು? ಅವರವರ ಭಾವಕ್ಕೆ ಅವರವರ ಭಕುತಿಗೆ. ಸವಕಲೆನಿಸಿದರೂ  ಸತ್ಯಕ್ಕೆ ಹತ್ತಿರ ಈ ಸಾಲು. ಭವ-ಭಾವದ ಬಂಧನದೊಳಗೆ ಬಂದಿಯಾದರೂ ಜೀವನವೆಂದರೆ ಪ್ರೀತಿ ಜೀವನವೆಂದರೆ ಸಂಭ್ರಮ ಎಂಬ ಸಮಾಧಾನದ ಸವಿನುಡಿಯ ಲೇಪ…
 
ಬಹುಶಃ ಈ ಕಾರಣಕ್ಕೆ ಇರಬೇಕು, ದೇವರ ಕೋಣೆಯಲ್ಲಿ ಪುಸ್ತಕಗಳು ತುಂಬಿಕೊಂಡಿವೆ. ದೇವರನ್ನು ಈ ಮೂಲಕ ಕಂಡುಕೊಳ್ಳುವ ಪ್ರಯತ್ನ ಇದು ಅನ್ನುವುದಕ್ಕಿಂತ, ಈ ಮೂಲಕವೇ ಅವರು ಸಮಾಧಾನ ಕಂಡುಕೊಂಡಿದ್ದಾರೆ ಎಂಬುದೇ ಸೂಕ್ತ.
 
ಬೈಟ್ : (ದೇವರ ಮನೆಯಲ್ಲಿ ಪುಸ್ತಕಗಳ ರಾಶಿ, ಗಂಡ ದೈವಭಕ್ತ. ಆದರೆ ಅವನಿಗೆಎಂದೂ ಅಡ್ಡಿ ಮಾಡಿಲ್ಲ ಇತ್ಯಾದಿ ಇತ್ಯಾದಿ)
 
V O -8 
ಪ್ರತಿಭಾ ಸವಾಲುಗಳಿಗೆ ಎಂದೂ ಕುಸಿಯಲಿಲ್ಲ. ಆಕಸ್ಮಿಕದಲ್ಲಿ ದೇಹ ಸುಟ್ಟಿತು. ಇಟ್ಟಿದ್ದ ಹಲವಾರು ನಂಬಿಕೆಗಳು ಹುಸಿಯಾದವು. ವೈವಾಹಿಕ ಬದುಕಿನಿಂದ ಹೊರಬಂದರೂ ಅವರು ಕುಗ್ಗಲಿಲ್ಲ. ಅಕ್ಷರ ಪ್ರತಿಭೆ ಸೊರಗಲಿಲ್ಲ. ಬಿದ್ದ ಪೆಟ್ಟು ಜೀರ್ಣಿಸಿಕೊಂಡು ಮತ್ತೆ ಎದ್ದು ನಿಲ್ಲುವ ಮನಃಸ್ಥಿತಿ ಅವರ ಬದುಕಿನಂತೆ ಕವಿತೆಗಳಲ್ಲೂ ವ್ಯಕ್ತ.
 
‘ಮತ್ತೆ ಅದೇ ಹಳೆಯ ಕಣಿ ಕೇಳಬೇಡ
ಬಾಲಕರಿಲ್ಲದ ಬಾಲೆ ಆಯ್ಕೆ ಹೊರತು ಅನಿವಾರ್ಯವಲ್ಲ
ಹಾಸುಂಡು ಬೀಸಿ ಒಗೆದ ಬಾಳು ನನ್ನದಲ್ಲ ನಿನ್ನದು
ಗಾಣಕ್ಕೆ ಕಟ್ಟಿದ ಬಾಡಿಗೆ ಎತ್ತು ನಾನಂತೂ ಆಗುವುದಿಲ್ಲ’
 
ಎಂದು ಅಬ್ಬರಿಸಿದರು.
 
ಬೈಟ್ : (ಬದುಕಿನಲ್ಲಿ ಕುಸಿಯಲಿಲ್ಲ …..)
 
V O -9

ಬದುಕೆಂದರೆ ಸರಿದು ಹೋಗುವ ಪರದೆ. ಅಲ್ಲಿ ಮೂಡುವ ದೃಶ್ಯಗಳಾವೂ ಶಾಶ್ವತವಲ್ಲ. ಆದರೂ ಬದುಕಿನೆಡೆಗೆ ಅಚ್ಚರಿಯಿದೆ.
‘ಎಲ್ಲಿ ಅಡಗಿತ್ತು ಇಷ್ಟು ನೀರು ಮೋಡದಲ್ಲಿ
ಕಣ್ಣಲ್ಲಿ ಹನಿ, ಒಡಲೊಳಗೆ ಕಾವು?
ಹೇಗೆ ಸುರಿಯಿತು ಸಿಕ್ಕ ಕೂಡಲೇ
ಹೊರದಾರಿ, ಸಂದಿ, ಬಿರುಕು!’
 
 
ಎಂದು ಬೆರಗಾಗುತ್ತಲೇ ಪ್ರೀತಿಯ ಮಾತೇ ನೆನೆಯುತ್ತಾರೆ. ‘ಪ್ರೀತಿಯೊಂದೇ ನಿಶ್ಚಲ. ಅದೇ ಜೀವನ. ಆದರೂ ಅವರು ಕೇಳುತ್ತಾರೆ ಪುರಾವೆಗಳನ್ನ’ ಎಂದು ಆಕ್ರೋಶಪಡುತ್ತಾರೆ. ಮಧ್ಯಮ ವರ್ಗದ ಪುರುಷ ಪ್ರಧಾನ ಸಮಾಜ ಹೆಣ್ಣನ್ನು ಅಬಲೆ ಎಂದೇ ಬಿಂಬಿಸುವ ವಾಸ್ತವ ಅವರಿಗೆ ಗೊತ್ತಿದೆ.
 
ಬೈಟ್ : (ಹೆಣ್ಣು ಸಬಲೆ. ಕವಯಿತ್ರಿ ಅಲ್ಲ, ಕವಿ ಇತ್ಯಾದಿ ಸಮರ್ಥನೆ)
 
V O -10

 
ಪ್ರತಿಭಾಜೊತೆ ಕವನಗಳಿವೆ. ಕನಸುಗಳಿವೆ. ಕನಸುಗಳನ್ನು ನನಸು ಮಾಡುವ ಪ್ರತಿಭೆಯಿದೆ. ‘ಇನ್ನು ಮುಗಿಯಿತು. ಈಕೆ ಬರೆಯುವುದಿಲ್ಲ. ಬೆಳೆಯುವುದಿಲ್ಲ’ ಎಂದು ಅನ್ನಿಸಿದಾಗೆಲ್ಲ ಕವಿತೆ ಅವರಿಂದ ತೂರಿಕೊಂಡು ಬಂದಿದೆ. ಎಲ್ಲ ಅನುಮಾನಗಳಿಗೆ, ಅವಮಾನಗಳಿಗೆ ಉತ್ತರ ಕೊಡುವಂತೆ, ತತ್ತರ ಪಡುವಂತೆ ಮಾಡಿದೆ. ಅವರ ಪ್ರತಿಯೊಂದು ಕವನ ಸಂಕಲನವೂ ತನ್ನದೇ ರೀತಿಯಿಂದ ವಿಶಿಷ್ಟ. ಅದು ಟಿಪಿಕಲ್ ಪ್ರತಿಭಾ ಶೈಲಿ.
 
ಬೈಟ್ (ಕವನ ವಾಚನ)
 
V O- 11 
 
ಸಮಾಜ ನಿಮ್ಮನ್ನು ಹೇಗೆ ನೆನಪಿಸಿಕೊಳ್ಳಬೇಕು ಎಂದರೆ, ‘ನಾನಿರುವ ಹಾಗೆ’ ಎಂಬುದು ಅವರ ಉತ್ತರ. ಅವರ ಕವಿತೆಗಳ ಸಾರಾಂಶ ಹಾಗೂ ಸ್ವಾರಸ್ಯ ಎಂದರೆ ಇದೇ.

 

ಈಗ ಒಂದಿಷ್ಟು ಪಾಠ:
V O ಎಂದರೆ Voice Over. ಅರ್ಥ ಇಷ್ಟೇ ಇದು ಕಾಮೆಂಟರಿ ಇದ್ದ ಹಾಗೆ.  ಪ್ರತಿಭಾ ಬಗೆಗಿನ ದೃಶ್ಯಗಳನ್ನು ತೋರಿಸುತ್ತಿರುವಾಗ ಹಿನ್ನೆಲೆಯಲ್ಲಿ ಮೂಡಿಬರುವ ನಿರೂಪಣೆ.

Byte ಎಂದರೆ ಸಿಂಪಲ್ ಆಗಿ ಹೇಳಬೇಕೆಂದರೆ ಮಾತು. ಇಲ್ಲಿ ವ್ಯಕ್ತಿಗಳು ನೇರವಾಗಿ ಕ್ಯಾಮರಾಗೆ ಮಾತನಾಡುತ್ತಾರೆ. ಪ್ರತಿಭಾ ನಿಮ್ಮ ಜೊತೆ ಏನನ್ನೋ ಹೇಳಿಕೊಳ್ಳುತ್ತಿದ್ದಾರೆ ಅನಿಸುತ್ತದಲ್ಲ. ಅದೇ Byte

Advertisements
  1. neelanjala / ಸೆಪ್ಟೆಂ 27 2008 8:22 ಅಪರಾಹ್ನ

    programme bahaLa chennaagi mUDi bandide. iSHTavaayitu.

  2. ಚಂದ್ರಕಾಂತ / ಆಕ್ಟೋ 14 2008 4:30 ಅಪರಾಹ್ನ

    ಹೊಸರೀತಿಯ ವಿಶ್ಲೇಷಣೆ. ಚೆನ್ನಾಗಿದೆ. ಚಿತ್ರಗಳೂ ಅಷ್ಟೆ.

  3. ashwini / ಆಕ್ಟೋ 15 2008 1:36 ಅಪರಾಹ್ನ

    chennagide;-)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: