Skip to content
ಅಕ್ಟೋಬರ್ 18, 2008 / odubazar

ಅತ್ರಿ ಬುಕ್ ಸೆಂಟರ್ ನಲ್ಲಿ ಸಿಕ್ಕಿಬಿದ್ದ ಕಳ್ಳಜಿ ಎನ್ ಅಶೋಕವರ್ಧನ್ ಕನ್ನಡ ಪುಸ್ತಕದ ಪರಿಚಾರಿಕೆಯಲ್ಲಿ ದೊಡ್ಡ ಹೆಸರು. ಕಟ್ಟುನಿಟ್ಟಿನ ಆದರೆ ಅಪಾರ ಪ್ರೀತಿಯ ಅಶೋಕವರ್ಧನ್ ಅವರ ಹುರಿಮೀಸೆ ಎಂತಹವರನ್ನೂ ಹೆದರಿಸುತ್ತದೆ. ಅಂತ ನಾವು ಭಾವಿಸಿದ್ದು ಮಾತ್ರ ಅಂತ ಗೊತ್ತಾಗಿದ್ದು ಅವರೇ ಕಳ್ಳನೊಬ್ಬನ ಕಥೆ ಹೇಳಿದಾಗ. ಅಶೋಕವರ್ಧನ್ ಬ್ಲಾಗ್ ಅಂಗಳಕ್ಕೆ ಇಳಿದಿದ್ದಾರೆ.
Athree Book Center ಇವರ ಬ್ಲಾಗ್.

ಅದೊಂದು ಬೆಳಿಗ್ಗೆ ನನ್ನ ಪುಸ್ತಕ ಮಳಿಗೆಯಲ್ಲಿ ಒಮ್ಮೆಲೆ ನಾಲ್ಕೈದು ಜನ, ಅದರಲ್ಲೂ ಕೆಲವು ಎರಡು ಮೂರು ಜನರ ಗುಂಪುಗಳು ನನ್ನ ಮೇಜನ್ನು ಬಿಲ್ಲಿಗಾಗಿ ಮುತ್ತಿಗೆ ಹಾಕಿದ್ದವು. ಇವುಗಳ ಎಡೆಯಲ್ಲಿ ನನ್ನಿಂದಲೇ ಬಲಕ್ಕೆ ಅಂದರೆ ಶೋಕೇಸಿನ ಕನ್ನಡಿಯ ಆಚೆಗೆ ಏನೋ ಅಸಹಜ ಚಲನೆ ಕಂಡಂತಾಗಿ ತಿರುಗಿ ನೋಡಿದೆ. ಎಂದಿನ ಪರಿಚಿತ ಮುಖ – ಕಪ್ಪು ಛಾಯೆಯ ಕನ್ನಡಕ ಹಾಕಿದ ಹರಕು ಗಡ್ಡದವ – ಗಡ್ಡು, ಎಂದಿಟ್ಟುಕೊಳ್ಳಿ. ಇಲ್ಲೇ ನಮ್ಮ ನೆರೆಕರೆಯಲ್ಲೇ ಎಲ್ಲೋ ಕೆಲಸ ಮಾಡಿಕೊಂಡು, ನನಗೆ ಎದುರು ಸಿಕ್ಕಾಗೆಲ್ಲಾ ನಮಸ್ಕಾರ ಕೊಟ್ಟುಕೊಂಡು, ಆಗೀಗ ಅಂಗಡಿಗೂ ನುಗ್ಗಿಕೊಂಡಿದ್ದವ ವಿಚಿತ್ರ ಭಂಗಿಯಲ್ಲಿದ್ದ. ಆತನ ಕೈಗೆಲ್ಲಿಂದ ಬಂತೋ ಗೊತ್ತಿಲ್ಲ, health in your hands ಪುಸ್ತಕದ ಪುಟ ತಿರುವುತ್ತಿದ್ದ. ನಾನು ತಿರುಗಿ ನೋಡಿದ್ದು ಗಮನಿಸಿದ ಮೇಲೆ ಆತ ಹಾಗೇ ಬಗ್ಗಿ ಬಾಗಿಲ ಕಂಡಿಯಲ್ಲೇ ಕೈಚಾಚಿ ಪುಸ್ತಕವನ್ನು ಶೋಕೇಸಿನ ಹಲಗೆಯಲ್ಲಿ ಇಟ್ಟು, ಸೊಂಯ್ಕ್ ಅಂತ ಅಂಗಡಿಯ ಒಳಗೇ ಹೋದ. ನಾನು ಮತ್ತೆ ನಿರ್ಯೋಚನೆಯಿಂದ ಕೆಲಸದಲ್ಲಿ ಮುಂದುವರಿದೆ.

ಆದರೆ ಐದೇ ಮಿನಿಟಿನಲ್ಲಿ ಶಾಂತಾರಾಮ (ಆಂಗಡಿ ಸಹಾಯಕ) ಗಡ್ಡುವನ್ನು ನನ್ನಲ್ಲಿಗೆ ನೂಕಿಕೊಂಡು ಬಂದಂತೆ ತಂದ. ಶೆಲ್ಫ್ ಸಾಲಿನ ಇನ್ನೊಂದು ಬದಿಯಿಂದ ಎರಡನೇ ಸಹಾಯಕ – ಅಫ್ಜಲ್, ತುರ್ತು ಸನ್ನಿವೇಶ ನಿಭಾವಣೆಗೆ ಸಜ್ಜಾದಂತೆ ಇಣುಕುತ್ತ ನಿಂತ. ಗಡ್ಡು ಶರಟಿನ ಗುಂಡಿ ಹಾಕಿಕೊಳ್ತಾ ಇದ್ದ, ಶಾಂತಾರಾಮನ ಕೈಯಲ್ಲಿ ಎರಡು ಪುಸ್ತಕ ಇತ್ತು. ನಾನು ವ್ಯವಹರಿಸುತ್ತಿದ್ದ ಜನರ ಲೆಕ್ಕ ಮುಗಿಸಿ ಏನ್ಕಥೇಂತ ಶಾಂತಾರಾಮನನ್ನು ಹುಬ್ಬಿನಲ್ಲೇ ಪ್ರಶ್ನಿಸಿದೆ. “ನೋಡಿ!! ಎರಡು ಪುಸ್ತಕ ಅಂಗಿಯ ಒಳಗೆ ಹಾಕಿದ್ದ. ಯಾಕೆ ಕದ್ದದ್ದೂಂತ ಕೇಳಿದರೆ ನಮ್ಮ ದೇವರು ಕೃಷ್ಣನೂ ಕಳ್ಳನಲ್ಲವೇ ಅಂತಾನೆ.” ನನಗೂ ಸಿಟ್ಟೇರಿ “ಯಾಕೆ ಕದ್ದದ್ದು…” ಎನ್ನುವುದರೊಳಗೆ ಆತ ತಣ್ಣಗೆ “ಇಲ್ಲಾ ಇವೆರಡಕ್ಕೆ ನಾನು ದುಡ್ಡು ಕೊಡಲಿಲ್ಲ” ಎಂದ. ನಾನು ಅವನ ನಿರುಮ್ಮಳ ಭಾವಕ್ಕೆ ಮತ್ತಷ್ಟು ರೇಗಿ “ಅಂದ್ರೆ ಕದ್ದದ್ದು ಎಂದೇ ಅರ್ಥ. ಪರಿಚಯದವರು ಎಂದು ನಿರ್ಯೋಚನೆಯಿಂದ ಒಳಗೆ ಬಿಟ್ಟದ್ದಕ್ಕೆ ಈ ಹಿಂದೆಯೂ ಎಷ್ಟು ಕದ್ದಿದ್ದೀರೋ…” ಮತ್ತದೇ ನಿರುದ್ವಿಗ್ನತೆಯಲ್ಲಿ “ಈಗ ನನ್ನಲ್ಲಿ ಹಣವಿಲ್ಲ. ನನಗೆ ಆ ಪುಸ್ತಕ ಬೇಕು ಅಂತ ಅನಿಸಿತು. ಇನ್ನೊಮ್ಮೆ ಬರ್ತೇನೆ” ಎಂದವನೇ ನಮ್ಮ ಪ್ರತಿಕ್ರಿಯೆ ಕಾಯದೇ ಹೊರಗೆ ನಡೆದೇಬಿಟ್ಟ!

ಸಂದ ಮೂರು ದಶಕಗಳಿಗೂ ಮೀರಿದ ಅನುಭವದಲ್ಲಿ ಅಸಂಖ್ಯ ಕಳ್ಳರನ್ನು ನಾವು ಹಿಡಿದಿದ್ದೇವೆ. ನಾಚಿಗೆಗೆಟ್ಟ ವೈದ್ಯ, ಭಂಡ ಪುಢಾರಿ, ಹೊರಲಾಗದಷ್ಟು ಹೇರಿಕೊಂಡ ಕಾಲೇಜುರಮಣಿ, ನಮ್ಮ ಕಾಲು ಕಟ್ಟುವ, ನೂರೆಂಟು ಬಾರಿ ಕ್ಷಮೆ ಕೋರುತ್ತಾ ತಮ್ಮನ್ನೇ ಹಳಿದುಕೊಳ್ಳುವ, ಹಿಡಿದ ಕೈಕೊಸರಿಕೊಂಡು ಓಡಿ ದಾರಿಹೋಕರ ಕೈಗೆ ಸಿಕ್ಕಿ ಸತ್ತುಬದುಕಿದ ಹಲವರನ್ನೆಲ್ಲ (ದೈಹಿಕ ದಂಡನೆ ಕೊಡದಂತೆ ಮನೋನಿಗ್ರಹ ಬಲು ಕಷ್ಟದಿಂದ ತಂದುಕೊಂಡು) ಸಾಕಷ್ಟು ಮಾತಿನ ದಂಡನೆಗೊಳಪಡಿಸಿ ಮತ್ತಿತ್ತ ಸುಳಿಯದಂತೆ ನಿವಾರಿಸಿಕೊಂಡಿದ್ದೇವೆ. ಆದರೆ ಇಂತದ್ದು ಇದೇ ಮೊದಲು! ಅವನ ಕಪ್ಪು ಕನ್ನಡಕ, ಹರಕು ಗಡ್ಡ, ಸಿಕ್ಕು ಬಿದ್ದಲ್ಲೂ ಮಾಸದ ಕಿರು ನಗೆ ಒಮ್ಮೆಗೆ ನನಗೆ ಹಂಗಿಸಲು ವಸ್ತುವೇನೋ ಆಯ್ತು. ಆದರೆ ಆತ ತನಗೆ ಅಧಿಕಾರವಿಲ್ಲದೆಯೂ (ಹಣವಿಲ್ಲ) ಪುಸ್ತಕ ದಕ್ಕಿಸಿಕೊಳ್ಳಬೇಕಿತ್ತು ಎಂಬ ಭಾವ ಉಳಿಸಿಕೊಂಡೇ ನಮ್ಮೆದುರಿನಿಂದ ಮಾಯವಾಗಿದ್ದ. `ಒಬ್ಬ ದೇವರು – ಕೃಷ್ಣ, ಕಳ್ಳತನ ಮಾಡೆಂದರೆ ಇನ್ನೊಬ್ಬ ದೇವರು – (ಶಾಂತಾ-) ರಾಮ ದಂಡಿಸ್ತಾನೇಂತ ಹೇಳಿ ನಾಲ್ಕು ಬಾರಿಸಬೇಕಿತ್ತು (ತುಳುವಿನಲ್ಲಿ – ಕ್ರಿಷ್ಣೆ ಕಳ್ವೆಯಾಂಟ ರಾಮೆ ಕೆರ್ಪೆ)’  ಎಂಬೆಲ್ಲಾ ನಮ್ಮ ಮಾತಿನ ವೈಭವವನ್ನು ನಿರಸ್ತ್ರಗೊಳಿಸಿ ಕಾಣೆಯಾದ. ಕಳ್ಳನದು ಧಿಮಾಕೇ ಮಾನಸಿಕ ಅವ್ಯವಸ್ಥೆಯೇ ಎಂಬ ಜಗಿರಬ್ಬರ್ (chewing gum) ಇನ್ನೆನು ಉಗಿಯುವ ಹಂತಕ್ಕೆ ಬರುವಾಗ…

ಅಂದೇ ಸಂಜೆ ಪುನರಾಯಾನ್ ಚೋರ ಮಹಾಶಯನ್. ಖಾಕೀ ರಟ್ಟು ಹಾಕಿಕೊಂಡಿದ್ದ ಎರಡು ಸಾಕಷ್ಟು ದೊಡ್ಡ ಪುಸ್ತಕಗಳನ್ನು ತಂದಿದ್ದ. ರಟ್ಟು ಕಳಚಿ ಎರಡನ್ನೂ ನನ್ನ ಮೇಜಿನ ಮೇಲಿಟ್ಟು, ಜೊತೆಗೆ ಐದು ರೂಪಾಯಿಯಷ್ಟು ನಾಣ್ಯಗಳನ್ನೂ ಇಟ್ಟ.
“ಏನಿದು” ನನ್ನ ಪ್ರಶ್ನೆ.
“ಇಲ್ಲಿಂದ ಒಯ್ದಿದ್ದೆ, ದುಡ್ಡು ಕೊಟ್ಟಿರಲಿಲ್ಲ.” ದಂಡವೆಂದೋ ಬಾಡಿಗೆಯೆಂದೋ ಚಿಲ್ಲರೆ ಕೊಟ್ಟ ಭಾವ. ಸಿಟ್ಟು ಮಾಡುವ ಅಧಿಕಾರವೇ ನನ್ನಲ್ಲಿರಲಿಲ್ಲ!
“ಮತ್ತೆ ಕದ್ದದ್ದು ಎನ್ನಿ. ಇನ್ನೆಷ್ಟು ಹೀಗೇ…” ಎಂದು ಅಡಿಗೆ ಬಿದ್ದರೂ ಮೀಸೆ ಮೇಲುಳಿಸಿಕೊಳ್ಳುವ ಮಾತೆತ್ತಿದೆ.
“ಇಲ್ಲ, ರಾಧಾಕೃಷ್ಣನ್ ಉಪನಿಷತ್ ಒಮ್ಮೆ ಹೀಗೇ ತೆಗೆದುಕೊಂಡು ಹೋಗಿದ್ದೆ. ಅದು ತುಂಬಾ costly, ನನಗೆ ಅರ್ಥವೂ ಆಗುವ ಹಾಗಿರಲಿಲ್ಲ. ಮತ್ತೊಮ್ಮೆ ಬಂದಾಗ ತಂದು ಇಟ್ಟುಬಿಟ್ಟೆ.” ನನ್ನಿಬ್ಬರೂ `ಪತ್ತೇದಾರಿಗಳಿಗೆ’ ಉಚ್ಛ್ರಾಯದಲ್ಲಿದ್ದ ಗುರು ನೀಚಕ್ಕೆ ಬಿದ್ದ ಅನುಭವ. ಗಡ್ಡು ಮುಂದುವರಿದ “ನೀವು ನನ್ನ ನಂಬಬೇಕೂಂತ ಇಲ್ಲ ಆದ್ರೂ ಹೇಳ್ತೇನೆ. ಒಮ್ಮೆ ಬ್ಯಾಂಕಿಗೆ ಹದಿನೈದು ಸಾವಿರ ಡ್ರಾ ಮಾಡಲು ಹೋಗಿದ್ದೆ. ಕ್ಯಾಶಿಯರ್ ನೂರು ರೂಪಾಯಿಗಳ ನೋಟು ಎಣಿಸಿ ಕೊಟ್ಟ. ನಾನು ಅಷ್ಟು ಪ್ಯಾಂಟ್ ಕಿಸೆಗೆ ಜಾಸ್ತಿಯಾಗುತ್ತೆ ಎಂದು ಹತ್ತು ಸಾವಿರ ವಾಪಾಸು ಕೊಟ್ಟೆ. ಆತ `ಮೊದಲೇ ಹೇಳಬಾರದೇ’ ಎಂದು ರೇಗಿಕೊಂಡು ಅಷ್ಟನ್ನು ಹಾಗೆ ಒಳಗೆ ಹಾಕಿ ಮತ್ತೆ ಹದಿನೈದಕ್ಕೆ ಐನೂರರ ನೋಟು ಎಣಿಸಿ ಕೊಟ್ಟ! ನಾನು ಐದು ಸಾವಿರ ಮರಳಿಸಲು ತೊಡಗುವಾಗ ಆತ ಮತ್ತಷ್ಟು ಸಿಡುಕಿನಲ್ಲಿ `ಇಲ್ಲ, ಇನ್ನು ಕೊಡಲ್ಲ’ ಎಂದ. ನಾನು ಅವನಿಗೆ ಸಮಾಧಾನದಲ್ಲಿ ವಿವರಿಸಿ ಐದು ಸಾವಿರ ಮರಳಿಸಿ ಬಂದೆ.”

ನನ್ನಲ್ಲಿ ಮುಂದುವರಿಸಲು ಮಾತಿರಲಿಲ್ಲ. ಆದರೂ ನ್ಯಾಯ ನಮ್ಮದೇ ಎಂಬ ತೋರಿಕೆಯಲ್ಲಿ “ಅದೆಲ್ಲಾ ನನಗೆ ಬೇಡ. ಇನ್ನೊಂದು ಸಲ ನೀವು ನನ್ನಂಗಡಿಯೊಳಗೆ ಬರುವುದು ಬೇಡ. ಈ ಪುಡಿಗಾಸು ಯಾಕೆ, ತೆಗೊಂಡು ಹೋಗಿ…” ಎನ್ನುತ್ತಿದ್ದಂತೇ ಗಡ್ಡು ಚಿಲ್ಲರೆಯನ್ನು ಹಾಗೇ ಕೈಯಲ್ಲಿ ಮತ್ತೆ ನನ್ನತ್ತ ನೂಕಿ “ಇದು ಇರಲಿ. ಯಾಕೇಂತ ಇನ್ನೊಮ್ಮೆ ಹೇಳ್ತೇನೆ” ಎಂದು ಮತ್ತೆ ಬೀಸುಗಾಲು ಹಾಕಿ ಮಾಯವಾದ!

Advertisements
  1. Nandu / ಆಕ್ಟೋ 20 2008 8:47 ಅಪರಾಹ್ನ

    ಜಗತ್ತಿನಲ್ಲಿ ಎರಡು ಬಗೆಯ ಕಳ್ಳರಿರುತ್ತಾರಂತೆ…ತಮ್ಮ ದೈನಂದಿನ ಜೀವನದ ರೀತಿಯನ್ನು ಬದಲಿಸಿಕೊಳ್ಳಲು ಒಂದು ಬಗೆಯ ಜನರು ಕದ್ದರೆ, ಇನ್ನೊಂದು ಬಗೆಯವರು ತಮ್ಮ ಬದುಕಿನ ರೀತಿಯನ್ನು ಬದಲಿಸಿಕೊಳ್ಳಲು ಕದಿಯುತ್ತಾರಂತೆ.

    ನಿಮ್ಮ ಗಡ್ಡು ಈ ಎರಡೂ ಪಂಗಡಕ್ಕೆ ಸೇರಿದವರಂತೆ ಕಾಣುವುದಿಲ್ಲ !

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: