Skip to content
ಅಕ್ಟೋಬರ್ 27, 2008 / odubazar

ಬದ್ದತೆಯೆಂಬುದು ಸೃಜನಶೀಲತೆಗೆ ಮೊದಲ ಶತ್ರು ಎಂಬ ಫಲಕ ತೂಗುತ್ತಿತ್ತು.

೩೦ ವರ್ಷಗಳ ಹಿಂದೆ ಬೊಳುವಾರು ಮಹಮದ್ ಕುಂಇ ದೇವರುಗಳ ರಾಜ್ಯದಲ್ಲಿ ಕಥಾ ಸಂಕಲನ ಹೊರತಂದರು. ಅಷ್ಟೆ ಅಲ್ಲ ಕನ್ನಡ ಸಾಹಿತ್ಯ ಲೋಕದಲ್ಲಿ ಹೊಸ ಸಂವೇದನೆಯ ಗಾಳಿ ಬೀಸಲು ಕಾರಣರಾದರು. ಈಗ ಡಾ ಎಂ ಭೈರೇಗೌಡ ತಮ್ಮ ಪ್ರಗತಿ ಗ್ರಾಫಿಕ್ಸ್ ಮೂಲಕ ಈ ಪುಸ್ತಕ ಮತ್ತೆ ಬೆಳಕು ಕಾಣಲು ಕಾರಣರಾಗಿದ್ದಾರೆ.

ಈ ಸಂದರ್ಭದಲ್ಲಿ ಬೊಳುವಾರು ಮೆಲುಕು ಹಾಕಿದ ನೆನಪುಗಳು ಇಲ್ಲಿವೆ.

 

 

ಮೂರು ದಶಕದ ಕತೆ

 

ಮೂವತ್ತು ವರ್ಷಗಳು ಕಳೆದು ಹೋದವು.`ಬದ್ದತೆಯೆಂಬುದು ಸೃಜನಶೀಲತೆಗೆ ಮೊದಲ ಶತ್ರು, ಎಂಬ ಫಲಕ ತೂಗುತ್ತಿತ್ತು. ಪಕ್ಕದಲ್ಲಿ, `ಬರಹದಿಂದ ಬದುಕು ಬದಲು ಮಾಡಲಾಗದು’ ಎಂಬ ವಾದವನ್ನು ಸುಳ್ಳು ಮಾಡುತ್ತಿದ್ದ, ಹಲವು ನಿಲುವುಗಳಿಗೆ ಬದ್ದವಾದ, ಧರ್ಮಗ್ರಂಥಗಳು ಕಣ್ಣೆದುರಿಗಿದ್ದವು. ಆದ್ದರಿಂದ, ಕೆಲವು ಸೂತ್ರಗಳಿಗೆ ಬದ್ದನಾಗಿಯೇ ನಾನು ಬರವಣಿಗೆ ಆರಂಭಿಸಿದ್ದೆ; ಯಾಕೆಂದರೆ ನನ್ನೆದುರು ಎರಡು ಗುರಿಗಳಿದ್ದವು.

 

ಕನ್ನಡದ ಓದುಗರಿಗೆ ಅಷ್ಟೇನೂ ಪರಿಚಿತವಲ್ಲದ ಜನಸಮೂಹವೊಂದನ್ನು (ಅವರನ್ನು ದ್ವೀಪವೆಂದೂ ಕರೆಯಲಾಗುತ್ತಿತ್ತು) `ಹೌದಾ, ಅವರು ಹಾಗಿಲ್ಲವಾ? ಎಂಬಂತೆ ಉಳಿದವರಿಗೆ ಪರಿಚಯಿಸುವುದು ಮೊದಲ ಗುರಿ. ಅಂತೆಯೇ, ಕನ್ನಡದ ಓದಿಗೆ ಬಹುಪಾಲು ಕರುಡಾಗಿದ್ದ ಅದೇ ಜನಸಮೂಹವನ್ನು ಓದುವಂತೆ ಪ್ರೇರೇಪಿಸಿ `ಹೌದಾ? ನಾವು ಹೀಗಿದ್ದೇವಾ?, ಎಂದು ಪ್ರಶ್ನಿಸಿಕೊಳ್ಳುವಂತೆ ಒತ್ತಾಯಿಸುವುದು ಎರಡನೆಯ ಗುರಿ. ಒಟ್ಟಿನಲ್ಲಿ ಎರಡು ದೋಣಿಗಳಲ್ಲಿ ಕಾಲಿರಿಸಿ ಹುಟ್ಟು ಹಾಕುವ ಹುಚ್ಚು ಹಂಬಲ. ಕಾಲು ಶತಮಾನದ ಸುದೀರ್ಘ ಯೋಜನೆ ಅದು. ಅದಕ್ಕಾಗಿ ಅಷ್ಟು ಕಾಲ ನಾನು ಬದುಕುಳಿಯಲೇ ಬೇಕಾಗಿತ್ತು: ಬೇರೆಯವರ ಉಸಾಬರಿ ಬೇಡವೆಂದು ನನ್ನದೇ ಆದ `ಮುತ್ತುಪ್ಪಾಡಿ’ಎಂಬ ಗ್ರಾಮವನ್ನು ಕಲ್ಪಿಸಿದೆ.

 

`ಮುತ್ತುಪ್ಪಾಡಿ’ ಊರ ತುಂಬ ಮನುಷ್ಯರನ್ನು ಹುಟ್ಟಿಸಿದೆ: ಅವರಿಗೆ ನಂಬಲೆಂದು ದೇವರುಗಳನ್ನು ಸೃಷ್ಟಿಸಿದೆ. ಪೂಜಿಸಲು ಮಂದಿರ, ಪ್ರಾರ್ಥಿಸಲು ಮಸೀದಿ, ಓದಲು ಶಾಲೆ, ಕವಾಯತಿಗೆ ಮೈದಾನ, ಈಜಲು ಹೊಳೆ, ಹಾರಲು ಕೆರೆ, ಮಲಗಲು ಆಸ್ಪತ್ರೆ, ಅಳಲು ಸ್ಮಶಾನ, ಹೂಳಲು ಕಬರ್ಸ್ಧಾನ, ಆಳಲು ಪೋಲಿಸ್- ಏನೇನು ಬೇಕೋಅದೆಲ್ಲವನ್ನೂ ಒದಗಿಸಿದೆ. ನಂತರ ಮುತ್ತುಪ್ಪಾಡಿಯ ಮನುಷ್ಯರಿಗೆ ಸ್ವಾತಂತ್ರ್ಯ ಕೊಟ್ಟೆ. ಅವರನ್ನೆಲ್ಲ ಅವರಿಷ್ಟದಂತೆ ಬದುಕಲು ಬಿಟ್ಟು, ಅವರದೇ ಕತೆ ಬರೆದು ಪತ್ರಿಕೆಗಳಿಗೆ ಕಳುಹಿಸಲಾರಂಭಿಸಿದೆ.

 

ನವಭಾರತದ ಮಲ್ಯರು, ಉದಯವಾಣಿಯ ಬನ್ನಂಜೆಯವರು, ಪ್ರಜಾವಾಣಿಯ ರಂಗನಾಥರಾಯರು, ಸುಧಾದ ಎಂ.ಬಿ.ಸಿಂಗ್, ತುಷಾರದ ಈಶ್ವರಯ್ಯ, ಕಸ್ತೂರಿಯ ಪಾ.ವೆಂ., ಮಯೂರದ ದಿವಾಕರ, ಮೊದಲಾದ ಸಂಪಾದಕರನೇಕರು ನನ್ನನ್ನು ಬೆಂಬಲಿಸಿ, ಮುತ್ತುಪ್ಪಾಡಿಯ ಬದುಕಿಗೆ ಸಾಕ್ಷಿ ಹೇಳಿದರು. ಸುಮಾರು 20 ವರ್ಷಗಳ ಕಾಲ ಮುತ್ತುಪ್ಪಾಡಿಯ ಕತೆಗಳು ಯಾವುದಾದರೊಂದು ಪತ್ರಿಕೆಯಲ್ಲಿ ಕನಿಷ್ಠ ತಿಂಗಳಿಗೊಂದಾದರೂ ಪ್ರಕಟವಾಗುವಂತೆ ನೋಡಿಕೊಂಡರು. ಅಗತ್ಯ ಅನ್ನಿಸಿದಾಗಲೆಲ್ಲ ಆರೋಗ್ಯಕರವಾದ ಸಂವಾದ- ಚರ್ಚೆಗೆ ವೇದಿಕೆ ಒದಗಿಸಿ ತಿಂಗಳುಗಟ್ಟಲೆ ಓದುಗರನ್ನು ಹುರಿದುಂಬಿಸಿದರು.

 

ನನ್ನ ಕತೆಗಳು ಒಮ್ಮೆ ಒಬ್ಬರಿಗೆ ಪಥ್ಯವಾದರೆ ಇನ್ನೊಬ್ಬರಿಗೆ ಅಪಥ್ಯವಾಗುತ್ತಿದ್ದವು. ಒಬ್ಬರಿಗೆ ನೋವಾಗಿದೆಯೆಂಬ ಕಾರಣಕ್ಕೇ ಇನ್ನೊಬ್ಬರಿಗೆ ಸಂತೋಷವಾದದ್ದು ಉಂಟು. ಮುಸ್ಲಿಮನೊಬ್ಬ `ರಾಶನಲ್’ ಆಗುವುದೆಂದರೆ `ಹಿಂದೂ’ ಆಗುವುದು ಎಂದು ಪ್ರಾಮಾಣಿಕವಾಗಿ ನಂಬಿದ ಓದುಗರೂ ಉತ್ಸಾಹದಿಂದ ಚರ್ಚೆಯಲ್ಲಿ ಪಾಲುಗೊಂಡರು. ಇವೆಲ್ಲವನ್ನೂ ಅರಿತೂ ಅರಿಯದವನಂತೆ ಸಂಕಟ ಅನುಭವಿಸುವುದಷ್ಟೇ ನನ್ನ ಪಾಲಿನ ಕೆಲಸವಾಗಿತ್ತು.

 

ಯಾಕೆಂದರೆ ನನ್ನ ಉದ್ದೇಶ ಕೇವಲ ಕತೆ ಬರೆಯುವುದ್ದಾಗಿದ್ದಿರಲಿಲ್ಲ; ಕಲೆಗಾರಿಕೆ, ತಂತ್ರ-ವಿನ್ಯಾಸಗಳು ನನಗೆ ಮುಖ್ಯವಾಗಿದ್ದಿರಲಿಲ್ಲ. ನನಗೆ ಹೊಸ ಧರ್ಮವೊಂದನ್ನು ಕಟ್ಟಬೇಕಾಗಿತ್ತು; ಯಾಕೆಂದರೆ, ಧರ್ಮಗ್ರಂಥಗಳು ಅನೇಕವಿದ್ದವು. ಗೆಳೆಯರಾದ ಲಿಂಗದೇವರು ಹಳೆಮನೆ, ಕಾಲು ಶತಮಾನದ ಹಿಂದೆ ಈ ಸಂಕಲನವನ್ನು ಮೊದಲ ಬಾರಿಗೆ ಪ್ರಕಟಿಸುವ ಧೈರ್ಯ ತುಂಬಿದರು. ಗೆಳೆಯ ಜಿ. ರಾಜಶೇಖರ ಮುನ್ನುಡಿ ಬರೆದು ಧೈರ್ಯ ತುಂಬಿದರು. ಕರ್ನಾಟಕ ಸಾಹಿತ್ಯ ಆಕಾಡೆಮಿಯವರು ಪ್ರಶಸ್ತಿ ಕೊಟ್ಟು ಗೌರವಿಸಿದರು ಎಂಬ ಕಾರಣಕ್ಕೂ ಇರಬಹುದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಹತ್ತು ವರ್ಷಗಳ ಬಳಿಕ ಮರು ಮುದ್ರಣ ಮಾಡಿ ಹಂಚಿದರು.

 

ಈಗ ಪ್ರತಿಗಳು ಸಿಗುತ್ತಿಲ್ಲ ಎಂಬ ನೆಪ ಹೇಳಿ, ಗೆಳೆಯ ಪ್ರಗತಿ ಗ್ರಾಫಿಕ್ಸ್ ಡಾಕ್ಟ್ರು ಬೈರೇಗೌಡ್ರು ಮತ್ತೊಮ್ಮೆ ಪ್ರಕಟಿಸುತ್ತಿದ್ದಾರೆ.

-ಬೊಳುವಾರು ಮಹಮದ್ ಕುಂಇ  

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: