Skip to content
ನವೆಂಬರ್ 7, 2008 / odubazar

‘ಮುಕ್ತ’ದ ಬೆಲೆಯನ್ನು ನೀವು ಹೆಚ್ಚಿಸಿದಿರಿ…

ಪ್ರಿಯ ನಾಗರಾಜಮೂರ್ತಿ

-ಟಿ.ಎನ್.ಸೀತಾರಾಂ

ನಿಮಗೆ 50 ವರ್ಷ ತುಂಬಿತೆಂದು ಗೊತ್ತಾಯಿತು ಹುಟ್ಟುಹಬ್ಬದ ಶುಭಾಷಯಗಳು. 40 ದಾಟಿದ ಯಾರಿಗೂ ನಾನು ಸಾಮಾನ್ಯವಾಗಿ ಹುಟ್ಟುಹಬ್ಬದ ಶುಭಾಷಯ ತಿಳಿಸುವುದಿಲ್ಲ. 50ರ ನಂತರವಂತೂ, ಅದೊಂದು ವಿಷಾದದ ದಿನವೆಂದು ನನ್ನ ನಂಬಿಕೆ, ಉತ್ಸಾಹ, ಶಕ್ತಿಗಳು ಕಡಿಮೆಯಾಗಿ ಹತ್ತಿದ ಹುರುಪಿನ ಬೆಟ್ಟವನ್ನು ಇಳಿಯಲು ಆರಂಭಿಸುವ ಸಂಕೇತ ಅದು.

ಆದರೆ ನಾನು ನಿಮ್ಮನ್ನು ಎರಡು ಕಾರಣಕ್ಕಾಗಿ ಅಭಿನಂಧಿಸುತ್ತೇನೆ, ಹುಟ್ಟಿದ ಎಲ್ಲರಿಗೂ ಬದುಕಿದ್ದರೆ 50 ತುಂಬಿಯೇ ತುಂಬುತ್ತದೆ. ಏನೂ ಮಾಡದೆ ಸುಮ್ಮನಿದ್ದರೂ ತುಂಬುತ್ತದೆ. ಸುಮ್ಮನಿರದಿದ್ದರೂ ತುಂಬುತ್ತದೆ. ನೀವು ಸುಮ್ಮನೇ ಇರುವುದು ಮಾತ್ರವಲ್ಲ ನೀವು ಕಳೆದ 50 ವರ್ಷಗಳಲ್ಲಿ ನಾನು ನೋಡಿದ್ದು 25 ವರ್ಷಗಳ ಕಾಲ. ಆ 25 ವರ್ಷಗಳ ಬಹುತೇಕ ಕ್ಷಣಗಳನ್ನು ಸಾರ್ಥಕ ಕೆಲಸವನ್ನು ಮಾಡುತ್ತಲೇ ಬದುಕಿದ್ದೀರಿ, ಅದಕ್ಕಾಗಿ ಮೊದಲನೆಯದಾಗಿ ನಿಮ್ಮನ್ನು ಅಭಿನಂದಿಸುತ್ತೇನೆ.

ranga-sanchariಎರಡನೆಯದಾಗಿ, ನಿಮಗೆ 50 ವರ್ಷವಾಯಿತೆಂದು ನಿಮ್ಮ birth certificate ಹೇಳಬೇಕು ಅಷ್ಟೆ , ನೀವು 25ನೇ ವಯಸ್ಸಿನಲ್ಲಿ ಎಷ್ಟು ಎನರ್ಜಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಿರೊ, ಇವತ್ತು ಕೂಡಾ ಅಷ್ಟೆ ಎನರ್ಜಿ ಇಟ್ಟುಕೊಂಡು, ಅಷ್ಟೇ ನಗುನಗುತ್ತಾ ಜೀವನೋತ್ಸಾಹವನ್ನು ಕಿಂಚಿತ್ತೂ ಕಳಕೊಳ್ಳದೆ ಕೆಲಸ ಮಾಡಿಕೊಂಡು ಊರೂರು ಸುತ್ತುತ್ತಾ ಇರುತ್ತೀರಿ.

ನೀವು ಮಾಡುವ ಕೆಲಸಗಳೂ ಕೂಡ ನಿಮ್ಮ ವ್ಯಾಪಾರಕ್ಕಾಗಲೀ, ಶ್ರೀಮಂತಿಕೆಯನ್ನಾಗಲಿ ಹೆಚ್ಚಿಸಿಕೊಳ್ಳುವುದಕ್ಕಲ್ಲ. ಸದಾ ಇನ್ನೊಬ್ಬರ ಕೆಲಸಕ್ಕೆಂದೂ, ಸಮಾಜದ ಆರೋಗ್ಯವನ್ನು ಹೆಚ್ಚು ಮಾಡುವ ಕೆಲಸಕ್ಕಾಗಿಯೇ. ಈ 50 ತುಂಬುವ ದಿನಗಳಲ್ಲೂ ಚಟುವಟಿಕೆಯಿಂದ ಇದ್ದೀರಿ. ಅದಕ್ಕಾಗಿ ನಿಮ್ಮನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ.

ನಿಮಗೆ ಕೊಂಚ ಅನಾರೋಗ್ಯವಿದೆ ಎಂದು ನನಗೆ ಗೊತ್ತು. ಆದರೆ ಕೆಲಸಕ್ಕಾಗಿ ನೀವು ಊರೂರು ಸುತ್ತುವುದು ತುಂಗಾರೇಣುಕಾಗೆ ಇಷ್ಟವಿಲ್ಲ. ಆದರೂ ನೀವು ಸುಳ್ಳು ಹೇಳಿಕೊಂಡು, ಇನ್ನೊಬ್ಬರ ಕೆಲಸಕ್ಕಾಗಿ ಊರೂರು ಸುತ್ತುತ್ತಿರುತ್ತೀರಿ, ನನಗೆ ನೆಗಡಿ ಬಂದರೆ ದೊಡ್ಡ ಖಾಯಿಲೆಯವರಂತೆ ಮಲಗಿರುತ್ತೇನೆ. 200 ಕಿಲೋಮೀಟರ್ ಕಾರಿನಲ್ಲಿ ಪ್ರಯಾಣ ಮಾಡಿದರೆ, ದೇಶವೆಲ್ಲಾ ಕಾಲು ನಡಿಗೆಯಲ್ಲಿ ಸುತ್ತಿದವರಂತೆ ಮೂರುದಿನ ಮಲಗಿ ಆನಂದ ಪಡುತ್ತೇನೆ. ಆದರೆ ನೀವು ರಾಜ್ಯದ ಯಾವುದೋ ಮೂಲೆಯ ಊರಿನಲ್ಲಿ ಕನ್ನಡದ ಕೆಲಸಕ್ಕಾಗಿ ಕೆಂಪು ಬಸ್ಸಿನಲ್ಲಿ ಕುಳಿತು 2-3 ದಿನ ಪ್ರಯಾಣ ಮಾಡಿ ನಗುತ್ತಲೇ ಇರುತ್ತೀರಿ, ನಿಮ್ಮ ಮನೆಯಲ್ಲಿ ನೂರುಕಷ್ಟಗಳಿದ್ದರೂ ಕೂಡ.

ಆ ವಿಚಾರಬಿಡಿ ನಾಗರಾಜಮೂರ್ತಿ ನಿಮಗೆ ನೆನಪಿದೆಯ? ನನ್ನ ನಿಮ್ಮ ಪರಿಚಯವಾಗಿದ್ದು ಒಂದು ಮನಸ್ತಾಪದ ಮೂಲಕ. 85ರಲ್ಲಿ ವಿಧಾಸಭಾ ಚುನಾವಣೆಗಳು ನಡೆದಾಗ ನಮ್ಮೂರಿನಿಂದ ನಾನು ಸ್ಪರ್ಧಿಸಬಯಸಿದ್ದೆ. ಎಂ.ಎಲ್.ಎ ಆಗಲು ಇಷ್ಟವಿತ್ತು. ಆದರೆ ನೀವು ಒಳಗೇ ದೇವೇಗೌಡರ ಶಿಷ್ಯರಾಗಿದ್ದುಕೊಂಡು ತಂತ್ರಮಾಡಿ ನನಗೆ ಟಿಕೆಟ್ ತಪ್ಪಿಸಿ ಈ ಮುಖ್ಯಮಂತ್ರಿ ಚಂದ್ರುಗೆ ಟಿಕೆಟ್ ಕೊಡಿಸಿ ನನ್ನ ಆಸೆಯನ್ನು ಸಮಾಧಿ ಮಾಡಿದಿರಿ. ಆಗ ಒಂದಷ್ಟು ವರ್ಷ ನಿಮ್ಮ ತಲೆಕಂಡರೆ ನನಗೆ ಆಗುತ್ತಿರಲಿಲ್ಲ. ಆಗ ನಿಮ್ಮನ್ನು ಒಬ್ಬ ಚಿಲ್ಲರೆ ಪುಢಾರಿ ಎಂದು ನಾನು ಭಾವಿಸಿದೆ. ಆದರೆ ಈಗ ನೀವು ನನ್ನ ಅತ್ಯಂತ ಪ್ರಿಯರಾದ ಗೆಳೆಯರಲ್ಲಿ ಒಬ್ಬರು. ನಿಮ್ಮ ನಿಸ್ಪೃಹ ಹೃದಯ, ಸಮಾಜದ ಬಗೆಗಿನ ನಿಮ್ಮ ಕಾಳಜಿ ಎಲ್ಲರಿಗೂ ಸಹಾಯ ಮಾಡುವ, ಕಷ್ಟಕ್ಕಾಗುವ ನಿಮ್ಮ ಮಾನವೀಯತೆ ಇವೆಲ್ಲಾ ನನಗೆ ಕ್ರಮೇಣ ಅರ್ಥವಾಗತೊಡಗಿತು. (ನಾನು ಎಂ.ಎಲ್.ಎ ಆಗುವುದನ್ನು ನನಗೆ ತಪ್ಪಿಸಿ ನಿಮಗರಿಯದೆ ದೊಡ್ಡ ಉಪಕಾರ ಮಾಡಿದ್ದೀರಿ ನಾಗರಾಜಮೂರ್ತಿ . ಅದರ ಕಹಿ ನನ್ನಲ್ಲಿ ಕೊಂಚವೂ ಇಲ್ಲವೆಂದು ನಿಮಗೂ ಗೊತ್ತು.

ದೇವೇಗೌಡರ ಮನೆಯ ಮಗನಂತೆ ನೀವು ಇದ್ದೀರಿ ಎಂದು ನನಗೆ ಗೊತ್ತು. ಭಾರತದ ಪ್ರಧಾನಿಯಾಗಿದ್ದ ಚಂದ್ರಶೇಖರ್ ನಿಮ್ಮನ್ನು ದತ್ತುಪುತ್ರನಂತೆ ನಡೆಸಿಕೊಳ್ಳುತಿದ್ದುದು ನನಗೆ ಗೊತ್ತು. ಆ ಕಾಲದಲ್ಲಿ ಎಷ್ಟೋ ಮಂತ್ರಿಗಳು ನಿಮ್ಮ ಮರ್ಜಿಗಾಗಿ ಕಾಯುತ್ತಿದ್ದುದನ್ನು ನಾನು ನೋಡಿದ್ದೇನೆ. ನೀವು ಮನಸ್ಸು ಮಾಡಿದ್ದರೆ ಎಂ.ಎಲ್.ಎ ಆಗಬಹುದಿತ್ತು, ಇಲ್ಲ ಮಂತ್ರಿಯಾಗಬಹುದಿತ್ತು ಅಥವಾ ಲೈಸನ್ಸ್ ಪರ್ಮಿತ್ತುಗಳನ್ನು ಪಡೆದು ದೊಡ್ಡ ಶ್ರೀಮಂತರಾಗಬಹುದಿತ್ತು. ನೀವು ಕೇಳಿದರೆ ಸಾಕಾಗಿತ್ತು ಅದೆಲ್ಲವೂ ನಿಮಗೆ ಸಿಗುತ್ತಿತ್ತು. ಆದರೆ ನೀವು ಆವ್ಯಾವುದನ್ನು ಆರಿಸಿಕಳ್ಳದೆ ನಾಟಕದ ಕ್ಷೇತ್ರವನ್ನು ಆರಿಸಿಕೊಂಡು, ಅದರಲ್ಲೂ ನಟನೆ, ಖ್ಯಾತಿ ಚಪ್ಪಾಳೆಗಿಟ್ಟಿಸಿಕೊಳ್ಳುವ ನಟನೆ ಪಾತ್ರವನ್ನಲ್ಲ ನೀವು ಆರಿಸಿಕೊಂಡಿದ್ದು ಯಾರಿಗೂ ಬೆಡವಾದ ಸಂಘಟನ ಪಾತ್ರವನ್ನು, ಈ ಸಂತನ ಗುಣ ಇರುವುದು ಬಹಳ ಕಡಿಮೆ ಜನಕ್ಕೆ. ಈ ಸಂತನ ಗುಣಕ್ಕಾಗಿ ನೀವು ನನ್ನ ಅತ್ಯಂತ ಪ್ರಿಯರಾದ ಮಿತ್ರರಲ್ಲಿ ಒಬ್ಬರಾದಿರಿ.

ಆ ಪ್ರೀತಿಗಾಗಿ ನಾನು ನನ್ನ ‘ಮುಕ್ತ ‘ ಧಾರವಾಹಿಯಲ್ಲಿ ಒಂದು ಪುಟ್ಟ ಪಾತ್ರವೆಂದು ‘ರಾಣಿ’ಯ ಪಾತ್ರ ಕೊಟ್ಟರೆ, ಅತ್ಯುತ್ತಮವಾಗಿ ಅಭಿನಯಿಸಿ. ಅದನ್ನು ನೀವು ಅತ್ಯುತ್ತಮವಾಗಿ ನಿಭಾಯಿಸಿ ‘ಮುಕ್ತ’ದ ಬೆಲೆಯನ್ನು ನೀವು ಹೆಚ್ಚಿಸಿದಿರಿ.

ನೀವು ಮಾಡಿದ ಅದ್ಭುತ ಕೆಲಸವೇನು ಗೊತ್ತಾ? ಈ ಪ್ಯಾಶನ್ ಯುಗದಲ್ಲಿ, ಕಿರುತೆರೆಯ ಅರ್ಭಟದಲ್ಲಿ, ಇಂಗ್ಲೀಷಿನ ಮೋಹನದಲ್ಲಿ ಅಮೆರಿಕನ್ ಸಂಸ್ಕೃತಿಯ ಮಾಯಾಜಾಲದಲ್ಲಿ ಕನ್ನಡ ನಾಟಕ ಕ್ಷೀಣವಾಗಿ ಸತ್ತುಹೋಗುತ್ತದೆ ಎಂದು ನಾನು ಭಾವಿಸಿದ್ದೆ. ಕಾಲೇಜಿನ ಯುವಜನರು ಸಾಮಾನ್ಯವಾಗಿ ಇವಕ್ಕೆ ಒಲಿಯುವ ಕಾಲವಿದು. ಆದರೆ ಕಾಲೇಜಿನ ಯುವಜನರು ಸಾಮಾನ್ಯವಾಗಿ ಇವಕ್ಕೆ ಒಲಿಯುವ ಕಾಲವಿದು. ಆದರೆ ಕಾಲೇಜು ವಿದ್ಯಾರ್ಥಿಗಳಲ್ಲಿ ನೀವು ಕನ್ನಡ ನಾಟಕವನ್ನು ಫ್ಯಾಶನ್ ಮಾಡಿಸಿ ಕಚಿಠಟಿ ಆಗಿಸಿ ಕನ್ನಡದ ಸಂಸ್ಕೃತಿಯನ್ನು ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದಿರಿ. ನೀವು ಇಲ್ಲದಿದ್ದರೆ ಕಾಲೇಜುಗಳಲ್ಲಿ ಇಷ್ಟೊಂದು ಜನ ಯುವಕರಿಗೆ ಕನ್ನಡದ ಪ್ರೇಮವಾಗಲಿ, ನಾಟಕ ಪ್ರೇಮವಾಗಲಿ ಇರುತ್ತಿರಲಿಲ್ಲ. ಜಾಗತೀಕರಣದ ಭೂತಕ್ಕೆ ನೀವು ಒಳ್ಳೆ ಉತ್ತರ ನೀಡಿದ್ದೀರಿ ಇದಕ್ಕಾಗಿ ನಿಮಗೆ ನಾವೆಲ್ಲಾ ಕೃತಜ್ಞರಾಗಿದ್ದೆವೆ.

ಸ್ನೇಹಿತನಾಗಿಯೂ ಅಷ್ಟೆ ನನ್ನ ಅನೇಕ ಕಷ್ಟದ ದಿನಗಳಲ್ಲಿ ನನ್ನ ಜೊತೆ ನಿಂತು ಧೈರ್ಯ ಹೇಳಿದವರು ನೀವು. ನಾನು ಯಾವುದೋ ಒಂದು ಪ್ರಸಂಗದಲ್ಲಿ ಅವಮಾನಿತನಾಗಿ ಆತ್ಮವಿಶ್ವಾಸ ಕಳೆದುಕೊಂಡಿದ್ದಾಗ, ನೀವು ನನ್ನ ಬಗ್ಗೆಯೇ ಒಂದು ಕಾರ್ಯಕ್ರಮ ಮಾಡಿಸಿ ನನ್ನಲ್ಲಿ ಮತ್ತೆ ಆತ್ಮವಿಶ್ವಾಸ ಗಳಿಸಲಿಕ್ಕೆ ಕಾರಣರಾದವರು ನೀವು. (ಮತದಾನ ಚಿತ್ರಕ್ಕೆ ಸತ್ಯು ಉದ್ದೇಶಪೂರ್ವಕವಾಗಿ ಪ್ರಶಸ್ತಿ ಸಿಗುವುದನ್ನು ತಪ್ಪಿಸಿದ ಸಂದರ್ಭದಲ್ಲಿ ಜನಪ್ರಶಸ್ತಿಯ ಸಮಾರಂಭ ಮಾಡಿ ನನಗೆ ನನ್ನ ಆತ್ಮವಿಶ್ವಾಸ ಮರಳಿ ಬರುವಂತೆ ಮಾಡಿದವರು ನೀವು) ಈಗಲೂ ನನಗೆ ಯಾವುದೇ ಸಹಾಯ ಬೇಕಾದರೂ ಮಧ್ಯರಾತ್ರಿಯಲ್ಲಿ ಸಹಾಯಕ್ಕೆ ಬರುವವರು ನೀವು ಎಂದು ನನಗೆ ಗೊತ್ತಿದೆ. ನನಗೊಬ್ಬನಿಗೆ ಅಲ್ಲ, ನನ್ನಂಥ ನೂರಾರು ಜನಕ್ಕೆ ನೀವು ಅಂಥ ಆಪತ್ಕಾಲದ ಆಪ್ತಮಿತ್ರ.

ಪುರಾಣದ ಕಥೆಗಳಂತೆ ದೇವರು ಬಂದು ಮುಂದಿನ ಜನ್ಮದಲ್ಲಿ ನಿನಗೆ ಯಾರ್ಯಾರು ಸ್ನೇಹಿತರುಬೇಕೆಂದು ಕೇಳಿದರೆ, ನಾನು ಹೇಳುವ 5 ಹೆಸರುಗಳಲ್ಲಿ ನಿಮ್ಮ ಹೆಸರು ಇರುತ್ತದೆ.

ಮತ್ತೊಮ್ಮೆ 50 ವರ್ಷ ತುಂಬಿದ್ದಕ್ಕೆ ಶುಭಾಶಯಗಳು, ಇದೇ ಉತ್ಸಾಹ, ಉಲ್ಲಾಸ, ಹಾಸ್ಯಪ್ರಜ್ಞೆ, ಜನಪರ ಕಾಳಜಿ ಇನ್ನೂ 50 ವರ್ಷ ಹೀಗೆ ಇರಲಿ ಎಂದು ಹಾರೈಸುತ್ತೇನೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: