Skip to content
ನವೆಂಬರ್ 10, 2008 / odubazar

ಸುನಂದಾ ಅವರ ‘ಆಲಿಸಿ ಬರೆಯುವ ಸಹನೆ’

 

ಗಾಂಧಿ ಚಿತ್ರದ ನೋಟು

 

ಕಥಾ ಸಂಕಲನ

ಸುನಂದಾ ಪ್ರಕಾಶ ಕಡಮೆ 

ಅಕ್ಷರ ಪ್ರಕಾಶನ

ಹೆಗ್ಗೋಡು

ಸಾಗರ- 577 417 

ಸಂಪರ್ಕ: sunandakadame@yahoo.co.in

 

gandhi-chitradha-notu2‘ಗಾಂಧಿ ಚಿತ್ರದ ನೋಟು’ ಎಂಬ ಎರಡನೆಯ ಸಂಕಲನದ ಮೂಲಕ ತನ್ನ ಕಥನಲೋಕದ ವಿಸ್ತಾರವನ್ನು ಓದುಗರಿಗೆ ತೆರೆದಿಡುತ್ತಿರುವ ಸುನಾಂದ ಪ್ರಕಾಶ ಕಡಮೆಯವರ ಈ ಕಥೆಗಳಲ್ಲಿ ಬಲವಾದ ಆತ್ಮವಿಶ್ವಾಸ ಮತ್ತು ಪ್ರಬುದ್ಧಗೊಂಡ ಕಥನಕೌಶಲ್ಯ ಕಾಣುತ್ತದೆ. ಈ ಆತ್ಮವಿಶ್ವಾಸಕ್ಕೂ ಓದುಗರ ಮೇಲೆ ಅವರಿಗಿರುವ ನಂಬಿಕೆ, ಭರವಸೆಗಳಿಗೂ ನಿಕಟವಾದ ಸಂಬಂಧವಿದೆ. ಇದು ಬರೀ ನಮ್ರತೆಯ ಪ್ರಶ್ನೆಯಲ್ಲ; ಓದುಗರನ್ನು ಗೌರವಿಸಲಾರದ ಬರಹಗಾರನಿಗೆ ಈ ಆತ್ಮವಿಶ್ವಾಸ ಸಾಧ್ಯವಿಲ್ಲ. ತಾನು ಎಂಥ ಸೂಕ್ಷ್ಮ ನೆಲೆಯಲ್ಲಿ ಕೆಲಸ ಮಾಡುತ್ತಿರುವೆನೋ ಅಷ್ಟೇ ಸೂಕ್ಷ್ಮಜ್ಞತೆಯಲ್ಲಿ ಪ್ರತಿಸ್ಪಂದಿಸುವ ಓದುಗನಿದ್ದಾನೆ ಎಂಬುದರ ಬಗ್ಗೆ ಭರವಸೆಯಿಟ್ಟು ಬರೆಯಬೇಕೆನ್ನುವುದು ಆಡಲಿಕ್ಕೆ ಸುಲಭದ ಮಾತು; ಕಾರ್ಯರೂಪಕ್ಕೆ ತರುವುದು ಮಾತ್ರ ಬಲು ಕಠಿಣ. ಯಾಕೆಂದರೆ ತುಸು ಹೆಚ್ಚು ಕಡಿಮೆಯಾದರೂ ಇಲ್ಲಿ ಆಯತಪ್ಪಿ ಎಲ್ಲವೂ ಕಗ್ಗಂಟಾಗಿಬಿಡುವ ಅಪಾಯವಿದೆ. ಆದ್ದರಿಂದ ಎಷ್ಟುದೂರ ಈದಾರಿಯಲ್ಲಿ ಹೋಗಬಹುದು, ಯಾವಯಾವ ಬಗೆಯಲ್ಲಿ, ಯಾವಯಾವ ಉಪಾಯಗಳಿಂದ ಓದುಗರ ಶಕ್ತಿ-ಮಿತಿಯನ್ನು ಅರಿಯಬಹುದು ಮತ್ತು ಸಂವೇದನೆಯನ್ನು ಉಜ್ಜೀವಗೊಳಿಸಬಹುದು ಅನ್ನುವುದು ಕಥೆಗಾರನಿಗೆ ಸದಾ ಕಾಡುವ ಸಂಗತಿ. ಪ್ರಸ್ತುತ ಕಥಾಸಂಗ್ರಹದಲ್ಲಿ ಸುನಂದಾ ಈ ಸವಾಲನ್ನು ಯಾವ ಗೋಜಲಿಲ್ಲದೇ ಸರಳವಾಗಿ ಎದುರಿಸಿದ್ದಾರೆ ಮತ್ತು ಈ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳನ್ನು ಮಾಡುವ ಧೈರ್ಯ ತೋರಿದ್ದಾರೆ. ಬಿಡುಗಡೆಗೆ ಕಾದಿರುವ ಅವರೊಳಗಿನ ಲೋಕವು ವಿಶಿಷ್ಟವಾದುದು. ಅದು ರೂಢಿಗತ ಅಭಿವ್ಯಕ್ತಿಗಳಲ್ಲಿ ಸಿಲುಕಿ ನಲುಗದೆ, ಮುಕ್ಕಾಗದೇ, ತಕ್ಕ ಮೈತೊಟ್ಟು ಬರಬೇಕೆಂದರೆ ಅದಕ್ಕೆ ಮುಗ್ಧತೆ, ಧೈರ್ಯ ಮತ್ತು ಪ್ರಯೋಗಾತ್ಮಕತೆ ಬೇಕು. ಅಂಥ ಸಫಲ ಪ್ರಯತ್ನಗಳು ಇಲ್ಲಿ ಸಾಕಷ್ಟಿವೆ…..

……ಸುನಂದಾ ಅವರ ಕತೆಗಳ ಶಕ್ತಿ ಇರುವುದು ಅವುಗಳ ನಿರೂಪಣೆಯಲ್ಲಿರುವ ನಿಸ್ಪ್ರಹತೆಯಲ್ಲಿ. ಈ ಸ್ವಭಾವದಿಂದ ಆವರಿಗೆ ಪಾತ್ರಗಳೊಡನೆಯ ತಾದಾತ್ಮ್ಯ ಸಹಜವಾಗಿ ಒದಗಿದೆ. ಹೀಗಾಗಲು ಪಾತ್ರಗಳ ಬಗ್ಗೆ ಸಹಾನುಭೂತಿ ಇರಬೇಕಾಗುತ್ತದೆ ಮತ್ತು ಅವುಗಳ ಜೊತೆ ಕಥೆಯ ಪ್ರಪಂಚದಲ್ಲಿ ಬದುಕಬೇಕಾಗುತ್ತದೆ. ಹಾಗಾದಾಗಲೇ ಆ ವಿವರಗಳು ಜೀವಂತವಾಗುತ್ತವೆ; ಅರ್ಥಪೂರ್ಣವಾಗುತ್ತವೆ. ಬಹುತೇಕ ಕತೆಗಳಲ್ಲಿ ಸುನಂದಾ ತಮ್ಮ ಪಾತ್ರಪ್ರಪಂಚವನ್ನು ಈ ಬಗೆಯಿಂದ ಕಂಡಿದ್ದಾರೆ. ಈ ಮೊದಲು ಮಾಡಿದ ಕಥನಪ್ರಪಂಚದ ‘ವಿಸ್ತಾರ’ದ ಪ್ರಸ್ತಾಪವೂ ಇದಕ್ಕೆ ಪರೋಕ್ಷವಾಗಿ ಸಂಬಂಧಿಸಿದ್ದೇ. ಸಾವಧಾನದಿಂದ ಪಾತ್ರಗಳ ಒಳಬದುಕನ್ನು  ನೋಡಿ, ಅವರ ಮಾತುಗಳನ್ನು ಆಲಿಸಿ ಬರೆಯುವ ಸಹನೆಯಿರುವುದರಿಂದಲೇ ಸುನಂದಾ ತಮ್ಮ ಕಥನಲೋಕದ ವಿಸ್ತಾರವನ್ನು ಅರಿಯಬಲ್ಲರು ಮತ್ತು ಅದನ್ನು ನಮಗೂ ಮನದುಂಬುವಂತೆ ಕಾಣಿಸಬಲ್ಲರು. ಈ ಸಂಕಲನದ ಸಫಲ ಕತೆಗಳ ಕಾರಣದಿಂದ, ಅವರು ಇನ್ನೂ ಬರೆಯಲಿರುವ ಲೋಕದ ಬಗ್ಗೆ ನನ್ನಂಥ ಓದುಗರ ಅಪೇಕ್ಷೆ, ಆಸೆ, ಕುತೂಹಲಗಳು ಬಹಳಪಟ್ಟು ಹೆಚ್ಚಾಗಿವೆ.

                                         

-ವಿವೇಕ ಶಾನಭಾಗ

ಪುಸ್ತಕಕ್ಕೆ ಬರೆದ ಪ್ರಸ್ತಾವನೆಯಲ್ಲಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: