Skip to content
ನವೆಂಬರ್ 14, 2008 / odubazar

ಅವನು ನನ್ನ ಪಾಲಿನ ತೇಜಸ್ವಿ, ನಾನು ಅವನ ಪಾಲಿನ ಲಂಕೇಶ..

-ಜೋಗಿ

amelay-ivnu1984 ಉಪ್ಪಿನಂಗಡಿ ಆಗಿನ್ನೂ ಅಲ್ಲಿ ರಬ್ಬರ್ ತೋಟ ಇರಲಿಲ್ಲ. ದಟ್ಟವೂ ಅಲ್ಲದ ತೆಳವೂ ಅಲ್ಲದ ಕಾಡು. ಅದರ ನಡುವೆ ಕಾಳಗತ್ತಲಲ್ಲಿ ಕುಳಿತು ಭಾವಗೀತೆಗಳನ್ನು ಗುನುಗುತ್ತಲೋ, ನಾಳೆ ಬರೆಯಬೇಕಾದ ಕತೆಗಳ ಕುರಿತು ಮಾತಾಡುತ್ತಲೋ ಹಿರಿಯ ಲೇಖಕರನ್ನು ಗೇಲಿ ಮಾಡುತ್ತಲೋ ಕೂತಿರುತ್ತಿದ್ದ ಇಬ್ಬರು ಹುಡುಗರ ಪೈಕಿ ಒಬ್ಬನ ಹೆಸರು ಕುಂಟನಿ ಗೋಪಾಲಕೃಷ್ಣ. ಇನ್ನೊಬ್ಬ ನಾನು.

ಹಾಗೆ ಕಳೆದ ರಾತ್ರಿಗಳಿಗೆ ಲೆಕ್ಕವಿಲ್ಲ. ಆ ರಾತ್ರಿಗಳಲ್ಲಿ ಆಡಿದ ಮಾತುಗಳಲ್ಲಿ ಬಂದುಹೋಗದ ಸಂಗತಿಗಳಿಲ್ಲ. ಪತ್ರಿಕೋದ್ಯಮ, ಸಾಹಿತ್ಯ, ಕಾವ್ಯ, ಅಧ್ಯಾಪನ, ಪುರಾಣ ಎಲ್ಲವೂ ಆಸಕ್ತಿಯ ಸಂಗತಿಗಳೇ. ತೀರಾ ಉತ್ಸಾಹ ಬಂದರೆ ಇಬ್ಬರೂ ಎದ್ದು ಯಾವುದೋ ಕಮ್ಮಟಕ್ಕೋ ಸೆಮಿನಾರಿಗೋ ಇನ್ಯಾವುದೋ ಊರಿಗೋ ಹೊರಟು ನಿಂತೆವೆಂದರೆ ಅಲ್ಲಿನ ಗಮ್ಮತ್ತೇ ಬೇರೆ. ಅಲ್ಲಿ ನಾನು ಇಂಗ್ಲೀಷ್ ಪತ್ರಿಕೆಯ ವರದಿಗಾರ. ಅವನು ಸಂಶೋಧನ ವಿದ್ಯಾರ್ಥಿ. ನಾನು ಜಾನಪದ ಅಧ್ಯಯನಕಾರ, ಅವನು ಖ್ಯಾತ ಛಾಯಗ್ರಾಹಕ. ನಾನು ಕವಿ, ಅವನು ವಿಮರ್ಶಕ. ಹೀಗೆ ಹೆಸರು, ಊರು ಎಲ್ಲ ಬದಲಾಯಿಸಿಕೊಂಡು ಸುಳ್ಳು ಸುಳ್ಳೇ ಹೇಳಿಕೊಂಡು ಆಗಷ್ಟೇ ಬಿಡುಗಡೆಯಾದ ಹೊಸ ಪುಸ್ತಕಗಳ ಬಗ್ಗೆ ಮಾತಾಡುತ್ತಾ, ಹಿರಿಯ ಲೇಖಕರನ್ನು ನಮ್ಮದೇ ಶೈಲಿಯಲ್ಲಿ ಗೇಲಿ ಮಾಡುತ್ತಾ, ಎಲ್ಲಾ ವಾದಗಳನ್ನೂ ಖಂಡಿಸುತ್ತಾ ಧೀರರಂತೆ ಶೂರರಂತೆ ಕಾಣಿಸಿಕೊಳ್ಳುತ್ತಾ ಓಡಾಡಿದ್ದು ಬರೀ ನೆನಪಲ್ಲ.

ಆಗೆಲ್ಲ ಇಬ್ಬರಿಗೂ ಕತೆ ಬರೆಯುವ ಹುಚ್ಚು. ಭಾಷಣದ ಹುಚ್ಚು. ನಾನು ಉಗ್ಗುತ್ತಾ ಉಗ್ಗುತ್ತಾ ಭಾಷಣ ಮಾಡಿದ ಸಂಜೆ ಅವನು ‘ಚಾಚಿಕೊಂಡಿದೆ ಬದುಕು ರಸ್ತೆಯಂತೆ’ ಎಂಬ ಸೊಗಸಾದ ಕವಿತೆ ಬರೆದು ನಖಶಿಖಾಂತ ಉರಿಯುವಂತೆ ಮಾಡುತ್ತಿದ್ದ, ನಾನು ಅವನ ಕೆಮೆರಾ ಕೆಡಿಸಿ ಅವನನ್ನು ರೇಗಿಸುತ್ತಿದ್ದೆ. ಮೂರು ದಿನ ಮೌನ, ಮೂರನೆಯ ಸಂಜೆ ಮತ್ತೆ ಒಡನಾಟ ನಮ್ಮೂರಿನ ಇತರ ಗೆಳೆಯರ ಪಾಲಿಗೆ ನಮ್ಮಿಬ್ಬರ ಸ್ನೇಹ ಬಿಡಿಸಲಾರದ ಒಗಟು. ಅವನು ಕಾಯಿಲೆ ಬಿದ್ದ ಒಂದು ರಾತ್ರಿ ನಾನು ಅತ್ತು ಕೂಗಾಡಿ ರಾತ್ರೋರಾತ್ರಿ ಅವನ ಮನೆಗೆ ಹೋದದ್ದು ನೆನಪು. ಬೆಂಗಳೂರಿಗೆ ಬಂದು ನವ್ಯಕವಿಗಳ ದುಶ್ಚಟಗಳನ್ನೆಲ್ಲ ಕಲೆದು ಎಲ್ಲವನ್ನೂ ವ್ಯಂಗ್ಯ ಮತ್ತು ಉಡಾಫೆಯಿಂದ ನೋಡುತ್ತಾ ನಮ್ಮ ನಮ್ಮ ಪಾಡಿಗೆ ಬರೆಯುತ್ತಿದ್ದ ದಿನಗಳಲ್ಲಿ ಅವನು ನನ್ನ ಪಾಲಿನ ತೇಜಸ್ವಿ. ನಾನು ಅವನ ಪಾಲಿನ ಲಂಕೇಶ.

ಇದೆಲ್ಲ ಆಗಿ ಕಾಲು ಶತಮಾನ ಕಳೆದಿದೆ. ನನ್ನ ಮೀಸೆ ಬೆಳ್ಳಗಾಗಿದೆ. ಅವನ ಹಣೆ ಅಗಲವಾಗುತ್ತಿದೆ. ನಾವಿಬ್ಬರು ಸೇರುವುದು ಕಡಿಮೆಯಾಗಿದೆ. ಒಬ್ಬರು ಬರೆದದ್ದನ್ನು ಇನ್ನೊಬ್ಬರು ಓದುತ್ತೇವೆ ಅನ್ನುವುದೂ ಖಾತ್ರಿಯಿಲ್ಲ. ಓದದಿದ್ದರೂ ಅವನೇನು ಬರೆಯುತ್ತಾನೆ ಅನ್ನುವುದು ಗೊತ್ತಾಗುತ್ತದೆ. ಅವನಿಗೂ ಅಷ್ಟೇ.

ಕುಂಟನಿ ಬೆಂಗಳೂರಿಗೆ ಬಂದಿದ್ದರೆ ಏನೇನಾಗುತ್ತಿದ್ದ ಎಂದು ಹೇಳುವುದು ಕಷ್ಟ. ಅವನ ಪ್ರತಿಭೆ, ಶ್ರದ್ಧೆ ಮತ್ತು ಜೀವನೋತ್ಸಾಹ ಹಾಗೇ ಉಳಿದುಕೊಂಡಿದೆ. ರಾಜಧಾನಿಯಲ್ಲಿ ಅದಕ್ಕೊಂದು ಸ್ಪಷ್ಟ ರೂಪ ಸಿಗುತ್ತಿತ್ತು ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅವನು ನಮ್ಮೂರಲ್ಲೇ ಉಳಿದುಕೊಂಡ. ಚೆಂದದ ಮನೆ ಕಟ್ಟಿ, ಕಾರು ಕೊಂಡು, ಕತೆಗಳನ್ನು ಓದುತ್ತಾ ಬರೆಯುತ್ತಾ ಇದ್ದುಬಿಟ್ಟ. ಇಬ್ಬರೂ ಬಿಡುವಾಗಿದ್ದ ಮುಸ್ಸಂಜೆಯೋ ಮುಂಜಾನೆಯೋ ಮಾತಿಗೆ ಬಿದ್ದರೆ ಕಾಲ ಮತ್ತೆ ಕಾಲು ಶತಮಾನ ಹಿಂದಕ್ಕೆ ಓಡುತ್ತದೆ. ಮತ್ತೆ ಇಬ್ಬರೂ ಜಿದ್ದಿಗೆ ಬಿದ್ದು ಕತೆ ಬರೆಯುತ್ತೇವೆ.

ತಿಂಗಳ ಹಿಂದೆ ಕುಂಟನಿಯ ಕವಿತೆ ಓದಿ ಬೆರಗಾದೆ. ನಾಲ್ಕೇ ಸಾಲುಗಳ ಪುಟ್ಟ ಕವಿತೆಯ ಮೂಲಕ ಕುಂಟನಿ ತನ್ನ ಪ್ರತಿಭಾವಲಯವನ್ನು ವಿಸ್ತರಿಸಿಕೊಂಡಿದ್ದಾನೆ. ಈ ನಾಲ್ಕು ನಾಲ್ಕು ಸಾಲುಗಳನ್ನು ಓದಿ.

ಒಂದು ತೆರೆಯನ್ನೂ ಹಿಡಿದಿಡಲಾಗದ

ಮಾನವ ಸಮುದ್ರದೆದುರಸೋಲೊಪ್ಪಿಕೊಂಡಿರುವುದನ್ನು

ನದಿಗಳು ಬಂದು ತಿಳಿಸಿದವು.


ಎಲೆಗಳಲ್ಲಿ ಅಡಗಿದ್ದ

ರಾತ್ರಿ ಇಬ್ಬನಿ

ಕತ್ತಲಿನ ಅಚ್ಚರಿಗಳನ್ನು

ಹಗಲಿಗೆ ಹೇಳದೇ

ಆರಿಹೋಯಿತು.


ಎರಡು ದೀಪಗಳನ್ನು

ಹಚ್ಚಿ

ಕತ್ತಲನ್ನು ನೋಡಿದೆ

ಎರಡು ಬೆಳಕಿರಲಿಲ್ಲ.

img_42451ಇಂಥ ಪದ್ಯಗಳಲ್ಲೇ ಕುಂಟನಿ ನನಗೆ ಅಪರಿಚಿತನಾದದ್ದು, ಅವನೊಳಗೆ ಕವಿತೆಗಳಿವೆ ಅನ್ನುವುದು ನನಗೆ ಗೊತ್ತಿರಲಿಲ್ಲ. ತುಂಬಾ ಮಾತನಾಡುವವನ ಒಳಗೆ ಕವಿತೆ ಇರುವುದಕ್ಕೆ ಸಾಧ್ಯವಿಲ್ಲ ಎನ್ನುವ ನನ್ನ ನಂಬಿಕೆಯನ್ನು ಸುಳ್ಳಾಗಿಸಿದವರು ಇಬ್ಬರು. ಕುಂಟನಿ ಮತ್ತು ಕಾಯ್ಕಿಣಿ.

ಕುಂಟನಿಯ ಕಥಾಸಂಕಲನವೊಂದನ್ನು ಬಾಕಿನ ಪ್ರಕಟಿಸಿದ್ದರು. ನನ್ನ ಸಂಕಲನ ಬರುವುದಕ್ಕೆ ಮುಂಚೆಯೇ ಅದು ಪ್ರಕಟವಾಗಿತ್ತು. ಎಲ್ಲಾ ಹೊಸಬರ ಸಂಕಲನದ ಹಾಗೆಯೇ ಅದು ಕೂಢ ವರ್ಧಮಾನಕ್ಕೆ ಸಲ್ಲಲಿಲ್ಲ. ಇದೀಗ ಕುಂಟನಿ ಎರಡನೆ ಸಂಕಲನ ಹೊರತರುತ್ತಿದ್ದಾನೆ. ಅವನ ಕತೆಗಳಲ್ಲಿ ನನಗೆ ನಿಷ್ಠುರ ಪ್ರಾಮಾಣಿಕತೆ ಮತ್ತು ಅಪರಿಮಿತ ಉತ್ಸಾಹ ಮಿಕ್ಕಿದಂತೆ ಕಾಣುತ್ತದೆ. ಮಾತನ್ನು ತನ್ನ ಕೃತಿಯಲ್ಲಿ ಮೀರಬಲ್ಲ ನನ್ನ ಗೆಳೆಯ ಅನ್ನುವ ಪ್ರೀತಿಯನ್ನು ಮುಚ್ಚಿಟ್ಟೂ ನಾನು ಈ ಮಾತುಗಳನ್ನು ಆಡಬಲ್ಲೆ. ಅದು ಕುಂಟನಿಯ ಸೃಜನಶೀಲತೆಗೆ ಒಬ್ಬ ಓದುಗನಾಗಿ ಸಲ್ಲಿಸಬೇಕಾದ ಗೌರವ ಎಂದೂ ನಾನು ಭಾವಿಸಿದ್ದೇನೆ.

ನೇತ್ರಾವತಿಯ ದಂಡೆಯಲ್ಲಿ ಅಡ್ಡಾಡುತ್ತಾ, ಚಾರ್ಮಾಡಿ, ಶಿಬಾಜೆ, ನೆಲ್ಯಾಡಿ, ಸಕಲೇಶಪುರ, ಸಾಗರ, ಆಗುಂಬೆಯ ಕಾಡುಗಳಲ್ಲಿ ಅಲೆದಾಡುತ್ತಾ, ಕತೆಗಳ ಶಿಕಾರಿ ಮಾಡುತ್ತಾ ಕಳೆದ ದಿನಗಳ ನೆನಪನ್ನು ಅವನ ಕತೆಗಳು ಮತ್ತೆ ಕಣ್ಮುಂದೆ ತಂದಿಟ್ಟಿವೆ. ಅವನು ಕತೆಯಿಂದ ಕತೆಗೆ ಬೆಳೆಯುತ್ತಾ ಹೋಗುವುದನ್ನು ನಾನು ಅಚ್ಚರಿ ಮತ್ತು ಪ್ರೀತಿಯಿಂದ ನೋಡುತ್ತಿದ್ದೇನೆ. ಕುಂಟನಿ ಮೊನ್ನೆ ಮೊನ್ನೆ ಬರೆದ ಸಣ್ಣಕತೆ ‘ಕಲೆಗಾರ ಗಂಗಣ್ಣ’ ಓದಿದಾಗ ಮತ್ತೆ ಅಸೂಯೆಯಾಯಿತು.

ಎಂದೂ ಬರೆದು ಮುಗಿಸುವ ಆತುರಕ್ಕಾಗಿಯೋ, ಬರೆದೇ ತೀರಬೇಕು ಎಂಬ ಹಠಕ್ಕಾಗಿಯೋ, ಅನುಭವವನ್ನು ಕತೆಯಾಗಿಸಲೇಬೇಕು ಎಂಬ ಜಿದ್ದಿನಿಂದಲೋ ಬರೆದವನಲ್ಲ ಕುಂಟನಿ. ಅವನ ಪಾಲಿಗೆ ಕತೆಯೆಂದರೆ ಅನಿವಾರ್ಯ ಕರ್ಮ, ಒಮ್ಮೊಮ್ಮೆ ರೇಜಿಗೆ ಹುಟ್ಟಿಸುವ ನಮ್ಮೂರಿನ ಏಕತಾನತೆ, ನಡುಬೇಸಗೆಯ ಸುಡುಬಿಸಿಲಿನ ನಿಷ್ಕ್ರಿಯ ತೀವ್ರತೆ, ಮಳೆಗಾಲದ ಬೋಗಾರು ಮುಸ್ಸಂಜೆಯ ನಿರುತ್ಸಾಹ ಇವುಗಳನ್ನೆಲ್ಲ ಮೀರುವುದಕ್ಕೆ ಅವನು ಬರೆಯುತ್ತಾನೆ ಎನ್ನುವುದು ನನ್ನ ಗುಮಾನಿ. ನಾನಾದರೂ ಅಲ್ಲಿದ್ದರೆ ಅದೇ ಕಾರಣಕ್ಕೆ ಬರೆಯುತ್ತಿದ್ದೆ.

ಕತೆಗಳನ್ನು ಯಾರು ಬೇಕಾದರೂ ಬರೆಯಬಹುದು. ಆದರೆ ಭೇಟಿಯಾದಾಗ ಜನ್ಮಾಂತರದ ಗೆಳೆತನವೇನೋ ಎಂದೆನಿಸುವಂತೆ ತಬ್ಬಿಕೊಳ್ಳುವ ಆಪ್ತತೆ, ದೂರದಲ್ಲಿದ್ದಾಗಲೂ ಜೊತೆಗಿದ್ದಾನೆ ಅನ್ನಿಸುವಂಥ ಪ್ರೀತಿಯನ್ನು ಹಾಗೆ ಉಳಿಸಿಕೊಳ್ಳುವುದು ಕಷ್ಟ. ನಮ್ಮಿಬ್ಬರ ಮಧ್ಯೆ ಅಂಥದ್ದೊಂದು ಸ್ನೇಹ ಸಾಧ್ಯವಾಗಿದೆ. ನಮ್ಮಿಬ್ಬರ ಬರವಣಿಗೆಯನ್ನೂ ಮೀರಿದ ಗೆಳೆತನ ಅದು. ಈ ಸ್ನೇಹದಿಂದಲೇ ಹುಟ್ಟಿದ್ದ ಕತೆಗಳು ಇವು. ನನ್ನ ಬರಹಗಳೂ ಹಾಗೆಯೇ. ಹೀಗಾಗಿ ನಾನು ಬರೆದದ್ದನ್ನು ಕುಂಟನಿಯೂ ಬರೆಬಹುದಾಗಿತ್ತು. ಅವನು ಬರೆದದ್ದನ್ನು ನಾನೂ ಬರೆಯಬಹುದಾಗಿತ್ತು ಅನ್ನುವುದೇ ನಮ್ಮಿಬ್ಬರ ಬರಹಗಳ ಅನನ್ಯತೆ.

ಈ ಸಾಲುಗಳಲ್ಲಿ ವಿಪರ್ಯಾಸ ಹಣಕಿ ಹಾಕಿದೆ ಎಂದು ನಿಮಗೇನಾದರೂ ಅನ್ನಿಸಿದರೆ ನಮ್ಮಿಬ್ಬರ ಉತ್ತರವೂ ವಿನಯಪೂರ್ವಕ ಮೌನ ಮಾತ್ರ.

ಅವನು ಗಿರೀಶ ಎಂದೇ ಇವತ್ತಿಗೂ ಕರೆಯುವ

ಜೋಗಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: