Skip to content
ನವೆಂಬರ್ 14, 2008 / odubazar

ರೂಮಿಯ ನೆವದಲ್ಲಿ ದೇವರ ಹಾವು…

ಉಗಮ ಶ್ರೀನಿವಾಸ್ ಪತ್ರಕರ್ತ. ತುಮಕೂರಿನಲ್ಲಿ ಕನ್ನಡಪ್ರಭ ವರದಿಗಾರರಾಗಿರುವ ಇವರು ಸದಾ ಚಟುವಟಿಕೆಯ ಕೇಂದ್ರ. ಕವಿತೆ, ಕಥೆ, ಜೀವನ ಚರಿತ್ರೆ, ರಂಗಭೂಮಿಯಲ್ಲಿ ಹರಡಿಹೋಗಿರುವ ಉಗಮ ಸದಾ ಗೆಳೆಯರ ದಂಡಿನ ಮಧ್ಯೆ ಇರುವವರು.

ondu-bataey-churu

ಬಯಲ ಬಾಗಿಲು (ಕವನ) ಅಮೇರಿಕನ್ ಗೊಂಬೆ (ಕಥೆ) ಪೊನ್ನಮ್ಮಾಳ್ (ಆತ್ಮಚರಿತ್ರೆ) ಸಂಕಲನಗಳನ್ನು ಹೊರತಂದಿರುವ ಇವರ ಎರಡನೆಯ ಕವನ ಸಂಕಲನವನ್ನು ವಿ ಎಂ ಮಂಜುನಾಥ್ ಹಾಗೂ ರಾಮಕೃಷ್ಣ ತಮ್ಮ Tree 5 ಪ್ರಕಾಶನದಿಂದ ಹೊರತಂದಿದ್ದಾರೆ. ಉಗಮರ ಬರಹದ ರುಚಿ ಗೊತ್ತಾಗಲಿ ಎಂದು ಅವರ ಮುನ್ನುಡಿಯ ಪೂರ್ವರೂಪವೊಂದನ್ನು ಇಲ್ಲಿ ನೀಡುತ್ತಿದ್ದೇವೆ-
ಕನ್ನಡದ ಪ್ರಸಿದ್ಧ ವಿಮರ್ಶಕ ದಿ. ಡಾ. ಡಿ.ಆರ್. ನಾಗರಾಜ್ ಅವರು ಅನುವಾದಿಸಿರುವ ಪರ್ಶಿಯನ್ ಕವಿ ಜಲಾಲುದ್ದೀನ್ ರೂಮಿ ಅವರ ವಸಂತ ಸ್ಪೃತಿ ಕೃತಿ ನೆನಪಾಗುತ್ತಿದ್ದೆ. ಬಾಗ್ದಾದ್‌ನಲ್ಲಿ ಹಾವೊಂದು ಚಳಿಗೆ ಮುರುಟಿಕೊಂಡು ಮಲಗಿತ್ತು. ಆಗ ಯಾರೋ ಒಬ್ಬ ಆ ಹಾವನ್ನು ಬಿಸಿಲಿರುವ ಕಡೆ ತಂದು ಬಿಸಾಡುತ್ತಾನೆ. ಆಗ ಆ ಹಾವು ಸಿಕ್ಕಸಿಕ್ಕವರನ್ನೆಲ್ಲಾ ಕಚ್ಚುತ್ತದೆ. ಇದು ಡಿ.ಆರ್. ಅನುವಾದಿಸಿರುವ ವಸಂತ ಸ್ಪೃತಿ ಕೃತಿಯಲ್ಲಿ ಬರುವ ಒಂದು ಪ್ರಸಂಗ. ಈ ಕೃತಿ ಓದಿ ಐದಾರು ವರ್ಷಗಳೇ ಕಳೆದಿದ್ದರೂ ಈಗ ಮತ್ತೆ ನೆನಪಾಗುತ್ತಿರುವುದಕ್ಕೆ ಕಾರಣವೂ ಇದೆ. ಮೊನ್ನೆ ನನ್ನ ಡೈರಿಯನ್ನು ತಿರುವಿ ಹಾಕುತ್ತಿದ್ದಾಗ ನಾನೇ ಬರೆದಿರುವ ದೇವರ ಹಾವುಕವಿತೆಯನ್ನು ಮತ್ತೆ ಓದಿಕೊಂಡಾಗ ಮತ್ತೆ ಮತ್ತೆ ರೂಮಿ ನೆನಪಾದ.
ನನ್ನ ಬಾಲ್ಯ ಕಾಲದ ಸಾಕ್ಷಿ ಪ್ರಜ್ಞೆಯಂತಿದ್ದ ತಿಪಟೂರಿನ ನಮ್ಮ ಮನೆಯ ವಠಾದಲ್ಲಿ ಏಳು ಮನೆಗಳಿತ್ತು. ಕಳೆದ ಮೂವತ್ತು ವರ್ಷಗಳಿಂದ ಈ ಏಳು ಮನೆಯವರು ಎದುರಿಸುತ್ತಿರುವುದು ಹಾವಿನ ಭೀತಿ. ತೀರಿನಲ್ಲಿ, ಮೊಟ್ಟೆಯ ಸಂದಿನಲ್ಲಿ, ಅಡುಗೆ ಕೋಣೆಯಲ್ಲಿ ಹೀಗೆ ಎಲ್ಲಂದರಲ್ಲಿ ಎಗ್ಗಿಲ್ಲದಂತೆ ಹಾವುಹರಿದಾಡುವುದು ವಠಾರದವರೆಲ್ಲರಿಗೂ ಭೀತಿಯ ವಿಷಯವೇ ಆಗಿತ್ತು. ನನ್ನ ಕಾಲೇಜು ದಿನಗಳಲ್ಲಿ ನನ್ನ ಸ್ನೇಹಿತರಿಗೆ ಹಾವುತೋರಿಸುವುದಾಗಿಯೇ ನಮ್ಮ ವಠಾರಕ್ಕೆ ಕರೆದುಕೊಂಡು ಬರುತ್ತಿದೆ. ತೋರಿಸುತ್ತಿದೆ ಕೂಡ. ಒಮ್ಮೊಮ್ಮೆ ನನ್ನ ಗೆಳೆಯರು ಎರಡೆರೆಡು ಹಾವುಗಳನ್ನು ನೋಡಿದ್ದಾರೆ. ಮುಂಗುಸಿಯನ್ನು ನೋಡಿದ್ದಾರೆ. ವಠಾದ ಮೂಲೆ ಮನೆಯ ಸುಬ್ಬಮ್ಮ ಅವರ ಕೊಟ್ಟಿಗೆ ಮನೆಯ ತೀರಿನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಕಪ್ಪು ಮೈಯ ಬಿಳಿ ಚುಕ್ಕೆಯ ಹಾವನ್ನು ದೇವರ ಹಾವುಎಂದೇ ಸಂಬೋಧಿಸುತ್ತಿದ್ದರು. ಒಟ್ಟಾರೆಯಾಗಿ ಆ ದೇವರ ಹಾವುವಠಾರದ ಇತರೆ ಹಾವುಗಳಿಗೆ ರಾಜನಂತಿತ್ತು. ಈ ದೇವರ ಹಾವು ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದರೂ ವಠಾರದವರಿಗೆಲ್ಲಾ ಭೀತಿ ಮತ್ತು ಪುಳಕವನ್ನು ಉಂಟು ಮಾಡುತ್ತಿತ್ತು. ವಠಾರದ ಹಿರಿಯ ತಲೆಗಳು ಇಲ್ಲಿ ಚಿನ್ನದ ಕೊಪ್ಪರಿಗೆ ಇದ್ದು ಈ ದೇವರ ಹಾವುನೂರಾರು ವರ್ಷಗಳಿಂದ ಕಾಯುತ್ತಿದೆ ಎಂದೇ ಭ್ರಮಿಸಿದ್ದರು. ಈ ಮಧ್ಯೆ ಸುಬ್ಬಮ್ಮ ಅವರ ಮನೆಯ ಪಕ್ಕದ ಖಾಲಿ ನಿವೇಶನದಲ್ಲಿ ಮತ್ತೊಂದು ಮನೆ ಕಟ್ಟಲು ಪಾಯ ತೋಡುತ್ತಿದ್ದಾಗ ಮಣ್ಣಿನ ಬದಲು ಅರಿಶಿಣ, ಕುಂಕುಮ ಸಿಕ್ಕಿತು ಎಂಬ ಪುಕಾರು ವಠಾರದವರಿಗಾದಿಯಾಗಿ ಇಡೀ ಊರಿಗೆ ಊರೇ ದೇವರ ಹಾವನ್ನು ನಂಬುವಂತಾಯಿತು.
ನಮ್ಮ ವಠಾರಕ್ಕೆ ಅನತಿ ದೂರದಲ್ಲೊಂದು ಸಣ್ಣ ಮೈದಾನವಿತ್ತು. ಮೈದಾನದ ಒಂದು ಬದಿ ಬಿಲ್ವಪತ್ರೆ ಮರವಿತ್ತು. ಆಗಾಗ ಅಲ್ಲಿ ಪೂಜೆ, ಹರಿಕೆ ತೀರಿಸಿಕೊಳ್ಳಲು ಜನ ಬರುತ್ತಿದ್ದರು. ಹುಡುಗರ ಆಟದ ಅಡ್ಡಾ ಕೂಡ ಈ ಮೈದಾನವಾಗಿತ್ತು. ಒಮ್ಮೆ ಬೇಸಿಗೆಯ ಮಧ್ಯಾಹ್ನ ಹುಡುಗರೆಲ್ಲಾ ಗೋಲಿ ಆಟ ಆಡುತ್ತಿದ್ದಾಗ ಬಿಲ್ವ ಪತ್ರೆ ಮರದ ಪಕ್ಕದ ಚರಂಡಿ ಮೇಲಿನ ಕಲ್ಲಿನಲ್ಲಿ ಎರಡು ಜೋಡಿ ನಾಗರ ಹೆಣೆಯಾಕಿಕೊಂಡಿತ್ತು. ನಮ್ಮ ಮನೆಗೆ ಸಮೀಪದಲ್ಲೇ ಇದ್ದ ಬಸಪ್ಪ ಎಂಬ ವ್ಯಕ್ತಿ ಆ ಜೋಡಿ ನಾಗರಹಾವನ್ನು ಅದೇ ಕಲ್ಲಿಗೆ ಬಟ್ಟೆಗೆ ಸೆಣೆದಂತೆ ಸೆಣೆದು ಸಾಯಿಸಿಬಿಟ್ಟ. ಈ ವಿಕ್ಷಿಪ್ತ ಘಟನೆಯನ್ನು ನೋಡಿದ ನಾವು ವಠಾರದ ಹುಡುಗರು ಮನೆಗೆ ಬಂದು ಈ ವಿಷಯ ಹೇಳಿದಾಗ ವಠಾರದ ಪೂರ್ವಿಕರು ನಮಗೆಲ್ಲಾ ಎಂಥದ್ದೋ ಶಾಂತಿ ಮಾಡಿಸಿ ಹಾವುಹೊಡೆಯುವುದಕ್ಕಿಂತ ಹೊಡೆದು ಸಾಯಿಸುವುದನ್ನು ನೋಡುವುದೇ ಪಾಪ ಎಂದು ಎಚ್ಚರಿಕೆ ಸಹ ನೀಡಿದರು.
ಇದಾದ ಮೇಲೆ ಹಾವಿನ ವಿಷಯದ ಬಗ್ಗೆ ಮತ್ತೊಂದು ಪ್ರಸಂಗ ನಡೆಯಿತು. ನಮ್ಮ ಮನೆಯ ಹಿತ್ತಿಲಿನಲ್ಲಿ ಮಂಡಲದ ಹಾವೊಂದು ಕಪ್ಪೆಯನ್ನು ನುಂಗಿ ಉಬ್ಬಸಪಡುತ್ತಿತ್ತು. ಪಕ್ಕದ ಮನೆಯ ಮೀರಾ ಆ ಹಾವನ್ನು ನೋಡಿ ಕೂಗಿಕೊಂಡರು. ಉಬ್ಬಸಪಡುತ್ತಿದ್ದ ಹಾವನ್ನು ನೋಡಲು ವಠಾದವರೆಲ್ಲರೂ ಜಮಾಯಿಸಿದ್ದರು. ಮನೆಯ ಹಿತ್ತಿಲಿನ ಆಚೆ ಬದಿಯ ಇದ್ದಿಲು ವೆಂಕಟೇಶ್ ಹಾವನ್ನು ಹೊಡೆಯಲು ಮುಂದಾದಾಗ ವಠಾರದವರೆಲ್ಲರೂ ಹಾವನ್ನು ಹೊಡೆಯದಂತೆ ತಾಕೀತು ಮಾಡಿದರು. ಕೊನೆಗೆ ಯಾರಿಗೂ ತಿಳಿಯದಂತೆ ವಠಾರದ ಮಂಜಣ್ಣನೇ ಹೊಡೆದು ಸಾಯಿಸಿದ್ದ.
ಈ ಘಟನೆ ನಡೆದ ತರುವಾಯ ಆಕಸ್ಮಿಕವೆಂಬಂತೆ ವಠಾರದಲ್ಲೆಲ್ಲಾ ಹಾವುಗಳು ಕಾಣಿಸಿಕೊಳ್ಳತೊಡಗಿತು. ನಮ್ಮ ವಠಾರಕ್ಕೆ ಅಂಟಿಕೊಂಡಂತೆ ಇದ್ದ ಷಡಣ್ಣ ಅವರ ಮನೆಗೆ ಲಗುಬಗನೆ ಕೆರೆ ಹಾವೊಂದು ನುಗ್ಗಿತು. ಗಾಬರಿಗೊಂಡ ಆ ಮನೆಯವರು, ನಮ್ಮ ವಠಾರದವರೆಲ್ಲರೂ ಹಾವಿಗಾಗಿ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಮೊದಲೇ ಹಾವಿನ ಭೀತಿಯಿಂದ ನರಳುತ್ತಿದ್ದ ವಠಾರದ ಮಂದಿಯೆಲ್ಲಾ ಇಡೀ ಮನೆಯ ಸಾಮಾನುಗಳನ್ನೆಲ್ಲಾ ಈಚೆಗಿಟ್ಟು ಹುಡುಕಿದರೂ ಹಾವುಕಾಣಲೇ ಇಲ್ಲ. ಎಲ್ಲೋ ಹಾವು ಹೊರಟು ಹೋಗಿರಬಹುದು ಎಂದು ನಂಬಿ ತಮ್ಮ ತಮ್ಮ ಮನೆ ಹಾದಿ ಹಿಡಿದರು. ಈ ಘಟನೆ ನಡೆದು ಎರಡು ದಿನಗಳ ನಂತರ ಅದೇ ಹಾವುಮಂಚದಡಿಯಿಂದ ಹೊರ ಬಂದು ಎಲ್ಲರಿಗೂ ಕಾಣುವಂತೆ ರಸ್ತೆಗೆ ಇಳಿದು ಕಲ್ಲಿನ ಸಂದಿಯಲ್ಲಿ ನುಸುಳಿಕೊಂಡಿತು.

 

ondu-bataey-churu10001

ಹಾವುಗಳು ಹೀಗೆ ಹರಿದಾಡುತ್ತಿದ್ದಾಗ ನಿಜಕ್ಕೂ ಬೆಚ್ಚುತ್ತಿದ್ದದ್ದು ವಠಾರದ ನಾಗಮ್ಮ. ವಠಾರದಲ್ಲಿ ಹಾವುಗಳು ಹರಿದಾಡುತ್ತಿರುವ ಬಗ್ಗೆ ಸಿಕ್ಕಸಿಕ್ಕ ಜ್ಯೋತಿಷಿಗಳ ಬಳಿ ಆಕೆ ಎಡತಾಕುತ್ತಿದ್ದಳು. ಒಮ್ಮೆ ದೂರದ ಚಿಕ್ಕಮಗಳೂರಿಗೆ ಹೋಗಿ ಜ್ಯೋತಿಷಿಯನ್ನು ಕಂಡಿದ್ದಾಗ ಅವರು ಹೇಳಿದ್ದ ಕಥೆ ಈಕೆಯನ್ನು ಮತ್ತಷ್ಟು ಬೆಚ್ಚಿಸಿತ್ತು. ಈ ನಾಗಮ್ಮ ಅವರ ಮೂರು ತಲೆಮಾರಿನ ಮಹಿಳೆಯೊಬ್ಬಳಿಗೆ ಹೆರಿಗೆಯಾದಾಗ ಹಾವುಗಳು ಹುಟ್ಟಿದ್ದವಂತೆ. ಒಮ್ಮೆ ಚಳಿಗಾಲದ ಬೆಳಗ್ಗೆ ಆ ಹಾವುಸ್ನಾನಕ್ಕೆ ಉರಿಯಾಕುವ ಒಲೆಯೊಳಗೆ ನುಸುಳಿ ಕೂತಿತ್ತು. ಗಡಿಬಿಡಿಯಲ್ಲಿದ್ದ ಆಕೆ ಒಲೆಗೆ ಉರಿ ಹಾಕಿದಾಗ ಆ ಹಾವು ಸುಟ್ಟು ಕರಕಲಾಯಿತು. ಹಾಗಾಗಿ ಪುತ್ರ ಹತ್ಯೆ ಶಾಪ ನಿಮ್ಮ ಕುಟುಂಬಕ್ಕೆ ತಗುಲಿದ್ದು ಸರ್ಪ ಸಂಸ್ಕಾರ ಮಾಡಿಸಿ ನಾಗಪ್ರತಿಷ್ಠ ಮಾಡಿಸಿದರೆ ಇನ್ನು ಮುಂದೆ ನಿಮ್ಮ ಕುಟುಂಬದ ಸದಸ್ಯರಿಗೆ ಹಾವುಗಳು ಕಾಣುವುದೇ ಇಲ್ಲ ಎಂದು ಹೇಳಿದ್ದು ಆಕೆಯ ತಲೆಯೊಳಗೆ ಕೂತಿತ್ತು.
ಇದಕ್ಕೆ ಕಾರಣವಿತ್ತು. ಕೆಲ ವರ್ಷಗಳ ಕೆಳಗೆ ವಠಾರದ ಮೂಲೆ ಮನೆಗೆ ಹೋಗಿದ್ದ ಈಕೆಯ ಗಂಡನಿಗೆ ಮಂಡಲದ ಹಾವು ಕಡಿತಕ್ಕೆ ಬಲಿಯಾಗಿದ್ದ. ತನ್ನ ಗಂಡ ಹಾವಿಗೆ ಬಲಿಯಾದದ್ದು, ವಠಾರದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಹಾವುಗಳು ಇದರ ಜತೆಗೆ ದೇವರ ಹಾವಿನ ಭೀತಿ ಸೇರಿಕೊಂಡು ಆಕೆ ಮತ್ತಷ್ಟು ಖಿನ್ನಳಾಗಿದ್ದಳು.
ಒಮ್ಮೆ ಹೀಗಾಯಿತು. ವಠಾದ ಸುಬ್ಬಮ್ಮನ ಮನೆಯ ಕೊಟ್ಟಿಗೆ ಮನೆಯ ತೀರಿನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ದೇವರ ಹಾವುಅಚಾನಕ್ಕಾಗಿ ನೀರಿನ ತೊಟ್ಟಿಗೆ ಬಿತ್ತು. ವಠಾರದವರೆಲ್ಲರೂ ಆ ನೀರಿನ ತೊಟ್ಟಿಯ ಬಳಿ ಜಮಾಯಿಸಿದ್ದರು. ಒಬ್ಬರು ದೇವರ ಹಾವಿಗೆ ಹಾಲು ಎರೆದರು, ಮತ್ತೊಬ್ಬರು ತುಳಸಿಯಿಂದ ಪ್ರೆಕ್ಷಣೆ ಮಾಡಿದರು. ಮತ್ತೊಬ್ಬರು ದೇವರ ಮಂತ್ರಗಳನ್ನು ಪಠಿಸಿದರು. ಆದರೆ ಆ ದೇವರ ಹಾವು ಅಬ್ಬರಿಸುವುದನ್ನು ಮಾತ್ರ ಬಿಡಲೇ ಇಲ್ಲ. ಕೊನೆಗೆ ಏನೋ ಸರ್ಕಸ್ ಮಾಡಿ ಆ ದೇವರ ಹಾವನ್ನು ಆ ತೊಟ್ಟಿಯಿಂದ ಈಚೆ ತಂದಿದ್ದೂ ಆಯಿತು. ದೇವರ ಹಾವುತೊಟ್ಟಿಯಲ್ಲಿ ಬಿದ್ದು ಅಬ್ಬರಿಸುತ್ತಿದ್ದನ್ನು ಕಂಡ ನಾಗಮ್ಮ ಅಂದೇ ಸುಬ್ರಹ್ಮಣ್ಯಕ್ಕೆ ಹೋಗಿ ನಾಗಪ್ರತಿಷ್ಠೆ ಮಾಡಿಸಬೇಕೆಂದು ತೀರ್ಮಾನಿಸಿದಳು. ಮನೆ ಮಕ್ಕಳನ್ನು ಒಪ್ಪಿಸಿ ಸುಬ್ರಹ್ಮಣ್ಯಕ್ಕೆ ಹೋಗಿ ಸರ್ಪಸಂಸ್ಕಾರ ಮಾಡಿ ನಾಗಪ್ರತಿಷ್ಠೆ ಮಾಡಿ ಬಂದದ್ದು ಆಕೆಗೆ ಎಂಥದ್ದೋ ನೆಮ್ಮದಿಯನ್ನು ತಂದೊಡ್ಡಿತು. ಆಕಸ್ಮಿಕವೆಂಬಂತೆ ವಠಾರದಲ್ಲಿ ಹಾವುಗಳೂ ಕೂಡ ಕಾಣದಂತಾಯಿತು. ವಠಾರದ ನಾಗಮ್ಮ ನಾಗಪ್ರತಿಷ್ಠೆ ಮಾಡಿ ಬಂದ ಕೂಡಲೇ ವಠಾರದವರೆಲ್ಲರೂ ನಾಗಪ್ರತಿಷ್ಠೆ ಮಾಡಿ ಬಂದದ್ದೂ ಆಯ್ತು. ಸುಮಾರ ಒಂದು ತಿಂಗಳ ಕಾಲ ವಠಾರದಲ್ಲಿ ಹಾವು ಕಾಣಿಸಲೇ ಇಲ್ಲ. ದೇವರ ಹಾವು ಕೂಡ ನಾಪತ್ತೆಯಾಗಿದೆ ಎಂಬ ಖುಷಿಯಲ್ಲಿ ವಠಾರದ ಮಂದಿ ಇದ್ದಾಗ ಮತ್ತೆ ಹಾವಿನ ಸುದ್ದಿ ಕೇಳಿದ ವಠಾರ ಮಂದಿ ಬೆಚ್ಚಿ ಕೂತಿದ್ದರು.
ವಠಾರದವರಿಗೆಲ್ಲಾ ಪರಿಚಯಸ್ಥನೂ ಆಗಿದ್ದ ವಠಾರಕ್ಕೆ ಹತ್ತಿರದಲ್ಲೇ ಮನೆಯನ್ನು ಮಾಡಿದ್ದ ಕೇರಳ ಮೂಲದ ಧನಪಾಲ್ ಎಂಬಾತ ನಾಗರಹಾವನ್ನೇ ಸಾಕಿದ್ದ. ಮಂಚದಡಿ ಇದ್ದ ಆ ಹಾವುಹಾಸಿಗೆ ಮೇಲೂ ಬರುತ್ತಿತ್ತು. ಅಡುಗೆ ಕೋಣೆ, ಬಚ್ಚಲು, ಕೈ ತೋಟ ಹೀಗೆ ಎಗ್ಗಿಲ್ಲದೆ ಎಲ್ಲಂದರಲ್ಲಿ ಅಡ್ಡಾಡುತ್ತಿತ್ತು. ಈತ ಹಾವುಸಾಕಿರುವ ವಿಷಯ ತಿಳಿಯುತ್ತಿದ್ದಂತೆ ಕುತೂಹಲದ ಕಣ್ಣುಗಳು ಆತನ ಮನೆಯೆಡೆಗೆ ಹೋಗಿ ಹಾವನ್ನು ನೋಡಿಕೊಂಡು ಬಂದಿದ್ದರು. ಈತ ಹಾವಾಡಿಗನೋ, ಮಾಂತ್ರಿಕನೋ ಅಥವಾ ಯಕ್ಷಿಯೋ ಇರಬಹುದೆಂದು ಜನ ಭ್ರಮಿಸಿದ್ದರು. ಆತ ಹಾವನ್ನು ಹೆಗಲಿಗೆ ಹಾಕಿಕೊಳ್ಳುತ್ತಾನೆ ಎಂತೋ, ಆತ ಊಟ ಮಾಡುವಾಗ ಹಾವು ಪಕ್ಕದಲ್ಲೇ ಇರುತ್ತದೆ ಎಂಬುದು ಆತನ ಬಗ್ಗೆ ಇದ್ದ ಮತ್ತೊಂದು ಸುದ್ದಿಯಾಗಿತ್ತು. ಅಲ್ಲದೇ ಹಾವುಹರಿದಾಡುವ ವೇಳೆ ತೆಂಗಿನ ಮರದ ಮೇಲೆ ಕೂತು ಹೊಂಚು ಹಾಕುತ್ತಿದ್ದ ಹದ್ದೊಂದನ್ನು ಆತ ಒಂದೇ ಏಟಿಗೆ ಹೊಡೆದುರುಳಿಸುತ್ತಾನೆ ಎಂಬೆಲ್ಲಾ ಮಾತುಗಳು ವಠಾರದವರ ಕಿವಿ ತುಂಬುತ್ತಿತ್ತು. ಹಾವಿನ ಬಗ್ಗೆ, ದೇವರ ಹಾವಿನ ಬಗ್ಗೆ, ಸಾಕಿದ ಹಾವಿನ ಬಗ್ಗೆ, ಮುಂಗುಸಿಯ ಬಗ್ಗೆ, ಕಡೆಗೆ ಹದ್ದಿನ ಬಗ್ಗೆ ನಾವ್ಯಾಕೆ ಇಷ್ಟೊಂದು ತಲೆ ಕೆಡಿಸಿಕೊಳ್ಳಬೇಕು ಎಂದು ವಠಾರದ ಮಂದಿಗೆ ಅನಿಸುತ್ತಿತ್ತು. ಸಮಾಧಾನವೆಂದರೆ ನಮ್ಮ ಮನೆಯ ವಠಾರದಲ್ಲಿ ಹಾವುಗಳೇ ಕಾಣುತ್ತಿಲ್ಲ ಎಂಬ ಸಮಾಧಾನದೊಂದಿಗೆ ಬದುಕು ನಡೆಸುತ್ತಿದ್ದರು. ಅದು ಇಂಥದ್ದೇ ಒಂದು ಮಳೆಗಾಲದ ಸಂಜೆ. ವಠಾರದ ಸುಬ್ಬ ಓಡೋಡಿ ಬಂದು ಹಾವು..ಹಾವು..ಎಂದು ಕಿರುಚಾಡುತ್ತಿದ. ಮನೆ ಮಂದಿ, ವಠಾರದ ಮಂದಿಯೆಲ್ಲಾ ಹಾವು ಇದ್ದ ಕಡೆ ದೌಡೋಡಿದಾಗ ಅದೇ ಕಪ್ಪ ಮೈಯ, ಬಿಳಿ ಚುಕ್ಕೆಯ ಹಾವುಸುಬ್ಬಮ್ಮನ ಮನೆಯ ಕೊಟ್ಟಿಗೆ ಮನೆಯ ತೀರಿನಲ್ಲಿ ಸುರುಟಿಕೊಂಡಿದ್ದು ಕ್ಷಣೊತ್ತು ಎಲ್ಲರನ್ನೂ ಬಚ್ಚಿಸಿತ್ತು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: