Skip to content
ಜನವರಿ 17, 2009 / odubazar

ಬದುಕು ಪ್ರೀತಿಸುವ ‘ಹಳ್ಳ ಬಂತು ಹಳ್ಳ’

 

-ಎಂ.ಎಸ್. ಆಶಾದೇವಿ

hallapreviewಸಾಮಾನ್ಯವಾಗಿ ಮಹತ್ವದ ಲೇಖಕನೊಬ್ಬನ ಬರವಣಿಗೆಯ ಪ್ರಕ್ರಿಯೆಯಲ್ಲಿ ಓದುಗರೂ ಅವಿನಾ ಸಂಬಂಧವೊಂದನ್ನು ಕಟ್ಟಿಕೊಂಡಿರುತ್ತಾರೆ. ಕೆಲವು ಸಂದರ್ಭಗಳಲ್ಲಂತೂ ಅದೊಂದು ಸಾವಯವ ಸಂಬಂಧ ಎನಿಸುವಷ್ಟು ಕ್ರಿಯಾಶೀಲವಾಗಿರುತ್ತದೆ. ಆದರೆ ಕೆಲವು ಅಪರೂಪದ ಮಹತ್ವದ ಲೇಖಕರಿರುತ್ತಾರೆ. ಅವರು ಆ ಪ್ರಕ್ರಿಯೆಯ ಹಂಗೇ ಇಲ್ಲದವರಂತೆ ತಮ್ಮ ಮಹತ್ವದ ಕೃತಿಯೊಡನೆ ಓದುಗರೆದುರಿಗೆ ಪ್ರತ್ಯಕ್ಷರಾಗುತ್ತಾರೆ. ಕೃತಿಯೊಂದಿಗೆ ಅನುಸಂಧಾನ ನಡೆಸುತ್ತಿರುವಾಗಲೇ ಓದುಗರಿಗೆ ಇದಕ್ಕೆ ನಾವು ಬಹುದಿನದಿಂದ ಕಾಯುತ್ತಿದ್ದೆವಲ್ಲಾ, ಇದರೊಂದಿಗಿನ ಅನುಸಂಧಾನಕ್ಕೆ ಸಿದ್ಧರಾಗಿದ್ದೆವಲ್ಲಾ ಎನಿಸತೊಡಗುತ್ತದೆ.

ಮಹತ್ವದ ಕೃತಿಯೊಂದಕ್ಕೆ ಆಸಕ್ತ ಓದುಗ ಸಮುದಾಯ ನಡೆಸುವ ಅಮೂರ್ತ ಸಿದ್ಧತೆ ಈ ಬಗೆಯದು. ಸಾಹಿತ್ಯದಲ್ಲಿ ಇಂಥ ಅಪರೂಪದ ಉದಾಹರಣೆಗಳು ಹಲವಿವೆ. ಶ್ರೀನಿವಾಸ ವ್ಯೆದ್ಯರ ‘ಹಳ್ಳ ಬಂತು ಹಳ್ಳ’ ಕೃತಿ ಹೀಗೆ ಕನ್ನಡ ಓದುಗರಿಗೆ ಅಚಾನಕ್ ಎನ್ನುವಂತೆ ಒದಗಿಬಂತು. ಅವರ ಇದಕ್ಕೆ ಮುಂಚಿನ ಬರವಣಿಗೆಗಳನ್ನು ನಿರ್ಲಕ್ಷಿಸಿ ಈ ಮಾತನ್ನು ಹೇಳುತ್ತಿಲ್ಲ. ಹಾಗೆ ನೋಡಿದರೆ ಅವರ ‘ಮನಸುಖರಾಯನ ಮನಸು’ ಕೃತಿಯನ್ನು ಅನೇಕ ಕಾರಣಗಳಿಗಾಗಿ ಕನ್ನಡದ ಮುಖ್ಯ ಕೃತಿಗಳಲ್ಲಿ ಒಂದೆಂದೇ ನಾನು ತಿಳಿದಿದ್ದೇನೆ. ಲಲಿತ ಪ್ರಬಂಧ ಮತ್ತು ಸಣ್ಣ ಕಥೆಗಳ ಪ್ರಕಾರವನ್ನು ಅಭಿನ್ನವಾಗಿ ಬೆಸೆದು ನೋಡುವ ಪ್ರಯೋಗಶೀಲ ಕೃತಿ ಇದು. ಆದರೆ ‘ಹಳ್ಳ ಬಂತು ಹಳ್ಳ’ ಕೃತಿಯನ್ನು ಓದುಗರು ಅಚ್ಚರಿ ಮತ್ತು ಸಂಭ್ರಮಗಳಲ್ಲಿ ಸ್ವೀಕರಿಸಿದ ಬಗೆಯನ್ನು ಗಮನಿಸಿದಾಗ ಈ ಮಾತು ಹೇಳುವುದು ಅನಿವಾರ್ಯ.

ಶ್ರೀನಿವಾಸ ವ್ಯೆದ್ಯರ ಮುಖ್ಯ ಕಾಳಜಿಗಳೆಂದರೆ ಕಾಲದ ಸ್ಥಿತ್ಯಂತರಗಳು ಮತ್ತು ಮನುಷ್ಯನ ನಡುವಿನ ಸಂಘರ್ಷ ಪೂರ್ಣ ಸಂಬಂಧ, ಮನುಷ್ಯ ಸ್ವಭಾವದ ನಿಗೂಢ ವಿಲಕ್ಷಣಗಳು, ಸಂಗತವೆನ್ನುವಂತೆ ಕಾಣುತ್ತಲೇ ತನ್ನೊಳಗೆ ಅಸಂಗತವಾಗಿರುವ ಬದುಕು, ಶಾಶ್ವತವೆನ್ನುವಂತೆ ಕಾಣುವ ಮೌಲ್ಯಗಳು, ನಿಧಾನವಾಗಿ ತಮ್ಮ ಸ್ವರೂಪ ಮತ್ತು ಕೇಂದ್ರವನ್ನು ಬದಲಿಸಿಕೊಳ್ಳುವ ಕ್ರಮ ಮತ್ತು ಮನುಷ್ಯ ಸಂಬಂಧಗಳ ಬಿಡಿಸಬರದ ಗೋಜಲುಗಳು. ಈ ಎಲ್ಲವನ್ನೂ ವ್ಯೆದ್ಯರು ಚಿಕಿತ್ಸಕ ದೃಷ್ಟಿಯಿಂದಲ್ಲ, ತಾತ್ವಿಕ ದೃಷ್ಟಿಕೋನದಿಂದಲೂ ಅಲ್ಲ ಬದಲಿಗೆ ಅಪ್ಪಟ ಮಾನವೀಯಾನುಕಂಪ ಎನ್ನುವ ನೆಲೆಯಲ್ಲಿ ನಿಂತು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. 

ದೈನಂದಿನ ಕ್ಷುದ್ರವೆಂದೂ ಸಹಜವೆಂದೂ ಕಾಣುವ ವ್ಯಕ್ತಿಗಳ ಬದುಕು ಮತ್ತು ನಿರ್ಣಾಯಕ ಪಲ್ಲಟಗಳ ನಡುವಿನ ಒಳ ಸಂಬಂಧದ ಎಳೆಗಳನ್ನು ‘ಹಳ್ಳ ಬಂತು ಹಳ್ಳ’ ಕೃತಿ ಸೂಕ್ಷ್ಮವಾಗಿ ಶೋಧಿಸುತ್ತದೆ. ಕಾಲದ ಚಲನೆ ಮತ್ತು ಪಲ್ಲಟಗಳಿಗೆ ವ್ಯಕ್ತಿ ಸ್ಪಂದಿಸುವುದು ಆಸೆಯಿಂದಲೋ ಅನಿವಾರ್ಯ ಒತ್ತಡದಿಂದಲೋ ಎನ್ನುವ ಪ್ರಶ್ನೆಯೊಂದು ಇವರ ಕೃತಿಗಳಲ್ಲಿ ಸತತವಾಗಿ ಅನುರಣಿಸುತ್ತದೆ, ಶೋಧಕ್ಕೊಳಗಾಗುತ್ತದೆ. ಒಂದು ಬೀಸಿನಲ್ಲಿ ಕಳೆದು ಹೋದ ಕಾಲಘಟ್ಟವೊಂದು ಎದುರಿಸಿದ ತಲ್ಲಣಗಳು ಸ್ಥೂಲವಾಗಿ ಈ ಕಾದಂಬರಿಯ ವಸ್ತು. ಆದರೆ ಕಾಲ ಬದ್ಧತೆಯನ್ನು ಮೀರಿ ‘ಸದ್ಯೋಜಾತ’ವಾಗುವ ಆವರನವೊಂದು ಈ ಕಾದಂಬರಿಯಲ್ಲಿ ಸೃಷ್ಟಿಯಾಗುತ್ತದೆ.

ಇದು ಸಾಧ್ಯವಾಗುವುದು ಪಲ್ಲಟಗಳ ಮೂಲ ನೆಲೆಗಳನ್ನು ಹಿಡಿಯುವಲ್ಲಿ ಶ್ರೀನಿವಾಸ ವ್ಯೆದ್ಯರು ಯಶಸ್ವಿಯಾಗಿರುವುದರಿಂದ. ಪಲ್ಲಟಗಳನ್ನು ಚಾರಿತ್ರಿಕ ಅನಿವಾರ್ಯತೆಯಲ್ಲಿ ಗುರುತಿಸುವ ಪ್ರಯತ್ನಕ್ಕಿಂತ ಹೆಚ್ಚಾಗಿ ಬದುಕಿನ ಅನಿವಾರ್ಯತೆಯಲ್ಲಿ ಮತ್ತು ಮನುಷ್ಯ ಸ್ವಭಾವದ ನಿಜದಲ್ಲಿ ಲೇಖಕರು ಇಡುತ್ತಾರೆ. ‘ಹಳ್ಳ ಬಂತು ಹಳ್ಳ’ ಮಹತ್ವದ ಕೃತಿಯಾಗಿರುವುದು ಈ ಕಾರಣಕ್ಕಾಗಿಯೇ. ವಾಸುದೇವಾಚಾರ್ಯರು ಮಕ್ಕಳನ್ನ ಧಾರವಾಡದಲ್ಲಿ ಓದಿಸಲು ಕಳುಹಿಸುವ ಪ್ರಸಂಗ ಇದಕ್ಕೆ ಅತ್ಯುತ್ತಮ ಉದಾಹರಣೆ. ಅವರು ಮಕ್ಕಳನ್ನು ವಿದ್ಯಾಭ್ಯಾಸದ ಮೇಲಿನ ಆಕರ್ಷಣೆಯಿಂದಲೋ ಕಳುಹಿಸುವುದಲ್ಲ. ಆರ್ಥಿಕ ಅಸಹಾಯಕತೆ ಮತ್ತು ಜೀವನೋಪಾಯದ ಹುಡುಕಾಟದಲ್ಲಿ ಅವರಿಗೆ ಆಧುನಿಕ ವಿದ್ಯಾಭ್ಯಾಸ ಉಪಯುಕ್ತ, ಏಕೈಕ ಪರಿಹಾರವಾಗಿ ಕಾಣಿಸುತ್ತದೆ. ಇಷ್ಟಾಗಿಯೂ ಆ ಮಕ್ಕಳು ಧಾರವಾಡಕ್ಕೆ ಹೊರಡುವುದು ಆ ಇಡೀ ಊರನ್ನು ಕಾಡುವ ಪ್ರಸಂಗವೂ ಆಗಿದೆ. ಇಂಥ ಪ್ರಸಂಗಗಳ ಸರಮಾಲೆಯೇ ಕಾದಂಬರಿಯಲ್ಲಿದೆ. ಕೂಡು ಕುಟುಂಬದ ಸೌಷ್ಟವದಂತೆಯೇ ಅದರ ಒಡಕುಗಳು, ಸ್ವಾತಂತ್ರ್ಯ ಹೋರಾಟದ ಶಕ್ತ, ದುರ್ಬಲ ಮಾದರಿಗಳು, ಎಲ್ಲಿಂದಲೋ ಬಂದು ಇನ್ನೆಲ್ಲೋ ಬೇರು ಬಿಟ್ಟು ಬದುಕಿನ ಅರ್ಥ ಹುಡುಕುವ ಮನುಷ್ಯ ಪ್ರಯತ್ನಗಳು ತಲೆಮಾರುಗಳ ತಳಮಳಗಳು ಈ ಎಲ್ಲವನ್ನೂ ಶ್ರೀನಿವಾಸ ವ್ಯೆದ್ಯರು ಸಂಕ್ರಮಣ ಘಟ್ಟ ಎನ್ನುವ ‘ವಿಶಿಷ್ಟ ನೆಲೆ’ಯಲ್ಲಿ ಇಡದೆ ಬದುಕಿನ ‘ಗತಿ’ಯ ‘ಸಹಜನೆಲೆ’ಯಲ್ಲಿ ಇಟ್ಟು ಶೋಧಿಸುತ್ತಾರೆ. ಕಾಲ-ಸಂಧರ್ಭಗಳು ಬೇರೆಯಾಗಬಹುದು. ಆದರೆ ಮನುಷ್ಯನ ‘ಅವಸ್ಥೆ’ಮತ್ತು ಸಮುದಾಯಗಳು ಎದುರಿಸುವ ಬಿಕ್ಕಟ್ಟಿನ ಮೂಲ ವಿನ್ಯಾಸ ಇದೇ ಅಲ್ಲವೇ ಎನ್ನುವ ಪ್ರಬಂಧ ಧ್ವನಿ ಕಾದಂಬರಿಯ ಮುಖ್ಯ ಸಾಧನೆಗಳಲ್ಲಿ ಒಂದು.

ಶ್ರೀನಿವಾಸ ವ್ಯೆದ್ಯರ ಬರವಣಿಗೆಯ ಇನ್ನೊಂದು ಮುಖ್ಯ ನೆಲೆಯೆಂದರೆ ಅದು ಮಹತ್ವಾಕಾಂಕ್ಷೆ ಮತ್ತು ಹಠಮಾರಿತನವನ್ನು ಬಿಟ್ಟುಕೊಟ್ಟದ್ದು. ಈ ಕಾದಂಬರಿಯೂ ಸೇರಿದಂತೆ ಇತರ ಕೃತಿಗಳಲ್ಲಿಯೂ ಈ ಅಂಶ ಎದ್ದು ಕಾಣುತ್ತದೆ. ತಾರ್ಕಿಕತೆಯ ಭಾರವಿಲ್ಲದ ಆದರೆ ಬದುಕಿನ ಬದ್ಧತೆಯನ್ನು ಆಸ್ಥೆಯನ್ನು ಕ್ಷಣಕ್ಕೂ ಕಳೆದುಕೊಳ್ಳದ ಜೀವಪರ ನಿಲುವೊಂದು ಇವರ ಬರವಣಿಗೆಯ ಸ್ಥಾಯಿ ಭಾವವಾಗಿದೆ. ‘ಮನಸುಖರಾಯನ ಮನಸು’ ಸಂಕಲನದ ಶ್ರದ್ಧಾ, ತ್ರಯಸ್ಥ, ಗಾಯಕವಾಡ ದಾದಾ ಮೊದಲಾದ ಕಥಾ ಲೇಖನಗಳಲ್ಲಿನ(?) ಮನುಷ್ಯ ಸಂಕಟದ ಬದುಕನ್ನೇ ಛಿದ್ರಗೊಳಿಸುವ ದಾರುಣ ಸತ್ಯಗಳನ್ನು ಕಹಿಯಿಲ್ಲದೆ, ವ್ಯಗ್ರತೆಯಿಲ್ಲದೆ ನೋಡುವುದು ಸಾಧ್ಯವಾಗಿರುವುದು ಇದೇ ಕಾರಣದಿಂದ. ವಾಸ್ತವನ್ನು ಅದರ ಕರಾಳ ಮುಖಗಳಲ್ಲಿ ಎದುರಿಸುತ್ತಲೇ ಬದುಕಿನ ಬಗೆಗಿನ ಪ್ರೀತಿಯನ್ನು ಹೆಚ್ಚಿಸುವುದೇ ಶ್ರೀನಿವಾಸ ವ್ಯೆದ್ಯರ ಬರವಣಿಗೆಯ ಶಕ್ತಿ.

 ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ಲೇಖನ

Advertisements
  1. ಸುಶ್ರುತ ದೊಡ್ಡೇರಿ / ಜನ 19 2009 10:24 ಫೂರ್ವಾಹ್ನ

    ನಾನು ಇತ್ತೀಚೆಗೆ ಓದಿದ, ತುಂಬ ಇಷ್ಟ ಪಟ್ಟ ಕಾದಂಬರಿ ಇದು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: