Skip to content
ಫೆಬ್ರವರಿ 3, 2009 / odubazar

ನಾನು ಅವನಲ್ಲ… ಅವಳು..

-ವಿದ್ಯಾರಶ್ಮಿ ಪೆಲತಡ್ಕ

 

ನಡುವೆ ಸುಳಿವಾತ್ಮದ ನೋವು ನಲಿವು

ನಾನು ಅವನಲ್ಲ… ಅವಳು..!

ಲೇ: ಲಿವಿಂಗ್ ಸ್ಮೈಲ್ ವಿದ್ಯಾ

ಅನು: ತಮಿಳ್ ಸೆಲ್ವಿ

ಪುಟ: ೨೨೪; ಬೆಲೆ :೧೫೦ ರೂ

ಪ್ರ: ಪ್ರಗತಿ ಗ್ರಾಫಿಕ್ಸ್, ಬೆಂಗಳೂರು -೪೦.

ದೂ:೦೮೦-೨೩೪೦೯೫೧೨

 

book-60-1‘ಮೊಲೆ ಮೂಡಿ ಬಂದರೆ ಹೆಣ್ಣೆಂಬರು

ಗಡ್ಡ ಮೀಸೆ ಬಂದರೆ ಗಂಡೆಂಬರು

ನಡುವೆ ಸುಳಿವಾತ್ಮನು

ಗಂಡೂ ಅಲ್ಲ ಹೆಣ್ಣೂ ಅಲ್ಲ

ಕಾಣಾ ರಾಮನಾಥಾ –

ಎಂದು ಜೇಡರ ದಾಸಿಮಯ್ಯನೆಂಬ ಶರಣ ಹನ್ನೆರಡನೇ ಶತಮಾನದಲ್ಲಿ ವಚನ ಬರೆದಿದ್ದ. ನಾನು ಹೆಣ್ಣು ಅಥವಾ ನಾನು ಗಂಡು ಎಂದು ಗುರುತಿಸುವ ಎಲ್ಲರೊಳಗೂ ಇರುವ ಆತ್ಮಕ್ಕೆ ಲಿಂಗವಿಲ್ಲ ಎಂಬದು ಅವನ ವಚನದ ಅರ್ಥ. ಹೀಗೆ ಲಿಂಗವಿಲ್ಲದ ಆತ್ಮವನ್ನು ಹೊತ್ತು ಓಡಾಡುವ ನಾವು ಅದೇ ಬಗೆಯ ಆತ್ಮವುಳ್ಳ, ನಿರ್ದಿಷ್ಟ ಲಿಂಗದವರೆಂದು ಗುರುತಿಸಲಾರದವರನ್ನು ಏಕೆ ಕಡೆಗಣಿಸುತ್ತಿದ್ದೇವೆ. ಅವರನ್ನೂ ನಮ್ಮ ಸಹಜೀವಿಗಳೆಂದು ಪರಿಗಣಿಸುವುದಕ್ಕೆ ಇರುವ ತೊಡಕಾದರೂ ಏನು? \

 

ಆತ್ಮಕ್ಕೆ ಲಿಂಗವಿಲ್ಲ ನಿಜ. ಆದರೆ ಲೌಕಿಕದ ಬದುಕಿನಲ್ಲಿ ಈ ದೇಹ ಹೊತ್ತು ಓಡಾಡುವಾಗ ಅದಕ್ಕೊಂದು ‘ಲಿಂಗ’ ಬೇಕು. ಆತ್ಮದಂತೆಯೇ ಲಿಂಗದ ಗುರುತಿಲ್ಲದೆ ಬದುಕುವ ಸ್ಥಿತಿ ಇನ್ನೂ ಈ ಸಮಾಜದಲ್ಲಿ ಸೃಷ್ಟಿಯಾಗಿಲ್ಲ. ಇಂಥಾ ಸನ್ನಿವೇಶದಲ್ಲಿ ನಿರ್ದಿಷ್ಟ ಲಿಂಗವಿಲ್ಲದೇ ಹುಟ್ಟಿಕೊಳ್ಳುವ ಪ್ರತಿಯೊಬ್ಬರಿಗೂ ಒದಗಿಬರುವ ಉಭಯಸಂಕಟ ಊಹೆಗೂ ಮೀರಿದ್ದು. ಈ ರೀತಿ ಹುಟ್ಟಿಕೊಳ್ಳುವವರು ಎಂತಹ ಶ್ರೀಮಂತರಾಗಿ ಜನಿಸಿದರೂ, ಶ್ರೇಷ್ಠ ಜ್ಞಾನಿಯಾದರೂ ಅವರಿಗೆ ಸಿಗುವ ಸ್ಥಾನಮಾನ ಕೆಳಮಟ್ಟದ್ದೇ. ಅನುಭವಿಸುವ ಶೋಷಣೆಯೂ ಅಸಹನೀಯವೇ. ಇವೆಲ್ಲವೂ ಸಮಗ್ರವಾಗಿ ನಿರೂಪಿತಗೊಂಡಿರುವುದು ಲಿವಿಂಗ್ ಸ್ಮೈಲ್ ವಿದ್ಯಾ ಅವರ ‘ನಾನು ಅವನಲ್ಲ… ಅವಳು…!’ ಕೃತಿಯಲ್ಲಿ.

‘ಅವನ’ ದೇಹದೊಳಗೆ ‘ಅವಳ’ ಮನಸ್ಸನ್ನು ಹೊತ್ತು ಪೂರ್ತಿ ಅವಳಾಗಿಬಿಡುವತ್ತ ಹೊರಟ ವಿದ್ಯಾರ ಈ ಜೀವನಕಥೆ ಅವರದು ಮಾತ್ರವಲ್ಲ, ಅಂತಹ ಸಮಸ್ತರ ತಲ್ಲಣಗಳ ಪ್ರತೀಕ. ಅವಳಾಗಿ ಗುರುತಿಸಿಕೊಳ್ಳುವತ್ತಲಿನ ಅವರ ತುಡಿತ, ಆ ಕಡೆಗಿನ ಪ್ರಯತ್ನ, ಉಳಿದವರಂತೆಯೇ ಗೌರವಯುತ ನಾಗರಿಕ ಜೀವನ ನಡೆಸುವತ್ತ ಹಲ್ಲುಕಚ್ಚಿ ಹೋರಾಡಿದ ಆಕೆಯ ಜೀವನಗಾಥೆ ಆ ರೀತಿಯ ಹೋರಾಟದಲ್ಲಿರುವ, ದ್ವಂದ್ವ ಜೀವನದಲ್ಲಿರುವ ಉಳಿದವರಿಗೂ ಮಾದರಿ. ಅಷ್ಟೇ ಏಕೆ, ತುಳಿತಕ್ಕೊಳಗಾದ ಎಲ್ಲರಿಗೂ.

‘ಅಂದು ಕೂಡಾ ಹಾಗೆಯೇ ನನ್ನನ್ನೇ ಮರೆತು ಗಿರ್ರನೆ ಸುತ್ತುತ್ತಾ ಮನೆಯೊಳಗೆ ಆಟವಾಡುತ್ತಿದ್ದೆ.

ನಾನು ರಾಜ ಕುಮಾರಿ

ಮುದ್ದು ರೋಜಾ ಕುಮಾರಿ

ನನ್ನಾಸೆ ಕೈಗೂಡುವುದೇ..!

ಹೊರಗೆಲ್ಲೋ ಹೋಗಿದ್ದ ನನ್ನ ಅಜ್ಜಿ ಅನಿರೀಕ್ಷಿತವಾಗಿ ಒಳಬಂದು, ‘ಅಯ್ಯೋ ಪಾಪಿ ಮುಂಡೇದೆ! ಏನೋ ಇದು ಹುಡುಗುತನ… ಇಲ್ನೋಡ್ರೆ.. ಇವರು ಆಡ್ತಿರೋ ಆಟನಾ..’ –

-ಶರವಣನ್ ಎಂಬ ಪುಟ್ಟ ಕೂಸು ತನ್ನೊಳಗಿನ ಹೆಣ್ತನದೊಂದಿಗೆ ಅನುಭವಿಸುತ್ತಿದ್ದ ಖುಷಿ ಹೊರಜಗತ್ತಿಗೆ ಮೊದಲ ಬಾರಿ ತಿಳಿದದ್ದು ಹೀಗೆ.

ಬೆಳೆಯುತ್ತಾ ಹೋದಂತೆ ಹೊರಜಗತ್ತಿಗಾಗಿ ಗಂಡಸ್ಥನದ ನಟನೆಯನ್ನು ಮಾಡುತ್ತಲೇ ಕೂರಲಿಲ್ಲ ಶರವಣನ್. ತನ್ನೊಳಗಿನ ಭಾವಕ್ಕೆ ಇಂಬು ಕೊಟ್ಟರು. ‘ವಿದ್ಯಾ’ ಎಂದು ಹೆಸರು ಬದಲಾಯಿಸಿಕೊಂಡರು. ಬಿಎಸ್ಸಿ, ಎಂಎ ಮಾಡುತ್ತ ಮಾಡುತ್ತ ತಾನು ಗಂಡುರೂಪದ ಹೆಣ್ಣಿನ ಸೋಗಿನಲ್ಲಿ ಇರಲಾರೆ ಎಂಬ ಸತ್ಯ ಮನಗಂಡರು.

ನಿಧಾನವಾಗಿ ಆಪ್ತರಿಗೆಲ್ಲ ತನ್ನ ದಾರಿ ತಿಳಿಸಿದರು. ಈ ತನಬ ಸಹಜ ಜೀವನ ಸಾಗಿಸುವ ಗುರಿ ನೆರವೇರಲು ಎಲ್ಲಿಂದ ಎಲ್ಲಿಗೋ ಸಾಗಿದರು. ಸ್ನಾತಕೋತ್ತರ ಪದವಿ ಓದಿದ್ದರೂ ಭಿಕ್ಷೆ ಬೇಡುವ (ಅಂಗಡಿ ಕೇಳುವುದು) ಕೆಲಸವನ್ನೂ ಮಾಡಿದರು. ‘ಯಾಕೆ ನಿಮಗೇನು ಕೈ ಕಾಲಿಲ್ವಾ? ಹೀಗೆ ಭಿಕ್ಷೆ ಬೇಡಿ ಬದುಕೋದಕ್ಕಿಂತ ನೇಣು ಹಾಕ್ಕೊಂಡು ತೂಗಬಹುದಲ್ಲ? ಎಂಬಂತಹ ಮಾತುಗಳನ್ನೂ ಕೇಳಬೇಕಾಯಿತು. ಗೌರವಯುತ ಜೀವಕ್ಕಾಗಿ ಹಾತೊರೆದರು, ಪ್ರಾಮಾಣಿಕ ಪ್ರಯತ್ನವನ್ನೂ ನಡೆಸಿದರು.

ಇಂದು ಆಕೆ ಸಿನಿಮಾ ನಿರ್ದೇಶಕಿ. ನಾಗರಿಕ ಜಗತ್ತಿನಲ್ಲಿ ಯಾವ ಹಿಂಜರಿಕೆಯೂ ಇಲ್ಲದೆ ಓಡಾಡುವ, ಇತರರಿಂದ ಸಹಜ-ಸಮಾನ ಗೌರವ ಪಡೆಯುವ ವ್ಯಕ್ತಿ. ಇದು ಆಕೆಯ ಹೋರಾಟದ ಫಲ. ಈ ಸ್ಥಿತಿ ತಲುಪಲು ಕೆ ಕ್ರಮಿಸಿದ ಕಡಿದಾದ ಹಾದಿಯನ್ನು ಅರಿಯಬಕಾದರೆ ‘ನಾನು ಅವನಲ್ಲ..’ ಕೃತಿಯನ್ನು ಓದಬೇಕು.

vidyaಮುಚ್ಚುಮರೆಯಿಲ್ಲದೆ ಬದುಕಿನ ನಡೆಗಳೆಲ್ಲವನ್ನೂ ತೆರೆದಿಟ್ಟ ವಿದ್ಯಾರ ಕಥನದ ರೀತಿ, ನಿರೂಪಣೆಯ ಸರಳ ಶೈಲಿ ಓದುಗರ ಮನತಟ್ಟಿತ್ತು ಎಂಬದಕ್ಕೆ ಇದು ‘ಕನ್ನಡಪ್ರಭ’ದಲ್ಲಿ ದೈನಿಕ ಧಾರಾವಾಹಿಯಾಗಿ ಪ್ರಕಟವಾದಾಗ ಬಂದ ಓದುಗರ ಸ್ಪಂದನೆಯೇ ಸಾಕ್ಷಿ. ಹಿಜಡಾಗಳ ಲಿಂಗ ಪರಿವರ್ತನೆಯ ಪ್ರಕ್ರಿಯೆ, ಅವರೆದುರಿಸುವ ಆರೋಗ್ಯ ಸಂಬಂಧಿ ಅಪಾಯಗಳು, ಆದಾಯದ ಮೂಲ, ಅವರ ಕುಟುಂಬ ಕಲ್ಪನೆ, ಸಂಬಂಧಗಳು… ಹೀಗೆ ಇಲ್ಲಿ ಬರುವ ವಿವರಗಳೆಲ್ಲವೂ ಹೊಸದು. ಅನೇಕರಿಗೆ ಈ ಕೃತಿ ಜೀವಜಗತ್ತಿನ ಹೊಸದೊಂದು ಲೋಕದತ್ತ ಕಣ್ಣು ತೆರೆಸಿತು.

ಈ ಧಾರಾವಾಹಿಯನ್ನು ಓದಿದವರು ಖಂಡಿತಾ ಮುಂದೆಂದೂ ಹಿಜಡಾಗಳನ್ನು ಗೇಲಿ ಮಾಡಲಾರರು, ಕನಿಕರದಿಂದಲೂ ನೋಡಲಾರರು. ಅವರ ದೃಷ್ಟಿಯಲ್ಲಿ ಹಿಜಡಾಗಳಿಗೂ ಮನುಷ್ಯಲೋಕದ ಸಮಾನ ಸಮ್ಮಾನ ಸಿಗುವುದು ಖಚಿತ.

ಶರವಣನ್ ತನ್ನ ಹೆಸರನ್ನು ‘ಲಿವಿಂಗ್ ಸ್ಮೈಲ್ ವಿದ್ಯಾ’ ಎಂದು ಪರಿವರ್ತಿಸಿಕೊಳ್ಳಲು ಪಡುವ ಪಾಡು ಒಂದೇ ಸಾಕು ಹಿಜಡಾಗಳತ್ತ ಆಡಳಿತ ವ್ಯವಸ್ಥೆಯೂ ಎಷ್ಟು ನಿರ್ಲಕ್ಷ ತೋರಿದೆ ಎಂಬುದಕ್ಕೆ. ಸರ್ಕಾರವೂ ಇವರತ್ತ ಗಮನಹರಿಸಿ ಇವರಿಗೂ ಗೌರವಯುತ ಜೀವನ ಸಿಗುವಂತೆ ಪ್ರಯತ್ನಿಸಬೇಕಿದೆ.

ಕೃತಿಯನ್ನು ಅನುವಾದಿಸಿರುವ ಸಂಶೋಧಕಿ, ವಿಮರ್ಶಕಿ ಡಾ ತಮಿಳ್ ಸೆಲ್ವಿ ಬಹಳ ಆಸ್ಥೆಯಿಂದ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ. ಹಿಜಡಾಗಳ ಲೋಕದ ಹಲವು ಪಾರಿಭಾಷಿಕ ಶಬ್ದಗಳನ್ನು ಕನ್ನಡೀಕರಿಸುವಾಗ ಬಹಳ ಜವಾಬ್ದಾರಿಯಿಂದ ಯೋಚಿಸಿ, ಸಮಾಲೋಚಿಸಿದ್ದಾರೆ ಅವರು. ಈ ಮೂಲಕ ಆಪ್ತವಾದ ಓದೊಂದು ಲಭ್ಯವಾಗಿದೆ.

‘ತನ್ನ ಗೂಡನ್ನು ಬಿಟ್ಟು ಹಾರಿ ಬಹುದೂರ ಹೋಗಿ ಎಲ್ಲಿಯೂ ನೆಲೆಗಾಣದೆ, ಭೂಮಿ ಗುಂಡಾಗಿದೆ ಎಂಬ ಮಾತಿಗೆ ಸಂವಾದಿಯಾಗಿ ಅದೇ ಮಾನವ ವಿಷವ್ಯೂಹದಲ್ಲಿ ಒಂಟಿಯೆನಿಸಿದರೂ ಬದುಕಿ, ಸಾಧಿಸಿ ತೋರುವೆನೆಂಬ ಛಲ ನಿಜಕ್ಕೂ ಮೆಚ್ಚಬೇಕು . ಹುಟ್ಟಿದಂದಿನಿಂದ ಇದುವರೆಗೆ ನಡೆದು ಬಂದ ದಾರಿ, ಕಂಡ ಕನಸುಗಳು, ಅನುಭವಿಸಿದ ಅವಮಾನಗಳು ಎಲ್ಲವನ್ನೂ ನಿರ್ಲಿಪ್ತತೆಯಿಂದ ನಿವೇದಿಸಿಕೊಳ್ಳುವ ವಿದ್ಯಾಳ ಬದುಕಿನ ಪುಟಗಳಿಗೆ ಅಕ್ಕರೆಯೆಂಬ ಬಂಡಿ ಬೇಕಾಗಿದೆ’ ಎಂದಿದ್ದಾರೆ ಮುನ್ನುಡಿ ಬರೆದ ಎಂ. ಬೈರೇಗೌಡ.

ಲಿವಿಂಗ್ ಸ್ಮೈಲ್ ವಿದ್ಯಾರಿಗಿನ್ನೂ ಚಿಕ್ಕ ವಯಸ್ಸು. ಈಗಾಗಲೇ ಹೋರಾಟದ ರೇಖೆಗಳನ್ನು ಬದುಕಿನಲ್ಲಿ ಮೂಡಿಸಿಕೊಂಡವರು ಅವರು. ಅಸ್ಪೃಶ್ಯತೆ, ಶೋಷಣೆಯ ವಿರುದ್ಧದ ಹೋರಾಟಗಳಂತೆ ಇವರದೂ ಮಾನವತೆಯ ಮೂಲಭೂತ ಅಸ್ತಿತ್ವದ ಕುರಿತ ಹೋರಾಟ. ಇದಕ್ಕೆ ಆಡಳಿತ ಹಸ್ತಗಳಿಂದ ಅಧಿಕೃತ ಬೆಂಬಲ ಸಿಗಬೇಕು. ಸಮಸ್ತ ನಾಗರಿಕರ ನೆಚ್ಚು ಸಿಗಬೇಕು. ವಿದ್ಯಾರ ಹೋರಾಟ ಇಂತಹ ಅನೇಕರ ಹೃದಯದಲ್ಲಿ ಹೋರಾಟದ ಕಿಚ್ಚು ಹಚ್ಚಬೇಕು. ಅದನ್ನು ಸಾಧಿಸಲು ಈ ಕೃತಿ ನಿಮಿತ್ತವಾಗುತ್ತದೆ. ಆದ್ದರಿಂದ ಇದು ಬರಿಯ ಸಾಹಿತ್ಯ ಕೃತಿಯಾಗಿ ಉಳಿಯದೇ ಮಾನವೀಯ ಹೋರಾಟವೊಂದರ ಮೈಲಿಗಲ್ಲಾಗುವುದರಲ್ಲಿ ಸಂದೇಹವಿಲ್ಲ.

 1. minchulli / ಫೆಬ್ರ 4 2009 12:32 ಅಪರಾಹ್ನ

  i have read it vidya… even i felt the same. every nook end corner of life is touched in this. its a great reading.

  – shama, nandibetta

 2. Vasanth / ಏಪ್ರಿಲ್ 16 2009 12:55 ಫೂರ್ವಾಹ್ನ

  I have read this novel at a one go.
  Very well translated in Kannada
  Thanks to Tamil Selve for good translation work.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: