Skip to content
ಫೆಬ್ರವರಿ 13, 2009 / odubazar

ನಾನು ಹೇಳುತ್ತೇನೆ, ಹೌದು ಇದೆಲ್ಲ `ನಮ್ಮ’ ಅನುಭವ…

‘ಓದು ಬಜಾರ್’ ನ ಹೊಸ ಮಾಲಿಕೆ ಇದು. ಬರಹಗಾರರು ರೂಪುಗೊಂಡ ಮೆಟ್ಟಲುಗಳನ್ನು ಗುರುತಿಸುವ ಕೆಲಸ. ನೂರೆಂಟು ಪುಸ್ತಕ ಬರೆದಿರಬೇಕಿಲ್ಲ. ಮನಸ್ಸಿಗೆ ಖುಷಿ ಕೊಟ್ಟ ಒಂದು ಕಥೆ, ಕವಿತೆ ಬರೆದವರೂ ತಾವು ಎದ್ದು ಬಂದ ಬಗೆಯನ್ನು ಹುಡುಕಲಿ ಎಂಬುದು ನಮ್ಮ ಆಶಯ.

ಎಲ್ಲಕ್ಕಿಂತ ಮಿಗಿಲಾಗಿ ತೆರೆಯ ಹಿಂದಿರುವ, ನಾನು ಬರೆಯಬಲ್ಲೆನೆ? ಎಂದು ಮಿಡುಕುತ್ತಿರುವ ಹಲವರಿಗೆ ಇದು ಹುಮ್ಮಸ್ಸು ನೀಡಲಿ ಎಂಬ ಕಾರಣಕ್ಕೆ ಈ ಸರಮಾಲೆ. ನೀವೂ ಬರೆಯಿರಿ…

ನಿಮ್ಮ ಬರಹ mayflowermh@gmail.com ಗೆ ಮೇಲ್ ಮಾಡಿ. ಪೋಸ್ಟ್ ಮಾಡುವುದಾದರೆ ವಿಳಾಸ ‘ಮೇಫ್ಲವರ್ ಮೀಡಿಯಾ ಹೌಸ್, 1, ಮಹಡಿ, ಯುನಿಟ್  5, ಯಮುನಾಬಾಯಿ ರಸ್ತೆ, ಮಾಧವನಗರ, ಬೆಂಗಳೂರು- 560 001

 

‘ದಣಪೆಯಾಚೆ’ಯ ಹುಡುಗಿ ಅಕ್ಷತಾ ಕೆ ತಮ್ಮ ಬರವಣಿಗೆಯ ಹಿಂದಿನ ಕಥೆಯನ್ನು ಇಲ್ಲಿ ಹೇಳಿಕೊಂಡಿದ್ದಾರೆ….

-ಅಕ್ಷತಾ ಕೆ 

2418146181_b215f35b19ಮಲೆನಾಡಿನ ಹಳ್ಳಿಯ ಪರಿಸರದಲ್ಲಿ ಪ್ರಾಥಮಿಕ ಶಾಲೆಯ ಅಧ್ಯಾಪಕಿಯೊಬ್ಬರ ಮಗಳಾಗಿ ಹುಟ್ಟಿ ಬೆಳೆದ ನನಗೆ ಸಾಹಿತ್ಯದ ಬಗೆಗೆ ಆಸಕ್ತಿ ಬೆಳೆದಿದ್ದೆ ಅಮ್ಮನಿಂದ. ನಾನು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಸಂಧರ್ಭದಲ್ಲಿ ನಮ್ಮ ಮನೆಗೆ ಪ್ರಜಾವಾಣಿ, ಸುಧಾ, ತರಂಗ, ಕರ್ಮವೀರ, ಚಂದಮಾಮ ಎಲ್ಲ ಪತ್ರಿಕೆಗಳು ಬರ್ತಿದ್ದವು. ಆಗ ಲೈಬ್ರರಿ ಇತ್ಯಾದಿಗಳ ಪರಿಕಲ್ಪನೆಯೇ ಇಲ್ಲದ ನಮ್ಮ ಹಳ್ಳಿಯಲ್ಲಿ ಇಷ್ಟೊಂದು ಪತ್ರಿಕೆಗಳನ್ನು ತರಿಸುವ ಬೇರೊಂದು ಮನೆಯನ್ನು ನಾನು ನೋಡಿರಲಿಲ್ಲ. ಎಷ್ಟು ಪತ್ರಿಕೆಗಳು ಬಂದರೂ ಅಮ್ಮ ಮಕ್ಕಳ ಓದುವ ತಹತಹ ಮುಗಿಯುತ್ತಿರಲಿಲ್ಲ. ಪತ್ರಿಕೆ, ಪುಸ್ತಕ ಯಾವುದೂ ಮನೆಗೆ ಬಂದ ಕೂಡಲೇ ನಾ ಮೊದಲು ತಾ ಮೊದಲು ಎಂದು ಅದಕ್ಕಾಗಿ ಮುಗಿ ಬೀಳುತಿದ್ದೆವು. ನೀ ಒಂದು ಕಥೆ ಓದಿ ನಂಗೆ ಕೊಡು, ನಾನು ಈ ಪ್ರಬಂಧ ಓದಿ ಅವಳಿಗೆ ಕೊಡ್ತೀನಿ ಈ ರೀತಿಯ ಒಪ್ಪಂದಗಳು ಅಮ್ಮ ಮಕ್ಕಳ ನಡುವೆ ನಡೆಯುತಿದ್ದವು.

ಮೊದ ಮೊದಲು ಮಕ್ಕಳ ಕಥೆಯನ್ನಷ್ಟೆ ಓದುತ್ತಿದ್ದ ನಾನು ಮೂರನೇ ನಾಲ್ಕನೇ ಕ್ಲಾಸಿಗೆ ಬರುವಷ್ಟರಲ್ಲೆ ಕಥೆ, ಧಾರವಾಹಿ ಎಲ್ಲವನ್ನು ಓದುವ ಪರಿಪಾಠ ಬೆಳೆಸಿಕೊಂಡೆ. ಶೋಭಾ ಡೇಯ ಕಾದಂಬರಿ ತರಂಗದಲ್ಲಿ ಧಾರವಾಹಿಯಾಗಿ ಬರುತ್ತಿದ್ದ ಸಂಧರ್ಭದಲ್ಲಿ ಅದನ್ನೆಲ್ಲ ಓದಬಾರದೆಂದು ಅಮ್ಮ ತಡೆದಿದ್ದು ಇದೆ. ಆದರೆ ಓದುವುದಕ್ಕೆ ಸುಲಭವಾಗುತ್ತಿದ್ದ ಎಲ್ಲವನ್ನು ಅಮ್ಮನ ಕಣ್ತಪ್ಪಿಸಿ ಆದರೂ ಓದುತಿದ್ದೆ. ಆದರೆ ನಾನು ಕವಿತೆ, ಕಥೆ ಬರೆಯಬಹುದೆಂದು ಮಾತ್ರ ನನಗೆ ಎಂದಿಗೂ ಅನ್ನಿಸುತಿರಲಿಲ್ಲ. ಯಾಕೆಂದರೆ ನಾನು ಆಗ ಓದುತಿದ್ದದು ಹೆಚ್ಚಾಗಿ ಜನಪ್ರಿಯ ಬರವಣಿಗೆಯಾದ್ದರಿಂದ ಅಲ್ಲಿ ಚಿತ್ರಿಸಿದ ಪ್ರಪಂಚ ನನಗೆ ಬಹಳ ಅಪರಿಚಿತವಾಗಿತ್ತು.

ಅಪ್ಪ ಅಮ್ಮ ದುಡಿಯೋದು, ಬೆವರೋದು, ಪರಸ್ಪರ ಜಗಳಾಡೋದು ನಮಗೆ ಗೊತ್ತಿತ್ತು ಆದರೆ ನಾನು ಓದುತಿದ್ದ ಬರಹದಲ್ಲಿ ಬರ್ತಿದ್ದರಲ್ಲ ಆದರ್ಶ ಪ್ರೇಮಿಗಳು, ದಂಪತಿಗಳು ಆ ರೀತಿ ಒಂದು ದಿನವೂ ಪ್ರೀತಿ ಮಾಡಿದ್ದು ನಮ್ಮ ಗಮನಕ್ಕೆ ಬರ್ತಿರಲಿಲ್ಲ. ನಮ್ಮ ಅಪ್ಪ ಅಮ್ಮನದು ಅಂತರ್ ಜಾತಿ ಪ್ರೇಮದ ಮದುವೆ ಆಗಿದ್ದರೂ ಅವರು ಕಾದಂಬರಿಯ ಪ್ರೇಮಿಗಳ ರೀತಿ ಯಾವತ್ತೂ ನಡೆದುಕೊಳ್ಳದೆ, ಜೊತೆಗೆ ನಮ್ಮಮ್ಮ ಹಂಸ ಬಿಳುಪಿನ ಅಪೂರ್ವ ಸುಂದರಿಯು ಆಗಿರದೇ ಎಲ್ಲರ ಅಪ್ಪ ಅಮ್ಮ ಹ್ಯಾಗಿರ್ತಾರೋ ಹಾಗೆ ಇದ್ದರು. ಒಂಚೂರು ಓದವ್ರು, ನಮಗೆ ಗಾಂಧಿ, ಪರಮಹಂಸರು, ವಿವೇಕಾನಂದರ ಬಗ್ಗೆ ಎಲ್ಲ ಹೇಳವ್ರು ಅಷ್ಟೆ ವ್ಯತ್ಯಾಸ.

ಇನ್ನು ನಮ್ಮಜ್ಜಿ ಇವ್ರ ಮದುವೆಗೆ ವಿರೋಧ ಮಾಡಿ ನಮ್ಮನೆಗೆ ಬರದೇ ಹೋದ್ರು ನಾವೆಲ್ಲಾರೂ ಕಂಡ್ರೆ ಮಾತಾಡಿಸೋರು, ಏನಾದ್ರೂ ಅಂಗಡಿಯಿಂದ ತನ್ಕೊಡಕ್ಕೆ ಹೇಳಿ, ತನ್ಕೊಟ್ಟ ಮೇಲೆ ಉಳಿದ ಕಾಸನ್ನು ನಮಗೆ ಕೊಟ್ಟು ಬಿಸ್ಕತ್ ತಗಳಕೆ ಹೇಳೋಳು. ಆದ್ದರಿಂದ ಕಥೆಯಲ್ಲಿ ಬರುವ ಅತಿ ರಂಜಿತ ಘಟವಾಣಿ ಅತ್ತೆಯನ್ನು ನಮ್ಮಜ್ಜಿಯಲ್ಲಿ ನೋಡುವ ಸೌಭಾಗ್ಯದಿಂದಲೂ ವಂಚಿತರಾಗಿದ್ವಿ.

img_18851ನಮ್ಮೂರ ಜನ, ನಮ್ಮ ಚಿಕ್ಕಪ್ಪ- ದೊಡ್ಡಪ್ಪ, ಬಡವರು, ಶ್ರೀಮಂತರು, ನನ್ನ ಕ್ಲಾಸ್ ಮೇಟ್ ಹುಡುಗ ಹುಡುಗಿಯರು ಯಾರನ್ನ ಗಮನಿಸಿದರೂ ಅವರುಗಳಿಗೂ ನಾನು ಓದ್ತಿರೊ ಬರವಣಿಗೆಯ ಪಾತ್ರಗಳಿಗೆ ಎಳ್ಳಷ್ಟು ಸಾಮ್ಯತೆ ಕಾಣಿಸ್ತಾ ಇರಲಿಲ್ಲವಾದ್ದರಿಂದ ನಮ್ಮ ಅಮ್ಮಮ್ಮ ಹೇಳ್ತಿದ್ದ ಕಥೆಗಳ ರಾಜಕುಮಾರಿಯರ ಹಾಗೆ ಕಥೆಯಲ್ಲಿ ಬರೋರು ಬೇರೊಂದು ಲೋಕದೋರು ಅಂತ್ಲೂ ಇದನ್ನ ಬರೆಯೋರು ಅಸಾಮಾನ್ಯ ಶಕ್ತಿ, ಪ್ರತಿಭೆ ಎಲ್ಲ ಇರೋರು ಅವರುಗಳನ್ನ ನಾವೆಲ್ಲ ನೋಡಕ್ಕೆ ಸಾಧ್ಯವೇ ಇಲ್ಲ ಅಂತ್ಲೂ ತಿಳಿದಿದ್ದೆನಾದ್ದರಿಂದ ನನಗೆ ನಾನು ಸಾಹಿತ್ಯ ರಚನೆ ಮಾಡಬಲ್ಲೆ ಅನ್ನೋ ಯಾವ ವಿಶ್ವಾಸವು ಇರಲಿಲ್ಲ.

ನನಗೆ ನಾನು ಬರೀಬಲ್ಲೆ, ಒಂದು ಘಟನೆಯನ್ನು ಮಾತಿನಲ್ಲೂ ಬರಹದಲ್ಲೂ ಕಟ್ಟಿಕೊಡಬಲ್ಲೆ ಅಂತ ಅನಿಸಿದ್ದು ಫ್ರೌಡಶಾಲೆಗೆ ಬಂದ ಮೇಲೆ ಅದೂ ನಾವು ಮಾಡ್ತಿದ್ದ ನಾಟಕಗಳಿಂದ. ನಮ್ಮೂರ ರಾಮನವಮಿ, ಮಾರಿಜಾತ್ರೆ ಸಂದರ್ಭದಲ್ಲಿ ನಾವೆಲ್ಲ ಗೆಳತಿಯರು ಸೇರ್ಕಂಡು ನಾಟಕ ಪ್ರದಶರ್ಿಸ್ತಿದ್ವಿ. ನಮ್ಮಮ್ಮನೇ ನಾಟಕ ಹೇಳಿಕೊಡೋರು. ಒಮ್ಮೆ ದುಷ್ಯಂತ ಶಾಕುಂತಲೆ ನಾಟಕ ಮಾಡ್ತಿದ್ದಾಗ. ಶಾಕುಂತಲೆ ಪಾತ್ರಧಾರಿಯಾದ ನಾನು ನಾಟಕದ ವೇದಿಕೆಯ ಎದುರಿಗೆ ಎಲೆಗಳೇ ಕಾಣದಂತೆ ಹೂವಿನಿಂದ ತುಂಬಿಕೊಂಡು, ಮಾರುದೂರದುದ್ದಕ್ಕೂ ಹೂವಿನ ರಾಶಿಯನ್ನೆ ಚೆಲ್ಲಿಕೊಂಡು ನಿಂತಿದ್ದ ಗುಲ್ ಮೊಹರ್ ಮರವನ್ನು ನೋಡಿದವಳೇ ಪ್ರಿಯಂವದೆಯ ಬಳಿ ತನ್ನ ವಿರಹ ವೇದನೆಯನ್ನು ಹೇಳುವ ಸಂದರ್ಭದಲ್ಲಿ ‘ ಪ್ರಿಯಂವದೆ ನಮ್ಮ ಕುಟೀರದ ಎದುರಿರುವ ಈ ಹಳದಿ ಹೂವಿನ ವೃಕ್ಷವನ್ನು ನೋಡಿದಾಗಲೆಲ್ಲ ಈ ವೃಕ್ಷ ತನ್ನೊಡಲ ತುಂಬಾ ಹಳದಿ ಹೂಗಳನ್ನು ಧರಿಸಿಕೊಂಡು ನನ್ನಂತೆಯೇ ದುಷ್ಯಂತನ ಆಗಮನಕ್ಕಾಗಿ ಕಾದಿದೆ ಎನಿಸುತ್ತದೆ. ಮಾರುದೂರದುದ್ದಕ್ಕೂ ಚೆಲ್ಲಾಡಿದ ಅದರ ಹೂಗಳನ್ನು ನೋಡಿದಾಗಲೆಲ್ಲ ದುಷ್ಯಂತನ ಪಾದಸ್ಪರ್ಷಕ್ಕಾಗಿ ಬಿದ್ದ ಹೂಗಳು ಬಾಡದೇ ಕಾಯುತ್ತಿವೆ ಎನಿಸುತ್ತದೆ.ವಸಂತಕಾಲದಲ್ಲಿ ಪ್ರಕೃತಿಯಲ್ಲಾಗುತ್ತಿರುವ ಈ ಬದಲಾವಣೆಗಳು ನನ್ನ ವಿರಹವನ್ನು ಹೆಚ್ಚಿಸುತ್ತಿವೆ’ ಎಂದು ಆ ಕ್ಷಣ ಕಂಡ ಹೂವಿನ ಮರದ ಬಗ್ಗೆ ಮಾತು ಕಟ್ಟಿ ಹೇಳಿದಾಗ ಅಲ್ಲಿರುವ ಪ್ರೇಕ್ಷಕರನ್ನು ಈ ಮಾತು ತಟ್ಟಿ ಎದುರಿರುವ ಹೂವಿನ ಮರ ಹೇಗೆ ನೈಜವೋ ಹಾಗೆ ಶಕುಂತಲೆಯ ವಿರಹವು ನೈಜವೆನಿಸಿ ನಾಟಕ ಭರಪೂರ ಪ್ರಶಂಸೆಗೆ ಪಾತ್ರವಾಯಿತು.

ಇದೊಂದೆ ಬಾರಿ ಅಂತ ಅಲ್ಲ ನಾಟಕ ಮಾಡುವಾಗಲೆಲ್ಲ ನಾನು ವೇದಿಕೆಯ ಬಳಿ ಇರುವ ಆಕ್ಷಣದಲ್ಲಿ ಕಂಡ ವಸ್ತು ವಿಷಯಗಳೊಡನೇ ನನ್ನ ಪಾತ್ರಕ್ಕೆ ರಿಲೇಟ್ ಮಾಡಿಕೊಂಡು ಪ್ರತಿಕ್ರಿಯಿಸೋದು ಮಾಡ್ತಾ ಇದ್ದೆ. ಇದರಿಂದ ನನ್ನ ಪಾತ್ರ ಪೋಷಣೆ ಅರ್ಥಪೂರ್ಣವಾಗೋದು. ಜೊತೆಗೆ ಇದೇ ಸಂದರ್ಭದಲ್ಲಿ ನನ್ನ ಕೈಗೆ ಸಿಕ್ಕಿದ ಲಂಕೇಶ್ ಪತ್ರಿಕೆ ಸಹ ನನ್ನ ಯೋಚನೆ, ಚಿಂತನೆಯ ವಿನ್ಯಾಸವನ್ನೆ ಬದಲಿಸಿತು. ನಾನು ಹುಟ್ಟಿದ ವರ್ಷವೇ ಹುಟ್ಟಿದ ಲಂಕೇಶ್ ಪತ್ರಿಕೆ ನನ್ನ ಕೈಗೆ ಸಿಕ್ಕಿದ್ದು ಮಾತ್ರ ನನ್ನ 14ನೇ ವಯಸಿನಲ್ಲಿ. ನಮ್ಮ ಶಾಲೆಗೆ ಶಿವಮೊಗ್ಗೆಯಿಂದ ಬರುತಿದ್ದ ಜಿ ಪಿ ಮೇಷ್ಟ್ರು ಅವರ ಒಂದೂವರೆ ತಾಸಿನ ಪ್ರಯಾಣದ ಬೇಸರ ನೀಗಲು ಇದನ್ನು ಕೊಂಡು ತರುತಿದ್ದರು. ಅವರ ಮೇಜಿನ ಮೇಲಿಂದ ನನ್ನ ಗಮನ ಸೆಳೆದ ಪತ್ರಿಕೆ ಆಮೇಲೆ ಅದು ಬರುವ ದಿನಕ್ಕಾಗಿ ಕಾಯುತ್ತಾ ಕೂರುವಂತೆ ಮಾಡಿತು. ‘ತುಂಬಿದ ಕುಟುಂಬಕ್ಕೆ ಚೆಂದದ ಪತ್ರಿಕೆ’ ಹಾಗೂ ಮಹಾನ್ ದೇಶಭಕ್ತರ ಜೀವನಚಿತ್ರಣಗಳು ತುಂಬಿದ ಪುಸ್ತಕಗಳ ಓದಿಗೆ ಸೀಮಿತವಾಗಿದ್ದ ನನಗೆ ಲಂಕೇಶ ಪತ್ರಿಕೆ ನನ್ನೂರು,ಅಲ್ಲಿನ ಹೂವು ಹಣ್ಣು, ವೈಶಿಷ್ಟ್ಯತೆ, ದಿನನಿತ್ಯದ ಬದುಕು ಜಾತ್ರೆ ಹಬ್ಬಗೋಳು ಅದರ ಮಧ್ಯೆಯು ಉಳಿಸಿಕೊಳ್ಳಬೇಕಾದ ಸಂಕೋಚ, ನಿಷ್ಟುರವಾದಿಯಾಗಿರಬೇಕು ಎನ್ನುವ ಪಾಠ, ಜೀವನೋತ್ಸಾಹ ಸೋರಿಹೋಗದಂತೆ ರೂಢಿಸಿಕೊಳ್ಳಬೇಕಾದ ಕ್ರಿಯಾಶೀಲತೆ ಎಲ್ಲವನ್ನು ಕುರಿತು ಲಂಕೇಶ್ ನಮಗೆ ತಾಕುವ ಮಾತುಗಳಲ್ಲಿ ಕಟ್ಟಿಕೊಡ್ತಾ ಇದ್ದರು.

ಪುಟ್ಟ ಊರಿನ ಹೆಣ್ಣಾದ ಜೇನ್ ಆಸ್ಟೆನ್ ತನ್ನೂರು ಜಾತ್ರೆ, ಮದುವೆ, ಪ್ರೇಮ, ಸಂಬಂಧ, ಕಷ್ಟ, ನೋವು, ನಲಿವುಗಳನ್ನು ಧ್ಯಾನಿಸಿ ಅಪೂರ್ವವಾದ ಮತ್ತು ಅಷ್ಟೆ ಸಹಜವಾದ ಲೋಕವೊಂದನ್ನು ಕಾದಂಬರಿಗಳಲ್ಲಿ ಸೃಷ್ಟಿಸಿದಳು ಎಂಬುದರ ಬಗೆಗೆಲ್ಲ ಲಂಕೇಶ್ ಬರೆದದ್ದನ್ನು ಓದಿದ ನಂತರ ಬರೀ ರಂಜನೆಯ ಕಥಾಲೋಕ ನನಗೆ ಬೋರಾಗ ತೊಡಗಿತು. ಬದಲಿಗೆ ಶ್ರಮದಾಯಕ ಕೆಲಸ ಹಾಗೂ ಬಡತನದ ನಡುವೆಯು ಜೀವನೋತ್ಸಾಹ ಕಳೆದುಕೊಳ್ಳದ ಹಳ್ಳಿಗರು, ಅವರ ಹೊಂದಾಣಿಕೆ, ಸ್ವಾರ್ಥ, ಸಂಯಮದ ಬದುಕು, ಓದಿನಲ್ಲಿ ಮಹಾ ದಡ್ಡರಾಗಿದ್ದರೂ ಆ ಬಗ್ಗೆ ಚೂರು ದುಗುಡಗೊಳ್ಳದೆ ಆರಾಮಾಗಿ,ಹುಡುಗಾಟದಿಂದಿರುತಿದ್ದ ನನ್ನ ಸಹಪಾಠಿ ಹುಡುಗರು, ನನ್ನೂರ ಕಾಡು,ಗುಡ್ಡ,ಕೆರೆ,ಎಲ್ಲವು ನನ್ನ ಮನಸನ್ನು ತುಂಬಿಕೊಳ್ಳತೊಡಗಿದವು.

ಈ ಎಲ್ಲ ವಿದ್ಯಮಾನಗಳು ನನ್ನಲ್ಲಿ ಬರೆಯುವ ಸ್ಪೂತರ್ಿಯನ್ನು, ವಿಷಯ ವಸ್ತುಗಳನ್ನು ಹೊಳೆಯಿಸಿದವು. ಆದರೆ ನಾನು ನನ್ನ ಪಿಯುಸಿ ಮುಗಿವವರೆಗೂ ಕವನ, ಕಥೆ ಏನೇ ಬರೆದರೂ ಈ ರೀತಿ ಬರೆದಿದ್ದೇನೆ ನೋಡಿ ಅಂತ ಹೇಳುವಂತ ಯಾವ ಸಾಹಿತ್ಯಾಸಕ್ತರ ಪರಿಚಯವು ನನಗಿರಲಿಲ್ಲ. ನಾನು ಓದಿದ ಹಳ್ಳಿಯ ಶಾಲಾ ಕಾಲೇಜಿನಲ್ಲಿ ಸಾಹಿತ್ಯಿಕ ವಾತಾವರಣವು ಇರಲಿಲ್ಲ ಆದ್ದರಿಂದ ಬರೆಯುವ ಒತ್ತಡ ಎಂಬುದು ಏನು ಅಂತ ಗೊತ್ತು ಇರಲಿಲ್ಲ. ಪಿಯುಸಿ ಮುಗಿಸಿ ಅಪ್ಪನ ಆಗ್ರಹ ಪೂರ್ವಕ ಒತ್ತಾಯಕ್ಕೆ ಮಣಿದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ಸೇರಿಕೊಂಡವಳಿಗೆ ಹಾಸ್ಟೆಲ್ ವಾಸ, ಸಿಟಿಬಸ್ ಪ್ರಯಾಣ, ಇಂಗ್ಲಿಷ್ ಪಾಠ, ದಾರಿ ತಪ್ಪಿಸುವ ಜನ ಭರಿತ ರಸ್ತೆಗಳು ಗೊಂದಲಕ್ಕೆ ತಳ್ಳುತಿದ್ದವು ಇಂಥ ಸಂಧರ್ಭದಲ್ಲಿ ಒದಗಿ ಬಂದದ್ದು ಬರಹವೆಂಬ ಬಂಧು.

ನನ್ನ ಹಳ್ಳಿ, ಅಲ್ಲಿಯ ಚಿತ್ರಣ ಅಪ್ಪ ಅಮ್ಮ ತಂಗಿ ತಮ್ಮ ಅವರ ಬಗೆಗೆಲ್ಲ ಏನು ಅನಿಸುತ್ತದೋ ಅದನ್ನೆಲ್ಲ ಗೀಚತೊಡಗಿದೆ. ನನ್ನ ತಲ್ಲಣಗಳಿಂದ ಹೊರಬರಲು ಬರಹವೆಂಬುದು ಒಂದು ಹಾದಿಯಾಗಿ ಕಂಡುಬಂತು. ಸಹ್ಯಾದ್ರಿ ಕಾಲೇಜಿನಲ್ಲಿ ಅಪರೂಪದ ಸಾಹಿತ್ಯಿಕ ವಾತಾವರಣವಿತ್ತು. ಕಾಲೇಜಿನ ಕವಿಗೋಷ್ಟಿಯೊಂದರಲ್ಲಿ ನನ್ನ ಕವನ ಕೇಳಿದ ಇಂಗ್ಲಿಷ್ ಪ್ರಾಧ್ಯಾಪಕರಾದ ಸಿರಾಜ್ ಸರ್ ಈ ಕವನ ವೈದೇಹಿಯ ಬರಹದಂತಿದೆ ಎಂದಿದ್ದಲ್ಲದೆ ಏನು ಬರೆದರೂ ತಂದು ತೋರಿಸಿ ಎಂದು ಹೇಳಿದರು. ಜೊತೆಗೆ ಹಲವು ಪುಸ್ತಕಗಳನ್ನು ಓದಲು ಕೊಟ್ಟರು. ಅವರ ಪ್ರೋತ್ಸಾಹ,ಅಂತ:ಕರಣ ನನ್ನ ಬರಹದ ಬದುಕಿಗೆ ಅಮೂಲ್ಯ ತಿರುವನ್ನು ಕೊಟ್ಟಿತು.

ಸಹ್ಯಾದ್ರಿ ಕಾಲೇಜಿನಲ್ಲಿ ಸಾಹಿತ್ಯಾಸಕ್ತ ವಿದ್ಯಾಥರ್ಿಗಳ ಗುಂಪು ಇಂಗ್ಲಿಷ್ ಮೇಷ್ಟ್ರುಗಳ ಮಾರ್ಗದರ್ಶನದಲ್ಲಿ ಗೋಡೆ ಪತ್ರಿಕೆಯನ್ನು ಪ್ರಾರಂಭಿಸಿದೆವು. ಅದರ ಮೊದಲ ಸಂಪಾದಕಿ ನಾನೇ ಆಗಿ ಪ್ರತಿವಾರವೂ ಸಂಪಾದಕೀಯ ಬರಯುತಿದ್ದುದು. ಪತ್ರಿಕೆಯಲ್ಲಿ ಸಮುದಾಯ ಪ್ರಜ್ಞೆಯೊಂದಿಗೆ ವೈಯಕ್ತಿಕ ಸ್ವಾತಂತ್ರವಿಟ್ಟುಕೊಂಡು ಬರೆಯುವ ಅವಕಾಶ ಸಿಕ್ಕಿದ್ದು. ನನ್ನ ಬರವಣಿಗೆಯ ಲೋಕವನ್ನು ವಿಸ್ತರಿಸಿತು. ಕ್ರೈಸ್ಟ್ ಕಾಲೇಜ್ ಕನ್ನಡ ಸಂಘದ ಬೇಂದ್ರೆ ಕವನ ಸ್ಪಧರ್ೆಯಲ್ಲೂ ನಾ ಬರೆದ ಕವಿತೆಗಳು ಸೆಲೆಕ್ಟ್ ಆದವು. ಕರ್ಮವೀರದಲ್ಲಿ ಇದೇ ಸಂಧರ್ಭದಲ್ಲಿ ಪ್ರಕಟವಾದ ನನ್ನ ಸರ್ಕಸ್ ಹುಡುಗಿ ಕವಿತೆಗೆ ನೂರಾರು ಪ್ರೋತ್ಸಾಹದ ಪತ್ರಗಳು ಬಂದವು. ಬಹಳಷ್ಟು ಪತ್ರಗಳು ಕವಿತೆಯನ್ನು ಬರೀ ಚೆನ್ನಾಗಿದೆ ಅಂತ ಹೇಳದೆ ವಿವಿಧ ಬಗೆಯಲ್ಲಿ ವಿಶ್ಲೇಷಿಸಿದ್ದವು.

ಜೊತೆಗೆ ಆಕೃತಿ ಅನ್ನುವ ಪತ್ರಿಕೆ ನನ್ನ ಕ್ರೈಸ್ಟ್ ಕವನ ಸ್ಪಧರ್ೆಗೆ ಆಯ್ಕೆಯಾದ ಕವನವನ್ನಿಟ್ಟುಕೊಂಡು ಒಂದು ಉತ್ತಮ ಲೇಖನವನ್ನು ಪ್ರಕಟಿಸಿತ್ತು. ಸರ್ಕಸ್ ಹುಡುಗಿ ಕವಿತೆಗೆ ಲೇಖಕಿಯರ ಸಂಘ ನೀಡುವ ಗುಡಿಬಂಡೆ ಪೂಣರ್ಿಮಾ ಪ್ರಶಸ್ತಿಯು ಸಂದಿತು. ಈ ಎಲ್ಲ ವಿದ್ಯಮಾನಗಳು ನನ್ನಲ್ಲಿ ಬರೆಯುವ ಆಶೆಯನ್ನು,ಬರೆಯಬಲ್ಲೆ ಎಂಬ ವಿಶ್ವಾಸವನ್ನು ಮೊಳೆಯಿಸಿದವು. ಅಷ್ಟೊತ್ತಿಗೆ ಬಿಎ ಮುಗಿಯಿತು,ಮತ್ತು ಮೆಚ್ಚಿದವನೊಡನೆ ಕೂಡಲೆ ಮದುವೆಯು ಆಯಿತು. ಮದುವೆಯ ನಂತರ ನಾಲ್ಕು ವರ್ಷ ನಾನು ಬರೀತಿದ್ದೆ ಅನ್ನುವ ವಿಷಯವೇ ಮರೆತು ಹೋದಂತೆ ಇದ್ದೆ ಅಂದರೆ ನನಗೇ ಈಗ ಆಶ್ಚರ್ಯವಾಗುತ್ತದೆ.

ಬರೆಯುವುದಿರಲಿ ಮದುವೆಯ ನಂತರ ಓದು ಮುಂದುವರೆಸಿದ್ದ ನಾನು ಪರೀಕ್ಷೆಯ ಸಂದರ್ಭದಲ್ಲಿ ಸಿಲಬಸ್ನಲ್ಲಿದ್ದುದ್ದನ್ನು ಅನಿವಾರ್ಯವಾಗಿ ಕಣ್ಣಾಡಿಸುತಿದ್ದುದು ಬಿಟ್ಟರೆ ಬೇರೇನನ್ನೂ ಓದುವ ಆಸಕ್ತಿಯನ್ನು ಕಳೆದುಕೊಂಡಿದ್ದೆ. ಅಪ್ಪಟ ಗೃಹಿಣಿಯಾಗುವ ಕನಸಿತ್ತು ನನ್ನಲ್ಲಿ. ನನಗೆ ಈ ಸಂಧರ್ಭದಲ್ಲಿ ರೋಲ್ ಮಾಡೆಲ್ ಆಗಿದ್ದು ಎಂದರೆ ಏಕ್ತಾಕಪೂರಳ ಹಿಂದಿ ಮೆಗಾ ಸೀರಿಯಲ್ಗಳು. ಮದ್ಯಾಹ್ನ 2 ಗಂಟೆಗೆ ಟಿವಿ ಮುಂದೆ ಕುಳಿತರೆ ಸಂಜೆ 5ಕ್ಕೆ ಮತ್ತೆ ರಾತ್ರಿ 7ಕ್ಕೆ ಕುಳಿತರೆ 11 ಗಂಟೆಗೆ ಏಳುತಿದ್ದೆ. ವಾರದ 4,5ದಿನ ಹೀಗೆ ನಡೆಯುತಿತ್ತು. ಸಾಹಿತ್ಯದ ಕಾರ್ಯಕ್ರಮ, ನಾಟಕ ಯಾವುದಕ್ಕೂ ಹೋಗೋಣ ಎಂದು ಗಂಡ ಒತ್ತಾಯಿಸಿದರೂ ಅವನಿಗೆ ನೀನೊಬ್ಬನೇ ಹೋಗಿ ಬಾ ಎಂದು ಪುಸಲಾಯಿಸಿ ನಾನು ಟಿವಿ ಮುಂದೆ ಆಸೀನಳಾಗುತಿದ್ದೆ. ಈ ಹುಚ್ಚು ಎಲ್ಲಿಯ ಮಟ್ಟಿಗೆ ಮೇರೆ ಮೀರಿತ್ತೆಂದರೆ ಅವರ ಉಡುಗೆ ತೊಡುಗೆ, ದೇವರಮನ,ೆ ಅಡುಗೆ ಮನೆ ಇಷ್ಟರ ಬಗ್ಗೆಯೇ ಯೋಚಿಸುತಿದ್ದೆ. ಆದರೆ ವಿಚಿತ್ರವೆಂದರೆ ಅಡುಗೆ, ಭಕ್ತಿ, ಸೌಂದರ್ಯ ಇವುಗಳಲ್ಲೂ ಸಹ ನನ್ನ ಸೃಜನಶೀಲತೆಯನ್ನು ವ್ಯಕ್ತಗೊಳಿಸಲಾರದಷ್ಟು ಸೋಮಾರಿಯಾಗಿದ್ದೆ. ನನ್ನ ಸುತ್ತ ಸಂಕುಚಿತ ಪ್ರಪಂಚವನ್ನು ಸೃಷ್ಟಿಸಿಕೊಂಡ ನಾನು ಸಂಕುಚಿತ ಮನಸ್ಥಿತಿಯವಳಾಗತೊಡಗಿದ್ದೆ.

ಈ ಸಂಧರ್ಭದಲ್ಲಿ ನನ್ನನ್ನು ತುಂಬಿಕೊಳ್ಳುತಿದ್ದುದು ಒಂದೆ ಭಾವ `ತೀರದ ಬೇಸರ’ ಪದೇ ಪದೇ ಉಚ್ಚರಿಸುತಿದ್ದ ಶಬ್ದ ಒಂದೆ `ಬೇಜಾರು’, ಸಂಸಾರಿಯಾದ ನಂತರ ಹೊಸ ಪರಿಸರದಲ್ಲಿ ಹೊಂದಾಣಿಕೆಯ ಅನಿವಾರ್ಯತೆ, ವಿಚಿತ್ರ ಒತ್ತಡಗಳಿಂದ ತಲ್ಲಣಿಸಿದ ನಾನು ಟಿವಿ ಧಾರವಾಹಿಗಳಿಗೆ ಮೊರೆಹೋಗಿದ್ದು ನಿಜ ಆದರೆ ಅವು ನನ್ನೊಳಗನ್ನು ಒಂದು ಕಾವ್ಯದ ರೀತಿಯಲ್ಲಿ, ಒಂದು ಉತ್ತಮ ಬರಹ ಪೊರೆದ ಹಾಗೆ ಎಂದು ಪೊರೆದದ್ದು ಇಲ್ಲ. ಆದ್ದರಿಂದ ಆ ಲೋಕದಿಂದ ಬಿಡಿಸಿಕೊಂಡು ಹೊರಬರಲು ನನಗೆ ಅಂಥಹ ಕಷ್ಟವಾಗಲಿಲ್ಲ. ಮನೆಯ ನಾಲ್ಕು ಗೋಡೆ ನಡುವಿನ ಲೋಕದ ಸೀಮಿತವಾಗಿದ್ದೋಳು ಅದರಾಚೆ ಒಂದು ಲೋಕವಿದೆ ಎಂಬ ಅರಿವಿದ್ದರೂ ಪ್ರಜ್ಞಾಪೂರ್ವಕವಾಗಿ ಆ ಲೋಕದೆಡೆಗ ದೃಷ್ಟಿ ಹಾಯಸದೇ ಇದ್ದವಳು ನಿಧಾನಕ್ಕೆ ಹೊರಗಿನ ಲೋಕಕ್ಕೆ ತೆರೆದು ಕೊಳ್ಳತೊಡಗಿದೆ.

ಸಾಂಸ್ಕೃತಿಕ ಸಾಹಿತ್ಯಿಕ ಕೇಂದ್ರವಾದ ಶಿವಮೊಗ್ಗೆ ನನ್ನೀ ವ್ಯಕ್ತಿತ್ವಕ್ಕೆ ಇಂಬು ಕೊಟ್ಟಿತು. ಕೋಮು ಸೌಹಾರ್ದ ವೇದಿಕೆ, ಆಸಕ್ತಿ, ಕನರ್ಾಟಕ ಸಂಘದ ಕಾರ್ಯಕ್ರಮಗಳು ನನ್ನ ಅರಿವನ್ನು ಹೆಚ್ಚಿಸಿದವು. ನೀನಾಸಂ ಶಿಬಿರಗಳು ಮತ್ತು ನಾಟಕಗಳು ಸಹ ನನ್ನ ವ್ಯಕ್ತಿತ್ವಕ್ಕೆ ಹೊಸ ಆಯಾಮ ನೀಡಿದವು. ಈಗ ಮತ್ತೆ ನಾನು ಓದಲು ಬರೆಯಲು ಮನಸು ಮಾಡಿದೆ. ಆದರೆ ಬರವಣಿಗೆ ಮೊದಲಿನಷ್ಟು ಸುಲಭವಾಗಿ ಹೊಮ್ಮುತಿರಲಿಲ್ಲ. ಬದುಕು ಸಂಕೀರ್ಣವಾದದ್ದು ಅನಿಸುತಿತ್ತು. ಎಲ್ಲವನ್ನು ಜಯಿಸಿ ಬಿಡ್ತೀವಿ, ಎಲ್ಲ ಸರಿ ಮಾಡ್ತೀವಿ, ಎಲ್ಲವು ಸಾದ್ಯ ಅಸಾದ್ಯವಾದುದು ಯಾವುದೂ ಇಲ್ಲ ಅನ್ನುವ ಎಲ್ಲ ನಂಬಿಕೆಗಳು ಇದ್ದವು ಮೊದಲು ಆದರೆ ಈಗ ಬದುಕನ್ನು ವೈಯಕ್ತಿಕ ನೆಲೆಯಲ್ಲಿ ಮಾತ್ರ ಇಟ್ಟು ನಾನು ನನ್ನದು ನಾನು ಮಾತ್ರವೇ ಅಂತೆಲ್ಲ ಬದುಕಲು ಸಾದ್ಯವಿರಲಿಲ್ಲ. ಬದುಕೆಂದರೆ ನನ್ನೊಬ್ಬಳದೇ ಅಲ್ಲ ಸಮುದಾಯಿಕವಾದದ್ದು ಎಂಬ ಅರಿವಾಗಿತ್ತು. ಬರಹದಲ್ಲಿ ಆ ಎಲ್ಲ ಸಂಕೀರ್ಣತೆಯನ್ನು, ನೋವನ್ನು, ನಲಿವನ್ನು ಬದುಕಿನ ಹೋರಾಟವನ್ನು ತರಬೇಕಿತ್ತು ನನಗೆ.

ನನ್ನ ಕವನ ಸಂಕಲನ`ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ’ ಬಂದ ನಂತರ ಅದನ್ನೋದಿದ ಬಹಳಷ್ಟು ಹೆಂಗಸರು ಕೇಳಿದ ಪ್ರಶ್ನೆಯೆಂದರೆ ಇದೆಲ್ಲಾ ನಿಮ್ಮ ಅನುಭವವಾ ಎಂದು. ನಾನು ಹೇಳುತ್ತೇನೆ ಹೌದು ಇದೆಲ್ಲ `ನಮ್ಮ’ ಅನುಭವ. ನನ್ನ ಕೊಲಾಜ್, ಸೂಚನೆಯ ಪಾಲನೆ, ದಣಪೆ, ಕಟ್ಟುಬಿಚ್ಚು, ಆಸ್ಥೆ, ದಿನಚರಿಯಲ್ಲಿ ಸ್ವಲ್ಪ ಮಾಪರ್ಾಟು ಕವಿತೆಗಳಲ್ಲಿ ಬರುವ ಲೋಕ ಸ್ತ್ರೀ ಕೇಂದ್ರಿತವಾಗಿರೋದು ಹೌದಾದರೂ ಅದು ವೈಯಕ್ತಿಕ ಅನುಭವ ಅಲ್ಲ ಮತ್ತು ಅದೇ ಸಮಯಕ್ಕೆ ಅದರಲ್ಲಿ ವೈಯಕ್ತಿಕವಾದದ್ದು ಇಲ್ಲವೇ ಇಲ್ಲ ಎಂದು ಹೇಳಲಾರೆ. ಯಾಕೆಂದರೆ ಇಡೀ ಹೆಣ್ಣಿನ ಲೋಕವೆ ನನ್ನ ಪಾಲಿಗೆ ತುಂಬಾ ವೈಯಕ್ತಿಕವಾದದ್ದು, ಆ ಲೋಕವನ್ನು ಬಿಟ್ಟು ನನ್ನ ಅಸ್ತಿತ್ವ ಇರಲು ಸಾದ್ಯ ಎಂಬ ನಂಬಿಕೆ ನನಗಿಲ್ಲ. ನನ್ನದೇ ಪದ್ಯದ ಸಾಲುಗಳ ಮೂಲಕ ಹೇಳುವುದಾದರೆ `ನನಗೋ ಆ ಹೆಣ್ಣನ್ನು ಕಾಣುವ ತವಕ/ ಹಾಗಂತ ಧ್ಯಾನಿಸಿದರೆ ಮಕಮಲ್ಲಿನ ಹಿಂದೆ ಅಡಗಿದ್ದ ನನ್ನ ಛಾಯೆಯೇ ಪ್ರತ್ಯಕ್ಷವಾಗಿ ಬೆಚ್ಚಿ ಬೀಳಿಸಿತು/ ಸಮಾಧಾನಗೊಂಡೆ! ಅಮ್ಮ, ಗೆಳತಿ, ಅತ್ತೆ, ಟೀಚರ್, ಎಲ್ಲರ ಛಾಯೆಗಳು ನನ್ನೊಳಗೆ ಹೆಣೆದುಕೊಂಡು ಸುಂದರ ಕೊಲಾಜ್ ಸಿದ್ದಗೊಂಡಿತು'(ಕೊಲಾಜ್).

ಮಲೆನಾಡ ಮೂಲೆಯ ಹಳ್ಳಿಯಲ್ಲಿ 18 ವರ್ಷ ಕಳೆದ ನನಗೆ ಸಮುದಾಯವನ್ನು ಬಿಟ್ಟು ಯೋಚಿಸೋದು ಬಹಳ ಕಷ್ಟ. ನಮ್ಮ ಅಮ್ಮನ ಮನೆ ಪಕ್ಕವೇ ಮಸೀದಿ ಇದೆ ಹತ್ತಿರದಲ್ಲೆಲ್ಲೂ ಮುಸ್ಲಿಂ ಮನೆಯಿಲ್ಲ. ಆ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಹುಡುಗರನ್ನು ನೇಮಿಸುತಿದ್ದರು. ಆ ಮೌಲ್ವಿಗೆ ದಿನಕ್ಕೊಬ್ಬ ಮುಸ್ಲಿಂರ ಮನೆಯಲ್ಲಿ ಊಟ. ಆದರೆ ಎಷ್ಟೊ ಮನೆಗಳಲ್ಲಿ ಊಟವೇ ಹಾಕದೆ ಬರಿ ಹೊಟ್ಟೆಯಲ್ಲಿರಬೇಕಾದ ಪ್ರಸಂಗ ಬರುತಿತ್ತು. ಆಗೆಲ್ಲ ಆ ಮೌಲ್ವಿ ಹುಡುಗರು ನಮ್ಮ ಅಮ್ಮನ ಕೈಲಿ ತಮಗಾಗುತ್ತಿರುವ ಅನ್ಯಾಯವನ್ನು ಹೇಳಿ ಕೊಳ್ಳುತಿದ್ದದ್ದನ್ನು ನಾನು ಕೇಳಿದ್ದೇನೆ. ನಮ್ಮ ಅಪ್ಪ ಅಮ್ಮನ ಅಂರ್ತಜಾತೀಯ ಮದುವೆಯು ನಮ್ಮನ್ನು ಜಾತಿ ಮತದ ಕಂದರದಾಚೆ ಯೋಚಿಸಲು ಬದುಕಲು ಅನುವು ಮಾಡಿಕೊಟ್ಟಿತು. ನನ್ನ ಮದುವೆಗೆ ಅಪ್ಪನ ಜಾತಿಯವರು ಬಹಿಷ್ಕಾರ ಹಾಕಿದರು. ಆದರೆ ಬೇರೆ ಬೇರೆ ಜಾತಿಯ ರಕ್ತ ಸಂಬಂಧವೇ ಇಲ್ಲದ ಬರಿಯ ಬಾವನಾತ್ಮಕ ಬೆಸುಗೆ ಇದ್ದ ಜನರೆಲ್ಲ ಬಂದು ಹರಸಿದರು.

ಆಮೇಲೆ ಹೆಣ್ಣು ಮಕ್ಕಳ ದುಡಿಮೆ, ಎಳ್ಳಷ್ಟೂ ಪುರಸೊತ್ತಿಲ್ಲದೆ ದೈಹಿಕ ಕೆಲಸದಲ್ಲಿ ತೊಡಗಿಕೊಂಡ `ಮನೆತನದ ಉದ್ದಾರ ಸೂತ್ರವೊಂದನ್ನೆ ಗುರಿಯಾಗಿಸಿಕೊಂಡ’ ಎಷ್ಟೊಂದು ಹೆಂಗಸರನ್ನು ನೋಡಿದ್ದೇನೆ ನಾನು,ಮತ್ತು ಜಾತಿ, ಸಂಪ್ರದಾಯದ ಹೆಸರಲ್ಲಿ ಹೆಂಗಸರಿಗೆ ಮಾಡುತಿದ್ದ ಅವಮಾನ, ಶೋಷಣೆಗಳನ್ನು, ಇವೆಲ್ಲ ಮತ್ತು ಇವನ್ನು ಬಿಟ್ಟು ಬಹಳಷ್ಟು ವಿಷಯಗಳು ನನ್ನನ್ನು ಪ್ರಭಾವಿಸಿವೆ, ಬದುಕನ್ನು ರೂಪಿಸಿವೆ. ಬರಹವನ್ನು ಕೂಡ.

ನನ್ನ ಬರಹದ ಬದುಕಿನಲ್ಲಿ ಆಶಾದೇವಿ ಮೇಡಂ ಮತ್ತು ಜಿ.ಪಿ.ಬಸವರಾಜು ಸರ್ ಅವರ ಪ್ರಭಾವ ಬಹಳಷ್ಟಿದೆ. ಅವರಿಬ್ಬರು ನನಗೆ ಒತ್ತಾಸೆಯಾಗಿ ನಿಲ್ಲದಿದ್ದರೆ ನಾನೆಂದೂ ನನ್ನ ಕವಿತೆಗಳನ್ನ ಪ್ರಕಟಿಸುವ ಧೈರ್ಯ ಮಾಡುತ್ತಿರಲಿಲ್ಲ. ಜೊತೆಗೆ ಕಡಿದಾಳು ಶಾಮಣ್ಣನವರ ಆತ್ಮವೃತ್ತಾಂತಕ್ಕೆ ಅಕ್ಷರ ರೂಪ ಕೊಡುವ ಸಾಹಸಕ್ಕೆ ನಾನು ಕೈ ಹಾಕಿದ್ದೂ ಅವರ ಒತ್ತಾಸೆಯಿಂದಲೆ. ಈಗ ನನಗೆ ಬರೆಯುವ ವಿಶ್ವಾಸ ಅಲ್ಪ ಮಟ್ಟಿಗಾದರೂ ಬಂದಿದೆ. ಆದರೆ ಬರೆಯಬೇಕಾದ್ದು ಬಹಳಷ್ಟಿದೆ. ಬರಹದ ಸೆಲೆ ಬತ್ತದಂತೆ ಕಾದುಕೊಳ್ಳುವ ಜೊತೆಗೆ ಜೀವನ್ಮುಖಿ ಗುಣದಿಂದ ಬರಹ ವಂಚಿತವಾಗದಂತೆ, ಅಗ್ಗದ ಮಾರಾಟ ಸರಕಾಗದಂತೆ ಕಾದುಕೊಳ್ಳುವ ಅವಶ್ಯಕತೆಯು…

Advertisements
 1. minchulli / ಫೆಬ್ರ 15 2009 12:04 ಅಪರಾಹ್ನ

  ಅಕ್ಷತಾ,
  ತುಂಬ ಚೆನ್ನಾಗಿದೆ ನಿಮ್ಮ ಬರಹ, ಬೆಳೆದು ಬಂದ ದಾರಿ ಎರಡೂ … ನೀವು ಬರೆಯುತ್ತಲೇ ಇರಿ.. ನಾವು ಓದುತ್ತಲೇ ಇರುತ್ತೇವೆ..

  -ಶಮ, ನಂದಿಬೆಟ್ಟ
  http://minchulli.wordpress.com

 2. greeshma / ಫೆಬ್ರ 17 2009 2:38 ಅಪರಾಹ್ನ

  ಬೆಳೆದು ಬಂದ ಹಿನ್ನೆಲೆಯನ್ನು ಚೆನ್ನಾಗಿ ಬಿಡಿಸಿಟ್ಟಿದ್ದೀರಿ, ಇಷ್ಟವಾಯಿತು; ಬಾಲ್ಯ,ಶಾಲಾದಿನಗಳು, ಕಾಲೇಜು, ನಂತರದ ಮದುವೆ, ಅದರ ನಂತರದ ತಲ್ಲಣಗಳು ಎಲ್ಲವನ್ನೂ ಹೇಳಿಕೊಂಡ ಬಗೆ ಇಷ್ಟವಾಯಿತು.

 3. ಹೇಮಾ / ಏಪ್ರಿಲ್ 9 2009 8:17 ಫೂರ್ವಾಹ್ನ

  ಹಾಯ್
  ನಿಮ್ಮ ಬರವಣಿಗೆಯ ಶೈಲಿ ಇಷ್ಟವಾಯ್ತು. ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ ಕವನ ಸಂಕಲನ ಓದಿದೆ. ತುಂಬಾ ಇಷ್ಟವಾಯ್ತು. ಪ್ರತಿಭಾ ನಂದಕುಮಾರ್ ಅವರ ಮೊದಲ ಸಂಕಲನದ ನೆನಪು ನಿಮ್ಮ ಪದ್ಯಗಳನ್ನ ಓದಿದಾಗ ಕಾಡಿತು. ಬರೆಯುವುದನ್ನು ಮುಂದುವರೆಸಿ. ನಿಮ್ಮ ಮುಂದಿನ ಬರವಣಿಗೆಗಾಗಿ ಕಾಯುತ್ತಿರುತ್ತೇನೆ.

  -ಹೇಮಾ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: