Skip to content
ಮಾರ್ಚ್ 1, 2009 / odubazar

ಕಿ ರಂ ಬರೆದಿದ್ದಾರೆ

ಜೀವ ಚೈತನ್ಯದೆಡೆಗಿನ ಚಲನೆ
-ಕಿ. ರಂ. ನಾಗರಾಜ
    

1ಅಕ್ಷತಾ ಈಚಿನ ಸಮರ್ಥ ಕವಿಗಳಲ್ಲೊಬ್ಬಳು. ನನ್ನ ಗೆಳತಿ. ಕಾವ್ಯರಚನೆಯ ಕೌಶಲ್ಯವನ್ನು ತನ್ನ  ಮೊದಲ ಸಂಕಲನದಲ್ಲಿಯೇ ದಟ್ಟವಾಗಿ ಪ್ರಕಟಿಸಿದ್ದಾಳೆ. ಅವಳ ಕವನಗಳನ್ನು ಕುರಿತು ಕೆಲವು ಮಾತುಗಳನ್ನು ಬರೆಯುವುದು ನನಗೆ ಸಂತೋಷ ತಂದಿದೆ. ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ ಎಂಬ ಹೆಸರೇ ಒಂದು ರೂಪಕ. ಸ್ವಾತಂತ್ರ್ಯದ ಅಭೀಪ್ಸೆಯ ಬೇರೆ ಬೇರೆ ನೆಲೆಗಳನ್ನು ಈ ರೂಪಕ ಸಂಕೇತಿಸುತ್ತದೆ. ಸ್ವಾತಂತ್ರ್ಯ, ಮುಕ್ತ ಸ್ಥಿತಿ, ತನ್ನದೇ ಆದ ಲೋಕ ಕಲ್ಪನೆ ಇತ್ಯಾದಿಗಳು ಹಾಗೆಯೇ ದಕ್ಕಿ ಬಿಡುವುದಿಲ್ಲ. ಅದನ್ನು ಗಳಿಸಿಕೊಳ್ಳುವ ಪರಿಗಳನ್ನು ಇಲ್ಲಿಯ ಕವಿತೆಗಳು ಪರಿಶೀಲಿಸುತ್ತಿವೆ.

ಈ ಹೊತ್ತಿನ ಯುವ ಕವಿಗಳು ಕಾವ್ಯ ರಚನೆಯಲ್ಲಿ ತಮ್ಮದೇ ಆದ ದಾರಿಗಳನ್ನು ಹುಡುಕಿಕೊಳ್ಳುತಿದ್ದಾರೆ. ಕಾವ್ಯ ನಡೆದುಬಂದ ದಾರಿಯಲ್ಲಿ ಮುಂದೆ ಸಾಗಬೇಕೆಂಬ ಅಂಥ ನಿಷ್ಠೆಯ ಹಂಗಿಲ್ಲದೆ, ಕಾವ್ಯ ನಿಮರ್ಿತಿಗೆ ಈಗಾಗಲೇ ಸಿದ್ಧಗೊಂಡ ತತ್ವ-ಭ್ರಮೆಗಳಿಗೂ ಸಿಲುಕದೆ ಒಬ್ಬೊಬ್ಬ ಯುವ ಕವಿ-ಕವಿಯತ್ರಿಯರೂ ತಮ್ಮದೇ ಅಭಿವ್ಯಕ್ತಿ ಕ್ರಮವನ್ನು ಕಾವ್ಯ ವಸ್ತುವಿನ ಆಯ್ಕೆಯಲ್ಲಿ, ಅದರ ನಿರ್ವಹಣೆಯ ನೆಲೆಯಲ್ಲಿ ರೂಪಿಸುತ್ತಿದ್ದಾರೆ. ಇದು ಕನ್ನಡ ಕಾವ್ಯದ ಇಂದಿನ ದಾರಿ. ಹೀಗೆ ಹೇಳಿದ ಮಾತ್ರಕ್ಕೆ ಈ ಕವಿಗಳಿಗೆ ಕನ್ನಡ ಕಾವ್ಯದ ಹೆಜ್ಜೆ ಗುರುತುಗಳು, ವಸ್ತುವಿನ ಕಲ್ಪನೆ, ಅಭಿವ್ಯಕ್ತಿ ಕ್ರಮಗಳು ತಿಳಿದಿಲ್ಲವೆನ್ನುವಂತಿಲ್ಲ. ಅವೆಲ್ಲವನ್ನು ವಿಭಿನ್ನ ಮಟ್ಟದಲ್ಲಿ ಪರಿಶೀಲಿಸಿ ತಮ್ಮದೇ ಆದ ದನಿಯನ್ನು ಛಾಪಿಸುವ ನಿಷ್ಠೆಯಿಂದ ಅವರು ಎದುರಾಗುತಿದ್ದಾರೆ. ಸುತ್ತಣ ಸಾಂಸ್ಕೃತಿಕ ವಿದ್ಯಮಾನಗಳನ್ನು ತಮ್ಮ ಕೇಂದ್ರಕ್ಕೆ ತಂದುಕೊಂಡು ಕೇವಲ ಅರ್ಥನಿಷ್ಠ ಕವಿತೆಗಳ ಕಟ್ಟುಪಾಡುಗಳಿಗೆ ಬದ್ಧವಾಗದೇ ತಮ್ಮದೇ ಆದ ವಿಶಿಷ್ಠತೆಯನ್ನು ತೋರುವಲ್ಲಿ ಈ ಕವಿಗಳು ತಮ್ಮ ಪ್ರಯೋಗಭೂಮಿಕೆಯನ್ನು ಹದಗೊಳಿಸಿಕೊಳ್ಳುತಿದ್ದಾರೆ. ನವ್ಯ, ಬಂಡಾಯ, ಸ್ತ್ರೀ ಸಂವೇದನೆ, ದಲಿತ ಪ್ರಜ್ಞೆಯ ಮಾರ್ಗಗಳ ಅರಿವಿದ್ದೂ ಪ್ರಜ್ಞಾಪೂರ್ವಕವಾಗಿ ಇವುಗಳನ್ನು ಮೀರುವ ಗಂಭೀರ ಆಸಕ್ತಿ ಈ ಕಾಲದ ತರುಣಿ-ತರುಣರ ಕಾವ್ಯದ ಪ್ರಯೋಗಗಳಲ್ಲಿ ಕಾಣುತಿದ್ದೇವೆ. ಈ ಧೋರಣೆ ಒಂದು ರೀತಿಯಲ್ಲಿ ಸೂಕ್ಷ್ಮವೂ, ಗಂಭೀರವೂ ಆದ ಸಹಜ ಪ್ರತಿಭಟನೆಯ ಮಾರ್ಗ. ಎದ್ದು ಕಾಣುವ, ರಾಚುವ ಕ್ರಮಗಳನ್ನು ಬದಿಗಿಟ್ಟು ನಿಜಕ್ಕೂ ಈ ಹೊತ್ತು ಯೋಚಿಸುವಂತೆ ಮಾಡುವ, ನಮ್ಮ ಸುತ್ತ ಹಬ್ಬುತ್ತಿರುವ ಪ್ರಚಾರ ಮೋಡಿಯ ನೆಲೆಗಳನ್ನು ಬಿಗಿಯಾದ ದನಿಯಲ್ಲಿ ಪ್ರಶ್ನಿಸುತ್ತಿರುವ ನೆಲೆಯೊಂದು ಇಂದಿನ ತರುಣಿ-ತರುಣರ ಕಾವ್ಯದಲ್ಲಿ ಮೈ ಪಡೆಯುತ್ತಿದೆ ಎಂಬುದು ತುಂಬ ಆಸಕ್ತಿ-ನಿರೀಕ್ಷೆಗಳನ್ನು ಹುಟ್ಟಿಸುತ್ತದೆ.   ಇಷ್ಟೆಲ್ಲ ಮಾತುಗಳನ್ನು ನಾನು ಇತ್ತೀಚಿನ ಕಾವ್ಯದ ಈದಿನ ಹಿನ್ನೆಲೆಯಲ್ಲಿ ಹೇಳುತ್ತಿದ್ದೇನೆ ಹಾಗು ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ ಸಂಕಲನ ಬಗ್ಗೆ ಆಡುತ್ತಿರುವ ಮಾತುಗಳಿಗೆ ಈ ಹಿನ್ನೆಲೆಯಿದೆ.
 

ಈ ಟಿಪ್ಪಣಿ ಬರೆಯುತ್ತಿರುವ ನನಗೆ ಒಂದು ಮುಜುಗರ ಇದೆ. ಅದಕ್ಕೆ ಕಾರಣವನ್ನು ಮೊದಲಿಗೆ ಹೇಳಿಬಿಡುತ್ತೇನೆ. ಈ ಸಂಕಲನದಲ್ಲಿ ಕಿರಂ ನಿಮ್ಮ ನಗು ಎನ್ನುವ ಕವಿತೆಯೊಂದಿದೆ. ಇದು ಅಕ್ಷತಾ ಗಂಭೀರವಾಗಿ ಬರೆದಿರುವ ಕವಿತೆಯಾದರೂ ನನಗೂ ಅದಕ್ಕೂ ಸಂಬಂಧವಿಲ್ಲ. ಕವಯಿತ್ರಿ ಸಂಬಂಧಗಳನ್ನು ಪಲ್ಲಟಿಸಿ, ಹೇಗೆ ದಿಕ್ಕು ತಪ್ಪಿಸಬಲ್ಲಳೆಂಬುದಕ್ಕೆ, ಗಲಿಬಿಲಿ ಉಂಟು ಮಾಡಬಲ್ಲಳೆಂಬುದಕ್ಕೆ ಈ ಕವಿತೆ ಒಂದು ಉದಾಹರಣೆಯಾಗಬಲ್ಲದು ಮಾತ್ರ. ಸಾಮಾನ್ಯವಾಗಿ ವ್ಯಕ್ತಿ ನಿದರ್ೇಶಿತ ಬರಹಗಳಿಗೆ ಇರುವ, ಇರಬೇಕಾದ, ನಿರೀಕ್ಷಿಸುವ ಕ್ರಮಗಳನ್ನು ಈ ಕವಿತೆ ಮೀರಿದೆ. ಹೀಗಾಗಿ ನನ್ನ ಮುಜುಗರವೂ ಅಷ್ಟೇನೂ ಮುಖ್ಯವಲ್ಲ ಎನ್ನುವಂತೆ ಈ ಕವಿತೆ ಇದೆ. ಕವಿತೆಯನ್ನು ಸೂಕ್ಷ್ಮವಾಗಿ ಗ್ರಹಿಸುವವರಿಗೆ ಇವೆಲ್ಲ ಗೊತ್ತೇ ಆಗುತ್ತದೆ.

ಹೆಣ್ಣಿನ ಹಾಡು-ಪಾಡು ಯಾವ ಕವಿತೆಯಿಂದಲೂ ಮುಕ್ತಾಯ ಆಗುವುದಿಲ್ಲ. ಹಾಗೆ ಮುಕ್ತಾಯವಾಗಲೆಂದು ಅವಳು ಬಯಸುತ್ತಾಳಾದರೂ ಅದು ಕೇವಲ ನಿರೀಕ್ಷೆ, ಆಶಯ ಮಾತ್ರ. ಇದಕ್ಕೂ ಮಿಗಿಲಾಗಿ ಅವಳ ಗಟ್ಟಿ ಪ್ರಶ್ನೆಗಳು, ಸಮಸ್ಯೆಗಳಿಗೆ ಎದುರಾಗುವ ಛಲ, ಇವನ್ನೆಲ್ಲ ವೈಚಾರಿಕ ಪ್ರಶ್ನೆಗಳನ್ನಾಗಿ ಅವಸ್ಥಾಂತರಿಸುವ ದೃಶ್ಯ ಧೋರಣೆಗಳು ಸ್ತ್ರೀ ಸಂವೇದನೆಯ ಕವಿತೆ-ಕತೆ-ವಿಚಾರ ಇವುಗಳಲ್ಲಿ ದಟ್ಟವಾಗಿ ಕಾಣುತ್ತಿದ್ದೇವೆ.

ರೆಕ್ಕೆ ಬಿಚ್ಚಿ ಆಕಾಶ ನೆಚ್ಚಿ ಅಕ್ಷತಾಳ ಮೊದಲ ಸಂಕಲನ. ತನ್ನ ಅಂತರಂಗದ ಭಾವನೆಗಳನ್ನು ರೂಪಕಗೊಳಿಸುವ ಪ್ರಬುದ್ಧ ಹಾದಿಯಲ್ಲಿ ಅಕ್ಷತಾ ನಡೆದಿದ್ದಾಳೆ. ಹೀಗಾಗಿ ಇಲ್ಲಿನ ಕವಿತೆಗಳು ಏಕಾಕಾರದವುಗಳಲ್ಲ. ಒಂದೇ ಕವಿತೆಯನ್ನು ಒಮ್ಮೆ, ಮತ್ತೊಮ್ಮೆ ಓದಿದರೆ ಅನೇಕ ಸಾಧ್ಯತೆಗಳು, ಹೊಳಹುಗಳನ್ನು ಓದುಗನಲ್ಲಿ ಸ್ಫುರಿಸುವಷ್ಟು ಸಶಕ್ತವಾಗಿವೆ. ಕೇವಲ ಅರ್ಥಗ್ರಾಹಿ ಓದಿಗಿಂತ ಭಿನ್ನವಾಗಿ ಓದಬೇಕೆಂಬ ಅಪೇಕ್ಷೆಯನ್ನು ಇಲ್ಲಿನ ಕವನಗಳು ಹುಟ್ಟಿಸುತ್ತವೆ. ಸುತ್ತಣ ಸಂಗತಿಗಳನ್ನು ನೋಡುವ ಅದರ ವಿವರಗಳನ್ನು ಅವಲೋಕಿಸಿ, ಹೊಸಬಗೆಯಲ್ಲಿ ಕಾಣಿಸುವ ಸೂಕ್ಷ್ಮತೆ, ಪಾರದರ್ಶಕತೆಗಳು ಇಲ್ಲಿನ ಕವನಗಳ ವಿಶೇಷ. ಆಶ್ಚರ್ಯ ಹುಟ್ಟಿಸುವ ರೀತಿಯಲ್ಲಿ ಬೇರೆ ಬೇರೆ ಛಾಯೆಯ ಲಯ ಸಾಧ್ಯತೆಗಳನ್ನು ಅಕ್ಷತಾ ತನ್ನ ಕಾವ್ಯ ಪ್ರಯೋಗದಲ್ಲಿ ತೋರಿದ್ದಾಳೆ. ಅಲ್ಲಲ್ಲಿ ಲಂಕೇಶರ ಕವಿತೆಗಳ ಲಯ ಪ್ರತೀತಿಯ ನೆನಪು ಕೂಡಾ ಆಗುವುದುಂಟು.
ಬಂಧನದ ಇಕ್ಕಟ್ಟು, ಅದರಿಂದ ಬಿಡಿಸಿಕೊಳ್ಳಲು ನಡೆಯುವ ಎಲ್ಲ ತಳಮಳಗಳನ್ನು ಒಂದು ಬಗೆಯ ಸ್ವಗತದ ದಾಟಿಯಲ್ಲಿ ಪ್ರಕಟಗೊಂಡಿದೆ. ಎಲ್ಲ ಬಗೆಯ ಹತಾಶೆಯನ್ನು ಮೀರಿ ಚಲಿಸುವ ಮನಸ್ಸಿನ ಸ್ಥಿತಿಯನ್ನು ಇಲ್ಲಿನ ಎಲ್ಲ ಕವಿತೆಗಳಲ್ಲಿ ಬೇರೆ ಬೇರೆ ರೂಪಗಳಲ್ಲಿ ಕಾಣಬಹುದಾಗಿದೆ. ಇಲ್ಲಿನ ಕವಿತೆಗಳು ಆಪ್ತವಾಗುವುದಕ್ಕೆ, ವಿಷಾದಮಿಶ್ರಿತ ಅನುಭೂತಿ ಆಗುವುದಕ್ಕೆ ಸ್ವಗತದ ಕ್ರಮವೂ ಒಂದು ಕಾರಣ. ಯಾರನ್ನೋ ಉದ್ದೇಶಿಸಿ ಅಳಲನ್ನೋ, ಆಕ್ರೋಶವನ್ನೋ ತೋರುವ ಕವಿತೆಗಳನ್ನು ಸಾಕಷ್ಟು ಗಮನಿಸಿದ್ದೇನೆ. ಅಂಥ ಕವಿತೆಗಳು ಮಹತ್ವದ್ದೇ ಇದ್ದೀತು. ಆದರೆ ಸ್ವಂತವನ್ನು ನೇರವಾಗಿ, ಸಂಕೋಚಗಳಿಲ್ಲದೆ ಎದುರಾಗುವ ಕೆಚ್ಚಿನ ಅಭಿವ್ಯಕ್ತಿ ಕ್ರಮ ಮತ್ತೂ ಮಹತ್ವದ್ದಾಗಬಹುದೆಂಬುದನ್ನು ಇಲ್ಲಿನ ಕವಿತೆಗಳು ಹೇಳುತ್ತಿವೆ.

akaasha-coverಒಳಗಣ ಪ್ರಪಂಚ ಹೊರಗಣ ಪ್ರಪಂಚವನ್ನು ಸಮ ಬೆರೆಸುವ ಕಲ್ಪನೆ ಕವಿತೆಯಲ್ಲಿ ಯಾವಾಗಲೂ ಕುತೂಹಲಕಾರಿಯಾದದ್ದು  ಅಂಥ ಮಹತ್ವದ ಕವಿತೆ ಸರ್ಕಸ್ ಹುಡುಗಿ. ಗಂಡಿನ ಎಲ್ಲ ದರ್ಪ, ಅಹಂಕಾರಗಳಿಗೆ ಎದುರಾಗಿ ತನ್ನತನವನ್ನು ಒಪ್ಪಿಸಲೇಬೇಕಾದ ಹೆಣ್ಣುತನದ ಅನಿವಾರ್ಯತೆಯನ್ನು  ದಟ್ಟವಾಗಿ ಈ ಕವಿತೆ ಪರಿಶೀಲಿಸಿದೆ. ಬದುಕು, ಬದುಕಿನಾಚೆಯ ಲೋಕ ಮತ್ತು ಅದನ್ನು ಮೀರುವ ಎಲ್ಲ ಕಾಂಕ್ಷೆಗಳನ್ನು ಹೆಣ್ಣು ಲೋಕ ತನ್ನ ಅಂತರಂಗದಲ್ಲಿ  ಒಳಗೊಂಡಿದ್ದರೂ ಆ ಅವಳು ನಿದರ್ೇಶಿತ ಸೂತ್ರಗಳಿಗೆ ಅದೆಂಥ ಕೀಲುಗೊಂಬೆಯಾಗಿದ್ದಾಳೆಂಬುದನ್ನು ಈ ಕವಿತೆ ಪ್ರತಿಬಿಂಭಿಸುತ್ತದೆ.

ರಾತ್ರಿಯೆಲ್ಲ ಮಾಡಿ ತೋರಿಸಿದ್ದಾಳೆ
ತರತರದ ಚಾಕಚಕ್ಯತೆ
ರಿಂಗ್ ಮಾಸ್ಟರ್ನ ತಾಳಕ್ಕೆ
ತಕ್ಕಂತೆ ಕುಣಿದು ಗಳಿಸಿದ್ದಾಳೆ
ಪ್ರೇಕ್ಷಕ ಪ್ರಭುವಿನ ಮೆಚ್ಚುಗೆ

ಇಲ್ಲಿ ಧ್ವನಿಸುತ್ತಿರುವ ಕಲ್ಪನೆ ಕೇವಲ ಸರ್ಕಸ್ ಕಂಪೆನಿಯ ಕಲ್ಪನೆಯಾಗದೆ ಎಲ್ಲ ಬಗೆಯ ಗಂಡಿನ ಅಹಂಕಾರ, ಧರ್ಪಗಳ ರೂಪಕವಾಗಿದೆ. ಹೆಣ್ಣು ಗಂಡಿಗೆ ಕಸರತ್ತಿನ, ಸರ್ಕಸ್ಸಿನ ಉಪಾಧಿಯಾಗಿಸಿಕೊಂಡಿರುವ ಇಂಥ ಕಲ್ಪನೆ ಕನ್ನಡ ಕವಿತೆಯಲ್ಲಿ ಈವರೆವಿಗೆ ನನ್ನ ಗಮನಕ್ಕೆ ಬಂದಿಲ್ಲ.(ಗಂಡು ಹೆಣ್ಣನ್ನು ಸಂತೈಕೆಯ, ಕಾಮೋತ್ಸಾಹದ, ಉದ್ದೇಪಿತ ಸೂಕ್ಷ್ಮಗಳೊಂದಿಗೆ ಹರಿಸಿರುವ ಗಂಗಾಧರ ಚಿತ್ತಾಲರ ಕಾಮಸೂತ್ರ ಕವಿತೆ ನೆನಪಿಗೆ ಬರುತ್ತಿದೆ) ಗಂಡು ದರ್ಪದ ರೂಪಕಗಳ ಸರಮಾಲೆಯೇ ಈ ಕವಿತಯಲ್ಲಿ ವ್ಯಕ್ತಗೊಂಡಿದೆ. ಕವಿತೆ ತತ್ವವಾಗಬಾರದು. ಆದರೆ ರೂಪಕಗಳ ಮೂಲಕವೇ ಅಕ್ಷತಾ ಲೈಂಗಿಕ ಸೂಕ್ಷ್ಮಗಳು ಹಾಗು ಲೈಂಗಿಕ ಆಕ್ರಮಣಗಳನ್ನು ತನ್ನ ಕವಿತೆಯಲ್ಲಿ ರೂಪಕಗೊಳಿಸಿದ್ದಾಳೆ.

ಆನೆ, ಸಿಂಹ, ಹುಲಿ, ಕರಡಿ
ಬಾಯಿಗೆ ಕೈಯಿಟ್ಟು, ಹತ್ತಿಕೂತು
ತಿವಿದು ತಾನಿನ್ನೂ ಬದುಕಿದ್ದೇನಲ್ಲ
ಎನ್ನುವ ಅಚ್ಚರಿಯಲ್ಲಿ

ಕವಿತೆ ಲೈಂಗಿಕ ಪ್ರತೀಕಗಳನ್ನು, ಲೈಂಗಿಕ ಆಕ್ರಮಣಗಳನ್ನು ಈ ಪ್ರಾಣಿ ರೂಪಕಗಳ ಮೂಲಕ  ವ್ಯಕ್ತಗೊಳಿಸಿ ಮೇಲೆ ಹೇಳಿದ ಗಂಡು ದರ್ಪದ ಆಕ್ರಮಣವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ. ಸರ್ಕಸ್ ಹುಡುಗಿಯಲ್ಲಿ ಬಳಕೆಗೊಂಡಿರುವ ಕ್ರಿಯಾ ಪದಗಳ ಬಳಕೆ, ಮಾಡಿ ತೋರಿಸಿದ್ದಾಳೆ. ನಿದ್ದೆ ಹೋಗಿದ್ದಾಳೆ ಇಂಥ ಮಾಮರ್ಿಕ ರೂಪಕ ಕಲ್ಪನೆ ಈ ಕವಿತೆಯ ಮತ್ತೊಂದು ಗಮನೀಯ ಅಂಶ.

ಮತ್ತೆ ಮತ್ತೆ ಓದಿದ ಹಾಗೂ ಅನೇಕ ಗ್ರಹಿಕೆಗಳಿಗೆ ತೆರೆದಿಡುವ ಈ ಕವಿತೆ ಈ ಕಾಲದ ಕವಿಯತ್ರಿಯೊಬ್ಬಳ ಮಹತ್ವದ ಸಾಧನೆ ಎಂದೇ ನನಗನ್ನಿಸುತ್ತದೆ.
ವಿದಾಯ ಕವಿತೆ ಪುತಿನ ಅವರ ಗೋಕುಲ ನಿರ್ಗಮನ ಗೀತರೂಪಕಕ್ಕೆ ಹಾಗೂ ಕೃಷ್ಣ ಮಥುರೆಗೆ ಹೊರಟ ಸಂದರ್ಭಕ್ಕೆ ಒಂದು ಸೂಕ್ಷ್ಮ ಪ್ರತಿಕ್ರಿಯೆ. ಕೃಷ್ಣನ ನಿರ್ಗಮನ ಗೋಕುಲದ ಹೆಣ್ಣು ಸಮುದಾಯಕ್ಕೆ ಹಾಗೆ ಆತಂಕ, ದುಃಖ-ದುಮ್ಮಾನಗಳನ್ನು ತರುತ್ತಿಲ್ಲ.

ಹೊರಟಿದ್ದೀಯ ಈಗ ಮಥುರೆಗೆ
ಬೇಸರವಿಲ್ಲ ನನಗೆ ಆದರೆ ಗೋಪಾಲ
ಒಮ್ಮೆ ಮಥುರೆಗೆ ಹೋದವ ನೀನು
ಅಲ್ಲೆ ಇರು ರಾಜನಾಗಿ ರಕ್ಷಕನಾಗಿ
ದೇವರಾಗಿ ಬೇಕಾದರೆ ಬೇಕಾದಷ್ಟು
ಅರಸಿಯರಿಗೆ ಗಂಡನಾಗಿ ಮತ್ತೆ
ಮರಳದಿರು ಎಂದೂ ಗೋಕುಲಕೆ

ಎನ್ನುತ್ತ ಗೋಕುಲೆ ಮತ್ತು ಮಥುರೆ ಗುಣ-ಅವಗುಣಗಳ ತಾಳೆ ಹಾಕಿ ಗಂಡುಗಳ ಲೋಕ ಹೆಣ್ಣುಗಳ ಲೋಕವನ್ನೇ ವಿಮಶರ್ೆಗೆ ಒಡ್ಡಿದೆ. 

ಗೋಕುಲದ ಪಾಲಿಗೆ

ಅದು ಹೆತ್ತ ನೂರಾರು

ಗೋಪಾಲಕರಲ್ಲಿ ಒಂದು ಹೆಸರು

ಎಂಬ ಹೆಣ್ಣು ಜಗತ್ತಿನ ಆತ್ಮವಿಶ್ವಾಸ ಪ್ರಕಟಗೊಳ್ಳುತ್ತದೆ.ಕೊನೆಗೆ

 ಸ್ವಲ್ಪ ಜಾಸ್ತಿ ಹಂಬಲಿಸಿದ ಹೆಸರು

 ಬಹು ಕಾಲ ವಿಸ್ಮೃತಿಗೆ ಜಾರದ ಚೇತನ

ಎಂಬ ಆತ್ಮೀಯತೆಯ ಸ್ಪರ್ಶ ಸೇರಿಕೊಳ್ಳುತ್ತದೆ.

ಈ ಕವಿಯತ್ರಿಗೆ ನಾವೆ ಹಿಡಿಯುವ ತುತರ್ು ಬಿದ್ದಿದೆ. ಅವಳು ನಾವೆಯನ್ನು ತಪ್ಪಿಸಿಕೊಂಡರೂ ಮತ್ತೆ ನಾವೆಯನ್ನು ಹಿಡಿಯುತ್ತಾಳೆ. 

ತಪ್ಪಿಸಿಕೊಂಡೆನೆ ಕೊನೆಯ ನಾವೆ

ಬಂದೆ ಬರುತ್ತಲ್ಲವೆ ಮೊದಲ ನಾವೆ

ಕೊನೆಯ ನಾವೆಯನ್ನು ತಪ್ಪಿಸಿಕೊಂಡರೂ ಮತ್ತೆ ನಾವೆಯನ್ನು ಹಿಡಿಯುವ ಛಲವನ್ನು ಅಕ್ಷತಾ ತನ್ನ ಕವಿತೆಯಲ್ಲಿ ತೋರಿದ್ದಾಳೆ.

ಮತ್ತೊಂದು ಕವಿತೆ ‘ದಣಪೆ’ ಜಡ ಸ್ಥಿತಿಯಿಂದ ಎಚ್ಚರದ ಸ್ಥಿತಿಗೆ ಜಿಗಿಯುವ ಧೋರಣೆಯನ್ನು ಸೂಕ್ಷ್ಮ ರೂಪಕಗಳ ಮೂಲಕ ಹೇಳುತ್ತಿದೆ.

ಲಯಬದ್ಧವಾಗಿರುವ

ನಿಮ್ಮ ಹೆಜ್ಜೆ ಗುರುತುಗಳ

ಎಣಿಕೆಯಲ್ಲೇ ಮೈ ಮರೆತು

ಹಾಯಬೇಡವೇ ಒಮ್ಮೆಯು

ಮನದೊಳಗಣ 

ರೂಪಕದ ಜಗಕೆ

ಲೋಕದ ಇತಿ ಮಿತಿಗಳ  ಬಗ್ಗೆ ಪ್ರಬುದ್ಧ ತಿಳುವಳಿಕೆ ಯೋಚನೆ ಗ್ರಹಿಕೆಯಾಗಿ ಈಕೆಯ ಕವಿತೆಗಳಲ್ಲಿ ವ್ಯಕ್ತವಾಗಿದೆ. ಯಾಕೆಂದರೆ ನಿರಂತರ ಹರಿಯುವ ನಿತ್ಯ ಸತ್ಯಗಳಿಗೆ ಪ್ರಾಮಾಣಿಕತೆಯೊಂದಿಗೆ, ಗೃಹೀತ ನಿಮರ್ಿತಿಗಳೊಂದಿಗೆ ಎದುರಾಗುವ ಕೆಚ್ಚು ಈ ಕವಿಯತ್ರಿಗಿದ್ದು ಇಲ್ಲಿನ ಎಲ್ಲ ಕವಿತೆಗಳಲ್ಲೂ ಓದುಗರು ಅದನ್ನು ಕಾಣಬಹುದು.

ಆತ್ಮವಿಶ್ವಾಸ, ಅನುರಕ್ತಿಗಳ ಸೂಕ್ಷ್ಮತೆಗಳಿಂದ ಕೂಡಿದ ಅಕ್ಷತಾಳ ರಚನೆಗಳು ಆಕ್ರೋಶ ವ್ಯಕ್ತವಾಗಬೇಕಾದ ಅನೇಕ ಮಾದರಿಗಳನ್ನು ಒಳಗೊಂಡಿವೆ. ‘ದಿನ ದೂರವಿಲ್ಲ’, ‘ಸೂಚನೆಯ ಪಾಲನೆ’, ‘ಬದುಕಿನ ಮೋಹದಲ್ಲಿ ಸತ್ತ ಲಂಕೇಶರನ್ನು ನೆನೆಯುತ್ತಾ’ ಇಂಥ ಕವಿತೆಗಳು ಒಳಲೋಕ, ಹೊರಲೋಕಗಳೊಂದಿಗೆ ಚಲಿಸುತ್ತ ಹೊಸ ಸಂಬಂಧಗಳ ಸಾಧ್ಯತೆಗಳನ್ನು ಶೋಧಿಸುವತ್ತ ನಡೆಸಿರುವ ಚಿಂತನಶೀಲ ಕಾವ್ಯ ನಿಮರ್ಿತಿಯತ್ತ ಮುಖ ಮಾಡಿದೆ. ಅಕ್ಷತಾ ಕಾವ್ಯ ಹೀಗೆ-ಇನ್ನೂ ಸಮೃದ್ಧಗೊಳ್ಳಲಿ.

Advertisements
 1. Dr. BR. Satyanarayana / ಮಾರ್ಚ್ 2 2009 9:22 ಫೂರ್ವಾಹ್ನ

  ಕಿ.ರಂ. ಚೆನ್ನಾಗಿ ಬರೆದಿದ್ದಾರೆ. ಅಕ್ಷತಾ ಅವರ ಕವನ ಸಂಕಲನ ಓದಬೆಕೆನ್ನಿಸಿದೆ.
  ಅಕ್ಷತಾ ಅವರಲ್ಲಿ ನನ್ನದೊಂದು ಸಂದೇಶ. ಕಿ.ರಂ. ಲೇಖನದ ಕೊನೆಯಲ್ಲಿ ಉಲ್ಲೇಖೀಸಿರುವ ಪದ್ಯವನ್ನು ಮತ್ತೊಮ್ಮೆ ಓದಿ. ಅದರ ಕೊನೆಯ ಸಾಲು ‘ಮರೆಳದಿರು ಎಂದೂ ಮಥುರೆಗೆ’ ಎಂದಿರುವುದು ‘ಮರಳದಿರು ಎಂದೂ ಗೋಕುಲಕ್ಕೆ’ ಎಂದು ಇರಬೇಕಿತ್ತಲ್ಲವೆ? ಕೃಷ್ಣ ಹೊರಟಿರುವುದು ಗೋಕುಲದಿಂದ ಮಥುರೆಗೆ. ಅವನಿಗೆ ನಿವೇದನೆ ಮಾಡಿಕೊಳ್ಳುತ್ತಿರುವುದು ಗೋಕುಲದ ಹೆಣ್ಣು ಸಮುದಾಯ ಎಂದು ಕಿರಂ ಹೇಳಿದ್ದಾರೆ. ‘ಮಥುರೆಗೆ ಹೋದ ನೀನು ಅಲ್ಲೇ ಇರು’ ಎಂದು ಹಾರೈಸುವವರು ಕೊನೆಯಲ್ಲಿ ‘ಮರಳದಿರು ಎಂದೂ ಮಥುರೆಗೆ’ ಎಂದರೆ ರಸಾಭಾಸವಾದಂತಿದೆ ಅಲ್ಲವೆ?

 2. sami / ಮಾರ್ಚ್ 23 2009 1:33 ಅಪರಾಹ್ನ

  hi sir, i m full happy yakandre ki.ram. nudi thumba ista agide.

 3. raj / ಜೂನ್ 19 2009 1:17 ಅಪರಾಹ್ನ

  ಈ ಪುಸ್ತಕ ದ ಪ್ರಕಾಶಕರು ಯೂರು,ಇವರ ವಿಳಾಸ ಕೊಡಿ .
  ಯಾಕೆಂದರೆ ಬೆಂಗಳೂರಿನ ಸರಿಸುಮಾರು ಏಲ್ಲಾ ಕಡೆ ವಿಚಾರಿಸಿದೆ,ಎಲ್ಲೂ ಸಿಗಲಿಲ್ಲ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: