Skip to content
ಜನವರಿ 20, 2010 / odubazar

ಹಿಂಸೆಯಿಂದ ಜಗತ್ತು ತಲ್ಲಣಸುತ್ತಿರುವ ಕಾಲವಿದು

ರಾಘವೇಂದ್ರ ಪಾಟೀಲರು ತಮ್ಮ ‘ಸಂವಾದ ಪ್ರಕಾಶನ’ದಿಂದ ಎಚ್ ಎಸ್ ವೆಂಕಟೇಶಮೂರ್ತಿ ಅವರ ಸಮಗ್ರ ಕವಿತೆಗಳ ಸಂಕಲನವನ್ನು ತಂದಿದ್ದಾರೆ. ಅತ್ಯಂತ ಮುದ್ದಾಗಿ ಪ್ರಕಟವಾಗಿದೆ. ಎಚ್ ಎಸ್ ವಿ ಅವರ ಲೋಕಕ್ಕೆ ನಡೆದು ಹೋಗಿಬಿಡಲು ಇರುವ ಹೆದ್ದಾರಿ ಇದು.

ಫೆಬ್ರವರಿ ೧೪ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಈ ಕೃತಿ ಬಿಡುಗಡೆಯಾಗಲಿದೆ. ‘ಎಚ್ಚೆಸ್ವಿ ಸಮಗ್ರ ಕವಿತೆಗಳು’ ಸಂಕಲನಕ್ಕೆ ಎಚ್ಹೆಸ್ವಿ ಅವರು ಬರೆದ ಅಂತರಂಗದ ಮಾತುಗಳು ಇಲ್ಲಿವೆ-

ಅಂತರಂಗ

ಹಿಂಸೆಯಿಂದ ಜಗತ್ತು ತಲ್ಲಣಸುತ್ತಿರುವ ಕಾಲವಿದು. ಧಾರ್ಮಿಕ  ಅಸಹಿಷ್ಣುತೆ; ಕೋಮುದ್ವೇಷದ ದಳ್ಳುರಿ; ಜನಾಂಗೀಯಸಂಘರ್ಷ; ಭಯೋತ್ವಾದಕ  ಉಗ್ರಗಾಮಿಗಳ ಹತ್ಯಾಕಾಂಡಗಳು; ನಕ್ಸಲರ ರಕ್ತಮಾರ್ಗ,  ತಣಿವಿಲ್ಲದ ಯುದ್ದಮಾರಿಯ ರಕ್ತತೃಷ್ಣೆ-ಇವು ಸಾಮೂಹಿಕ ಪ್ರವೃತಿ. ಇದೆಲ್ಲದವರ ತಳಪರಿಗೆ ಮನುಷ್ಯನ ವಿಕ್ಷಿಪ್ತ ಮನಸ್ಸು. ಸದಾ ನುಗ್ಗಿನುಗ್ಗಿ ಅಂತರಂಗದ ತಿಳಿಯನ್ನು ಬಗ್ಗಡ ಮಾಡುವ  ನೇತ್ಯಾತ್ಮಕ ವಿಚಾರಗಳು. ಅಧಿಕಾರದ ಹಪಾಹಪಿ; ನೈತಿಕ ಅಧ;ಪತನ ; ಎಣೆಯಿಲ್ಲದ ಭೋಗಲಾಸೆ,ಎಷ್ಟು ತಿಂದರೂ ಸಾಲದೂ ಎಂಬ ಹೊಟ್ಟೆಬಾಕತನ;  ನಾನಾಯಿತು ಮೂರುಲೋಕವಾಯಿತು ಎಂಬ ಸ್ವಾರ್ಥಪಾರಾಯಣ ತತ್ವರತೆ. ನಾನು ಬದುಕುವುದು ನನಗಾಗಿ ಮಾತ್ರ ಎಂಬ ಸ್ವಕೇಂದ್ರಿತ ನಿಲುವು. ಮುಂದಿನ ಪೀಳಿಗೆಯ ಬಗ್ಗೆ ಯತ್ಕಿಂಚಿತ್ ಕಾಳಜಿಯಿಲ್ಲದೆ,  ಇರುವ ಒಂದೇ ಭೂಮಿಯನ್ನು ನಿರಂತರವಾಗಿ ಹಾಳುಗೆಡಹುತ್ತಿರುವ ಉಚ್ಛೃಂಖಲ ಪ್ರವೃತಿ. ಹೀಗೆ ಒಲೆ ಮತ್ತು ಧರೆ ಎರಡೂ ಹತ್ತಿ ಉರಿಯುತ್ತಿವೆ.

ಸೂಕ್ಷ್ಮ ಸಂವೇದಿನೆಗಳನ್ನು ಕ್ಷೋಭೆಗೊಳಿಸುತ್ತಿರುವ ಸಂಗತಿಯಿದು. ಜಗತ್ತಿನಲ್ಲಿ ಎಲ್ಲೋ ಸಂಭವಿಸುವ ದುರ್ಘಟನೆ ನಾವು ಮಲಗಿದ ಮಂಚವನ್ನು  ಆ ಕ್ಷಣದಲ್ಲೇ ಅಲ್ಲಾಡಿಸುವ ಸಂದರ್ಭವಿದು. [ಜೈನ ಪುರಾಣಗಳಲ್ಲಿ ತೀರ್ಥಂಕರರ ಜನನವಾದಾಗ ಇಂದ್ರನ  ಆಸನ ಕಂಪಾಗುವುದು ನೆನಪಾಗುತ್ತಿದೆ. ಇಡೀ ಜಗತ್ತೇ  ಈಗ ಮನುವಿನ ತೆಪ್ಪೆವೋ, ನೋಹನ ದೋಣಿಯೋ ಆಗಿರುವುದರಿಂದ, ಅದು ಮುಳುಗಹತ್ತಿತು ಅಂದರೆ ರಕ್ಷಣೆಗೆ ಬೇರೊಂದು ಪಾತಳಿಯೇ ಇಲ್ಲ. [NO WHOLE TO ESCAPE].  ಅದಕ್ಕೇ ಸಮಾಜಶಾಸ್ತ್ರದಂತೆ ಒಂದು ಬುಡಕಟ್ಟನ್ನು ಮೂಲಘಟ್ಟಕವಾಗಿ  ಮಾಡಿಕೊಂಡು ಚಿಂತಿಸುವಂತಿಲ್ಲ; ರಾಜಕೀಯ ವಿಜ್ಞಾನದಂತೆ ಒಂದು ದೇಶವನ್ನು ಮೂಲಭೂತ ಘಟಕವಾಗಿ ಹಿಡಿದು ಇಂದು ಯೋಚಿಸುವಂತಿಲ್ಲ.  ಅದಕ್ಕೇ ಹದಿನಾಕು ಲೋಕಗಳನ್ನು  ಒಪ್ಪಿಡಿಯಲ್ಲಿ ಹಿಡಿದು ಮಾತಾಡುವ ಪುರಾಣಪರಿಪ್ರೇಕ್ಷ್ಯ ಈವತ್ತಿನ ಆಗತ್ಯವೆನಿಸುತ್ತದೆ.

ಹಿರಣಾಕ್ಷ್ಯಾನು [ರಾವಣನಂತೆ ಕೇವಲ  ಆಯೋಧ್ಯೆಯ ಸೀತೆಯನ್ನಲ್ಲ]  ಇಡೀ ಭೂಮಂಡಲವನ್ನೇ ಅಪಹರಿಸಿ ಖಾಸಗಿ ಆಸ್ತಿಮಾಡಿಕೊಳ್ಳಲು ಹೊಂಚುಹಾಕುತ್ತಾನೆ. ಆಧುನಿಕ ಪರಿಭಾಷೆಯಲ್ಲಿ ಇದು ಹಿಟ್ಲರ್ ಪ್ರವೃತಿ. ಈ ಅಕ್ರಮಣ ಭೌತಿಕ ಮತ್ತು ಅಂತರಂಗಿಕ ಎರಡೂ ನೆಲೆಯಲ್ಲಿ ನಡೆಯುತ್ತದೆ ಎನ್ನವುದನ್ನು ಮಾನ್ಯ ಮಾಡುವುದಾದರೆ ಜಗತ್ತನ್ನೇ ಅಪೋಷಣ ಮಾಡಲಿಕ್ಕೆ ಹೊರಟ್ಟಿರುವ ಅಮೇರಿಕ (ರೂಪಕ ಭಾಷೆಯಲ್ಲಿ ಅಗಸ್ತ್ಯ)  ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ. ನಾವು ಇಡೀ ವಿಶ್ವವನ್ನೇ ಇಸ್ಲಾಮೀಕರಣ ಮಾಡಲು ಬಯಸುತ್ತೇವೆಯೋ?  ಇಡೀ ವಿಶ್ವವನ್ನೇ ಕೃಸ್ತೀಕರಣ ಮಾಡಲು  ಹೊರಡುತ್ತೇವೆಯೋ. ಇಡೀ ಭಾರತವನ್ನೇ ಹಿಂದೂಕರಣ ಮಾಡಲು  ಹೊರಡುತ್ತೇವೆಯೋ. ಇವೆಲ್ಲವೂ ಹಿರಣ್ಯಾಕ್ಷಪ್ರವೃತ್ತಿಯೇ.

ನಮ್ಮ ರೂಪಕ ಜಗತ್ತು ವಿಶ್ವಾತ್ಮಕವಾಗಬೇಕಾದರೇ ಯಾವ ಮಾರ್ಗ ನಮಗೆ ಅಗತ್ಯವಾದೀತು ಎಂಬುವುದನ್ನು ನಾವು ಈವತ್ತು ಪರಿಶೀಲಿಸಬೇಕಾಗಿದೆ. ಮನುಷ್ಯನ ಮನಸ್ಸು ಮತ್ತು ಅದು ಚಿನ್ನಾಟವಾಡುತ್ತಿರುವ ಜಗನ್ಪಾತಳಿಯನ್ನು ಅಂಗೈಗ್ರಾಹ್ಯ ಮಾಡಿಕೊಂಡು ನಾವು ವ್ಯವಹರಿಸಬೇಕಾದ ಅಗತ್ಯ ಇಂದು ಉಂಟಾಗಿದೆ.  ಅದಕ್ತೆ ತಕ್ಕ ರೂಪಕ ಜಗತ್ತನ್ನೂ ಕಲಾಕಾರ ಇವತ್ತು ಶೋಧಿಸಿಕೊಳ್ಳಬೇಕಾಗಿದೆ.  ಭೂವ್ಯೋಮ ವ್ಯಾಪಿಯಾಗಿರುವ ಈ ಕಬಂಧ ಪ್ರವೃತ್ತಿಯನ್ನು ಎದುರಿಸಲು ಏಸು, ಬುದ್ಧ, ರಾಮ, ಕೃಷ್ಣ ಗಾಂಧಿಯಂಥ ಮಹಾನ್ ಚೇತನಗಳು ಕೆಲವು ತಾತ್ವಿಕ ಮಾದರಿಗಳನ್ನು ನಮ್ಮ ಕಣ್ಮುಂದೆ ಇರಿಸಿ ಹೋಗಿದ್ದಾರೆ.

ಇವುಗಳಲ್ಲಿ ಯಾವ ತಾತ್ವಿಕ ಮಾದರಿ ಎಷ್ಟರಮಟ್ಟಿಗೆ ನಮಗೆ ಅಗತ್ಯವಾದೀತು, ಉಪಯುಕ್ತವಾದೀತು?  ಹಾಗೇ ಉಪಯುಕ್ತವಾಗಲು ಆ ಚಿಂತನೆಗಳನ್ನು ಮತ್ತೆ ರೂಡಿಸುವ ತುರ್ತು ಅಗತ್ಯ ಈಗ ಕಾಣುತ್ತಿಲ್ಲವೇ?  ಕಲೆಯಲ್ಲಿ ಈ ಮಹಾನ್ ತಾತ್ವಿಕತೆಯನ್ನು ಅನುಭವಗತ ಮಾಡಿಕೊಳ್ಳುವ ಬಗೆಯೆಂತು?  ಯಾವ ಪಾಕವನ್ನು ನಾವು ನಮ್ಮ ನಮ್ಮ ಮಾಧ್ಯಮಗಳಲ್ಲಿ ಸಾಧಿಸಬೇಕಾಗಿದೆ? ಅಥವಾ ಯಾವ ಹೊಸ ತಾತ್ವಿಕತೆಯನ್ನು ಜಗತ್ತು ತನ್ನ ಆತ್ಮ ರಕ್ಷಣೆಗಾಗಿ ಈವತ್ತು ಹಂಬಲಿಸಹತ್ತಿದೆ. ಇದು ನಮ್ಮ ಮನಸ್ಸನ್ನೂ ಈಗ ತೀವ್ರವಾಗಿ ಕಾಡುತ್ತಿರುವ ಸಂಗತಿಯಾಗಿದೆ. ಈವತ್ತಿನ ಎಲ್ಲಾ ಕಲಾಕಾರರು ತಮ್ಮ ಮಾಧ್ಯಮಗಳ ಮೂಲಕ ಈ ವಿಶ್ವಾತ್ಮಕ ಚೆಂತನೆಯಲ್ಲಿ ತಮ್ಮ ತಮ್ಮ ಪರಿಮಿತಿಯಲ್ಲಿ ಗಂಭೀರವಾಗಿ ತೊಡಗಿಕೊಳ್ಳದೆ ಗತ್ಯಂತರವಿಲ್ಲ. ರಾಮ, ಕೃಷ್ಣ,  ಬುದ್ಧನ ಕುರಿತ ನನ್ನ ಮತ್ತೆ ಮತ್ತೆ ಮರುಕಳಿಸುವ ಧ್ಯಾನಕ್ಕೆ ಈ ತೊಡಗುವಿಕೆಯೇ ಕಾರಣವೆನ್ನಬಹುದು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: