Skip to content
ಜನವರಿ 25, 2010 / odubazar

ಕಾಯ್ಕಿಣಿ ಎಂಬ ಕಥಾಸಾಗರ…

JayanthKaikini1

ನುಡಿಸಿರಿಯಲ್ಲಿ ಪಾಲ್ಗೊಳ್ಳುವುದು ಬಹಳ ಖಾಸಗಿಯಾದಂತಹ ಒಂದು ಖುಷಿಯ ಸಂಗತಿ. ಓದುಗರಾದ, ವೀಕ್ಷಕರಾದ ಜನಮಾನಸದೊಂದಿಗೆ ನನ್ನನ್ನು ಬೆರೆಯುವಂತೆ ಮಾಡಿದ ನುಡಿಸಿರಿ ಒಂದು ಅಧ್ಬುತವಾದ ಕೆಲಸ.

ಕನ್ನಡ ಎನ್ನುವುದು ಅನುಭವದ ಭಾಗ. ಇದರ ಮೇಲೆ ಒತ್ತು ಇರಬೇಕಾಗಿದೆ. ಈಗ ಕನ್ನಡಕ್ಕೆ ಶಾಸ್ತೀಯ ಸ್ಥಾನಮಾನ ಬಂತು ಅಂತ ನಾವು ಆವೇಶಪಡುವುದು ನೋಡಿದರೆ ಮುಳುಗ್ತಾ ಇರೋ ಟೈಟಾನಿಕ್ ನಲ್ಲಿ ಸೀಟಿಗಾಗಿ ಜಗಳ ಆಡಿದಂಗೆ ಇದೆ. ಟೈಟಾನಿಕ್ ಮುಳುಗ್ತಾ ಇದೆ, ವಿಂಡೋ ಮುಳುಗ್ತಾ ಇದೆ, ನಾವು ವಿಂಡೋ ಸೀಟ್ ಸಿಗ್ತು,ಈ ಸೀಟು ಸಿಕ್ತು ಅಂತ ಜಗಳ ಆಡ್ತ ಇದ್ದೇವೆ. ಕನ್ನಡದ ಮೂಲ ಅಸ್ಮಿತೆಗೆ ಕುತ್ತು ಬಂದಿರುವ ಕಾಲದಲ್ಲಿ ನಾವಿದ್ದೇವೆ. ಇದು ವ್ಯಂಗ್ಯ. ಇದರ ಮುಂದುವರಿಕೆಯ ಸ್ಯಾಂಪಲ್ ನೋಡಿ.

ಸೋನಿಯಾ ಗಾಂಧಿನೋ ಅಥವಾ ಸುಷ್ಮಾ ಸ್ವರಾಜ್ ನೋ ಕನ್ನಡಿಗರೇ ನಮಸ್ಕಾರ ಎಂದರೆ ಚಪ್ಪಾಳೆ ಹೊಡೆದು ಬಿಡ್ತೇವೆ. ಆದರೆ ನಮ್ಮ ಮಕ್ಕಳು ಕನ್ನಡ ಮಾತಾಡುವುದು ಬಿಟ್ಟು ಇಂಗ್ಲೀಷ್ ಮಾತಾಡಲು ಹೇಳುತ್ತೇವೆ.ಒಂದು ವಿಚಿತ್ರವಾದ ವೈರುಧ್ಯದಲ್ಲಿ ಇಂದಿನ ಹೊಸ ತಲೆಮಾರಿದೆ. ಅವರಿಗೆ ಕನ್ನಡ ಏನು ಅನ್ನುವುದರ ಮೇಲೆ ನಮ್ಮ ಕನ್ನಡದ ಭವಿಷ್ಯ, ಉಳಿಗಾಲ ಇದೆ. ಹೀಗಾಗಿ ಇಲ್ಲಿ ಕನ್ನಡವನ್ನು ಅನುಭವಿಸುವುದು ಹೇಗೆ ಅನ್ನುವುದರ ಮೇಲೆ ಒತ್ತು ಕೊಡುತ್ತಿರುದರಿಂದ ಯಾವ ಅಧಿಕೃತ ಸಂಸ್ಥೆಗಳು ಮಾಡದ ಕೆಲಸವನ್ನು ಇಂತಹ ಸಮ್ಮೇಳನಗಳು ಮಾಡುತ್ತಿವೆ.

ಇದು ಕಥಾಸಮಯ ಎಂದು ಹೇಳಿದ್ದಾರೆ. ಹಿಂದೆ ಹರಿಕಥಾ ಕಾಲಕ್ಷೇಪ ಅಂತ ಆಗ್ತಿತ್ತು. ಈ ಕಥೆ ಎಂದರೆ ಏನು ಅನ್ನುವುದು ಯಾವತ್ತೂ ಎಲ್ಲರಿಗೂ ಕಾಡಿದಂತಹ ಪ್ರಶ್ನೆ. ಈಗ ನೋಡಿ, ನೀವು ಒಂದು ಸಿನಿಮಾಕ್ಕೆ ಹೋದಿರಿ ಎಂದು ಇಟ್ಟುಕೊಳ್ಳಿ. ಮನೆಗೆ ಬಂದು ಕಥೆ ಹೇಳ್ತಿರಿ ಅಮ್ಮಂಗೋ, ಅಪ್ಪಂಗೋ. ಈ ಸಿನಿಮಾದಲ್ಲಿ ಹೀಗಾಯ್ತು,ಹಾಗಾಯ್ತು  ಎಂದು ಹೇಳ್ತೀರಿ.ನಾಟಕಕ್ಕೋದ್ರೂ ಮನೆಗೆ ಬಂದು ಕಥೆ ಹೇಳ್ತೀರಿ. ಟಿಕೇಟ್ ಸಿಗ್ಲಿಲ್ಲಂದ್ರೂ ಮನೆಗೆ ಬಂದು ಅದರ ಕಥೆ ಹೇಳ್ತೀರಿ. ಸ್ಕೂಲಿಗೆ ಹೋದ್ರೂ ಮನೆಗೆ ಬಂದು ಅದರ ಕಥೆ ಹೇಳ್ತೀರಿ. ಅಂದ್ರೆ ಅದಕ್ಕೊಂದು ಮಾನವೀಯ ಸ್ಪರ್ಶ ಕೊಟ್ಟು ಒಂದು ಆಕೃತಿ ನಿರ್ಮಾಣ ಆಗ್ತದೆ.

ಈಗ ಒಂದು ವಿದ್ಯಾಸಂಸ್ಥೆಯಲ್ಲಿ ಎಷ್ಟೆಲ್ಲಾ  ಕ್ಲಾಸ್ ರೂಮ್ ಗಳಿವೆ?ಡೆಸ್ಕುಗಳಿವೆ? ಡೆಸ್ಕು ಇದೆ ಅಂದ್ರೆ ಕಥೆ ಆಗ್ಲಿಲ್ಲ. ಡೆಸ್ಕ್ ನ ಮೇಲೆ ಒಂದು ಹೃದಯದ ಆಕಾರವಿದೆ. ಅದರಲ್ಲೊಂದು ಬಾಣದ ಚಿತ್ರವಿದೆ. ಅಂದ ಕೂಡ್ಲೆ ಅದು ಕಥೆಯಾಗ್ತದೆ.ಡೈಲೀ ಒಂಬತ್ತೂವರೆ ಗಂಟೆಗೆ ಸಾಗರದಿಂದ ಮೂಡಬಿದ್ರೆಗೆ ಬಸ್ಸು ಬರುತ್ತದೆ ಅಂದ್ರೆ ಕಥೆ ಆಗ್ಲಿಲ್ಲ. ದಿನಾ ಒಂಬತ್ತೂವರೆ ಗಂಟೆಗೆ ಸಾಗರದಿಂದ ಮೂಡಬಿದ್ರೆಗೆ ಬರುವ ಬಸ್ಸು ಇವತ್ತು ಬರಲಿಲ್ಲ ಅಂದ್ರೆ ಕಥೆ ಶುರುವಾಯ್ತು ಅಲ್ಲಿ.

ಅಂದ್ರೆ ಏನೋ ಒಂದು ಅನುಕ್ರಮವನ್ನು ಮುರಿದು ಮಾನವೀಯ ವಿನ್ಯಾಸಗಳನ್ನು ನೋಡೋದಕ್ಕೆ ಮನುಷ್ಯ ಕಥೆ ಕಟ್ಕೊಂಡ. ಕಡೆಗೆ ಬೇಕಾಗಿರೋದು ಒಂದು ಕಲೆಕ್ಟಿವ್ ಮೈಂಡ್. ನಾವೆಲ್ಲಾ ಸೇರಿ ಆಗಿರೋ ಒಂದು ಬದುಕು .ಹೀಗಾಗಿ ಕಥೆ ಎಂದ್ರೆ ಮತ್ತೊಬ್ಬ ವ್ಯಕ್ತಿ,ಎದುರು ಕೂತವನು, ಪಕ್ಕದಲ್ಲಿ ಕೂತವನು, ಬಸ್ಸಿನಲ್ಲಿ ನಿದ್ದೆ ಹೋದವನು, ಹೀಗೆ ಅವರು ಏನು ಹೇಳೋದಿಲ್ಲ. ಆದರೆ ಅವರ ಕಣ್ಣಿನಲ್ಲಿ ಕಥೆ ಇರ್ತದೆ. ಒಂದು ಲಿಖಿತ ರೂಪದ ದಾಖಲೆ ಅಲ್ಲ. ಕಥೆ ಎನ್ನುವುದು ನಮ್ಮ ಮನಸ್ಸಿನಲ್ಲಿ ಮಾನವೀಯ ವಿನ್ಯಾಸಗಳನ್ನು ಏರ್ಪಡಿಸುವ ಸಂಗತಿ.

ಈಗ ನಾನು ಕಥೆಗಾರನಾದೆ. ನನಗೆ ಇಂತಿಂಥ ಕಥೆಗಳು ಪ್ರೇರಣೆ ಕೊಟ್ಟವು ಎಂದು ಹೇಳಿದರೆ, ನಾನು ನನ್ನ ಬಗ್ಗೆ ಮಾತಾಡಿದ ಹಾಗೆ ಆಗ್ತದೆ. ಅದು ಅಶ್ಲೀಲ. ಅದು ಸರಿಯಲ್ಲ. ಆದರೆ ನಾನು ಕಥೆಗಾರನಾಗಿ ಇನ್ನೂ ಪ್ರಯತ್ನ ಮಾಡ್ತಾ ಇದ್ದೇನಲ್ಲ,ನನ್ನ ಕಥೆಯ ದಾರಿಯಲ್ಲಿ ನನಗೆ ನನ್ನನ್ನು ಕಾಡಿದ ಕೆಲವು ಸಂಗತಿಗಳನ್ನು ನಿಮ್ಮ ಜೊತೆ ಹಂಚ್ಕೋಬೇಕು. ಈ ಮಾನವೀಯ ಜಗತ್ತು ಯಾಕೆ ಕುತೂಹಲಕಾರಿ ಅಂತ ಗೊತ್ತಾಗಿದ್ದು ಆವಾಗ . ನಮ್ಮೂರಲ್ಲೊಬ್ಬ ಮರುಳ ಇದ್ದ. ಅವನಿಗೊಂದು ಒಳ್ಳೆ ಅಭ್ಯಾಸ ಇತ್ತು. ಅವನು ಬೆಳಿಗ್ಗೆ ಆದ ಕೂಡಲೇ ಪೂರ್ವ ದಿಕ್ಕಿಗೆ ಮುಖಮಾಡಿ ನಿಲ್ತಿದ್ದ. ಬಾರೋ,ಬಾರೋ,ಬಾರೋ ಅಂತಿದ್ದ. ಸೂರ್ಯ ಬಂದು ಬಿಡ್ತಿದ್ದ. ಸಂಜೆ ಆದ ಕೂಡಲೇ ಅವನು ಸಮುದ್ರ ತೀರಕ್ಕೆ ಹೋಗ್ತಿದ್ದ. ಹೋಗಿ, ಹೋಗು ಬಡ್ಡಿಮಗನೇ,ಕತ್ತೆ ಹೋಗು ಅಂತಿದ್ದ . ಸೂರ್ಯ ಮುಳುಗಿ ಬಿಡ್ತಿದ್ದ. ಆಮೇಲೆ ಅವನು ಸೂರ್ಯನನ್ನು ವಾಪಸ್ಸು ಕಳಸಿದಂತಹ ಆವೇಶದಲ್ಲಿ ಮನೆಗೆ ಹೋಗ್ತಿದ್ದ. ಈಗ ಅವನಿಗೆ ಅನ್ನಿಸ್ತಾ ಇದ್ದದ್ದು ಸುಳ್ಳೋ, ಅದು ಖರೆಯೋ, ಅದು ತಪ್ಪೋ,ಸರಿಯೋ,ಕಥೆಯೋ-ಏನದು?ನನಗನಿಸ್ತದೆ ಅವನು ಬಹಳ ಖುಷಿಯಿಂದ ಸೂರ್ಯನನ್ನು ನಡೆದಾಡಿಸ್ತೇನೆ ಅಂದುಕೊಳ್ಳುತ್ತಿದ್ದನಲ್ಲ. ಇದು ಕಥೆ.ಒಮ್ಮೆ ನಮ್ಮೂರಿಗೆ ಏಣಗಿ ಬಾಳಪ್ಪನವರ ನಾಟಕ ಕಂಪೆನಿ ಬಂದಿತ್ತು. ಆ ನಾಟಕ ಕಂಪೆನಿಯಲ್ಲಿ ಒಬ್ಬರು ಸಂಗೀತ ಶಿಕ್ಷಕರಿದ್ದರು. ಅವರಿಗೆ ಕಣ್ಣು ಕಾಣ್ತಾ ಇರ್ಲಿಲ್ಲ. ನಮ್ಮ ಗೋಕರ್ಣದಲ್ಲಿ ನಾಟಕ ಮಾಡ್ತಿದ್ರು. ಮರುದಿನ ಸಂಜೆ ಆ ನಾಟಕ ಕಂಪೆನಿಯವರು ಸೂರ್ಯಾಸ್ತ ನೋಡಲು ಹೋಗ್ತಿದ್ರು. ನಮಗೆಲ್ಲಾ ಮಜಾ. ನಿನ್ನೆ ಹೀರೋ ಆಗಿದ್ದವನು ಇವತ್ತು ಬೀಡಿ ಸೇದುತ್ತಾ ಹೋಗ್ತಿದ್ದಾನೆ.ನಿನ್ನೆ ಹೀರೋಯಿನ್ ಆಗಿದ್ದವಳು ಇವತ್ತು ವಿಚಿತ್ರವಾಗಿ ಹೋಗ್ತಿದ್ದಾಳೆ. ಅಂದ್ರೆ ನಿನ್ನೆ ನೋಡಿದ ನಾಟಕದ ನೆನಪಿನಲ್ಲಿ ಆ ನಟರನ್ನು ನೋಡ್ಕೊಂಡು ಹಿಂದೆ ಮುಂದೆ ಹೋಗ್ತಿದ್ವಿ ಸಮುದ್ರದ ತೀರಕ್ಕೆ. ಆ ಕಣ್ಣು ಕಾಣದ ಸಂಗೀತ ಮಾಸ್ಟರು ಕೂಡ ಸೂರ್ಯಾಸ್ತ ನೋಡ್ಲಿಕ್ಕೆ ಸಮುದ್ರ ತೀರಕ್ಕೆ ಬರ್ತಿದ್ರು.ನನಗೆ ಬಹಳ ಮಜಾ ಅನ್ನಿಸ್ತಿತ್ತು. ಮತ್ತೆ ಅವರಿಗೆ ಕೈ ಹಿಡಿದುಕೊಂಡು ಅಜ್ಜ ನಾವು ಬರ್ತಿವಿ ಎಂದೂ ಹೇಳಿ ಅವರನ್ನು ಕರ್ಕೊಂಡು ಸಮುದ್ರ ತೀರಕ್ಕೆ ಹೋಗ್ತಿದ್ವಿ. ಅಲ್ಲಿ ಹೋಗಿ ಅವರು ಕೂತ್ಕೋಳ್ತಿದ್ರು. ಆಮೇಲೆ ಸೂರ್ಯಾಸ್ತ ಆಗ್ತಿತ್ತು. ಆದ ಮೇಲೆ ಅವರು ಆಯ್ತೇನೋ ಅಂತ ಕೇಳ್ತಿದ್ರು.ನಾವು  ಹೂಂ ರೀ ಎಂದು ಹೇಳ್ತಿದ್ವಿ. ಹಾಗಾದರೆ ನಡಿ ಎಂದು ಒಂದು ವಚನ ಹಾಡ್ತಿದ್ರು ಮತ್ತೆ ಹೋಗ್ತಿದ್ರು. ಕಣ್ಣು ಕಾಣದಂತಹ ವ್ಯಕ್ತಿಗೆ,ಸಂಗೀತವನ್ನು  ಆರಾಧಿಸುವ ವ್ಯಕ್ತಿಗೆ,ಸೂರ್ಯಾಸ್ತ ಯಾವ ಥರಾ ಕಾಣ್ತಿರಬಹುದು. ಅದೇನು ನೋಡ್ತಿದ್ದಾರೆ ಅವ್ರು ಅಂತ ನನಗೊಂದು ಕುತೂಹಲ ಬಂತು. ಇದು ನನ್ನ ಗೋಕರ್ಣದ ಒಂದೆರಡು ಘಟನೆಗಳು.

ಇನ್ನೊಂದು ಘಟನೆ, ನಮ್ಮ ಪಕ್ಕದ ಮನೆಯಲ್ಲಿ ಒಂದು ಹೆಂಗ್ಸು ಇದ್ರು. ಪಾಪ, ಅವ್ರಿಗೆ ಮಕ್ಕಳ್ಲಿರಿಲ್ಲ. ಆದ್ರೆ ಅವರಿಗೆ ಮನೆಯಲ್ಲಿ ಮತ್ತೊಬ್ಬ ಸಂಬಂಧಿಕರ ಹೆಣ್ಮಕ್ಳು ಇದ್ರು. ಈ ಹೆಂಗಸಿಗೆ ಒಂದು ರೀತಿಯ ರೋಗ, ಮೈತುಂಬಾ ಒಂದು ಬಿಳಿಯಾಗಿ ಬಿಟ್ಟಿತ್ತು. ಹೀಗಾಗಿ ಅವರ ಮನೆಗೆ ಜನ ಬರೋದು ನಿಲ್ಸಿ ಬಿಟ್ಟಿದ್ರು.ಆ ಮನೇಲಿ ಮದುವೆಗೆ ಬೆಳೆದ ಅವಳ ಅಕ್ಕನ ಮಕ್ಳಿದ್ರು.ಬಹಳ ಕಷ್ಟ. ಈಗ ಏನು ಮಾಡ್ಬೇಕು.ಒಂದು ದಿವಸ ಅವರ ಅಕ್ಕ ನಮ್ಮನೆಗೆ ಬಂದು ನಮ್ಮ ತಾಯಿಯತ್ರ ಹೇಳ್ತಿದ್ರು ನೋಡ್ರಿ ಅವಳಿಗೆ ಜೀವನದಲ್ಲಿ ಆಸಕ್ತಿ ಇಲ್ಲ ಅಂತ ಹೇಳ್ತಾಳೆ. ನನಗೇನಾದರೂ ಟ್ಯಾಬ್ಲೆಟ್ ತಂದು ಕೊಡಿ ನಾನು ಸಾಯ್ತೇನೆ ಅಂತ ಹೇಳ್ತಾಳೆ. ನಾವು ಹೀಗಾಗಿ government doctor ಹತ್ರ ಹೋದ್ವಿ.Government doctor tablet ಕೊಟ್ರು.Tablet ಕೊಟ್ರೆ ನಾಳೆ ತಗೋತಿನಿ ಅಂತಾಳೆ  ಅಂದರು. ಅಂದ್ರೆ ಅವಳು ಮನೆಯಲ್ಲಿ ಇರ್ಬಾರ್ದು, ಆ ಕಾಯಿಲೆ ಮನೆಯವರಿಗೆ ಸಹಿಸೋಕಾಗೋದಿಲ್ಲ. ಅದ್ರಿಂದ ಬೆಳೀತ ಇರೋ ಹೆಣ್ಮಕ್ಳಿಗೆ ಸಂಬಂಧ ಬರೋದಿಲ್ಲ.ಹೀಗಾಗಿ ಇವಳ ಕಥೆ ಮುಗಿಸಬೇಕುಂತ ಒಂದು ಹುನ್ನಾರ ಅದು ಅಂತ ನನಗನ್ನಿಸಿತು. ಅದಕ್ಕಾಗಿ ಅವಳ ಬಾಯಿಯಿಂದಲೇ ತಂದ್ಕೊಡಿ ಎಂದು ಹೇಳಿಸಿದ ಹಂಗೆ ಮಾಡಿ ಡಾಕ್ಟರ್ ಹತ್ರ ಹೋಗಿ ನಿದ್ದೆ ಗುಳಿಗೆ ತಂದು ಕೊಟ್ಟಿದ್ದಾರೆ. ಆದ್ರೆ ಅವಳಿಗೆ ಅದೆಲ್ಲ ಗೊತ್ತಿದ್ರೂ ಕೂಡ ಆ Tablet ನ್ನು ಕೈಯಲ್ಲಿ ಹಿಡ್ಕೊಂಡು  ಅವ್ಳು ತೊಗೋತೆನೆ ಅಂತ ಹೇಳ್ತಿದ್ದಾಳಲ್ಲ. ಮತ್ತೊಂದು ದಿವಸ, ಮತ್ತೊಂದು ಎಂದು ಹೇಳ್ತಿದ್ದಾಳಲ್ಲ.ಇದೇನದು?ಇದು ಆಳವಾಗಿ ನನ್ನನ್ನು ಕಲಕಿದ ಬಾಲ್ಯದ ಘಟನೆ.

ಆಮೇಲೆ ನಾನು ಮುಂಬೈಗೆ ಹೋದೆ. ನಾವು ಈಗ ಕನ್ನಡ,ಸಂಸ್ಕೃತಿ, ಭಾಷೆ ಅಂತ ಮಾತಾಡುವಂತಹ ಹೊತ್ತಲ್ಲಿ ಮುಂಬೈನಲ್ಲಿ ಕಮಾಂಡೋಗಳು ತಮ್ಮ ಜೀವವನ್ನು ಒತ್ತೆ ಇಟ್ಟು ಎಷ್ಟೋ ಅಮಾಯಕರನ್ನು ಉಳಿಸೋದಕ್ಕೆ ಹೋರಾಡ್ತಾ ಇದ್ದಾರೆ.ಅಲ್ಲಿ ಸೈನಿಕರು ಕಾರ್ಗಿಲ್ ನಲ್ಲೋ ಮತ್ತೆಲ್ಲೋ ಸಾಯ್ತಿದ್ದಾರೆ. ನೀವಿಲ್ಲಿ ಕೂತ್ಕಂಡು ಮಾತಾಡುವುದಕ್ಕೆ ಅನುವಾಗ್ಲಿ ಎಂದು ಅವರು ಸಾಯ್ತಿದ್ದಾರೆ. ಈಗ ಸದ್ಯಕ್ಕೆ ಕನ್ನಡಕ್ಕೂ ಕೂಡ ಆ ರೀತಿ ಪರಿಸ್ಥಿತಿ ಬಂದಿರುವುದು. ಕನ್ನಡ ಅಂದ್ರೆ ಏನು? ಎಂದು ಕೇಳಿದರೆ ಬಹಳ ಕನ್ ಪ್ಯೂಜನ್ ಅವರಿಗೆ. ಕನ್ನಡ ಅಂದ್ರೆ ಒಳನಾಡಿನವರಿಗೆ ನೀರಿದ್ಹಂಗೆ. ಆದ್ರೆ ಹೊರನಾಡಿನವರಿಗೆ ಮರುಭೂಮಿಯಲ್ಲಿ ನೀರಿದ್ಹಂಗೆ.ಅದರ ಒಂದೊಂದು ಹನಿ,ಒಂದೊಂದು ಗುಟುಕು ಎಷ್ಟೋಂದು ಅಮೂಲ್ಯ ಅಂತ ಗೊತ್ತಾಗ್ತ  ಇರ್ತದೆ. ಅದಕ್ಕಾಗಿ ನಾವು ಕನ್ನಡ ಅಂದ್ರೆ ಏನು ಎಂದು ದೊಡ್ಡ ದೊಡ್ಡ ಮಾತಾಡ್ತಾ ಇರ್ತಿವಲ್ಲ. ನೀವು ಮಿಯಾಮಿನಲ್ಲೋ, ಅಸ್ಸಾಂನಲ್ಲೋ, ಟಿಬೇಟ್ ನಲ್ಲೋ ಇದ್ದುಕೊಂಡು ಒಳ್ಳೆಯ ಪ್ರಜೆಯಾಗಿ,ಒಳ್ಳೆಯ ಗಂಡನಾಗಿ,ಒಳ್ಳೆಯ ಸ್ನೇಹಿತನಾಗಿ,ಒಳ್ಳೆಯ ಅಪ್ಪನಾಗಿ,ಒಳ್ಳೆಯ ಕೆಲಸಗಾರನಾಗಿ,ಒಳ್ಳೆಯ ಪ್ರೇಮಿಯಾಗಿ ಇರೋದು ಕನ್ನಡತನನೋ ಅಥವಾ ಇಲ್ಲೇ ವಿಧಾನಸೌಧದ ಹತ್ತಿರ ಮನೆ ಮಾಡಿಕೊಂಡು,ಕೈತುಂಬಾ ಉಂಗುರ ಹಾಕಿಕೊಂಡು,ಕೊರಳಲ್ಲಿ ಚೈನ್ ಹಾಕಿಕೊಂಡು, ಭ್ರಷ್ಟಾಚಾರ ಮಾಡ್ಕೊಂಡು, ಹೆಂಡತಿನ ಒಂದು ಕೆಲಸದವಳ ಥರ ನೋಡ್ಕೊಂಡು, ಮಕ್ಕಳಿಗೆ ಸಿಕ್ಕಾಪಟ್ಟೆ ವೆಹಿಕಲ್ ಕೊಟ್ಟು ಅವರ್ನ ಹಾಳು ಮಾಡ್ಕೊಂಡು, ದುಡಿದೆನೇ ಕೂತಲ್ಲೇ ದುಡ್ಡು  ಮಾಡೋದು ಎನ್ನುವುದನ್ನು ಪಾಠ ಮಾಡ್ಕೊಂಡು, ಜೈಭಾರತ ಜನನಿಯ ತನುಜಾತೆ ಎಂದರೆ ಕನ್ನಡತನಾನ? ಒಳ್ಳೆಯ ಪ್ರಜೆಯಾಗಿ,ತಂದೆಯಾಗಿ,ಎಲ್ಲರನ್ನು ಸಮತೆಯಿಂದ ಮತ್ತು ಮಮತೆಯಿಂದ ನೋಡುವಂತವನಾಗಿ ಇದ್ರೆ ಮಾತ್ರ ಅದು ಕನ್ನಡ ಆಗುತ್ತೆ. ನಮಗೆ ಸಮತೆಯೂ ಬೇಡ.ಮಮತೆ ಬೇಡ.ಆದ್ರೆ ಕನ್ನಡ ಬೇಕು.ಆದ್ರೆ ಕನ್ನಡ ಎಂಬ Space ಆ ಥರಹದ್ದು. ಆದರೆ ಸಾಹಿತ್ಯ, ಕಥೆ ಮಾಡುವುದು ಆ ರೀತಿಯ Space ನ್ನು Create ಮಾಡೋದು.ಮನುಷ್ಯ ವಿನ್ಯಾಸಗಳಿಗೆ ಸಂಬಂಧಿಸಿದ ಒಂದು ಆವರಣವನ್ನು ತಯಾರು ಮಾಡೋದು.

ಮುಂಬಯಿಗೆ ಹೋದೆ. ಮುಂಬಯಿಗೆ ಹೋದಾಗ ಒಂದು ಸಲ ರೈಲ್ವೆ ಆಕ್ಸಿಡೆಂಟ್ ಆಗಿ ಬಿಟ್ಟಿತು.ಒಬ್ಬನ ರುಂಡ ಮುಂಡ ಬೇರೆಯಾಗಿ ಬಿಟ್ಟಿತು. ಒಬ್ಬ ಮುಂಡವನ್ನು.ರುಂಡವನ್ನು ಕೈಯಲ್ಲಿ ಹಿಡ್ಕೊಂಡು ಬಂದ. ಅವ್ನು ನನ್ನೆದುರೆ ಹಾದುಹೋದ. ಹೋಗುವಾಗ ಒಂದು ಮಾತು ಹೇಳಿದ. “ಜಬ್ ಜಿಂದಾ ಥಾ ಭಂಗೀ ಕೋ ಗಾಲಿ ದೇತಾ ಹೋಗಾ” ಅಂದ್ರೆ ಈ ವ್ಯಕ್ತಿ ಬದುಕಿದ್ದಾಗ ಭಂಗಿ ಅಂದ್ರೆ ಅತ್ಯಂತ ಕೆಳವರ್ಗದವನಿಗೆ ಶಾಪ ಕೊಡ್ತಿರ್ಬಹುದು.ಈಗ ಇವನ ರುಂಡ ನನ್ನ ಕೈಯಲ್ಲಿದೆ ಅನ್ನುವ ಒಂದು ತರಹದ ಮಾತಿತ್ತು ಅಲ್ಲಿ.ಅದು ಅಲ್ಲಾಡಿಸಿದಂತಹ ಮಾತು.

ಇನ್ನೊಂದು ಘಟನೆ, ಒಂದು ಹುಚ್ಚಿ ಇದ್ಳು.ಹದಿಹರೆಯದ ಹುಚ್ಚಿ ಪಾಪ. ಮೈಮೇಲೆ ಕೊಳಕಾದ ಬಟ್ಟೆ ಹಾಕೊಂಡಿದ್ದಾಳೆ. ತಲೆ ಜಿಡ್ಡುಕಟ್ಟಿದೆ.ನಂತರ ಹತ್ತಿಪ್ಪತ್ತು ಜನರ ಹುಡುಗಿಯರ ಒಂದು ತಂಡ ಬಂತು.ಹುಡುಗಿಯರು ಸಾಮಾನ್ಯವಾಗಿ ಒಟ್ಟಿಗೆ ಇದ್ದಾಗ ಕಿಸಿಪಿಸಿ ಎಂದು ನಗ್ತಾ ಇರ್ತಾರೆ. ನಿಷ್ಕಾರಣವಾಗಿ ಖುಷಿಯಲ್ಲಿ ನಗ್ತಾ ಇರ್ತಾರೆ.ಯಾರದೋ ಪರ್ಸ್ ಬಿದ್ದರೂ ಕಿಸ್ ಎಂದೂ ನಗ್ತಾರೆ.ಅದೇನಾದ್ರೂ ನಗ್ತಾರೆ. ಅದು ಒಂದು ಸಮಾಜದ ಆರೋಗ್ಯದ ಒಂದು ಲಕ್ಷಣ ಅದು. ಆ ರೀತಿ ಕಿಸಿಪಿಸಿ ನಗುವ ಹತ್ತು-ಹದಿನೈದು ಹುಡುಗಿಯರು ಬಂದ್ರು ಅವ್ರು ಟಿಕೇಟ್ ತೊಗೊಳ್ಳಲು ಹೋದ್ರು. ಈ ಟಿಕೇಟು ತೆಗೆದುಕೊಳ್ಳಲು ಹೋಗುವಾಗ ಈ ಗಲೀಜಾಗಿ ಕೂತಿದ್ದ ಹುಚ್ಚಿ ಪಟ್ಟಂತ ಎದ್ದು ನಿಂತಳು. ಅದ್ಯಾಕೆ ಎದ್ದು ನಿಂತಳೋ ಗೊತ್ತಿಲ್ಲ. ಅವಳು ಎದ್ದು ನಿಂತದ್ದೇ ಹತ್ತು ಹುಡುಗಿಯರು ಯಾರೋ ಮೈಮೇಲೆ ತಣ್ಣೀರೆರಚಿದ ತರ ದೂರ ಹೋಗ್ಬಿಟ್ರು. ಆಗ ಆ ಹುಡುಗಿ ಒಂದು ಮಾತನ್ನು ಆಡಿದ್ಳು.ತನ್ನಷ್ಟಕ್ಕೆ ಆಡಿಕೊಂಡ್ಳು. ಸಾರಿ ದುನಿಯಾ ಮೇರೆ  ಕಪ್ ಡೆ ಪೆಹನ್ ಕರ್ ಗೂಮ್ತಿ ಹೇ. ಔರ್ ಮೇರೆ ಬಿ ಹಸ್ತಿ ಹೇ. ಅಂದ್ರೆ ಇಡೀ ಜಗತ್ತಿನಲ್ಲಿರುವ ಎಲ್ಲರೂ ನನ್ನ ಬಟ್ಟೆ ಹಾಕೊಂಡು ತಿರುಗ್ತಾ ಇದ್ದಾರೆ ಮತ್ತು ನನ್ನನ್ನು ನೋಡಿ ನಗ್ತಿದ್ದಾರೆ ಎಂದಳು. ಈ ಮಾತು ಯಾರು ಬರೆದುಕೊಟ್ಟದ್ದಲ್ಲ. ಅವಳೇ ಹೇಳಿದ್ದಾಳೆ. ಅಂದ್ರೆ ಅವಳಿಗೆ ಸೇರಬೇಕಾದುದು. ಕೆಲವು ಕಡೆ ಇರುತ್ತೆ. ಮೂಲ ತತ್ವ ಇದು. ಅವರೆಲ್ಲಾ ಚಂದ  ಚಂದ ಉಡುಪು ಹಾಕೊಂಡಿದ್ದಾರೆ. ಅದೆಲ್ಲಾ ನಂದು. ಆದರೆ ನನ್ನನ್ನು ನೋಡಿ ನಗ್ತಿದ್ದಾರೆ ಅಂದ್ಳು ಅವ್ಳು. ಎಂತ ಅದ್ಭುತವಾದ ಮಾತು ಹುಚ್ಚಿ ಆಡಿದ್ದಳು.

ಆಮೇಲೆ ನೀರಿನ ಒಂದು ಕಥೆ ಬರಿದಿದ್ದೀನಿ. ಒಂದು ಸಲ ಸಿಕ್ಕಾಪಟ್ಟೆ ಮಳೆ ಬಂತು. ಹೆಂಗೆ ಬಂತೆಂದರೆ ಜೀವಮಾನದಲ್ಲಿ ಬರದಂತಹ ಮಳೆ ಬಂತು ಮತ್ತು ನಾವೆಲ್ಲಾ ಅವರವರ ಜಾಗದಲ್ಲಿ 18 ತಾಸು ಸಿಕ್ಕಾಕ್ಕಿಕೊಂಡೆವು. ಎಲ್ಲರೂ ಅಲ್ಲಲ್ಲಿ ಇದ್ದರು.ಇದು ವಿಚಿತ್ರವಾಗಿತ್ತು. ನಾವು ಒಂದು ಜಾಗದಲ್ಲಿ ಸಿಕ್ಕಾಕೊಂಡಿದ್ದೀವಿ ಆಗ ನಮಗೆ ಒಂದು ವಿನ್ಯಾಸಗಳು ಕಂಡವು. ಸಾಮಾನ್ಯವಾಗಿ ಕಾರಲ್ಲಿ ಇದ್ದವರು ಹೊರಗಡೆ ಇದ್ದವರಿಗೆ ಏನಾದರೂ ಕೊಡುತ್ತಾರೆ. ಉಳ್ಳವರು ಇರದವರಿಗೆ ಕೊಡ್ತಾರೆ. ಆ ಕಾರಲ್ಲಿ ಟ್ಯಾಕ್ಸಿಯೊಳಗೆ ಕೂತವರಿಗೆ ಪೇಡ ಕೊಡುತ್ತಿದ್ದರು.ಕಿತ್ತಳೆ ಹಣ್ಣನ್ನು ಕೊಡುತ್ತಿದ್ದರು.ಸ್ಕೂಲಿಗೆ ಹೋಗುವ ಮಕ್ಕಳು ಲಂಚ್ ಬಾಕ್ಸ ತೆಗೆದು ಒಳಗಡೆ ಇದ್ದವರಿಗೆ ಕೊಡುತ್ತಿದ್ದರು. ಅಂದರೆ ಇಡೀ ಷಹರ ಒಬ್ಬರಿಗೆ ಒಬ್ಬರು ನೆರವಾಗುವ ರೀತಿ ಅದ್ಬುತವಾದದು. ಈ ಬಸ್ಸು ಸಿಕ್ಕಿಹಾಕಿಕೊಂಡಿದ್ದರೆ ಪಕ್ಕದಲ್ಲಿ ಒಂದು ಬಿಲ್ಡಿಂಗ್ ಇದ್ದರೆ ಆ ಬಸ್ಸಿನಲ್ಲಿ ಹೆಂಗಸರನ್ನು ಮಕ್ಕಳನ್ನು ಆ ಬಿಲ್ಡಿಂಗ್ ನವರು ಕರೆಯುತ್ತಾ ಇದ್ರು. ಇವರು ಹೋಗಿ ಅವರ ಮನೆಯಲ್ಲಿ ಉಳ್ಕೊಳ್ಳೋದು. ಇವರು ಯಾರೋ  ಅವರು ಯಾರೋ ಗೊತ್ತಿಲ್ಲ. ಅಂಗಡಿಯವ್ರು ಮಕ್ಳನ್ನು ಕರೆದು ಅವ್ರಿಗೆ ಊಟ ಇವತ್ತು ಇಲ್ಲೇ ಇರಪ್ಪ. ನಾಳೆ ನಿಮ್ಮ ಮನೆಗೆ ಮುಟ್ಟಿಸ್ತಿವಿ ಅಂತ ಹೇಳ್ತಿದ್ರು. ಅಂತಿಮವಾಗಿ ನಾವು ಸಾಹಿತ್ಯದಲ್ಲಿ ಮಾಡಲು ಹೊರಟದ್ದು ಇದನ್ನೇ.

ಆಮೇಲೆ ನೀರಿಗೆ ಸಂಬಂಧಪಟ್ಟ ಹಾಗೆ ಒಂದು ಘಟನೆ ನಡೆಯಿತು. ನಾನು ನನ್ನ ಸ್ನೇಹಿತ ಸಿಕ್ಕಾಕೊಂಡಿದ್ವಿ. ನಮಗೆ ಕುಡಿಯಲು ನೀರು ಬೇಕು. ಭಯಂಕರ ಮಳೆ ಇದೆ ಕುಡಿಯಲು ನೀರಿಲ್ಲ. ಅಂಗಡಿಗೆ ಹೋದೆ. ಆ ಅಂಗಡಿಯವನತ್ತ  ಬಿಸ್ಲೇರಿ ಬಾಟಲಿಗಳ ಕ್ರೇಟ್ ಇತ್ತು. ನಾವು ಸಿಕ್ಕಾಕೊಂಡು ಬಿಟ್ಟಿದ್ದೇವೆ. ಬೆಂಗ್ಳೂರಿಗೆ ಹೋಗ್ಬೇಕು. ನಾವು ನಾಲ್ಕು ಜನ ಇದ್ದೇವೆ. ನಿಮ್ಮತ್ರ ಹನ್ನೆರಡು ಬಿಸ್ಲೇರಿ ಬಾಟಲಿ ಇದೆ . ಡಬಲ್ ದುಡ್ಡು ಕೊಡ್ತೇನೆ ಕೊಡಿ ನಮಗೆ ಅಂದೆ. ಅವ್ರ್ನು ವಯಸ್ಸಾದವನು. ನೋಡಿದ. “ಏ ಕ್ಯಾ ಪೈಸಾ ಕಮಾನೆ ಕಾ ವಕ್ತ್ ಹೈ ಕ್ಯಾ” ಎಂದು ಕೇಳಿದ. ಇದು ದುಡ್ಡು ಮಾಡುವ ಸಮಯ ಎಂದು ತಿಳ್ಕೊಂಡಿದ್ದೀಯಾ ಅಂತ ನನಗೆ ಬೈದ ಅವನು. ಆಮೇಲೆ ನಿನ್ನ ವಯಸ್ಸು ನೋಡು. ನೀನು ತರುಣನಾಗಿದ್ದೀಯಾ.ನೀನೊಬ್ಬನೇ ಸಿಕ್ಕಾಕೊಂಡಿದ್ದೀಯಾ ಇಲ್ಲಿ? ನೂರಾರು ಜನ, ಸಾವಿರಾರು ಜನ, ಹೆಂಗಸರು,ವಯಸ್ಸಾದವರು ಎಲ್ಲರೂ ಸಿಕ್ಕಾಕೊಂಡಿದ್ದಾರೆ. ನಿನಗೊಬ್ನಿಗೆ ಎಲ್ಲಾ ಕೊಟ್ರೆ ಅವರಿಗೆ ಏನು ಮಾಡ್ಬೇಕು ನಾನು. ನೀವು 3 ಜನ ಇದೀರಲ್ಲ.1 ಬಾಟ್ಲಿ ಜಾಸ್ತಿಕೊಡ್ತೀನಿ.4 ಬಾಟ್ಲಿ ಕೊಟ್ಟು ಅದರ ಮುಖಬೆಲೆ ತೊಗೊಂಡ.ಅದು ಕೂಡ ಒಂದು ದೊಡ್ಡ ಪಾಠ ಆಯ್ತು.

ಇನ್ನೊಂದು ನೀರಿಗೆ ಸಂಬಂಧಪಟ್ಟ ಘಟನೆ. ನಾಗರಾಜ ಹುಯಿಲಗೋಳ ಕ್ಯಾನ್ಸರ್ ಸ್ಪೆಷಲಿಸ್ಟ್. ಅವನತ್ರ ಬರುವ ಎಲ್ಲಾ ಪೇಷೆಂಟ್ ಗಳು ಇನ್ನು ಆರು ತಿಂಗಳು ಬಾಕಿ, ಮೂರು ತಿಂಗಳು ಬಾಕಿ, ಎರಡು ತಿಂಗಳು ಬಾಕಿ ಅಂಥವರು. ಅಲ್ಲಿ ಹೋಗಿ ಕೂತಾಗ ಒಬ್ಬ ವೃದ್ದ ಬಂದ. ಆ ವೃದ್ದ ಬಂದವನು ಹೇಳಿದ ಮೇಯಲ್ಲಿ ಮೊಮ್ಮಗಳ ಮದುವೆ ಇದೆ. ಸ್ವಲ್ಪ ದಿನ ಸಾವು ಮುಂದುಡಿರಿ ಎಂದ. ಡಾಕ್ಟರ್ ಆಗ ಹೇಳಿದ್ರು, ಏ ಏನು ಆಗಿಲ್ಲ ನಿಮ್ಗೆ. ನೀವು ಚೆನ್ನಾಗಿ 5 ವರ್ಷ ಬದುಕ್ತೀರಿ ಬಹಳ ಸುಂದರವಾಗಿ ಬದುಕ್ತೀರಿ ಅಂದ್ರು. ಆಗ ಅವನು ಒಂದು ಮಾತು ಹೇಳಿದ. ನೀವೆನು ಸುಳ್ಳು ಹೇಳ್ಬೇಡಿ.ಮೇರೆ ಕೊ ಕ್ಯಾ ಹುವಾ ಹೇ ಮುಜೆ ಮಾಲುಮ್ ಹೈ, ಮೇರೆ ಕೋ ಕ್ಯೂಂ ಹುವಾ ಹೇ ಒಬಿ ಮಾಲುಮ್ ಹೈ ಎಂದ. ಕ್ಯಾ ಹುವಾ ಹೈ? ಸರಿ ನನಗೆ ಗೊತ್ತು. ಕ್ಯೂಂ ಹುವಾ ಹೈ? ಹೇಗೆ ಆಗಿದೆ ಎಂದೂ ನನಗೆ ಗೊತ್ತು ಎಂದ. ಮೈ ಪಾನಿ ಬೇಜ ಇಸ್ಲಿಎ. ಎಂದ ಅಂದ್ರೆ ಭಾರತದಲ್ಲಿ 70 ರ ದಶಕದಲ್ಲಿ ಕುಡಿಯುವ ನೀರನ್ನು ಬಾಟ್ಲಿಯಲ್ಲಿ ಹಾಕಿ ಮಾರಿದ ಪ್ರಥಮ ವರ್ತಕ ಇವನು. ಅವನು ತುಂಬಾ ದುಡ್ಡು ಮಾಡಿದ್ದಾನೆ. ಅವನಿಗೆ  ಈಗಲೂ ಅದು ಕಾಡುತ್ತಿದೆ. ನಾನು ನೀರನ್ನು ಮಾರ್ಬಾರ್ದ್ದಿತ್ತು. ನಾನು ನೀರು ಮಾರಿದ್ದರಿಂದ ನನಗೆ ಕ್ಯಾನ್ಸರ್ ಆಗಿದೆ. ನೀರು ಮಾರುವುದು ಪಾಪ. ನೀರು ಮಾರಿದ ಪಾಪಕ್ಕೆ ಕ್ಯಾನ್ಸರ್ ಬಂದ್ರೆ ಅದನ್ನು ನಾನು ಸ್ವೀಕರಿಸಬೇಕು. ಎನ್ನುವಂತಹ ವೈಯಕ್ತಿಕ ಪ್ರಜ್ಞೆಯಲ್ಲಿ ಅವನು ಸನ್ನದ್ದನಾಗಿದ್ದಾನೆ.

ಒಬ್ಬ ಕವಿ ಬರೆಯುವಾಗ ಮಾತ್ರ ಕವಿ. ಒಬ್ಬ ಕಥೆಗಾರ ಕಥೆ ಬರೆಯುವಾಗ ಮಾತ್ರ ಕಥೆಗಾರ. ಒಬ್ಬ ಸಂಗೀತಗಾರ ಹಾಡುವಾಗ ಮಾತ್ರ ಸಂಗೀತಗಾರ. ಉಳಿದಂತೆ ಅವನ್ನೊಬ್ಬ ತೀವ್ರ ಜೀವಿ. ಬರವಣಿಗೆ ಮಾಡುವವರಿಗೆ ಸಾಕಷ್ಟು ಸೌಲಭ್ಯಗಳಿವೆ. ಐವತ್ತೆರಡು ಕಥೆಗಳು ಬೇಕು ತಿಂಗಳಿಗೆ. ಈವಾಗ ಏನು ಬರೆದ್ರು ಪ್ರಿಂಟಾಗುತ್ತೆ. ಈ ವಿಪುಲತೆ ಬಹಳ ಡೇಂಜರಸ್ ಆದ ಸನ್ನಿವೇಶ. ಬರವಣಿಗೆ ಸುಲಭವಾಗುತ್ತೆ ಆಗ. ಬರವಣಿಗೆ ಕಷ್ಟ ಮಾಡ್ಕೋಬೇಕು. ಕಷ್ಟಕರವಾದ ಕವಿತೆಯನ್ನು ಒಬ್ಬ ಕವಿ ಬರೆದಾಗ ಅವನ ಸೀಮೆಗಳು ಹಿಗ್ಗುತ್ತವೆ. ಮತ್ತು ಅವನ ಸೀಮೆಗಳು ಹಿಗ್ಗಿದಾಗ ಅವನ ಜೊತೆಗೆ ಇಡೀ ಸಮಯ ಮತ್ತು ಒಂದು ಸಾಮೂಹಿಕ ಮನಸ್ಸು ಕೂಡ ಹಿಗ್ಗುತ್ತದೆ. ಹೀಗಾಗಿ ಕಥೆ ಎನ್ನುವುದು ಬರೀ ಒಂದು ದಾಖಲೆ ಅಲ್ಲ. ಅದು human interest. ಉಳಿದ ಜೀವಿಗಳಲ್ಲಿ ಮಾನವೀಯ ವಿನ್ಯಾಸವನ್ನು ನೋಡಿ. ಅದರಲ್ಲಿ ನಾನು ಎಂದು ತಿಳಿದುಕೊಂಡು ಅದರ ಜೊತೆಗೆ ಬೆರೆಯುವಂತಹ ಒಂದು human interest.. ಆ ಒಂದು ಕಣ್ಣು ನಾವು ಕಳೆದುಕೊಂಡರೆ ಬರವಣಿಗೆಗೆ ಅರ್ಥ ಇರುವುದಿಲ್ಲ.ಸಂಕುಚಿತ ಜಗತ್ತಿನಲ್ಲಿ ನಾವು ಉಳಿದುಕೊಂಡರೆ ಯಾವ  ಸಂಸ್ಕೃತಿಯೂ ನಮ್ಮನ್ನು ಉದ್ದಾರ ಮಾಡಲ್ಲ.

ಡಾ.ರಾಜ್ ಕುಮಾರವರನ್ನು ವೀರಪ್ಪನ್ ಅಪಹರಿಸಿ ಬಿಡುಗಡೆಯಾಗುವ ಸಂದರ್ಭದಲ್ಲಿ ರಾಜ್ ಕುಮಾರ್ ರವರು ಎರಡು ಉದ್ಗಾರಗಳನ್ನು ತೆಗೆದಿದ್ದಾರೆ. ಬಿಡುಗಡೆಯಾಗುವ ಸಂದರ್ಭದಲ್ಲಿ ವೀರಪ್ಪನ್ ನಿಮ್ಮನ್ನೀಗ ಬಿಡುಗಡೆ ಮಾಡ್ತಾ ಇದ್ದೇನೆ. ನಿಮ್ಮ ಆಸೆ ಏನು ಎಂದು ಕೇಳಿದ. ಆಗ ರಾಜ್ ಕುಮಾರ್ ರವರು ನನಗೆ ನಿನ್ನ ಮೀಸೆ ಮುಟ್ಟಿ ನೋಡಬೇಕೆಂದು ಆಸೆ. ರಾಜ್ ಕುಮಾರ್ ರವರು ವೀರಪ್ಪನ್ ನನ್ನು ತಬ್ಬಿ, ಮೀಸೆಯನ್ನು ಸವರಿ, ಅವನಿಗೊಂದು ಮುತ್ತಿಟ್ಟು ಬೀಳ್ಕೊಟ್ರು. ತರಂಗದ ಸಂಪಾದಕ ಬಿ. ಗಣಪತಿಯವರು ರಾಜ್ ಕುಮಾರ್ ಗೆ ‘ಸರ್ ನಿಮ್ಮ ಬಿಡುಗಡೆ ಆಯ್ತಲ್ಲ. ನಿಮಗೆ ಏನು ಅನಿಸ್ತಿದೆ?’ ಎಂದು ಕೇಳಿದರು. ಅದಕ್ಕೆ ರಾಜ್ ಕುಮಾರ್ ‘ನನ್ನ ಬಿಡುಗಡೆ ಆಯ್ತಪ್ಪ ಅವನ ಬಿಡುಗಡೆ ಯಾವಾಗ’ ಎಂದು ಕೇಳಿದರು. ಮಗುವಿನ ಬೆರಗು ಮತ್ತು ತಾಯ್ತನ ಒಂದೇ ಕಡೆ ಕಂಡಿದ್ದು ಆ ಒಂದು ಪ್ರಸಂಗದಲ್ಲಿ.

ಹೀಗಾಗಿ ಒಂದು ಮಗುವಿನ ಬೆರಗು ಮತ್ತು ತಾಯ್ತನ ಇವೆರಡೂ ಇಲ್ಲದೇ ಹೋದರೆ ಯಾವ ಸಾಂಸ್ಕೃತಿಕ ಕಲಾಪಗಳಿಗೂ ಅರ್ಥ ಇಲ್ಲ. ಮಗುವಿನ ಬೆರಗಿನ ಮಮತೆ ಮತ್ತು ತಾಯ್ತನದ ಮಮತೆ ಅದು ಎರಡೂ ನಮ್ಮೆಲ್ಲರನ್ನು ಕಾಪಾಡಲಿ.

Advertisements
 1. ಶೆಟ್ಟರು (Shettaru) / ಜನ 25 2010 12:21 ಅಪರಾಹ್ನ

  ಕಾಯ್ಕಿಣಿ ಸರ್,

  ಎಲ್ಲೋ ಓದಿದಂತೆ (ಅಥವಾ ನೀವೇ ಬರೆದಂತೆಯೇ) ‘ಕಥೆ ಹುಟ್ಟುವ ಸಮಯ ಒಂದು ಕ್ಷಣವಷ್ಟೆ, ಉಳಿದಿದ್ದೆಲ್ಲ ಬರಿ ಖಾಲಿ ಕಾರಕೂನಕಿ’ ಎಂಬ ಮಾತು ನೆನಪಿಗೆ ಬಂತು.

  ಎಂದೆಗಿಂತಲೂ ಈಗ ಕಥೆಗಾರ ತೀವ್ರ ಜೀವಿಯಾಗಬೇಕಾಗಿರುವ ನಿಮ್ಮ ಮಾತು ನಿಜಕ್ಕೂ ಸತ್ಯ

  -ಶೆಟ್ಟರು, ಮುಂಬಯಿ

 2. ರಂಜಿತ್ / ಜನ 25 2010 6:49 ಅಪರಾಹ್ನ

  ತುಂಬಾ ಉಪಯುಕ್ತ ಮತ್ತು ತಟ್ಟಿದ ಬರಹ. ನಮ್ಮಲ್ಲಿ ಸಾಲು ಸಾಲು, ರೀಮುಗಟ್ಟಲೆ ಬರೆಯುವ ಭಾರೀ ಬರಹಗಾರರಿದ್ದಾರೆ… ಬರವಣಿಗೆಯಲ್ಲಿ ಇನ್ನೂ ಬಾಲ್ಯ ಸ್ಥಿತಿಯಲ್ಲಿರುವವರ ನಮ್ಮಂಥವರ ಮಾರ್ಗದರ್ಶನಕ್ಕೆ ಯಾರಿಗೂ ಪುರುಸೊತ್ತಿಲ್ಲ… ಇದೊಂದು ಬರಹ, ನೂರು ಕಥೆ ಓದಿದಂತೆ ಅನ್ನಿಸಿತು.
  ಥ್ಯಾಂಕ್ಸ್.

 3. harshavardhan sheelavant / ಜನ 26 2010 4:46 ಅಪರಾಹ್ನ

  ‘ಬೆಂದ್ರ ಬೇಂದ್ರೆಯಾದಾನು’ ಅಂದ ಬೇಂದ್ರೆ ಮಾಸ್ತರ್ ಊರು ಧಾರವಾಡದಾಂವಾ ನಾನು. ಬರಹಗಾರನ ಸಿದ್ಧತೆ, ಬದ್ಧತೆ, ಒಳಗಣ್ ನೋಟದ ಬಗ್ಗೆ ಛೆಂದ ಹೇಳೀರಿ. ಜಯಂತ್ ಸರ್, ನಿಮ್ಮ ಲೇಖನ ನನಗ ಸಾಕಷ್ಟು ಒಳನೋಟಗಳನ್ನ ನೀಡ್ತು. ಧನ್ಯವಾದ.

  ಹರ್ಷವರ್ಧನ್ ಶೀಲವಂತ

 4. Sandhya Vasanth / ಜನ 29 2010 11:23 ಫೂರ್ವಾಹ್ನ

  Kaikini Sir,

  Dina nityada ghatanegalinda kaliyuvudu bahala – nimma aa olanotagalu : tumba manassannu tattitu.

  Regards
  Sandhya

 5. ಅನಿಕೇತನ ಸುನಿಲ್ / ಜನ 29 2010 5:18 ಅಪರಾಹ್ನ

  ಧನ್ಯಾವಾದ ಸರ್.
  ಎದೆಯ ಕದ ತಟ್ಟುವ ನಿಮ್ಮ ಪ್ರೀತಿಗೆ. ಅದರ ನೋಟಕ್ಕೆ…
  ಕಥೆಯೋ..ಕವಿತೆಯೋ..ಮತ್ತೊಂದೋ…ಎಲ್ಲಕ್ಕೂ ಇರುವ ಮೂಲವನ್ನೇ ತೆರೆದು ತೋರಿಸ್ತೀರಾ.
  ನಾವೆಲ್ಲಾ ಆಭಾರಿಗಳು ನಿಮಗೆ.

 6. raghupathi sringeri / ಏಪ್ರಿಲ್ 25 2010 3:44 ಅಪರಾಹ್ನ

  Kaikini sir,

  esto dinagalagittu intha lEkhana Odhi..adbutha..
  dhanyavadagalu,

  Raghupathi sringeri

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: