Skip to content
ಫೆಬ್ರವರಿ 24, 2010 / odubazar

ಪುಸ್ತಕ ಖರೀದಿಯಲ್ಲಿ ಪಕ್ಷ ರಾಜಕೀಯ

-ಜಿ ಎನ್ ಅಶೋಕವರ್ಧನ

ನಾನೊಬ್ಬ ಬಿಡಿ ಪುಸ್ತಕ ವ್ಯಾಪಾರಿ. ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣ ಅಧಿಕಾರಿ, ಪುತ್ತೂರು ಇವರಿಂದ, ಸ್ಥಳೀಯ ಶಾಸಕರ `ಶಾಸಕನಿಧಿ’ಯ ಬಲದಲ್ಲಿ, ಸುಮಾರು ಎರಡು ಲಕ್ಷ ಮೌಲ್ಯದ ಕನ್ನಡ ಭಾರತ ಭಾರತಿ ಪುಸ್ತಕಗಳ ಖರೀದಿಗೆ `ದರಪಟ್ಟಿ’ ಕೇಳಿ ನನಗೊಂದು ಪತ್ರ ಬಂತು. ಸಾರ್ವಜನಿಕ ಸಂಸ್ಥೆಗಳು ಯಾವುದೇ ಖರೀದಿಯಲ್ಲಿ ತಮ್ಮ ಗರಿಷ್ಠ ಹಿತ (ಹಣ ಮತ್ತು ಗುಣಗಳಲ್ಲಿ) ಕಾಯುವ ಕ್ರಮವಾಗಿ ಮತ್ತು ಅವು ತಳೆಯಲೇಬೇಕಾದ ನಿಷ್ಪಕ್ಷ ನಿಲುವಿಗೆ ಬದ್ಧವಾಗಿ ಕನಿಷ್ಠ ಮೂರು ಮಳಿಗೆಗಳಿಂದ ಈ ದರಪಟ್ಟಿ ಕೇಳುವ ಕ್ರಮ ಅನುಸರಿಸಲಾಗುತ್ತದೆ. ಆದರೆ ಇಲ್ಲಿ ಈ ಕ್ರಮವನ್ನು ತಪ್ಪು ಸಂಗತಿಗೆ ಅನ್ವಯಿಸಿ, ತಪ್ಪನ್ನು ಒಪ್ಪಾಗಿಸುವ ದುರುದ್ದೇಶ ಎದ್ದು ಕಾಣುತ್ತದೆ!

ಪತ್ರವೇ ಹೇಳಿಕೊಂಡಂತೆ, ಎರಡು ಲಕ್ಷ ರೂಪಾಯಿ ಮೌಲ್ಯದವರೆಗೆ ಇಲಾಖೆ ಕೊಳ್ಳಲುದ್ದೇಶಿಸಿರುವುದು ಒಟ್ಟಾರೆ ಮಕ್ಕಳ ಪುಸ್ತಕಗಳಲ್ಲ, ಕೇವಲ ಕನ್ನಡ ಭಾರತ ಭಾರತಿ ಪುಸ್ತಕಗಳು ಮಾತ್ರ. ಕನ್ನಡದಲ್ಲಿ, ಮಕ್ಕಳ ಮಟ್ಟದಲ್ಲಿ, ಜೀವನ ಚರಿತ್ರೆಗಳನ್ನೇ ಹುಡುಕಹೋದರೂ ವಾಸನ್ ಪಬ್ಲಿಕೇಶನ್ಸ್, ಸಪ್ನಾ ಬುಕ್ ಹೌಸ್, ನವಕರ್ನಾಟಕ ಪಬ್ಲಿಕೇಶನ್ಸ್ ಮೊದಲಾಗಿ ಹಲವು ಪ್ರಕಾಶಕರು ಉದ್ದುದ್ದ ಮಾಲೆಗಳನ್ನೇ ಕೊಟ್ಟಿರುವುದು ಕಾಣುತ್ತೇವೆ. ಬೆಲೆ, ಗಾತ್ರ, ಗುಣಮಟ್ಟಗಳಲ್ಲೂ ಅಪಾರ ವೈವಿಧ್ಯ ಸಿಗುತ್ತವೆ. ಹೀಗೆ ವಿವಿಧ ಪ್ರಕಾಶನ ಮಾಲೆಗಳ ನಡುವೆ ನಡೆಯಬಹುದಾಗಿದ್ದ ತುಲನೆ, ಒಂದೇ ಮಾಲೆಯ ಅದೂ ಬರಿಯ ಬೆಲೆ ಚೌಕಾಸಿಯ ಮಟ್ಟಕ್ಕೆ ಸೀಮಿತಗೊಳಿಸಲ್ಪಟ್ಟಿದೆ. (ಹಣಕಾಸಿನ ವ್ಯವಸ್ಥೆ ನೋಡಿಕೊಳ್ಳುವವರು ಗುಣಮಟ್ಟದಲ್ಲಿ ಹಸ್ತಕ್ಷೇಪಿಸುತ್ತಿರುವುದು ಇದು ಮೊದಲೇನಲ್ಲ!)

ಭಾರತ ಭಾರತಿ ಪುಸ್ತಕ ಮಾಲೆ ಸುಮಾರು ಮೂವತ್ತು ವರ್ಷಗಳ ಹಿಂದೆ ರಾಷ್ಟ್ರೋತ್ಥಾನ ಪರಿಷತ್ತು (ಬೆಂಗಳೂರು), ತನ್ನ `ಹಿಂದೂದೇಶದ’ ಪರಿಕಲ್ಪನೆಗೆ ಪೂರಕವಾಗುವಂತೆ, ವಿವಿಧ ಲೇಖಕರಿಂದ ಬರೆಯಿಸಿದ ಸುಮಾರು ಐದುನೂರು ವ್ಯಕ್ತಿಗಳ ಜೀವನ ಚರಿತ್ರಾ ಮಾಲಿಕೆ. ಸೀಮಿತ ಪುಟ ಸಂಖ್ಯೆ ಮತ್ತು ವಿಷಯ ನಿರ್ವಹಣೆಯೊಡನೆ ಇವು ಮೊದಲು ಪುಟ್ಟ ಮಗ್ಗಿ ಪುಸ್ತಕಗಳಂತೆಯೂ ಈಚಿನ ಮರುಮುದ್ರಣಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರಪುಸ್ತಕ ಮಾಲೆಗಳ ಆಕಾರದಲ್ಲೂ ಬರುತ್ತಿವೆ. (ಕಾಲಾನುಕ್ರಮದಲ್ಲಿ ಇವುಗಳ ಇಂಗ್ಲಿಷ್ ಅನುವಾದಗಳೂ ಬಂದುದರಿಂದ ಇಲ್ಲಿ `ಕನ್ನಡ’ ಎಂದಿದ್ದಾರೆ. ಅವು ತಲಾ ಎಪ್ಪತ್ತೈದು ಪೈಸೆ ಬೆಲೆಯಿಂದ ತೊಡಗಿದ್ದರೂ ಸದ್ಯ ರೂ ಎಂಟರ ಮುದ್ರಿತ ಬೆಲೆ ತಲಪಿರುವುದು ಎಲ್ಲರಿಗೂ ತಿಳಿದಿದೆ.) ಇವು ಏಕಸ್ವಾಮ್ಯದ, ಏಕ ಗುಣಮಟ್ಟದ, ಏಕ ಬೆಲೆಯ ಪ್ರಕಟಣೆಗಳು. ಅವು ಅಸಂಖ್ಯ ಮರುಮುದ್ರಣಗಳನ್ನು ಕಂಡಿವೆ, ಕಾಲಕ್ಕನುಗುಣವಾಗಿ ಬೆಲೆ ಏರಿದ್ದೂ ನ್ಯಾಯವೇ. ಆದರೆ ವಸ್ತು, ನಿರ್ವಹಣೆ ಮತ್ತು ಪರಿಷ್ಕರಣೆಗಳ ಸ್ತರದಲ್ಲಿ ವೈವಿಧ್ಯತೆ ಇಲ್ಲದ ಮಾಲು. ಅವನ್ನು ಮೂರಲ್ಲ ನೂರು (ನನ್ನಂಥ) ಬಿಡಿ ಮಾರಾಟಗಾರರಲ್ಲಿ ದರಪಟ್ಟಿ ಕೇಳಿಸಿದರೂ ಒಪ್ಪಂದ ಅಂತಿಮಗೊಳ್ಳುವುದು ರಾಷ್ಟ್ರೋತ್ಥಾನ ಪರಿಷತ್ತಿನ ನಿಯಮದಂತೇ ಮತ್ತವರು ಮುದ್ರಿಸಿದ ಬೆಲೆಯ ಒಳಗೇ ಆಗಬೇಕು. (ಬಿಡಿ ಮಾರಾಟಗಾರರ ಮಟ್ಟದಲ್ಲಿ ರಾಷ್ಟ್ರೋತ್ಥಾನಕ್ಕೆ ಸಾಹಿತ್ಯ ಸಿಂಧುವೆಂಬ ಮಳಿಗೆಯೂ ಇದೆ ಎಂಬುದು ಗಮನಾರ್ಹ.)

ಈ ವಹಿವಾಟಿನಲ್ಲಿ `ಶಾಸಕರ ನಿಧಿ’ ಎಂಬ ಉಲ್ಲೇಖವಿರುವುದನ್ನು ವಿಶೇಷವಾಗಿ ಗಮನಿಸಬೇಕು. ಪ್ರಜಾಸತ್ತೆಯಲ್ಲಿ ಪ್ರತಿನಿಧಿಗಳಿಗೆ ಶಾಸನಗಳ ಕಟ್ಟುಪಾಡು ಇದ್ದಂತೆ, ವಿವೇಚನೆಯ ಅಧಿಕಾರ ಮತ್ತು ಸವಲತ್ತುಗಳು ಅನೇಕವಿರುವುದು ನಮಗೆಲ್ಲ (ಪೂರ್ಣ ಅರಿವಿದೆ ಎನ್ನಲಾರೆ) ಅಂದಾಜಿದೆ. ಅದರಲ್ಲಿ ಪ್ರಧಾನಮಂತ್ರಿ, ಮುಖ್ಯಮಂತ್ರಿ, ಸಂಸದ, ಶಾಸಕರೇ ಮುಂತಾದವರಿಗೆ ತಮ್ಮತಮ್ಮ ವಿವೇಚನೆಯ ವಿನಿಯೋಗಕ್ಕೆ ಸೀಮಿತ ನಿಧಿ ಇರುವುದೂ ಹೌದು. ಇಲ್ಲಿ ಅದರ ಅಂಶವನ್ನು ಓರ್ವ ಶಾಸಕ ಶಾಲಾ ಗ್ರಂಥಾಲಯಕ್ಕೆ ನಿರ್ದೇಶಿಸಿದ್ದೂ ಸರಿ. ಅಂದ ಮಾತ್ರಕ್ಕೆ ಅಂಥ ನಿರ್ದೇಶನಗಳು ಸೂಕ್ಷ್ಮಗಳಲ್ಲಿ (ಶಾಸಕನ) ವೈಯಕ್ತಿಕವಾಗುವುದು ನೈತಿಕವಾಗಿ ತಪ್ಪು. ಆಡಳಿತದಲ್ಲಿ ಕೆಲಸದ ವಿಭಾಗೀಕರಣದೊಡನೆ ಜವಾಬ್ದಾರಿಗಳ ಹಂಚಿಕೆಯೂ ಆಗಿರುತ್ತದೆ ಎಂಬ ತಿಳುವಳಿಕೆ ಜನಪ್ರತಿನಿಧಿಗಳಿಗೆ ಇರಲೇ ಬೇಕು.

ಗ್ರಂಥಾಲಯ ಬಲಪಡಿಸಬೇಕು ಎಂಬ ವಿವೇಚನೆ ಸರಿ. `ಯಾವುದರಿಂದ’ ಎನ್ನುವ ವಿವರ ಹೇಳಲು ವಿದ್ಯಾರ್ಥಿ, ಶಿಕ್ಷಕರು ಸಮರ್ಥರಿಲ್ಲವೇ `ಎಷ್ಟು, ಹೇಗೆ’ ಎಂದು ನೋಡಿಕೊಳ್ಳಲು ಇಲಾಖೆಯ ಸಿಬ್ಬಂದಿಗಳಿಲ್ಲವೇ? `ಕನ್ನಡ ಭಾರತ ಭಾರತಿ’ ಪುಸ್ತಕಗಳನ್ನೇ ಕೊಳ್ಳಬೇಕು ಎಂದವರು ನಾಳೆ `ಇಂಥದ್ದೇ ಮಳಿಗೆಯಲ್ಲಿ, `ಇಷ್ಟೇ ಮೊತ್ತಕೊಟ್ಟು’ ಎಂದೆಲ್ಲಾ ಹೇಳಲೂಬಹುದಲ್ಲವೇ? ಇದು ವಿವೇಚನೆಯ ಹೆಸರಿನಲ್ಲಿ ಹಾಜರಾದ ಮದುವೆಗಳಲ್ಲಿ ವರನೂ (ಅಥವಾ ವಧುವೂ) ಮರಣಗಳಲ್ಲಿ ಹೆಣವೂ ಆಗಲು ಹೊರಟಷ್ಟೇ ಹಾಸ್ಯಾಸ್ಪದ. ಚುನಾವಣೆಯವರೆಗೆ ತಾನು ಪಕ್ಷದ ಪ್ರತಿನಿಧಿ ಅನಂತರ (ಚುನಾಯಿತನಾದ ಎಂದಿಟ್ಟುಕೊಳ್ಳಿ) ಸಮಗ್ರ ಸಮಾಜದ ಸೇವಕ ಎಂಬ ಉನ್ನತ ಆದರ್ಶಕ್ಕೆ ಇಂದು ಆಚರಣೆಯಲ್ಲಿ ಬಿಡಿ, ಕಡತಗಳಲ್ಲೂ ಅಡ್ಡಗೀಟು ಬಿದ್ದಿರುವುದು ಪ್ರಜಾಸತ್ತೆಯ ದುರಂತ.

ಮಕ್ಕಳು ಮತ್ತು ಶಾಲಾ ಶಿಕ್ಷಕರಷ್ಟೇ ನಿರ್ಧರಿಸಬಹುದಾದ ವಿಷಯವನ್ನು ಇಲಾಖೆಯ ಮಟ್ಟದಲ್ಲೇ ನಿಗದಿಗೊಳಿಸಿ `ಕನ್ನಡ ಭಾರತ ಭಾರತಿ ಪುಸ್ತಕಗಳು’ ಎಂದು ಹೆಸರಿಸಿರುವುದು ಶಿಕ್ಷಕರ ವಿಚಾರ ಸ್ವಾತಂತ್ರ್ಯವನ್ನು ನಗಣ್ಯ ಮಾಡಿದಂತೆಯೂ ಆಗಿದೆ. ಶಾಲೆಗಳಿಗೆ ಮತ್ತು ವ್ಯಾಪಾರಿಗಳಿಗೆ ಎರಡು ಲಕ್ಷ ಮೌಲ್ಯದ ಪುಸ್ತಕ ಕೊಡಿಸುವ ಕೃಪಾಹಸ್ತವನ್ನೂ ಮೇಲಿನ ಲೆಕ್ಕಾಧಿಕಾರಿಗಳಿಗೆ `ನಿಯಮಪ್ರಕಾರ’ ಶುದ್ಧಹಸ್ತವನ್ನೂ ತೋರುವ ಈ ಕ್ರಮ ಪಕ್ಷ ರಾಜಕೀಯದ ಕೆಟ್ಟಮುಖ. ಇಲ್ಲಿ ದರಪಟ್ಟಿಯನ್ನು ಕೇಳುವುದು ನಿಯಮಗಳ ಪಾಲನೆಯ ಕಣ್ಕಟ್ಟು ಮತ್ತು ಅಪ್ರಾಮಾಣಿಕವಾದ ವ್ಯವಾಹಾರ ನೀತಿ ಎನ್ನುವುದು ಸ್ಪಷ್ಟ. ಎತ್ತಿಹಿಡಿದಂತೆ ತೋರುವ ನ್ಯಾಯತಕ್ಕಡಿ, ನಿಜದಲ್ಲಿ ಸಾರ್ವಜನಿಕರನ್ನು ಮಾಡುತ್ತಿದೆ ಬೆಪ್ಪುತಕ್ಕಡಿ!

 1. shiva / ಫೆಬ್ರ 24 2010 12:17 ಅಪರಾಹ್ನ

  ನಾವೂ ಸಾರ್ವಜನಿಕರೇ. ಇಲ್ಲಿ ನಮಗೇನೂ ಬೆಪ್ಪುತಕ್ಕಡಿ ಆಗಿದ್ದೇವೆ ಅನ್ನಿಸುತ್ತಿಲ್ಲ ಅಂದಮೇಲೆ ಭಾರತ ಭಾರತಿ ಪುಸ್ತಕಗಳು ಹಿಂದೂದೇಶದ’ ಪರಿಕಲ್ಪನೆಗೆ ಪೂರಕವಾಗುವಂತೆ ಇವೆ ಎಂಬುದು ಲೇಖಕರ ಪೂರ್ವಗ್ರಹವಿರಬಹುದು.

 2. ಅಶೋಕವರ್ಧನ ಜಿ.ಎನ್ / ಫೆಬ್ರ 24 2010 8:45 ಅಪರಾಹ್ನ

  ಶಿವಣ್ಣಾ ನಾನು ಕನ್ನಡ ಭಾರತ ಭಾರತಿ ಪುಸ್ತಕಗಳ ವಿಮರ್ಶೆ ಬರೆದದ್ದಲ್ಲ. ಸಾರ್ವಜನಿಕ ವ್ಯವಸ್ಥೆಗಳು ಪಕ್ಷ ರಾಜಕೀಯಕ್ಕೆ ಬಲಿಯಾಗುತ್ತಿರುವುದನ್ನು ಹೇಳ್ತಾ ಇದ್ದೇನೆ.
  ಅಶೋಕವರ್ಧನ

 3. ಪಂಡಿತಾರಾಧ್ಯ / ಫೆಬ್ರ 25 2010 7:57 ಫೂರ್ವಾಹ್ನ

  ನಾವು ತಕ್ಕಡಿಯ ಯಾವ ತಟ್ಟೆಯಲ್ಲಿದ್ದೇವೆ ಎನ್ನುವುದು ನಮ್ಮ ಬಗ್ಗೆ ತಿಳಿಸುತ್ತದೆ. ಮಾನ್ಯ ಶಿವ ಅವರಿಗೆ ಇಡಿ ವ್ಯವಹಾರದಲ್ಲಿ ಯಾವ ಬೆಪ್ಪು ಗೋಚರಿಸದಿರುವುದು ಸ್ವಯಂ ವೇದ್ಯವಾಗಿದೆ.

 4. D.S.NAGABHUSHANA / ಫೆಬ್ರ 26 2010 9:56 ಅಪರಾಹ್ನ

  ಪುಸ್ತಕ ಮಾರಾಟ ಬರೀ ಮಾರಾಟ ವ್ಯವಹಾರವಲ್ಲ;ಅದೊಂದು ನೈತಿಕ ಜವಾಬ್ದಾರಿಯ ಕೆಲಸ ಎಂಬುದನ್ನು ಪ್ರಿಯ ಅಶೋಕವರ್ಧನ ಅವರು ಈ ಲೇಖನದ ಮೂಲಕ ವಿಷದೀಕರಿಸಿದ್ದಾರೆ. ಹಿಂದೂ ದೇಶದ ಪರಿಕಲ್ಪನೆಯನ್ನು ಒಪ್ಪುವುದು ಬಿಡುವುದು ಬೇರೆ ವಿಷಯ. ಆದರೆ ಸಾರ್ವಜನಿಕರ ಹಣವನ್ನು ತಮಗೆ ಬೇಕಾದ ಒಂದು ಪ್ರಕಾಶನವನ್ನೂ, ಒಂದು ಸಿದ್ಧಾಂತವನ್ನೂ ಬೆಳಸಲು ಬಳಸುವುದು ಅನೈತಿಕ ಮತ್ತು ಖಂಡನಾರ್ಹ.
  -ದಿ.ಎಸ್.ನಾಗಭೂಷಣ

 5. d.s.ramaswamy / ಮಾರ್ಚ್ 5 2010 10:25 ಅಪರಾಹ್ನ

  ಸಾರ್ವಜನಿಕ ಹಣವನ್ನು ತಮ್ಮ ಸಿದ್ಧಾಂತಗಳನ್ನು ತುಷ್ಟೀಕರಿಸುವವರ ಪುಸ್ತಕಗಳನ್ನು ಕೊಳ್ಳುವುದರ ಮೂಲಕ ಶಾಸಕರು ಸಹಕರಿಸುತ್ತಿದ್ದಾರಾದರೂ ಈ ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಲವು ಶಾಲಾ ಗ್ರಂಥಾಲಯಗಳಲ್ಲಿ ತಥಾಕತಿಥ ಸಂಸ್ಕೃತಿ ಪ್ರಸಾರ ಎಗ್ಗಿಲ್ಲದೆ ನಡೆಯುತ್ತದೆ. ಮತ್ತು ಹೀಗೆ ತಯಾರಾದ ರಾಷ್ಠ್ರ ಭಕ್ತ ಪಡೆ ನಾಳೆಗಳನ್ನು ನಿರ್ಮಿಸಲಿದೆ ಎನ್ನುವುದೇ ಈ ಹೊತ್ತಿನ ವಿಷಾದ.

 6. VAMANA NANDAVARA / ಏಪ್ರಿಲ್ 1 2010 7:05 ಫೂರ್ವಾಹ್ನ

  ನ್ಯಾಯ ತಕ್ಕಡಿ ಹೇಗೆ ಬೆಪ್ಪುತಕ್ಕಡಿಯಗುತ್ತಿದೆ ಎನ್ನುವುದನ್ನು ಚೆನ್ನಾಗಿ ಮನವರಿಕೆ ಮಾಡಿ ಕೊಟ್ಟಿದ್ದೀರಿ

Trackbacks

 1. ಮೌಲ್ಯಗಳ ಪುಡಾರೀಕರಣ « ಅವಧಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: