Skip to content
ಏಪ್ರಿಲ್ 28, 2010 / odubazar

ಒಂದು ಕಥೆಯ ಸುತ್ತ: “ಶೆಟ್ಟರ ಸಾತಣ್ಣ ಸತ್ತ….!”

-ಉದಯ ಇಟಗಿ

ಬಿಸಿಲ ಹನಿ

“ಶೆಟ್ಟರ ಸಾತಣ್ಣ ಸತ್ತ….!” ಮನುಷ್ಯ ಸಂಬಂಧಗಳ ನೈಜತೆಯನ್ನು ಬೆತ್ತಲುಗೊಳಿಸುವ ಕನ್ನಡದ ಒಂದು ಅಪರೂಪದ ಕಥೆ. ಮಾತ್ರವಲ್ಲ ಕನ್ನಡದ ಶ್ರೇಷ್ಠ ಕಥೆಗಳಲ್ಲೊಂದು. ಸುಮಾರು ನಾಲ್ಕು ದಶಕಗಳ ಹಿಂದೆ ಬರೆದ ಕಥೆಯಿದು. ಬರೆದವರು ಉತ್ತರ ಕರ್ನಾಟಕ ಭಾಗದ ಮುಂಚೂಣಿಯ ಲೇಖಕರಲ್ಲೊಬ್ಬರಾದ ದು.ನಿಂ. ಬೆಳಗಲಿಯವರು. ಕಥೆ, ಕಾದಂಬರಿ, ಹರಟೆ, ಚರಿತ್ರೆ, ಅನುವಾದ, ಮಕ್ಕಳ ಸಾಹಿತ್ಯ ಹೀಗೆ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಕೈಯಾಡಿಸಿರುವ ಬೆಳಗಲಿಯವರು ಅನೇಕ ಪ್ರಶಸ್ತಿಗಳ ಜೊತೆಗೆ ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಪುರಸ್ಕಾರವನ್ನೂ ಪಡೆದುಕೊಂಡಿದ್ದಾರೆ. “ಶೆಟ್ಟರ ಸಾತಣ್ಣ ಸತ್ತ….!” ಎಂಬ ಕಥೆ ಮೊದಲ ಸಲ ‘ಸುಧಾ’ ವಾರ ಪತ್ರಿಕೆಯ ಎಪ್ರಿಲ್ 4, 1971ರ ಸಂಚಿಕೆಯಲ್ಲಿ ಪ್ರಕಟವಾಯಿತು. ಆನಂತರ ಅವರ “ಮುತ್ತಿನ ತೆನೆಗಳು” ಎಂಬ ಕಥಾಸಂಕಲನದಲ್ಲಿ ಪ್ರಕಟವಾಯಿತು. ಆ ಕಥೆ ಓದುಗರ ಮೆಚ್ಚುಗೆಯನ್ನು ಗಳಿಸತಲ್ಲದೆ ವಿಮರ್ಶಕರ ಗಮನವನ್ನೂ ಸೆಳೆಯಿತು. ಲಂಕೇಶರು ಇದನ್ನು ಇಂಗ್ಲೀಷಿಗೆ ಅನುವಾದಿಸುವ ವಿಚಾರ ಹೇಳಿದ್ದರು. ಎಪ್ಪತ್ತರ ದಶಕದಲ್ಲಿ ಬಂದ ಕಥೆಯಾದರೂ ವಸ್ತುವಿನ ದೃಷ್ಟಿಯಿಂದ ಇಂದಿಗೂ ಪ್ರಸ್ತುತವಾಗಿದೆ.

ಉತ್ತರ ಕರ್ನಾಟಕದ ಕಡೆ ಪ್ರಚಲಿತವಿರುವ ಜಾನಪದ ನಂಬಿಕೆಯೊಂದನ್ನು ಆಧಾರವಾಗಿಟ್ಟುಕೊಂಡು ಲೇಖಕರು ಈ ಕಥೆಯನ್ನು ಅತ್ಯಂತ ಸಮರ್ಥವಾಗಿ ಹೆಣೆದಿದ್ದಾರೆ. ಒಂದು ಸಣ್ಣ ಕಥೆಯೆಂದರೆ ಹೀಗಿರಬೇಕು ಎಂದು ಹೇಳುವಷ್ಟರಮಟ್ಟಿಗೆ ಸಣ್ಣ ಕಥೆಯ ಎಲ್ಲ ಲಕ್ಷಣಗಳನ್ನು ಈ ಕಥೆ ಒಗ್ಗೂಡಿಸಿಕೊಂಡಿದೆ. ಕಥೆ ಘಟನೆಯಿಂದ ಘಟನೆಗೆ ಬೇಗ ಬೇಗ ಸಾಗಿದರೂ ಲೇಖಕರು ಎಲ್ಲೂ ಅವಸರಪಟ್ಟಂತೆ ಕಾಣುವದಿಲ್ಲ. ಕಥೆಗೆ ಬೇಕಾಗುವ ಪೂರಕ ಅಂಶಗಳು ಎಷ್ಟಿರಬೇಕೋ ಅಷ್ಟನ್ನು ಮಾತ್ರ ಹೆಣೆದಿದ್ದಾರೆ. ಕಥೆ ಬೆಳಯುತ್ತಾಹೋದಂತೆ ಮನುಷ್ಯ ಸಂಬಂಧಗಳ ನೈಜತೆ ಬೆತ್ತಲಾಗುವ ಪರಿ ಮತ್ತು ಅವು ತಮ್ಮ ಮುಖವಾಡಗಳನ್ನು ಕಳಚುವ ರೀತಿ ನಮ್ಮನ್ನು ಬೆರಗುಗೊಳಿಸುವದರ ಜೊತೆಗೆ ಕೊನೆಯಲ್ಲಿ ದಿಗ್ಭ್ರಮೆಯನ್ನುಂಟುಮಾಡುವದರ ಮೂಲಕ ಮನುಷ್ಯರ ವರ್ತನೆಯ ಬಗ್ಗೆ ಒಂದು ರೀತಿಯ ಅಸಹ್ಯ ಭಾವನೆಯನ್ನು ತರಿಸುತ್ತದೆ.

ಕಥೆ ಆರಂಭವಾಗುವದೇ ಶೆಟ್ಟರ ಸಾತಣ್ಣ ಸತ್ತ ಸುದ್ದಿಯೊಂದಿಗೆ. ಆ ಸುದ್ದಿಯನ್ನು ಊರವರಿಗೆ ಮುಟ್ಟಿಸಲು ಸಾತಣ್ಣನ ಆಳು ತಳವಾರ ಕೆಂಚ ಅಳುತ್ತ ಓಡುತ್ತ ಧಾವಿಸುತ್ತಿದ್ದಾನೆ. ಸಾತಣ್ಣ ಸತ್ತ ಸುದಿಯನ್ನು ಯಾರೂ ನಂಬಲೊಲ್ಲರು. “ಆಂ! ಇದೇನಿದ! ಖರೇನೋ ಸುಳ್ಳೋ ನೋಡ್ರಿ….!” ಎಂದು ಎಲ್ಲರೂ ಅನುಮಾನ ಪಡುತ್ತಿದ್ದಾರೆ. ಏಕೆಂದರೆ ಸಾತಣ್ಣನದು ಸಾಯುವ ವಯಸ್ಸಲ್ಲ! ಅಥವಾ ಸತ್ತು ಹೋಗುವಂಥ ಕಾಯಿಲೆಗೂ ಬಿದ್ದವನಲ್ಲ! ಅದು ಅನಿರೀಕ್ಷಿತ ಸಾವು. ಹಿಂಗ ಕುಂತಾಂವಾ ಹಿಂಗ ಎದ್ದು ಹೊದಂಗ ಆಗೇತಿ. “ಘಾತ ಆಯ್ತಲ್ಲಾ! ನಿನ್ನೆ ಸಂಜಿಕ ಕುಡಚಿ ಸ್ಟೇಷನ್ದಾಗ ಭೇಟಿ ಆಗಿದ್ದೋಪಾ! ಮಿರಜಿ-ಸಾಂಗ್ಲಿಗೆ ಅಷ್ಟ ಹೊಗಿ ಬರ್ತೀನಂದಾ. ಇದೇನಿದಾ ಖರೇನೋ ತಮ್ಮಾ?” ಎಂದು ಗಾಬರಿಯಿಂದ ಕೇಳಿದ ಈಶ್ವರಯ್ಯನಿಗೆ “ಈಗ ಮಿರಜಿಯಿಂದ ಫೋನ್ ಬಂದೈತೆಂತ! ಸೆಟ್ರ ಸಾತಣ್ಣಗ ಹಾರ್ಟ್ ಪೇಲೋ ಏನೋ ಆಗಿ ಇಂದ ಹರ್ಯಾಗ ಜೀವ ಹೋತಂತ! ಅದs ಸರಪಂಚರಿಗೆ ಹೇಳಾಕ ನಡದೇನಿ…..” ಎಂಬ ಉತ್ತರ ಸಿಗುತ್ತದೆ. ಶೆಟ್ಟರ ಸಾತಣ್ಣನ ಈ ಅನಿರೀಕ್ಷಿತ ಸಾವಿನ ಸುದ್ದಿಯೇ ಕಥೆಯ ಮಧ್ಯಬಿಂದು. ಅಲ್ಲಿಂದ ಸಾತಣ್ಣನ ಸ್ನೇಹಿತರು, ಪರಿಚಯಸ್ಥರು ಹೇಗೆ ವರ್ತಿಸುತ್ತಾರೆಂಬುದೇ ಕಥೆಯ ಜೀವಾಳ. ಆಯಾ ಪಾತ್ರದ ಮೂಲಕವೇ ಅವರವರ ಸ್ವಭಾವವನ್ನು ಪ್ರಕಟಿಸುತ್ತಾ ಒಂದೊಂದಾಗಿ ಪಾತ್ರಗಳನ್ನು ಓದುಗರ ಮುಂದೆ ತಂದು ನಿಲ್ಲಿಸುತ್ತಾರೆ ಲೇಖಕರು.

ಸತ್ತ ಸುದ್ದಿಯನ್ನು ಮುಟ್ಟಿಸಲು ಬಂದ ಸಾತಣ್ಣನ ಖಾಸಾ ಗೆಳೆಯ ಈಶ್ವರಯ್ಯನಿಗೆ ಸಾತಣ್ಣನ ಇನ್ನೊಬ್ಬ ಗೆಳೆಯ ಪರಪ್ಪ ಹೇಳುವದು ಹೀಗೆ “ಸಾತಣ್ಣ ನಮ್ಜಾತ್ಯಾಂವಾ, ದೂರದ ಸಂಬಂಧಿಕ ಅಂತ ಐಸಾವಿರ ರೂಪಾಯಿ ಕೊಟ್ಟೀನಿ. ಏನಪಾ, ನಿನಗೂ ಇನಾ ಹೇಳಿಲ್ಲ. ಹ್ವಾದ ವರ್ಸ ತ್ವಾಟ ತಗೊಂಡಲಾ, ಆಗ ಕಡಿಮೆ ಬಿದ್ದುವಂತ, ಈ ಹಬ್ಬ ಆದಮ್ಯಾಲ ಕೊಡ್ತನಂತಿದ್ದ. ಸಂಬಂಧ ನೋಡು. ಕಾಗದಾ, ಪತ್ರ ಏನ್ ಬರ್ಸಿಕೊಳ್ಳೋದು? ಹಾಂಗs ಇಸ್ವಾಸ… ರೂಪಾಯ್ದು ಭಾಳ ಪಜೀತಿ ಬಂತು ಈಸೂರಾ! ನಿ ಸಾತಣ್ಣನ ದೋಸ್ತ ಅದಿ. ನೀನs ಏನಾರ ಮಾಡಿ ನನ್ನ ರೂಪಾಯಿ ಬರೂ ಹಂಗ ಮಾಡಪಾ”

ಸರಪಂಚ ಮುರಿಗೆಪ್ಪ “ಮ್ಯಾಲ ಬಾ ಈಸೂರಾ, ಬಾ ಒಂದೀಟ ಮಾತಾಡುದೈತಿ…ಅಲ್ಲ, ಸಾತಣ್ಣ ರೊಕ್ಕ ಭಾಳ ಮಾಡ್ಯಾನಂತ ನಾನೂ ಕೇಳೀನಿ. ಹ್ವಾದ ಸಾರಿ ಇಪ್ಪತೈದು ಸಾವಿಅರ ಕೊಟ್ಟು ನಾಕೆಕೆರೆ ತ್ವಾಟಾ ಕೊಂದಲ್ಲ, ಇನs ಸಾಕಷ್ಟ ರೊಕ್ಕ ಇರಬೇಕು. ಅವನ ಹೇಣ್ತಿ, ಮಕ್ಕಳಿಗೆ ಹೇಳಿ ಐದ್ಹತ್ತ ಸಾವಿರ ಹೈಸ್ಕೂಲ ಸಾಲಿ ಹೆಸರ್ಲೇ ಇಸ್ಕೊಳ್ಳೋಣ. ಇದ ಊರಹಿತದ ಕೆಲ್ಸ ನೋಡು. ಸತ್ತ ಸಾತಣ್ಣನ ಹೆಸರೂ ಉಳಿತೈತಿ, ಹತ್ಸಾವಿರ ಕೊಟ್ರ ಅವನ ಹೆಸರ್ಲೆ ಎಡ್ಡ ಖೋಲಿ ಕಟ್ಟಿಸೋಣು, ಐದ ಕೊಟ್ರ ಒಂದs ಕಟ್ಟಿಸೋಣು. ನೀನs ಏನಾರೆ ವಸೂಲಿ ಹಚ್ಚಿ, ಅವರ ಸಂಬಂಧಿಕರಿಗೆ ಹೇಳಿ ಅಷ್ಟು ಮಾಡು” ಎಂದು ಹೇಳುತ್ತಾನೆ.

ಹಳ್ಳಿಯ ಜನಕ್ಕೆ ಮಾರ್ಗದರ್ಶನ ನೀಡಬಹುದಾಗಿರುವ ಮಠದ ಮಹಾರುದ್ರಯ್ಯನವರು ತಮ್ಮ ಮಠಕ್ಕೆ ಒಂದು ಬೆಳ್ಳಿ ಪ್ರಭಾವಳಿ ಅವಶ್ಯಕತೆಯಿದೆ. ಅದನ್ನು ಸಾತಣ್ಣನ ಹೆಸರಲ್ಲಿ ಮಾಡಿಸಿಕೊಟ್ಟರೆ ಅವನ ಹೆಸರು ಖಾಯಂ ಉಳಿತೈತಿ ಎಂದು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸುತ್ತಾ ಈಶ್ವರಯ್ಯನ ದುಂಬಾಲು ಬೀಳುತ್ತಾರೆ.

ಊರಿನ ಗೌಡರು ಈಶ್ವರಯ್ಯನನ್ನು ಕರೆದು ಹೇಳುವದು ಹೀಗೆ “….ಮನ್ನೆ ಸಾತಣ್ಣನ ಎಡ್ನೂರ್ರ ಪೆಂಟಿ ಬೆಲ್ಲಾ ಕೊಟ್ಟೀನಿ. ಮಾನಿ ಪೂರ ಅಡತ್ಯಾಗ ಹಚ್ಚ ಬೇಕಮ್ದ್ರ, ಪಾಪ, ಊರಾನ ಮನ್ಸ್ಯಾ ಇಂವಗೂ ನಾಕ ದ್ದುಡ್ದು ಸಿಗಲಿ ಅಂತ ಅದರ ರೂಪಾಯಿ ಬಂದಿಲ್ಲೋ, ಬರೇ ಬಾಯಿ ವ್ಯಾಪಾರ. ಯಾರ್ನ ಕೇಳಬೇಕು?” ಅವರಿಗೆ ಸತ್ತ ಸಾತಣ್ಣನಿಗಿಂತ ತಮ್ಮ ದುಡ್ದಿನದೇ ಚಿಂತೆ.

ಮಕ್ಕಳಿಗೆ ನೀತಿ ಪಾಠ ಹೇಳುವ ಜೋಶಿ ಮಾಸ್ತರರು ಈಶ್ವರಯ್ಯನ ಕಂಡೊಡನೆ ಒಂದೆಡೆ ಕರೆದು ಹೇಳುವದು ಹೀಗೆ ”ನಮ್ಮ ಕಿರಾಣಿ ಉದ್ರಿ ಖಾತೆ ಸಾತಣ್ನನ ಅಂಗಡಿಯಲ್ಲೇ ಇರೋದು ನಿನಗೂ ಗೊತ್ತದಲ್ಲ. ಪಗಾರ ತಡಾ ಆಗಿ ಎರಡು ತಿಂಗಳು ಉದ್ರಿ ತೀರಿಸಿರಲಿಲ್ಲ. ಅದs ಅದನ್ನ ಕೊಡಲಿಕ್ಕೆ ಮುಂಜಾನೆ ಅಂಗಡಿಗೆ ಹೋಗಿದ್ದೆ. ಸಾತಣ್ಣ ಇರ್ಲಿಲ್ಲ. ಊರಿಗೆ ಹೋಗಿದ್ದಾರಂತ ಅವರ ಹಿರೀ ಮಗ ನಮ್ಮ ಸಾಲೆಯಲ್ಲೇ ಇದ್ದಾನಲ್ಲ, ಶಂಕರ, ಅವನs ಹೇಳಿದ. ಆ ರೊಕ್ಕ ತಿರುಗಿ ಒಯ್ದರ ಬೇರೆ ಖರ್ಚು ಆಗಬಹುದಂತ ಆ ಹುಡುಗನ ಕೈಯಾಗ ಕೊಟ್ಟು, ಎಲ್ಲಾ ಬಾಕಿ ಕಾಟು ಹಾಕು ಅಂತ ಹೇಳಿದೀನಿ. ಅದಕ್ಕs ನಾಕ ದಿನಾ ಬಿಟ್ಟು ನೀನೂ ಅಷ್ಟ ನೋಡು, ಆ ಹುಡುಗ ಬಾಕಿ ತೆಗೆದಾನಿಲ್ಲೋ. ಇನ್ನs ಸಣ್ಣವ ಮರೀಬಹುದು.”

ಆದರೆ ಕಥೆಯ ಕೊನೆಯಲ್ಲಿ ಶೆಟ್ಟರ ಸಾತಣ್ಣ ಸತ್ತೇ ಇಲ್ಲ ಎಂಬ ಸುದ್ದಿ ಗೊತ್ತಾಗುತ್ತದೆ. ಇದಕ್ಕೆ ಕಾರಣ ಉತ್ತರ ಕರ್ನಾಟಕದ ಕಡೆ ಯಾರಾದರೂ ಕಾಗಿ ಮೆಟ್ಟು (ಹೆಣ್ಣು- ಗಂಡು ಕಾಗೆಗಳ ಮಿಲನ) ನೋಡಿದರೆ ಅವರು ಕೂಡಲೇ ಸತ್ತುಹೋಗುತ್ತಾರೆ ಎಂಬ ನಂಬಿಕೆಯಿದೆ. ಹೀಗಾಗಿ ಅದರ ಪರಿಹಾರಕ್ಕಂತ ಆ ವ್ಯಕ್ತಿ ಸತ್ತುಹೋಗಿದ್ದಾನೆಂದು ಸುಳ್ಳು ಸುದ್ದಿ ಹಬ್ಬಿಸಿದರೆ ಅವನ ಆಯುಷ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. ಅದೇ ಪ್ರಕಾರ ಇಲ್ಲಿ ಸಾತಣ್ಣನು ಕಾಗಿ ಮೆಟ್ಟು ನೋಡಿದ್ದರಿಂದ ಅದರ ಪರಿಹಾರಕ್ಕಂತ ಆತ ಸತ್ತಿದ್ದಾನೆಂದು ಸುಳ್ಳು ಸುದ್ದಿ ಹಬ್ಬಿಸಬೇಕಾದ ಪ್ರಸಂಗ ಬರುತ್ತದೆ. ಕಥೆಯ ಕೊನೆಯಲ್ಲಿ ಶೆಟ್ಟರ ಸಾತಣ್ಣ ಜೀವಂತವಾಗಿ ಪ್ರಕಟವಾದಾಗ ಉಂಟಾಗುವ ಪರಿಣಾಮವೂ ವಿಲಕ್ಷಣವಾದದ್ದು. ಸಾತಣ್ಣ ಜೀವಂತವಾಗಿದ್ದಾನೆ ಎಂಬ ಸುದ್ದಿ ಕೇಳಿ ಪರಪ್ಪನ ಬೆರಳ ಸಂದಿಯಲ್ಲಿ ಸುಡುತ್ತ ಬಂದ ಸಿಗರೇಟಿನ ಬೆಂಕಿ ಸ್ಪರ್ಶಿಸಿ ಚುರ್ರೆನ್ನುತ್ತದೆ. ಅವಸರದಿಂದ ಕೆಳಗಿಳಿದ ಮುರುಗೆಪ್ಪನ ಕಾಲಿಗೆ ಧೋತರ ಸಿಕ್ಕಿ ಬಕ್ಕಂಡಿ ಕಚ್ಚಿ ಬಿಳುತ್ತಾನೆ. ಗಡಿಬಿಡಿಯಿಂದ ಎದ್ದ ಗೌಡರಿಗೆ ಹೊರ ಗೊಡೆಯ ಗೂಟ ಬಲವಾಗಿ ತಾಗಿ ಕಣ್ಣಿಗೆ ಕತ್ತಲು ಕಟ್ಟುತ್ತದೆ. “ಎಲಾ! ಸಾತಣ್ಣ ಬದುಕಿದನ?” ಎಂದು ಬೇಸರಿಸಿ ಅಲಕ್ಷದಿಂದ ಮಗ್ಗಲು ಬದಲಿಸಿದಾಗ, ಪಕ್ಕದ ಖಾಲಿ ಹಾಲಿನ ಬಟ್ಟಲು ಪಕ್ಕೆಗೆ ಚುಚ್ಚಿ ಬೆಳ್ಳಿ ಪ್ರಭಾವಳಿ ಇರಿದಂತಾಗುತ್ತದೆ. “ಹೌದೇನೋ? ಖರೇನೋ ಸುಳ್ಳೋ ನೋಡೋ!” ಎಂದು ಮಗ ತಂದ ವಾರ್ತೆಯ ಬಗ್ಗೆ ಪರಾಮರ್ಶಿಸುತ್ತ ಜೋಶಿ ಮಾಸ್ತರರು, ತಲೆಯ ಮೇಲೆ ಕೈಹೊತ್ತು ಕುಲಿತುಕೊಳ್ಳುತ್ತಾರೆ, ಮಧ್ಯಾಹ್ನದ ನಿದ್ರೆ ಕೆಟ್ಟಂತಾಗಿ.

ಒಬ್ಬ ವ್ಯಕ್ತಿ ಸತ್ತ ಸಂದರ್ಭದಲ್ಲಿ ಅವನ ಸುತ್ತಲಿನವರ ಮನಸ್ಸಿನಲ್ಲಿ ಹಲವಾರು ವಿಚಾರಗಳು ಮೂಡುತ್ತವೆ. ಅತ್ಮೀಯರಾದರೆ ನಿಜವಾದ ದುಃಖವನ್ನು ವ್ಯಕ್ತಪಡಿಸುತ್ತಾರೆ. ಅದರೆ ಆತ್ಮೀಯತೆಯ ಮುಖವಾಡ ಧರಿಸಿದ ಸ್ವಾರ್ಥಿಗಳು ‘ಉರಿಯುವ ಮನೆಯಿಂದ ಗಳ ಹಿರಿದುಕೊಳ್ಳು’ವಂತೆ, ಸತ್ತ ಸಮಯದಲ್ಲೂ ಸ್ವಾರ್ಥ ಸಾಧನೆಯಲ್ಲಿ ಲೆಕ್ಕ ಹಾಕುತ್ತಿರುತ್ತಾರೆ ಎಂಬುದಕ್ಕೆ ಕಥೆಯಲ್ಲಿ ಬರುವ ಪರಪ್ಪ, ಮುರಿಗೆಪ್ಪ, ಮಹಾರುದ್ರಯ್ಯನವರು, ಜೋಶಿ ಮಾಸ್ತರು ಮತ್ತು ಗೌಡರ ಪಾತ್ರಗಳೇ ಸಾಕ್ಷಿ.

ಈ ಎಲ್ಲ ಸ್ವಾರ್ಥಿಗಳ ಮಧ್ಯೆಯೇ ಸಾತಣ್ಣನ ನಿಜವಾದ ಸ್ನೇಹಿತ ನಿಸ್ವಾರ್ಥಿ ಈಶ್ವರಯ್ಯ, ಹಾಗೂ ಕಥೆಯ ಕೊನೆಯಲ್ಲಿ ಸಾತಣ್ಣ ಜೀವಂತವಾಗಿರುವ ಸುದ್ದಿಯನ್ನು ತಿಳಿದು ತೋಟದಿಂದ ಓಡಿ ಬಂದು, ಕಾಯಿ ಕರ್ಪೂರ ತಗೊಂಡು ಹನುಮಂತನ ಗುಡಿಗೆ ಹೋಗುವ ತಳವಾರ ಕೆಂಚನಂಥವರು ಮಾನವೀಯ ಮೌಲ್ಯಗಳ ಕೊಂಡಿಯಂತೆ ಕಾಣಿಸುತ್ತಾರೆ. ಈ ಬಗೆಯ ಅನುಭವಗಳನ್ನು ಸಮಾಜದಲ್ಲಿ ಆಗಾಗ ಕಂಡೇ ಕಾಣುತ್ತಿರುತ್ತೇವೆ.

Advertisements
  1. shashidhar / ಮೇ 25 2010 2:37 ಅಪರಾಹ್ನ

    neeve helidante………. idondu ………..ಮನುಷ್ಯ ಸಂಬಂಧಗಳ ನೈಜತೆಯನ್ನು ಬೆತ್ತಲುಗೊಳಿಸುವ ಕನ್ನಡದ ಒಂದು ಅಪರೂಪದ ಕಥೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: