Skip to content
ಜುಲೈ 7, 2010 / odubazar

ಅವ್ವನಂಥ ಎಲ್ಲಾ ಅಂಗನವಾಡಿ ನೌಕರರಿಗೂ..

ನಿಮ್ಮ ಜತೆ ನಾಲ್ಕು ಮಾತು

– ಅರುಣ್ ಜೋಳದ ಕೂಡ್ಲಿಗಿ

ಐದು ವರ್ಷದ ನಂತರ ಎರಡನೇ ಸಂಕಲನದ ನೆಪದಲ್ಲಿ ನಿಮ್ಮ ಜತೆ ನಾಲ್ಕು ಮಾತು ಹಂಚಿಕೊಳ್ಳುವೆ. ಕಾವ್ಯದ ಕಟ್ಟು ನಿಮ್ಮೆದುರಿಗಿದೆ. ಹಾಗಾಗಿ ಪದ್ಯ ಕುರಿತು ಮಾತನಾಡಲಾರೆ. ನೀವು ಓದಿ ಹೇಳಬೇಕಷ್ಟೆ. ಲಂಕೇಶರು ಕವಿಯಾದವನು ತನಗೆ ತೋಚಿದ್ದನ್ನು ತನ್ನ ಸಾಮಥ್ರ್ಯಕ್ಕೆ ತಕ್ಕಂತೆ ಬರೆಯಬಲ್ಲನೇ ಹೊರತು ಅದು ಕಾವ್ಯವಾಗಿದೆಯೋ  ಇಲ್ಲವೋ ಎಂದು ಪತ್ತೆ ಹಚ್ಚುವುದರಲ್ಲಿ ಅಸಾಹಯಕ ಎನ್ನುತ್ತಾರೆ. ಆ ಮಾತು ನನ್ನ ಅನುಭವವೂ ಕೂಡ. ಕರ್ನಾಟಕದ ಸುಡುವ ವರ್ತಮಾನದಲ್ಲಿ ಈ ಸಂಕಲನ ಹೊರಬರುತ್ತಿದೆ. ನೆರೆಗೆ ಸಿಕ್ಕ ಜನ ಉಸಿರು ದಿಮ್ಮಗಿಡಿದು ಬದುಕುತ್ತಿದ್ದಾರೆ, ಆಳುವ ಸರಕಾರ ಅಮಾನವೀಯ ಕೃತ್ಯಗಳಲ್ಲಿ ಮಗ್ನವಾಗಿದೆ, ಭೂಮಿ ಗಣಿದಾಳಿಗೆ ಕರಗುತ್ತಿವೆ, ನನ್ನ ಬಳ್ಳಾರಿಯ ಜನ ರೆಡ್ಡಿಗಳ ದರಬಾರಿಗೆ ರೋಸಿ ಹೋಗಿದ್ದಾರೆ, ಭ್ರಷ್ಠಾಚಾರ, ಮೂಲಭೂತವಾದ ತನ್ನೆಲ್ಲಾ ಕದಂಬ ಬಾಹುಗಳನ್ನು ಚಾಚುತ್ತಿದೆ, ಜನ ಸಾಮಾನ್ಯರ ಬದುಕು ನರಕವಾಗುತ್ತಿದೆ, ಈ ಹೊತ್ತಲ್ಲಿ ಪ್ರಗತಿಪರರು, ಸಾಹಿತಿಗಳು, ವಿದ್ವಾಂಸರು, ಚಳುವಳಿಗಾರರು, ರೈತರು, ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು, ಯುವಕರು ಎಲ್ಲರೂ ಒಟ್ಟಾದ ಒಂದು ಗಟ್ಟಿ ದ್ವನಿಯೊಂದು ವ್ಯವಸ್ಥೆಯ ವಿರುದ್ದ ಮೊಳಗಬೇಕಿದೆ. ಇಂದು ಜನರಲ್ಲಿ ಹೋರಾಟದ ಕಿಚ್ಚು ಹೊತ್ತಿಸುವ ಅಗತ್ಯವಿದೆ. ಇಂತಹ ಹೋರಾಟದಲ್ಲಿ ನನ್ನ ಪದ್ಯಗಳನ್ನು ದೊಡ್ಡ ದ್ವನಿಯಲ್ಲಿ ಓದಿ ಜನರನ್ನು ಮೈನೆವರೇಳಿಸಬೇಕೆಂಬ ಕನಸು ನನ್ನ ಜತೆಗಿದೆ. ಮತ್ತು ಆ ದಿನಕ್ಕಾಗಿ ಕಾಯುತ್ತಿರುವೆ. ಇಂತಹ ಆಲೋಚನೆಗಳು ನನ್ನನ್ನು ಇನ್ನಿಲ್ಲದಂತೆ ಕಾಡಿದಾಗ ಅವುಗಳೆಲ್ಲಾ ಪದ್ಯದ ರೂಪ ತಾಳಿವೆ.

ನನ್ನ ಒಟ್ಟು ಬಾಲ್ಯ ತನ್ನೆಲ್ಲಾ ಕನಸು ಕಾಣ್ಕೆಗಳನ್ನು ಕಂಡದ್ದು ಅವ್ವನ ಅಂಗನವಾಡಿಯಲ್ಲಿ. ಇಡೀ ಊರನ್ನು ಪೊರೆವ ತಾಯಂತೆ ಅವ್ವ ದಣಿವರಿಯದೆ ಈಗಲೂ ದಿನವಿಡೀ ದುಡಿಯುತ್ತಿದ್ದಾಳೆ. ತನ್ನ ಕನಸುಗಳ ಮೂಟೆ ಕಟ್ಟಿ ಬರುವ ಸ್ವಲ್ಪ ಸಂಬಳದಲ್ಲಿ ನಮ್ಮನ್ನೆಲ್ಲಾ ಪೊರೆದವಳು. ಇಂದು ಅತಿ ಕಡಿಮೆ ಸಂಬಳಕ್ಕೆ ಹೆಚ್ಚು ಕೆಲಸ ಮಾಡುವ ನೌಕರರೆಂದರೆ ಅಂಗನವಾಡಿಯವರೇ ಇರಬೇಕು. ಮೂಲಭೂತ ಸೌಲಭ್ಯಗಳಿಗಾಗಿ ಅವರ ಹೋರಾಟ ನಿರಂತರ ನಡೆದೇ ಇದೆ. ಅಂಗನವಾಡಿ ನೌಕರರ ಪರ ಹೋರಾಡುತ್ತಿದ್ದ ಕಾಮ್ರೆಡ್ ಸುಂದರೇಶ ರೈಲು ಅಪಘಾತದಲ್ಲಿ ಮಡಿದಾಗ ಅವ್ವ ದಿನವಿಡೀ ದುಃಖಿಸಿದ್ದಳು. ಆತ ಬದುಕಿದ್ದರೆ ನಮ್ಮನ್ನು ಖಾಯಂಗೊಳಿಸುತ್ತಿದ್ದ, ಸಂಬಳ ಸ್ವಲ್ಪ ಹೆಚ್ಚು ಬರುತ್ತಿತ್ತು ಎಂದು ಎಷ್ಟೆಲ್ಲಾ  ಕನಸುಗಳನ್ನು ಹೇಳಿಕೊಂಡಿದ್ದಳು. ಅವ್ವನ ಜತೆಗಿನ ಆ ಕೆಲವು ನೆನಪುಗಳು ದೀರ್ಘ ಪದ್ಯವಾಗಿದೆ. ಅದು ಈ ಸಂಕಲನದ ಹೆಸರೂ ಕೂಡ. ಈ ಪದ್ಯ ಅಂಗನವಾಡಿ ನೌಕರರ ಹೋರಾಟಕ್ಕೆ ಸಣ್ಣದೊಂದು ಸ್ಪೂರ್ತಿ ಎಂದಾದರೆ ಅದು ನನ್ನ ಕಾವ್ಯದ ಸಾರ್ಥಕತೆ ಎಂದು ಭಾವಿಸುವೆ. ಹಾಗಾಗಿ ಈ ಸಂಕಲನವನ್ನು ಅವ್ವನಿಗೂ ಅವ್ವನಂಥ ಎಲ್ಲಾ ಅಂಗನವಾಡಿ ನೌಕರರಿಗೂ ಪ್ರೀತಿಯಿಂದ ಅರ್ಪಿಸಿದ್ದೇನೆ.

ಈ ಸಂಕಲನ ಹೊರಬರುತ್ತಿರುವ ಹೊತ್ತಲ್ಲಿ ಕವಿತೆ ಜೊತೆಯಾಗಿಸಿದ ಎಷ್ಟೊಂದು ಸಹೃದಯಿ ಮನಸ್ಸುಗಳು ನೆನಪಾಗುತ್ತಿವೆ. ಅಂತಹ ಎಲ್ಲಾ ಮನಸ್ಸುಗಳಿಗೆ ತುಂಬು ಹೃದಯದ ಕೃತಜ್ಞತೆಗಳು. ಇಲ್ಲಿನ ಪದ್ಯಗಳನ್ನು ಓದಿ ನಾಲ್ಕು ಮಾತು ಬರೆದ ಕೆ.ವಿ.ನಾರಾಯಣ ಮೇಷ್ಟ್ರು ಅವರನ್ನು ಪ್ರೀತಿಯಿಂದ ನೆನೆಯುವೆ. ಪಿ. ಭಾರತಿದೇವಿ ಪುಸ್ತಕದ ಬೆನ್ನಿಗೆ ತನ್ನ ಮಾತುಗಳನ್ನು ಸೇರಿಸಿದ್ದಾಳೆ ಅವಳ ಸ್ನೇಹವನ್ನು ಮರೆಯಲಾರೆ. ಇಲ್ಲಿನ ಪದ್ಯಗಳನ್ನು ಪ್ರಕಟಿಸಿದ ಪತ್ರಿಕೆಗಳು ಮತ್ತು ಬ್ಲಾಗುಗಳ ಸಂಪಾದಕರಿಗೂ, ಬಹುಮಾನಿತ ಪದ್ಯಗಳನ್ನು ಆಯ್ಕೆ ಮಾಡಿದ ಎಲ್ಲಾ ತೀರ್ಪುಗಾರರಿಗೂ ನನ್ನ ಕೃತಜ್ಞತೆಗಳು. ಹಂಪಿಯಲ್ಲಿದ್ದಾಗ ಪದ್ಯ ಬರೆದಾಕ್ಷಣ ಮೊದಲ ಓದಿಗೆ ಬಲಿಯಾಗಿ ನನ್ನನ್ನು ಸಹಿಸಿಕೊಂಡ ಗೆಳೆಯೆರಾದ ಚಂದ್ರು, ನಿಂಗಪ್ಪರನ್ನು ಈ ಕ್ಷಣ ನೆನಪಿಸಿಕೊಳ್ಳುವೆ. ಮನೆಗೆ ಕರೆಯಿಸಿಕೊಂಡು ಪದ್ಯ ಕೇಳುತ್ತಿದ್ದ ಮಲ್ಲೇಪುರಂ. ಜಿ. ವೆಂಕಟೇಶ ಮತ್ತು ಬಿ.ಎ.ವಿವೇಕ ರೈ ಅವರುಗಳನ್ನು ಪ್ರೀತಿಯಿಂದ ನೆನೆವೆ. ನನ್ನ ಆಲೋಚನೆಯನ್ನು ರೂಪಿಸಿದ ಮೇಷ್ಟ್ರು ರಹಮತ್ ತರೀಕೆರೆ ಮತ್ತು ಬಾನು ಮೇಡಂ ಅವರನ್ನೂ, ಬದುಕಿಗೆ ಬೇರೆಯದೇ ದಿಕ್ಕು ತೋರಿದ ಪ್ರೊ. ಕವಿ ನಾರಾಯಣ ಮೂರ್ತಿ ಅವರನ್ನೂ ಪ್ರೀತಿಯಿಂದ ನೆನೆಯುವೆ.

ಈ ಪುಸ್ತಕ ತರುವಲ್ಲಿ ತುಂಬು ಉತ್ಸಾಹ ತೋರಿ ಪ್ರಕಾಶನದಲ್ಲಿ ಸಹಭಾಗಿಗಳಾದ ನಿರಂಜನ ಉಷಾರ ತಾಯ್ತನದ ವಾತ್ಸಲ್ಯಕ್ಕೆ ಏನೆಂದು ಹೇಳಲಿ. ಪುಟ್ಟ ತೇಜಸ್ವಿಗೊಂದು ಪುಟಾಣಿ ನೆನಪು. ತನ್ನದೇ ಪುಸ್ತಕ ಎನ್ನುವಷ್ಟು ಕಾಳಜಿ ವಹಿಸಿ ಪ್ರಕಾಶನದ ಹೊಣೆ ಹೊತ್ತ ಅಕ್ಷತಳಾ ಕಾರ್ಯಕ್ಷಮತೆಗೊಂದು ಶರಣು. ಅಂದವಾಗಿ ಮುಖಪುಟ ವಿನ್ಯಾಸ ಮಾಡಿದ ಅಪಾರನನ್ನು ಅಪಾರವಾಗಿ ನೆನೆವೆ. ಗಣಿದುಡ್ಡಿನ ಸಣ್ಣ ಪಾಲನ್ನು  ಜನರಿಗೆ ತಲುಪಿಸುತ್ತಾ ಕೂಡ್ಲಿಗಿ ತಾಲೂಕಿನ ಜನರಲ್ಲಿ ಸಣ್ಣ ಆಶಾಕಿರಣ ಮೂಡಿಸಿದ ವೆಂಕಟಗಿರಿ ದಳವಾಯಿಗೂ, ತಮ್ಮೆಲ್ಲಾ ಸಂಕಷ್ಟಗಳ ನಡುವೆ ನನ್ನ ಕಾಪಿಟ್ಟ ಅವ್ವ ನಾಗರತ್ನಮ್ಮ ಅಪ್ಪ ಹನುಮಂತಪ್ಪ, ಲಕ್ಷ್ಮಿ,ಮಲ್ಲಿಕಾರ್ಜುನ , ಗಾಯತ್ರಿ, ಓಬಳೇಶ್ ಪುಟ್ಟ ವೈಷ್ಣವಿ ಈ ಎಲ್ಲರ  ಮಮತೆಗೆ ಮನದಾಳದ ನೆನೆಕೆಗಳು. ಮಾವ ಶ್ರೀಧರ್, ಅತ್ತೆ ಶಿವಮ್ಮ, ಸ್ನೇಹ, ಮನೋಜ್ ಮತ್ತು ಬದುಕಿಗೆ ಜೊತೆಯದ ಜತೆಗಾತಿ ಕಾವ್ಯಳನ್ನು ಪ್ರೀತಿಪೂರ್ವಕವಾಗಿ ನೆನಪಿಸಿಕೊಳ್ಳುವೆ. ಈ ಕ್ಷಣ ಪದ್ಯದ ಕಟ್ಟನ್ನು ಕೈಲಿಡಿದು ಓದುತ್ತಿರುವ ನಿಮಗೂ ತುಂಬು ಹೃದಯದ ಕೃತಜ್ಞತೆಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: