Skip to content
ಜುಲೈ 22, 2010 / odubazar

ರೂಪ ಹಾಸನ ಅವರ ’ಕಡಲಿಗೆಷ್ಟೊಂದು ಬಾಗಿಲು-’

-ಡಿ.ಎಸ್.ರಾಮಸ್ವಾಮಿ

ಈ ಕಡಲ ತುಂಬ ಅವಿಶ್ರಾಂತ ಅಲೆಗಳು. . .

‘ಕಡಲಿಗೆಷ್ಟೊಂದು ಬಾಗಿಲು’ ರೂಪ ಹಾಸನ ಅವರ ನಲವತ್ತು ಪದ್ಯಗಳ ಮೂರನೆಯ ಸಂಕಲನ. ‘ಒಂದಷ್ಟು ಹಸಿಮಣ್ಣು’ ‘ಬಾಗಿಲಾಚೆಯ ಮೌನ’ ಸಂಕಲನಗಳಿಂದ ಸಾರಸ್ವತ ಲೋಕದ ಹೆಬ್ಬಾಗಿಲು ಬಡಿದು ಅಲ್ಲಿ ಈಗಾಗಲೇ ಪ್ರತಿಷ್ಠಾಪನೆಗೊಂಡ ಕೆಲ ಹೆಸರುಗಳಲ್ಲಿ ರೂಪ ಅವರೂ ಒಬ್ಬರು.

ವಿವಿಧ ಕವಿಗೋಷ್ಠಿಗಳ ಖಾಯಂ ಹೆಸರುಗಳಲ್ಲಿ ಒಬ್ಬರಾಗಿರುವ ರೂಪ, ಪದ್ಯ ಬರೆಯುವದರ ಜೊತೆಜೊತೆಗೆ ನಾಡಿನ ಬಹುತೇಕ ಯುವ ಬರಹಗಾರರೊಂದಿಗೆ ಸಾಹಿತ್ಯಕ ಒಡನಾಟಗಳನ್ನಿಟ್ಟುಕೊಂಡಿರುವ ಕಾರಣಕ್ಕೂ ವರ್ತಮಾನದ ತವಕ ತಲ್ಲಣಗಳ ಅಭಿವ್ಯಕ್ತಿಯನ್ನು ಪದ್ಯಗಳ ಮೂಲಕ ಸಹಜವಾಗಿ ಮತ್ತು ಕೃತ್ರಿಮತೆಯಿಲ್ಲದೇ ಪ್ರದರ್ಶಿಸಬಲ್ಲರು. ಸ.ಉಷಾ, ಪ್ರತಿಭಾ, ಸುನಂದಾ ಕಡಮೆ ಮುಂತಾದವರು ಸೃಷ್ಟಿಸಿಕೊಂಡಿರುವ ಪ್ರತ್ಯೇಕ ಲೋಕ ರೂಪ ಅವರ ಜಗತ್ತಿಗೆ ಹತ್ತಿರದ್ದು.

ಅಂದರೆ ‘ಮಹಿಳೆ’ ಎಂಬ ಮೀಸಲಾತಿ ಬೇಡದೇ ಸಹಜ ಕವಿತೆಗಳನ್ನು ಅನುದಿನದ ವರ್ತಮಾನದ ಪಲುಕುಗಳಿಂದ ಆಯ್ದು ಪೋಣಿಸುವ ಕೆಲಸ ಇಲ್ಲೂ ಮುಂದುವರೆದಿದೆ.
ರೂಪಕಗಳನ್ನು  ಗೃಹೀತದ ಅಡುಗೆಮನೆಯಿಂದಲೇ ನೇರ ತಂದು ಮುಂದಿಟ್ಟುಬಿಡುವುದು ಇವರಿಗೆ ಸಿದ್ಧಿಸಿದೆ. ದೋಸೆ, ಹಂಚು, ಸೂಜಿ, ಮಸಾಲೆ ಡಬ್ಬಿಗಳನ್ನೇ ತಮ್ಮ ರೂಪಕಗಳನ್ನಾಗಿ ಹಿಂದಿನ ಸಂಕಲನಗಳಲ್ಲಿ ಬಳಸಿದ್ದ ಕವಯತ್ರಿ ಈ ಸಂಕಲನದಲ್ಲಿ ಬಾಗಿಲೇ ಇಲ್ಲದ ಸದಾ ತೆರೆದೇ ಇರುವ ಕಡಲಿಗೂ ಬಾಗಿಲುಗಳನ್ನಿಟ್ಟು ಆ ಬಾಗಿಲುಗಳ ಮೂಲಕ ಒಳಬರುವ-ಹೊರಹೋಗುವ ಕ್ರಿಯೆಗಳನ್ನು ಧ್ಯಾನಿಸಿದ್ದಾರೆ.

ಆದರೆ ಬಾಗಿಲುಗಳನ್ನೆಂದಿಗೂ ಜೋಡಿಸಲಾಗದ ಕಡಲಿನ ಅಗಾಧತೆಗೆ ಬಾಗಿಲನ್ನಿಡುವುದರ ಮೂಲಕ ಬೇರೆಯದೇ ಸಂದೇಶವನ್ನೇನಾದರೂ ಈಕೆ  ಕೊಡಹೊರಟಿದ್ದಾರಾ ಎಂದು ಪರಿಶೀಲಿಸಬೇಕಾಗುತ್ತದೆ.

ಕಡಲ ತುಂಬಿರುವ ಅವಿಶ್ರಾಂತ ಅಲೆಗಳ ಮೂಲಕವೂ ಕವಿತೆಯ ವಿದ್ಯುತ್ತನ್ನು ತಯಾರಿಸಿ ಕೊಡಬಹುದೆನ್ನುವ ಕನಸೇ ಈ ಸಂಕಲನದ ಹಿಂದಿರುವ ಕಣ್ಣಾಗಿದೆ.
‘ಕ್ಷಮಿಸಿ ಬಿಡು ಪ್ರಭುವೆ/ ನಾವು ಅವರಂತಲ್ಲ/ ಅವರಂತಿಲ್ಲದ್ದಕ್ಕೆ ಖೇದವೂ ಇಲ್ಲ’ ಎಂದು ಆರಂಭವಾಗುವ  ‘ನಾವು ಅವರಂತಲ್ಲ’ ಎಂಬ ಕವಿತೆ ಉಳಿದ ಮಹಿಳೆಯರ ಕಾವ್ಯದ ಥರ ಯಥಾಪ್ರಕಾರ ಗಂಡಸರನ್ನು ಇಕ್ಕಳಕ್ಕೆ ಸಿಕ್ಕಿಸದೇ, ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ಬದುಕಿನ  ಚದುರಂಗದಾಟದ ಮೋಸಕ್ಕೆ ತಾನು ಬಲಿ ಬೀಳುವುದಿಲ್ಲವೆಂಬ ಶಪಥದ ಜೊತೆಜೊತೆಗೇ ‘ನಮ್ಮೆದೆಯ ನೋವು ಹಾಡಲು ಬಿಡು’ ಎಂದು ಪ್ರಾರ್ಥಿಸುತ್ತಲೇ ‘ನಾವು ಹೀಗೆಯೇ ನೋವ ಹಾಡುತ್ತೇವೆ/ಆಟವಾಡದೆಯೂ ಜೀವಂತವಿರುತ್ತೇವೆ/ಚರಿತ್ರೆಯಾಗದೆಯೂ ವರ್ತಮಾನದಲ್ಲಿರುತ್ತೇವೆ’ ಎಂಬ ನಿಲುವು ತಾಳುತ್ತದೆ.

ಇಂಥದೇ ಆಶಯ ಇಲ್ಲಿನ ಹಲವು ಕವಿತೆಗಳಲ್ಲಿ ಬೇರೆ ಬೇರೆಯದೇ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಬದುಕಿನ ಒಳಹೊರಗುಗಳನ್ನು, ಜೀವನದ ಅರ್ಥಾನರ್ಥಗಳನ್ನು, ಗಂಡು-ಹೆಣ್ಣಿನ ಸ್ಥಾನಮಾನಗಳನ್ನು ಸಂಕಲನದುದ್ದಕ್ಕೂ ರೂಪ ಪ್ರಶ್ನಿಸುತ್ತಲೇ ಇಂಥ ಪ್ರಶ್ನೆಗಳಿಗೆಲ್ಲ ತೀರ ಖಾಸಗಿಯದಾದರೂ ಸಾರ್ವಜನಿಕವೂ ಆಗಬಹುದಾದ ಉತ್ತರಗಳನ್ನು ಪಡೆದಿದ್ದಾರೆ.

ಕವಿತೆಯೊಂದರ ವಸ್ತುವನ್ನು ವ್ಯಾಪ್ತಿಯಾಚೆಗೂ ಅರಳಿಸಬಲ್ಲರಾದರೂ ಅದೇಕೋ ಪ್ರಾಸಗಳ ತ್ರಾಸಿಗೆ ಬಿದ್ದಾಗಲೆಲ್ಲ ಅವರ ಚುರುಕುತನ, ಸಹಜ ನಡಿಗೆ ಅಲ್ಲೇ ನಿಂತಂತೆ ಭಾಸವಾಗುತ್ತದೆ.
‘ಆ ಹಾಳು ಅಸಮ ಪುರಾಣದ / ಕಥೆ ಮುಗಿದು/ ಯಾವುದೋ ಕಾಲವಾಯ್ತಲ್ಲ/ನನ್ನೊಳಗಿನವಳೇ/ನಿನಗಿನ್ನೂ ಅದರದೇ ಕನವರಿಕೆ’ ಎಂದು ಆರಂಭವಾಗುವ ಮೊದಲ ಪದ್ಯದಿಂದ ‘ಇಷ್ಟೇ ಹೀಗೇ ಎಂಬ ನಿರ್ಧಾರವಿಲ್ಲ/ ಕೊನೆ ಇಲ್ಲ ಮೊದಲೂ ಇಲ್ಲ/ ಎಲ್ಲೆಗಳ ದಾಟಿಯೂ ಉತ್ತರಗಳಿಲ್ಲ/ ಎಂದು ಕೊನೆಯಾಗುವ ಕಡೆಯ ಕವಿತೆಯವರೆಗೂ ಎಲ್ಲೂ ತನ್ನದೇ ಎಂಬ ಹಟವಾಗಲೀ, ಇದೇ ಇದೊಂದೇ ಬಿಡುಗಡೆಯ ದಾರಿ ಎಂಬ ಅಂತಿಮ ತೀರ್ಪಿಗೆ ಈಕೆ ಬೀಳದ ಕಾರಣಕ್ಕೆ ಎಲ್ಲ ಪದ್ಯಗಳಲ್ಲೂ ಸಹಜ ಜೈವಿಕತೆ ಇದೆ.
ಬೆಣ್ಣೆ ತುಪ್ಪವಾಗುವ ರೂಪಾಂತರದ ಹದವನ್ನು ‘ಅಮ್ಮನಾಗುವುದೆಂದರೆ’ ಕವಿತೆಯಲ್ಲಿ ಹೀಗೆ ಹೇಳುತ್ತಾರೆ-‘ಸಿದ್ಧಿಸಿದಂತೆಲ್ಲಾ, ಬೆಣ್ಣೆ ಉಕ್ಕುವುದಿಲ್ಲ/ ಮಾಗುವ ಸದ್ದಿಗೆ ಧ್ಯಾನಿಸಿ/ ಸ್ಥಿರಗೊಳ್ಳುತ್ತದೆ ಮನ. ಕರಟುವುದಿಲ್ಲ/ ಹಸಕಲಾಗುವುದಿಲ್ಲ,. ಸದಾ ಹದ ತುಪ್ಪ.’ ‘ನಿರಾಕರಣ’ ಎನ್ನುವ ಕವಿತೆ ಧ್ಯಾನಿಸುವ ಹದ ಎಲ್ಲರಿಗೂ ನಿಲುಕಿದರೆ ಪ್ರಾಯಶಃ ಸಮಾಜದ ಮೇಲು-ಕೀಳುಗಳೆಲ್ಲ ಕ್ಷಣದೊಳಗೇ ಅಳಿಯಬಹುದು. ಆದರೆ ಸ್ಪರ್ಧೆಗಿಳಿಯದೇ, ಗೋಲು ಹೊಡೆಯದೇ ಸುಮ್ಮನಿದ್ದೇ ವರ್ತಮಾನಕ್ಕೆ ಉತ್ತರಿಸುವುದು ಎಲ್ಲರಿಂದಲೂ ಸಾಧ್ಯವಿರುವ ಸಂಗತಿಗಳಲ್ಲವಲ್ಲ.
ಅದಲ್ಲ ಅದಲ್ಲ, ಒಂದು ಅಗುಳಿನ ಸತ್ಯ, ಅನಾಗತ ಹುಡುಕುತ್ತ, ಪರ್ಯಾಯ ಮುಂತಾದ ಕವಿತೆಗಳಲ್ಲಿ ಇತ್ತೀಚೆಗೆ ಕನ್ನಡ ಕಾವ್ಯವು ಅಧ್ಯಾತ್ಮಕ್ಕೆ ತೆರೆದುಕೊಳ್ಳುತ್ತಿರುವ ರೀತಿಯನ್ನು ತೆರೆದಿಟ್ಟರೆ, ಕವಿತೆಯನ್ನೇ ಕುರಿತ ಪದ್ಯಗಳಾದ ಅಂತರ ನಿರಂತರ, ಕಾಲಾಂತರ, ದಾರಿಗುಂಟ ಕವಿತೆ ನಿರಾಸೆಯನ್ನೇನೂ ಮಾಡುವುದಿಲ್ಲ. ಆದರೂ ಎಲ್ಲಿ ಎಲ್ಲಿ ಈ ಕವಿ ಪ್ರಾಸದ ಜೊತೆ ಏಗಲು ಹೋಗುತ್ತಾರೋ ಅಲ್ಲೆಲ್ಲ ಇವರ ಕವಿತೆಗಳೂ ಏದುಸಿರು ಬಿಟ್ಟಿವೆ, ಸಹಜ ನಡಿಗೆಯಿಂದ ಆಮೆ ವೇಗಕ್ಕೆ ಜರುಗಿವೆ.
ಮೊದಲ ಓದಿಗೆ, ಪತ್ರಿಕೆಗಳಲ್ಲಿ ಚಿತ್ರಗಳೊಂದಿಗೆ ಅಚ್ಚಾದ ಗಳಿಗೆಗಳಲ್ಲಿ ಇಲ್ಲಿನೆಲ್ಲ ಕವಿತೆಗಳೂ ಚಂದವಾಗಿ ಕಾಣುವುವಾದರೂ ಎರಡನೆಯ, ಮೂರನೆಯ ಮರು ಓದುಗಳಿಗೂ ಈ ಕವಿತೆಗಳು ಉಳಿಯಬಲ್ಲವೇ ಎಂಬುದು ಪ್ರಶ್ನೆ. ಹೊಸ ರೂಪಕಗಳನ್ನು ಸೃಷ್ಟಿಸದೇ, ಈಗಾಗಲೇ ತಮಗೊಲಿದು ಬಂದಿರುವ ಭಾಷೆ, ವಸ್ತು ವಿನ್ಯಾಸಗಳಲ್ಲೇ ಉಳಿದು, ಹೇಳಿದ್ದನ್ನೇ ಹೇಳುತ್ತಿರುವ ಇತರ ಕವಿಗಳ ನಿಂತಲ್ಲೇ ನಿಂತುಬಿಟ್ಟಿರುವ ಕಾವ್ಯದ ಬಂಡಿಗಳನ್ನೂ ಈಕೆ ಧ್ಯಾನಸ್ಥಸ್ಥಿತಿಯಲ್ಲಿ ಅಧ್ಯಯನ ಮಾಡಿದರೆ ತಾವೇ ನಿರ್ಮಿಸಿಕೊಂಡಿರುವ ಕೋಟೆಯಾಚೆಗೂ ಇಣುಕಬಲ್ಲರು. ಹೇಳದೇ ಉಳಿದ ಮಾತುಗಳನ್ನು, ಹೊಸ ಪ್ರಯೋಗಗಳನ್ನು, ಹೊಸ ರೂಪಕಗಳನ್ನೂ ಸೃಸ್ಟಿಸಬಲ್ಲರು.

http://sampada.net/article/26972

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: