Skip to content
ಜುಲೈ 24, 2010 / odubazar

ದುಡ್ಡು ಕಾಸು

ಒಂದು ಲೆಕ್ಕಾಚಾರ..
ಪತ್ರಕರ್ತರ ತಲೆ ಎನ್ನುವುದು ಒಂದು ಕಸದ ಬುಟ್ಟಿ ಇದ್ದಂತೆ ಎನ್ನುವ ಮಾತು ನಾನು ಪತ್ರಿಕಾ ವ್ಯವಸಾಯ ಆರಂಭಿಸಿದಾಗ ಚಾಲ್ತಿಯಲ್ಲಿತ್ತು.
ಈ ಮಾತನ್ನು ನನಗೆ ಹೇಳಿದವರು ಹಿರಿಯ ಪತ್ರಕರ್ತ ಹಾಗೂ ಆಗಿನ ಖ್ಯಾತ ಕಥೆಗಾರರಲ್ಲಿ ಒಬ್ಬರಾದ ಭಾರತೀಯಪ್ರಿಯ ಅವರು.
ಪತ್ರಕರ್ತರಿಗೆ ಎಲ್ಲ ವಿಷಯಗಳಲ್ಲೂ ಜ್ಞಾನವಿರಬೇಕೆಂಬುದು ಅವರ ಮಾತಿನತಾತ್ಪರ್ಯವಾಗಿತ್ತು. ಅಂದಮಾತ್ರಕ್ಕೆ ಪತ್ರಕರ್ತ, ಸರ್ವಜ್ಞನಾಗಿರಬೇಕೆಂದೇನೂ ಅಲ್ಲ. ಆದರೆ ಎಲ್ಲ ವಿಷಯಗಳಲ್ಲಿ ಪರಿಣತಿಯಿಲ್ಲವಾದರೂ ಜಗತ್ತಿನ ಎಲ್ಲ ಆಗುಹೋಗುಗಳ ಪ್ರಾಥಮಿಕ ತಿಳುವಳಿಕೆಯಾದರೂ ಕಡ್ಡಾಯವಾಗಿರಬೇಕು.
ಎಲ್ಲ ಬಲ್ಲವರಾಗಿದ್ದು, ಯಾವುದಾದರೂ ಒಂದು ವಿಷಯದಲ್ಲಿ ವಿಶೇಷ ಪರಿಣತಿ ಅಪೇಕ್ಷಣೀಯ.
ಇವತ್ತಿನ ಸಂದರ್ಭದಲ್ಲಿ ಈ ’ಕಸದ ಬುಟ್ಟಿ’ಗೆ ವೈದೃಶ್ಯವಾಗಿ ನಿಲ್ಲುವುದು ಓದುಗರ ’ಒಡಲಾಳ’ ಇವತ್ತಿನ ಓದುಗರ ಮಾಹಿತಿ ಹಸಿವು ಎಷ್ಟೆಂದು ಬಲ್ಲವರಿಗೆ ಈ ’ಒಡಲಾಳ’ದ ಬಯಕೆಗಳೇನು, ನಿರೀಕ್ಷೆಗಳೇನು ಎಂಬುದು ಗೊತ್ತಿರುತ್ತದೆ.
ಇವತ್ತಿನ ಓದುಗರಿಗೆ ಕೇವಲ ಸುದ್ದಿ, ರಾಜಕೀಯ-ಅಪರಾದ ಸುದ್ದಿಗಳಷ್ಟರಿಂದಲೇ ತೃಪ್ತಿಯಾಗುವುದಿಲ್ಲ. ಅವರಿಗೆ ಜಗತ್ತಿನ ಎಲ್ಲ ಆಗುಹೋಗುಗಳ ಮಾಹಿತಿ ಬೇಕು. ವಿಜ್ಞಾನ, ಉದ್ಯೋಗ, ವಾಣಿಜ್ಯ, ಪರಿಸರ, ಕ್ರೀಡೆ, ಚಲನಚಿತ್ರ, ಸಾಫ್ಟ್‌ವೇರ್, ಹಾರ್ಡ್‌ವೇರ್ ಹೀಗೆ ಹಲವು ಹನ್ನೊಂದು ಕ್ಷೇತ್ರಗಳ ಮಾಹಿತಿ.
ಸಹಜವಾಗಿಯೇ ಈ ’ಒಡಲಾಳ’ದ ಹಸಿವು ನೀಗಲು ದಿನಪತ್ರಿಕೆಗಳ ಸುದ್ದಿಯ ಜಾಗವನ್ನು ಬಲಿಕೊಡಲಾಗದು. ವಾಚಕರ ಮಾಹಿತಿ ಹಸಿವನ್ನು ತೃಪ್ತಿಪಡಿಸಲು ಕಳೆದ ಎರಡು ದಶಕಗಳಲ್ಲಿ ಭಾರತೀಯ ಪತ್ರಿಕೋದ್ಯಮ ವಿಶೇಷವಾಗಿ ಕನ್ನಡ ಪತ್ರಿಕೆಗಳು ಕಂಡುಕೊಂಡ ಹೊಸ ಉಪಾಯ ಪುರವಣಿಗೆಗಳು.
ಈಗ ಪ್ರತಿಯೊಂದು ಕನ್ನಡ ಪತ್ರಿಕೆಯೂ ಪ್ರತಿದಿನ ಮುಖ್ಯ ಸಂಚಿಕೆಯೊಂದಿಗೆ ವಾಣಿಜ್ಯ,ಕ್ರೀಡೆ, ಯುವಜನ, ಭೂಮಿಕಾ, ಉದ್ಯೋಗ, ವಿಜ್ಞಾನ, ಮೊದಲಾದ ವಿಶೇಷ ಪುರವಣಿಗೆಗಳನ್ನು ನೀಡುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.
ಇದರೊಂದಿಗೆ ಕನ್ನಡದಲ್ಲೂ ವಾಣಿಜ್ಯ ಪತ್ರಿಕೋದ್ಯಮ, ಕ್ರೀಡಾ ಪತ್ರಿಕೋದ್ಯಮ, ಚಲನಚಿತ್ರ ಪತ್ರಿಕೋದ್ಯಮ ಇತ್ಯಾದಿ ಹೊಸ ಕವಲುಗಳ ಬೆಳವಣಿಗೆ ಗೋಚರಿಸುತ್ತಿದೆ.
ಹೀಗಾಗಿ ಇವತ್ತು ಪತ್ರಿಕಾವೃತ್ತಿ ಕೈಗೊಳ್ಳುವವರಿಗೆ ’ಎಲ್ಲ ಬಲ್ಲೆ’ ಎಂಬುದರ ಜೊತೆಗೆ ಯಾವುದಾದರೂ ಒಂದು ಬಾಬಿನಲ್ಲಿ ವಿಷಯ ಪರಿಣತಿ ಅಗತ್ಯವೆನಿಸಿದೆ.
ಪ್ರಸ್ತುತ ನಿಮ್ಮ ಕೈಯಲ್ಲಿರುವ ’ದುಡ್ಡು-ಕಾಸು’ ವೃತ್ತಿ ಬಾಂಧವರಾದ ಜಿ.ಕೆ.ಮಧ್ಯಸ್ಥ ಅವರು ವಿಜಯ ಕರ್ನಾಟಕಕ್ಕೆ ಬರೆದ ಅಂಕಣ ಬರಹಗಳ ಸಂಕಲನ.
ಪುಸ್ತಕದ ಹೆಸರೇ, ಅದರ ಪ್ರಪಂಚ ವಿಸ್ತಾರ, ವ್ಯಾಪ್ತಿ, ಆಳಗಳನ್ನು ಸೂಚಿಸುತ್ತದೆ. ಇಲ್ಲಿರುವ ಮೂವತ್ತನಾಲ್ಕು ಲೇಖನಗಳೂ ಈ ಪ್ರಪಂಚದ ವಿವಿಧ ಮುಖಗಳನ್ನು, ವಿವಿದ ನೋಟಗಳನ್ನು ಪರಿಚಯಿಸುತ್ತವೆ. ಈ ಪರಿಚಯ ಕೇವಲ ಕನ್ನಡಿ ಹಿಡಿಯುವ ಪ್ರಯತ್ನವಷ್ಟೇ ಆಗಿರದೆ, ಶೋಧನೆ-ವಿಶ್ಲೇಷಣೆಗಳ ಮೂಲಕ ಆಳಕ್ಕೂ ಇಳಿದು ವಿಮರ್ಶಾತ್ಮಕವೂ, ರಚನಾತ್ಮಕವೂ ಆಗಿರುವುದರಲ್ಲಿ ಮಧ್ಯಸ್ಥರ ಛಾಪನ್ನು ಕಾಣಬಹುದು. ಹೀಗೆಂದಾಕ್ಷಣಕ್ಕೆ ಅವರಲ್ಲೊಬ್ಬ ಅರ್ಥಶಾಸ್ತ್ರಜ್ಞನಿದ್ದಾನೆ ಎಂದಲ್ಲ.
ಆಯ್ದುಕೊಂಡಿರುವ ವಿಷಯಗಳಲ್ಲಿ ಸಾಕಷ್ಟು ಅರಿವು, ಪರಿಣತಿ, ವಸ್ತುನಿಷ್ಠವಾದ ದೃಷ್ಟಿಕೋನ, ಮಧ್ಯಸ್ಥರ ಈ ಲೇಖನಗಳಲ್ಲಿ ಮೇಲ್ನೋಟಕ್ಕೇ ಸೃಷ್ಟಿಗೋಚರವಿದೆ. ಹೀಗಾಗಿ ಮಾಹಿತಿ ಹಸಿವಿನ ಓದುಗರಿಗೆ ಮಾಹಿತಿಯ ಜೊತೆ ಒಳನೋಟ -ಮುನ್ನೋಟಗಳೊಂದಿಗೆ ಹಸಿವು ತಣಿಸುವ -ಹಸಿವು ಹುಟ್ಟಿಸುವ ಕೈತುತ್ತು ಇಲ್ಲಿ ಲಭ್ಯವಿದೆ ಎಂದು ನನ್ನ ಲೆಕ್ಕಾಚಾರ.
ಮೇಲಿನ ಮಾತುಗಳಿಗೆ ನಿದರ್ಶನವಾಗಿ ಮುಕ್ತಪೇಟೆ,ಸರಕಾರಕ್ಕೇಕೆ ವಿಮಾಕಂಪನಿ ಉಸಾಬರಿ,ಆರ್ಥಿಕ ಸುಧಾರಣೆ, ವಿಶ್ವವ್ಯಾಪಾರ ಯುದ್ಧ, ಋಣಭಾರ, ಸಕ್ಕರೆ ಖಾಯಿಲೆ, ಇವೇ ಮೊದಲಾದ ಲೇಖನಗಳನ್ನು ಗಮನಿಸಬಹುದು.
ಇಲ್ಲೆಲ್ಲ ಸರಕಾರದ ನೀತಿ, ಜಾಗತಿಕ ಹಿನ್ನಲೆ, ಜನಸಾಮಾನ್ಯರ ಬದುಕು ಹೀಗೆ ಹಲವಾರು ನಿಟ್ಟುಗಳಿಂದ ಸಮಸ್ತೆಯ ವಸ್ತುನಿಷ್ಟ ಪೃಥಕ್ಕರಣವಿದೆ.
ಈ ಮೂಲಕ ಕೆಲವೊಂದು ರಹದಾರಿಗಲ ಸುಳಿವು-ಸೂಚನೆಗಳನ್ನು ನೀಡುತ್ತಾರೆ. ಆಹಾರ ಭದ್ರತೆಯ ತತ್ವಕ್ಕೆ ಅರ್ಥ ಬರುವುದು “ರೈತನ ಬದುಕು ಭದ್ರವಾಗುವುದರಿಂದ, ಪೇಟೆಗೆ ಹೊದವರಲ್ಲಿ ಕೆಲವರಾದರೂ ಹೊಲಗಳಿಗೆ ವಾಪಾಸಾಗುವುದರಿಂದ” ಎನ್ನುವ ಮಾತುಗಳಲ್ಲಿ ಕೃಷಿ ಅರ್ಥ ವ್ಯವಸ್ಥೆ ಸಾಗಬೇಕಾಗಿರುವ ಹಾದಿಯ ಸ್ಪಷ್ಟ ಹೊಳಪು ಇದೆ.
ನಮಗೆ ಕೈಗಾರಿಕ ಅರ್ಥ ವ್ಯವಸ್ಥೆ ಬೇಕೋ, ಕೃಷಿ ಅರ್ಥ ವ್ಯವಸ್ಥೆ ಬೇಕೋ ಎನ್ನುವುದೆಲ್ಲ ಜಾಗತೀಕರಣದ ಹಿನ್ನಲೆಯಲ್ಲಿ ಈಗ ಅಪ್ರಸ್ತುತ. ಕೈಗಾರಿಕೆ-ಕೃಷಿ ಎರಡೂ ಕೈಕೈ ಹಿಡಿದು ಸಾಗಬೇಕು.
’ಒಂದು ತೋಳಿಗೆ ಸಾಮು ಮಾಡಿ ಮಾಂಸಖಂಡ ಬೆಳೆಸಿ ಇನ್ನೊಂದನ್ನು ಮೊದಲಿನಂತೆಯೇ ಬಿಡಲಾಗದು’. ರೈತರನ್ನು ಎದುರಾಳಿಗಳೆಂದೂ ಉದ್ಯಮದವರೂ, ಉದ್ಯಮದವರು ಎದುರಾಳಿಗಳೆಂದು ರೈತರೂ ಬಗೆಯುವ ಜಾಯಮಾನ ತಪ್ಪಬೇಕು.
ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವ ದಿನಗಳು ಮುಗಿದವು. ರೈತರೂ ಪರ್ಯಾಯಗಳತ್ತ ಯೋಚಿಸಿ ರೈತೋದ್ಯಮಿಯಾಗಬೇಕು. ಉದ್ಯಮಪತಿಗಳು ಕೃಷಿ ಉದ್ಯಮಿಗಳಾಗಬೇಕು.ಯಾರಿಗೆ ಯಾರೂ, ಯಾವುದಕ್ಕೆ ಯಾವುದೂ ಶತ್ರುವಲ್ಲ. ನಾಗಾಲೋಟದ ಅಭಿವೃದ್ಧಿಯೊಂದೇ ಗುರಿ, ಅದಕ್ಕೆ ದಾರಿ ಹಲವಾರು.
ಮಗ್ಗುಲ ಮುಳ್ಳೆಂದು ಚೀನಾವನ್ನು ದೂರವಿಡಲಾಗದು- ಬಾಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆಯಿಂದ ಸಜ್ಜಾಗಿಯೇ ಮಾರುಕಟ್ಟೆಯಲ್ಲಿ ಅದನ್ನು ಎದುರಿಸಬೇಕು- ಇಂಥ ಚಿಂತನಾರ್ಹ ಸೆಳಕುಗಳು ಮಧ್ಯಸ್ಥರ ಬರಹಗಳಲ್ಲಿ ಧಾರಾಳವಾಗಿವೆ.
ಸಚಿವರು ರೈಲು ಬಿಡುವ ಶೈಲಿ, ಕಾರ್ಪೊರೇಟರ್ ಸತ್ಯವಂತರ ಲೆಕ್ಕದ ವೈಖರಿಗಳೂ ಶೋಧದ ಬೆಳಕಿನಲ್ಲಿ ಆಸಕ್ತಿಯಿಂದ ಓದಿಸಿಕೊಳ್ಳುತ್ತವೆ.
ಹೊಸ ವಿಷಯಗಳನ್ನು ಅನಾವರಣಗೊಳಿಸುವಾಗ ಭಾಷೆಯ ತೊಡಕುಂಟಾಗುವುದು ಸಹಜ. ಮೂಲ ಸಂರಚನೆಗಳೆಲ್ಲ ಇಂಗ್ಲಿಷ್‌ನಲ್ಲೆ ಸಿಗುವುದರಿಂದ ಕನ್ನಡದಲ್ಲಿ ಪಾರಿಭಾಷಿಕ ಪದಗಳನ್ನು ರೂಪಿಸುವುದು ಅನಿವಾರ್ಯ. ಮಧ್ಯಸ್ಥ ಈ ಕಡೆಗೆ ಗಮನ ಕೊಟ್ಟಿದ್ದರೆ “ನೆಗೆಟಿವ್ ಪಟ್ಟಿ” “ಕಪ್ಪೆ ಎಸೆಯುತ್ತ ಕೂತಿಲ್ಲ”, “ಫಿಸ್ಕಲ್ ಪಾಲಿಸಿ” ಇಂಥ ಪ್ರಯೋಗಗಳನ್ನು ತಪ್ಪಿಸಬಹುದಿತ್ತು.
ಆಗಮಾತ್ರ “ನ್ಯಾನೋದಯ” ಜ್ಞಾನೋದಯಕ್ಕೆ ದಾರಿ ಮಾಡಿಕೊಟ್ಟೀತು. ಮಧ್ಯಸ್ಥರ ಇಂಥ ಪುಸ್ತಕಗಳು ಇನ್ನಷ್ಟು ಬರಲಿ. ಕನ್ನಡದಲ್ಲಿ ’ಅರ್ಥ’ ಸಾಹಿತ್ಯ ’ದುಡ್ಡು-ಕಾಸು’ಗಳಿಂದ ಸಮೃದ್ಧವಾಗಲಿ ಎಂದು ಹಾರೈಸುವೆ.
ಜಿ ಎನ್ ರಂಗನಾಥರಾವ್
Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: