Skip to content
ಆಗಷ್ಟ್ 10, 2010 / odubazar

ಎಣ್ಮಕಜೆ

ಮಲಯಾಳಂ ಸಾಹಿತ್ಯ ಲೋಕದಲ್ಲಿ ಹೊಸ ಅಲೆ ಎಬ್ಬಿಸಿದ ಅಂಬಿಕಾಸುತನ್ ಮಾಂಗಾಡ್   ಅವರು ಬರೆದ ಎಣ್ಮಕಜೆ ಕಾದಂಬರಿಯನ್ನು ಬಾಲಕೃಷ್ಣ ಹೊಸಂಗಡಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕಾದಂಬರಿ  ಆಗಸ್ಟ್ 15 ಭಾನುವಾರದಂದು  ಬಿಡುಗಡೆಗೊಳುತ್ತಿದೆ. ಎಣ್ಮಕಜೆ ಕಾದಂಬರಿಯ ಒಂದು ಭಾಗ  ಇಲ್ಲಿದೆ

ಜಟಾಧಾರಿ ಮಲೆಯ ಅಪರಿಚಿತವಾದ ತಿರುವಿನ ಇಳಿಜಾರಿನಲ್ಲಿ ಇಳಿಯುತ್ತಿರುವಾಗ ನೀಲಕಂಠನಿಗೆ ಅದ್ಭುತ ಎನ್ನಿಸಿತು. ದಟ್ಟಕಾಡಿನ ಒಂದೊಂದು ದಾರಿ ಕೂಡಾ ಪಂಜಿಗೆ ಎಷ್ಟೊಂದು ಹೃದಯತಲಾಮಲಕ! ಬಾಲ್ಯದಿಂದಲೇ ಹಸಿಮದ್ದು ಹುಡುಕಿ ಅಲೆದಾಡಿದ ಪರಿಚಯ ಇದು.
ಆರು ವರ್ಷಗಳ ಕಾಲ ಮಲೆಯಲ್ಲಿ ಕಳೆದರೂ ಈ ಇಳಿಜಾರು ಮೂಲಕ ಕೆಳಗೆ ಇಳಿಯಲು ತನಗೆ ತೋರದೇ ಇದ್ದುದು ಯಾಕೆ ಎಂದು ಪಂಜಿಯ ನೆಳಲಿನ ಹಾಗೆ ನಡೆಯುತ್ತಿದ್ದ ನೀಲಕಂಠನ್ ಆಲೋಚಿಸಿದ. ಆಚೆ ಕೆಳಗೆ ಕೋಡಂಗಿರಿ ತೋಡಿನ ಬದಿಯಲ್ಲಿ ಕಾಣುವ ಮನೆಗಳ ದೃಶ್ಯವೇ ಇರಬೇಕು ನನ್ನನ್ನು ಕಲಕಿದ್ದು. ಮನುಷ್ಯರ ನೆರಳೂ ಸೋಕದಂತೆ ಇರಲು ಪಾಡುಪಡುತ್ತಿದ್ದೆನಲ್ಲ ತಾನು. ಆದರೆ, ಈಗ ಯಾಕೆ ಆ ಮನೆಗಳೆಲ್ಲಾ ತನ್ನನ್ನೇ ಕರೆಯುತ್ತಿರುವ ಹಾಗೆ ತೋರುತ್ತಿದೆ? ಜನರ ಜತೆಗೆ ಮಾತನಾಡಬೇಕೆನ್ನುವ ಅತೀವ ಆವೇಶ ಮನಸ್ಸಿನಲ್ಲಿ ಉರಿಯುತ್ತಿದೆ.
ಇಳಿಜಾರು ಕಳೆದು ಕೋಡಂಗಿರಿ ತೋಡಿನ ಬದಿಗೆ ತಲುಪಿದಾಗ ಸುಮ್ಮನೆ ತಿರುಗಿನೋಡಿದ. ಎಷ್ಟೊಂದು ಎತ್ತರ? ನೇರಕ್ಕೆ ಆಕಾಶಕ್ಕೇ ಚೆಲ್ಲಿ ನಿಲ್ಲುತ್ತಿದೆ ಮಲೆ.
ಇಬ್ಬರೂ ತೋಡಿಗೆ ಇಳಿದರು. ಮೊಣಕಾಲಿನ ವರೆಗಿನ ತಣ್ಣಗಿನ ನೀರಿಗೆ ಇಳಿದು ನಿಂತಾಗ ಆಯಾಸ ಆವಿಯಾಗಿ ಹೋಯಿತು. ನೀರನ್ನು ಮುಖಕ್ಕೆ ಎರಚಿದ. ದಾಹ ತೀರುವ ತನಕ ಬೊಗಸೆಯಲ್ಲಿ ಬಾಚಿ ಕುಡಿದ.
ಮಲೆಯನ್ನು ಸುತ್ತಿ ಹರಿದು ಬರುವ ತೋಡಿನ ಮತ್ತೊಂದು ಭಾಗದಲ್ಲೆಲ್ಲಾ ಕಂಗಿನ ತೋಟಗಳು ಇವೆ. ತೋಡಿನ ಕರೆಯಲ್ಲಿ ದೃಷ್ಟಿ ಹಾಯುವ ವರೆಗೂ ದಾಸವಾಳದ ಗಿಡಗಳ ಕಡುಹಸಿರು ಬೇಲಿಗಳು. ಮೊದಲಿಗೆ ಗ್ರಾಮಕ್ಕೆ ಬಂದಾಗಲೂ, ಕಳೆದ ದಿನಗಳಲ್ಲಿ ತೋಟಗಳ ಮೂಲಕ ಸುಮ್ಮನೆ ನಡೆದಾಗಲೂ ದಾಸವಾಳದ ಗಿಡಗಳನ್ನು ತುಂಡುಮಾಡಿ ಮಾಡಿದ ಬೇಲಿ ಗಮನಕ್ಕೆ ಬಂದಿತ್ತು. ಮುಳ್ಳು ಬೇಲಿಗಳನ್ನು ಎಲ್ಲಿಯೂ ಕಂಡದ್ದು ನೀಲಕಂಠನ್‌ಗೆ ನೆನಪಿಲ್ಲ. ಇದು ಎಣ್ಮಕಜೆಯದ್ದೇ ವಿಶೇಷ. ಮುಳ್ಳುಗಳಿಲ್ಲದ, ಯಾವಾಗಲೂ ಹೂಬಿಡುವ ಸೀಮೆಗಳು!
ಯಾತ್ರಿಕನನ್ನು ಮುಳ್ಳುಗಳು ಹಿಡಿಯುವುದಿಲ್ಲ. ಅಪರಿಚಿತನಿಗೂ ಬಿರಿದ ಹೂನಗೆಯ ಸ್ವಾಗತ ಸಿಕ್ಕಿಬಿಡುತ್ತದೆ.
ಸ್ವರ್ಗಕ್ಕೆ ಇರುವ ಮೊದಲ ಉಚಿತ ಬಸ್ಸ್ ಪ್ರಯಾಣ ನೀಲಕಂಠನ್‌ನ ನೆನಪಿನಲ್ಲಿ ಸ್ಪಷ್ಟವಾಯಿತು. ಆತ ಮನಸ್ಸಿನಲ್ಲಿ ನೆನೆದುಕೊಂಡ- ಇದು ಸತ್ಯದ್ದಷ್ಟೇ ಅಲ್ಲ, ಒಳ್ಳೆಯತನದ ನಾಡು ಕೂಡಾ.
ಹಸಿಮದ್ದಿನ ಕಟ್ಟು ಕೈಯಲ್ಲಿ ಎತ್ತಿಕೊಂಡು ಪಂಜಿ ಹೇಳಿದ:
‘ನಮಗೆ ತೋಡಿನ ಕರೋಟೆ(ಬದಿಯಲ್ಲೆ) ಹೋಗೊಣ ಸೀದ ಹೋದರೆ ಸಾಕು.’
ಅವರು ಕಾಡು ಕಲ್ಲಿನಿಂದ ಕಟ್ಟಿ ಎತ್ತರಿಸಿದ ಮತ್ತೊಂದು ಬದಿಗೆ ಹತ್ತಿದರು. ದಾಸವಾಳದ ಬೇಲಿಯನ್ನು ಒತ್ತಿಕೊಂಡು ತೋಡಿನ ಬದಿಯಲ್ಲೆ ನಡೆದರು. ಅಡಿಕೆ ಮರಗಳ ಎಡೆಯಲ್ಲಿ ಮೊದಲು ಕಾಣಿಸಿದ ಮನೆ ನೋಡಿ ನೀಲಕಂಠನ್ ಕೇಳಿದ:
‘ಅದು ಯಾರ ಮನೆ?’
ಪಂಜಿ ತಿರುಗಿ ನಿಂತ.
’ಅದು ಶಿವಪ್ಪನಾಯ್ಕನ ಮನೆ: ಅಲ್ಲಿಗೆ ನಾವು ಬರುದಿಲ್ಲ. ಒಂದೊಂದು ಜಾತಿಯವರು ವಾಸಿಸುವ ಮನೆಗೆ ಒಂದೊಂದು ಹೆಸರಿದೆ. ಅದೋ ಅಲ್ಲಿ ಕಾಣುವುದು ‘ಗುತ್ತು’. ಗುತ್ತು ಎಂದರೆ ಬಂಟರ ಮನೆ. ಪೂಜಾರಿಗಳ ಮನೆಗೆ ‘ಕೊಟ್ಯ’ ಎನ್ನುತ್ತಾರೆ. ಇಲ್ಲಿ ಪೂಜಾರಿ ಎಂದರೆ ತೀಯ ಜನಾಂಗದವರು. ಮೊಗೇರರು ಮತ್ತು ಕೋಪಾಳರು ಇರುವ ಮನೆಗೆ ‘ದಟ್ಟಿಗೆ’ ಎನ್ನುತ್ತಾರೆ. ಕೊರಗರದ್ದು ‘ಕೊಪ್ಪ’, ಮಾದಿಗರದು ‘ಮಾಡ’. ಮಾಯಿಲರದ್ದು ‘ಚೇರ’. ಜೈನರದ್ದು ‘ಬಸದಿ’. ಬ್ರಾಹ್ಮಣರದು ‘ಮನೆ’….’
ವಿಸ್ಮಯದಿಂದ ನೀಲಕಂಠನ್ ಕೇಳಿದ:
‘ಈ ಹೆಸರುಗಳನ್ನು ಈಗಲೂ ಉಪಯೋಗಿಸುತ್ತಾರಾ?’
ಪಂಜಿ ತಲೆಯಾಡಿಸಿದ.
‘ನಾವು ಹಾಗೇ ಹೇಳುತ್ತೇವೆ.’
ಶಿವಪ್ಪನಾಯ್ಕನ ಮನೆಗೆ ಇರುವ ಮೆಟ್ಟಲಿನ ದಾರಿ ಮುಂದೆ ಸಾಗಿದಾಗ ಪಂಜಿ ನಿಂತ.
‘ಈಡೆ ನಿಕ್ಳ್ ಒಂದು ಪೊಣ್ಣ್ ಬಾಲೆ ಇದೆ ನೋಡ್ತೀರಾ?’
‘ನೋಡುವುದಕ್ಕೇನೋ ಮನಸ್ಸಿದೆ ಪಂಜಿ. ಆದರೆ, ಅವರಿಗೆ ಇಷ್ಟವಾಗುತ್ತದೋ?’
‘ಬನ್ನಿ, ನಾನು ತುಂಬಾ ಮದ್ದು ಮಾಡಿದ್ದೇನೆ. ಸೊಖಾಗಿಲ್ಲ.’
ಪಂಜಿ ಮುಂದೆ ನಡೆದ.
ಮೆಟ್ಟಿಲು ದಾರಿಯ ಎರಡು ಭಾಗದಲ್ಲೂ ನಳನಳಿಸುವ ದಾಸವಾಳದ ಬೇಲಿಗಳಲ್ಲಿ ಅಲ್ಲಲ್ಲಿ ಕೆಂಪು ಹೂಗಳು ಅರಳಿ ನಿಂತಿದ್ದುವು.
ಶಿವಪ್ಪ ನಾಯ್ಕ ವರಾಂಡದಲ್ಲಿ ಕೂತು ಸುಣ್ಣದ ಕರಂಡಿಕೆಯಿಂದ ಸುಣ್ಣ ತೆಗೆದು ಶ್ರದ್ಧೆಯಿಂದ ವೀಳ್ಯದೆಲೆಗೆ ಹಚ್ಚುತ್ತಿದ್ದ. ಜಟಾಧಾರಿ ಮಲೆಯಲ್ಲಿ ಮನುಷ್ಯ ಸಂಪರ್ಕ ಇಲ್ಲದೆ ವಾಸಿಸುವ ಗಡ್ಡ -ತಲೆಕೂದಲು ಬೆಳೆದ ಮನುಷ್ಯನನ್ನು ಫಕ್ಕನೆ ಅಂಗಳದಲ್ಲಿ ಕಂಡಾಗ ವಿಭ್ರಮೆಯಿಂದ ದಿಗ್ಗನೆ ಎದ್ದ. ಜತೆಗೆ ಹಿಂದೆ ಪಂಜಿಯನ್ನು ಕಂಡಾಗ ಆತನಿಗೆ ಸ್ವಲ್ಪ ಸಮಾಧಾನ ಆಯಿತು.
ಶಿವಪ್ಪ ನಾಯ್ಕ ಅಂಗಳಕ್ಕೆ ಬಂದು ಗೌರವಪೂರ್ವಕ ನಮಸ್ಕರಿಸಿದ.
ನೀಲಕಂಠನೂ ಕೈಮುಗಿದ.
ಪಂಜಿ ತುಳುವಿನಲ್ಲಿ ಮಾತನಾಡಿದ. ಶಿವಪ್ಪ ತಲೆಯಾಡಿಸುತ್ತಿದ್ದ. ಆತ ಅತಿಥಿಗಳನ್ನು ವರಾಂಡಕ್ಕೆ ಕರೆದ. ಎರಡು ಮಣೆಗಳನ್ನು ತಂದಿಟ್ಟ.
‘ಕುಳಿತುಕೊಳ್ಳಿ.’
ನೀಲಕಂಠನ್ ಕೂತ. ಪಂಜಿ ತಿಟ್ಟೆಯಲ್ಲಿ ಕೂತ. ಶಿವಪ್ಪ ಒಳಗೆ ನೋಡಿ ಗಟ್ಟಿಯಾಗಿ ಮಕ್ಕಳನ್ನು ಕರೆದ:
‘ಭಾಗ್ಯಲಕ್ಷ್ಮಿ, ಏವ್‌ಣ್ಣಿಯೆ.’(ಇಲ್ಲಿ ಬಾ -ಮರಾಠಿಯಲ್ಲಿ)
ಒಳಗೆ ನಿಶ್ಶಬ್ದತೆ. ಪ್ರತಿಕ್ರಿಯೆ ಇರಲಿಲ್ಲ. ಶಿವಪ್ಪ ಮತ್ತೊಮ್ಮೆ ಕರೆದ. ಒಳಗಿನ ಕೋಣೆಯಿಂದ ಗೆಜ್ಜೆಯ ಸಣ್ಣ ಸದ್ದು ಮೊಳಗಲು ಶುರುವಾಯಿತು.
ಭಾಗ್ಯಲಕ್ಷ್ಮಿ ಹೊರಗೆ ಬಂದಳು.
ಹದಿಮೂರು, ಹದಿನಾಲ್ಕು ವರ್ಷದ ಬಿಳಿಯ ಬಣ್ಣದ ಸೌಂದರ್ಯ ಇರುವ ಹೆಣ್ಣುಮಗಳು.
ಆದರೆ, ಮರುನಿಮಿಷದಲ್ಲೇ ಆಘಾತಗೊಂಡ ಹಾಗೆ ಒಂದು ನಡುಕ ನೀಲಕಂಠನ ಶರೀರಕ್ಕೆ ಗೊತ್ತಾಯಿತು.
ಕಂಡದ್ದು ಸತ್ಯ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಆತ ಮತ್ತೊಮ್ಮೆ ಭಾಗ್ಯಲಕ್ಷ್ಮಿಯ ಮುಖವನ್ನು ನೋಡಿದ.
ದೊಡ್ಡ ನಾಲಗೆ ಹೊರಗೆ ಹಾಕಿ ಆಕೆ ನಿಂತಿದ್ದಾಳೆ. ಕೆಂಪುಕೆಂಪಾದ ನಾಲಗೆ ಗದ್ದದಿಂದ ಕೆಳಕ್ಕೆ ಚಾಚಿಕೊಂಡು ನೇತಾಡುತ್ತಿದೆ. ನಿಮಿಷಗಳು ಕಳೆದರೂ ಭಾಗ್ಯಲಕ್ಷ್ಮಿ ನಾಲಗೆ ಒಳಗೆ     ಸರಿಸಲಿಲ್ಲ. ಬಾಯಿ ಮುಚ್ಚುವುದೂ ಇಲ್ಲ.
ವಿಷಾದ ತುಂಬಿದ ತುಂಬಿದ ಸ್ವರದಲ್ಲಿ ಶಿವಪ್ಪ ಹೇಳಿದ:
‘ಅವಳಿಗೆ ಬಾಯಿ ಮುಚ್ಚುವುದಕ್ಕಾಗುವುದಿಲ್ಲ.’
ಗೋಡೆ ತುಂಬ ದೇವರುಗಳ ಮಸಿ ಹಿಡಿದ ಹಳೆಯ ಕ್ಯಾಲೆಂಡರ್ ಚಿತ್ರಗಳು ತೂಗಿ ನಿಂತಿದ್ದುವು. ಅವುಗಳ ಮುಂದೆ ದುರ್ಗೆಯ ಹಾಗೆ ಭಾಗ್ಯಲಕ್ಷ್ಮಿ ನಿಂತಳು. ಆದರೆ, ನಾಲಗೆಯಿಂದ ನೆತ್ತರು ಹನಿಯುತ್ತಿಲ್ಲ. ಕಣ್ಣುಗಳಿಂದ ಬೆಂಕಿ ಕಿಡಿ ಕಾರುತ್ತಿಲ್ಲ. ಅತಿಥಿಗಳಲ್ಲಿ ಆಕೆ ಸಣ್ಣದಾಗಿ ಮಂದಹಾಸ ಬೀರಲು ಪ್ರಯತ್ನಿಸುತ್ತಿದ್ದಳು. ಭಾಗ್ಯಲಕ್ಷ್ಮಿಯನ್ನು ಗಟ್ಟಿ ಹಿಡಿದು ಶಿವಪ್ಪ ಹೇಳಿದ:
‘ಹೆತ್ತಾಗಲೇ ಮಗುವಿನ ಬಾಯಿ ಹೀಗೆಯೇ. ನಿದ್ದೆ ಮಾಡುವಾಗಲೂ ನಾಲಗೆ ಹೊರಗೇ. ಗಟ್ಟಿ ಇರುವಂಥದ್ದೇನನ್ನೂ ತಿನ್ನಲಿಕ್ಕಾಗುವುದಿಲ್ಲ. ಅನ್ನವನ್ನು ಅರೆದು ಮುದ್ದೆ ಮಾಡಿ ಕೊಡುತ್ತೇವೆ…. ತುಂಬಾ ಜನ ವೈದ್ಯರಿಗೆ, ಡಾಕ್ಟ್ರಿಗೆ ತೋರಿಸಿದ್ದೇವೆ. ಯಾವ ಗುಣವೂ ಇಲ್ಲ…’
ಶಿವಪ್ಪ ಮತ್ತೂ ಏನೇನೋ ಮಾತಾಡುತ್ತಲೇ ಇದ್ದ. ಶ್ರದ್ಧೆಯಿಂದ ಕೇಳುವವನ ಹಾಗೆ ಕೂತರೂ ಯಾವುದೂ ನೀಲಕಂಠನ ಮನಸ್ಸಿನ ಒಳಕ್ಕೆ ಇಳಿಯುತ್ತಿರಲಿಲ್ಲ. ನೆನಪಿನ ಆಚೆಗೆ ಅನಿರೀಕ್ಷಿತವಾಗಿ ಮುಖಕ್ಕೆ ಏಟು ಪಡೆದವನ ಹಾಗೆ ಆತ ದಿಗ್ಭ್ರಮೆಗೊಂಡ.
ಎದ್ದು ವಿದಾಯ ಹೇಳುವಾಗ ಶಿವಪ್ಪನನ್ನು ಸಮಾಧಾನಪಡಿಸಲು ಯಾವ ಮಾತೂ ಸಿಗದೆ ನೀಲಕಂಠನ್ ಕುಸಿದುಹೋದ.
ಮೆಟ್ಟಿಲುದಾರಿ  ಮುಗಿದಾಗ ಪಂಜಿ ಹೇಳಿದ:
‘ಇಲ್ಲಿರುವ ಇಪ್ಪತ್ತೇಳು ಮನೆಗಳಲ್ಲೂ ತುಂಬಾ ರೋಗಿಗಳಿದ್ದಾರೆ. ಮಕ್ಕಳು ದೊಡ್ಡವಂತ ಇಷ್ಟೊಂದು ದೊಡ್ಡ ಮಟ್ಟಿನಲ್ಲಿ ಸೀಕ್(ರೋಗ) ಹಿಡಿದವರು ಬೇರೆಲ್ಲೂ ಇಲ್ಲ.’
‘ಅದ್ಯಾಕೆ ಪಂಜಿ ಈ ಸ್ಥಳದಲ್ಲಿ ಇಷ್ಟೊಂದು ರೋಗಿಗಳು?’
ಜ್ಞಾನಿಯ ಹಾಗೆ ಪಂಜಿ ಹೇಳಿದ:
‘ಜಟಾಧಾರಿಯ ಕೋಪ-ಶಾಪ. ಜಟಾಧಾರಿ ಮಲೆಯ ಮುಂದೆ ಅಲ್ಲವೇ. ಹಾಗಾಗಿ ಅದೇ.’
ಅನೇಕ ಪ್ರಶ್ನೆಗಳು ನೀಲಕಂಠನ್‌ನ ಮನಸ್ಸಿನೊಳಗೆ ಎದ್ದುವು. ಆದರೆ, ಏನನ್ನೂ ಮಾತನಾಡಲಿಲ್ಲ.
ತೋಡಿನ ಬದಿಯಲ್ಲಿ ನಡೆಯುತ್ತಿದ್ದಾಗ ಕೆಳಗೆ ನಿಶ್ಶಬ್ದ ಹರಿಯುವ ನೀರನ್ನು ನೋಡಿ ಪಂಜಿ ವಾಚಾಳಿಯಾದ:
‘ಇಲ್ಲಿ ತುಂಬ ಮೀನುಗಳಿದ್ದುವು ಹಿಂದೆ. ನನ್ನ ಅಪ್ಪ ಹೊಟ್ಟೆಯಲ್ಲಿ ಸೀಕ್ ಆದಾಗ ಈ ನೀರು ಮೂರು ಹೊತ್ತು ಕುಡಿಯುವುದಕ್ಕೆ ಹೇಳುತ್ತಿದ್ದ. ಹುಣ್ಣು ಹಿಡಿದವರಲ್ಲಿ ಮೂರು ದಿವಸ ಮುಳುಗಿ ಸ್ನಾನ ಮಾಡಲು ಹೇಳುತ್ತಿದ್ದ. ಎಲ್ಲಾ ಸೀಕ್  ಹೋಗುತ್ತಿತ್ತು. ಕುಡಿಯುವುದಕ್ಕಾಗಲೀ, ಮುಳುಗಿ ಸ್ನಾನಮಾಡುವುದಕ್ಕಾಗಲೀ ಈಗ ನಾನು ಹೇಳುವುದಿಲ್ಲ. ಮೀನು, ಕಪ್ಪೆ ಹುಟ್ಟದ ನೀರಲ್ಲವಾ?’
ಹೇಳುತ್ತಾ ಹೇಳುತ್ತಾ ಹೋದ ಹಾಗೆ ಪಂಜಿಯ ಭಾಷೆ ತುಸು ಹೆಚ್ಚೇ ಅರ್ಥವಾಗುವ ರೀತಿ ಅನ್ನಿಸುತ್ತಿತ್ತು. ಆದರೆ ಅರ್ಥವಾಗದ ಕೆಲವು ವಿಷಯಗಳು ತೇಲಿ ಬರುತ್ತವೆ. ಔಷಧನದಿಯಾದ ಗಂಗೆಯ ಹಾಗೆ ಪ್ರವಹಿಸುತ್ತಿದ್ದ ಈ ತೋಡಿನಲ್ಲಿ ಏನಾಗಿದೆ? ಆಲೋಚನೆ ಮಾಡುತ್ತಾ ತಲೆ ಎತ್ತಿದಾಗ ಪಂಜಿ ಮುಂದಿನ ಮನೆಯ ಕಡೆಗೆ ನಡೆಯುತ್ತಿದ್ದ. ಅಂಗಳ ತಲುಪುವ ಹೊತ್ತಿಗೆ ಪಂಜಿ ಹೇಳಿದ:
‘ಇದು ನಾರಾಯಣ ಶೆಟ್ಟಿಯ ಗುತ್ತು. ಇಲ್ಲಿಯೂ ಒಂದು ಪೆಣ್ಣ್ ಬಾಲೆ ಉಂಟು.’
ಒಬ್ಬ ವೃದ್ಧೆ ಅಂಗಳದಲ್ಲಿ ಕೂತು ಗೆರಸೆ ಮಡಿಲಲ್ಲಿ ಇರಿಸಿ ಏನನ್ನೋ ಆಯುತ್ತಿದ್ದಳು. ಹತ್ತಿರ ಹೋಗಿ ಪಂಜಿ ತುಳುವಿನಲ್ಲಿ ಮಾತನಾಡಿದ. ವೃದ್ಧೆ ತಲೆ ಎತ್ತದೆ ಮನೆಯ ಒಳಕ್ಕೆ ಬೆರಳು ತೋರಿಸಿ ಕೆಲಸ ಮುಂದುವರಿಸಿದಳು.
ಪಂಜಿ ಒಳಕ್ಕೆ ಹೋದ. ಹಿಂದೆ ನೀಲಕಂಠನೂ ನಡೆದ. ಅಲ್ಲಿಯೂ ಕೊಳೆಯಾದ ಗೋಡೆಯಲ್ಲಿ ಅನೇಕ ದೇವರುಗಳಿದ್ದರು.
ಅವುಗಳ ಜತೆಗೆ ಕತ್ತಿನಲ್ಲಿ ಹಾವು ಹಡೆಯೆತ್ತಿರುವ ಶಿವನ ದೊಡ್ಡದೊಂದು ಫೋಟೊ.
ನೆಲದಲ್ಲಿ ಹರಿದ ಹುಲ್ಲಿನ ಚಾಪೆಯಲ್ಲಿ ಆ ಹೆಣ್ಣುಮಗು ಮಲಗಿದ್ದಳು. ವಿಚಿತ್ರವಾದ ದೇಹದೊಂದಿಗೆ….ಶರೀರಕ್ಕಿಂತ ದೊಡ್ಡ ತಲೆ. ಬಹಳ ಸಣ್ಣ ಕೈಕಾಲುಗಳು…
ಕನಸಲ್ಲ ತಾನು ವಾಸ್ತವದ ನೋಟವನ್ನು ದಾಟಿ ಹೋಗುತ್ತಿದ್ದೇನೆ ಎಂದು ನೀಲಕಂಠನ್ ಸ್ವತಃ ಖಚಿತಪಡಿಸಿಕೊಂಡ.
ಬಹಳ ಹೊತ್ತು ನೋಡಿ ನಿಲ್ಲುವುದಕ್ಕಾಗದೆ ಆತ ತಟ್ಟನೆ ಹೊರಗೆ ಇಳಿದ. ಪಂಜಿಯನ್ನು ಕಾದು ನಿಲ್ಲದೆ ವೇಗವಾಗಿ ನಡೆದ.
ಪಂಜಿಯ ಕೋಲೂರುವ ಸದ್ದು ಹಿಂದಿನಿಂದ ಕೇಳಿದಾಗ ನೀಲಕಂಠನ್ ನಿಂತ. ಸ್ಪಷ್ಟ ಧ್ವನಿಯಲ್ಲಿ ಪಂಜಿಯಲ್ಲಿ ಕೇಳಿದ:
‘ಜಟಾಧಾರಿ ದೈವ ಇಷ್ಟೊಂದು ಕ್ರೂರನೆ ಪಂಜಿ? ಯಾವುದೇ ತಪ್ಪೂ ಮಾಡದ ಈ ಮುಗ್ಧ ಮಕ್ಕಳನ್ನು ಹೀಗೆ ಶಿಕ್ಷಿಸುತ್ತಿರುವುದು ಯಾಕೆ?’
ಪಂಜಿ ಏನನ್ನೂ ಮಾತನಾಡಲಿಲ್ಲ. ಸ್ವಲ್ಪ ದೂರ ನಡೆದ ನಂತರ ಪಂಜಿ ಮೌನ ಮುರಿದ:
‘ತಲೆ ದೊಡ್ಡದಾದ ಹುಡುಗರು ಈ ಸ್ವರ್ಗದಲ್ಲಿ ಇನ್ನೂ ತುಂಬಾ ಜನ ಇದ್ದರು. ಎಲ್ಲರೂ ಬೇಗ ತೀರಿಕೊಂಡರು. ಅವರು ಹೆಚ್ಚು ಬದುಕುವುದಿಲ್ಲ.’
ಉತ್ತರ ಹೇಳುವುದರ ಬದಲು ಜಟಾಧಾರಿಯ ಶಾಪದ ವ್ಯಾಪ್ತಿಯನ್ನು ಪಂಜಿ ಬೊಟ್ಟು ಮಾಡಿ ಹೇಳುತ್ತಿದ್ದಾನೋ ಏನೋ ಎಂದು ಅನುಮಾನಿಸಿದ.
ಹತ್ತಿರದಲ್ಲೇ ಇತ್ತು ದೂಮಣ್ಣ ಶೆಟ್ಟಿ ಮನೆ. ಅವರು ಅಲ್ಲಿಗೆ ಹೋಗಿ ನೋಡಿದಾಗ ಮನೋರೋಗಿಗಳಾದ ಎರಡು ಮಕ್ಕಳನ್ನು ಸಂಕೋಲೆಯಿಂದ ಕಟ್ಟಿದ್ದರು. ಕಾವಲುಗಾರನ ಹಾಗೆ ನಾಯಿ ಹತ್ತಿರದಲ್ಲೇ ಜಾಗ್ರತೆಯಿಂದ ಮಲಗಿದೆ. ಮಕ್ಕಳ ತಾಯಿ ತೀರಿಕೊಂಡಿದ್ದಾಳೆ ಎಂದು ಪಂಜಿ ಹೇಳಿದ. ಗಂಜಿ ಬೇಯಿಸಿಕೊಟ್ಟು ದೂಮಣ್ಣ ಬೆಳಗ್ಗೇ ಕೆಲಸಕ್ಕೆ ಹೋಗುತ್ತಿದ್ದ.
ಅವರು ಅಲ್ಲಿ ತಲುಪಿದಾಗ ಮದುವೆಯ ಪ್ರಾಯದ ಹೆಣ್ಣುಮಗಳು ನಿದ್ರಿಸುತ್ತಿದ್ದಳು. ಗಂಡುಮಗುವಿಗೂ ಹೆಚ್ಚು ಕಡಿಮೆ ಅದೇ ಪ್ರಾಯ. ಅಲ್ಲೆಲ್ಲಾ ದುರ್ಗಂಧ ವ್ಯಾಪಿಸಿದೆ.
ಹತ್ತಿರ ಹೋಗಿ ನೋಡಿದಾಗ ಕಂಡದ್ದು ಗಂಡುಮಗು ಮಲಮೂತ್ರ ವಿಸರ್ಜನೆ ಮಾಡಿ ನೆಲದಲ್ಲೆಲ್ಲಾ ಒರೆಸಿ ಅಂಟಿಸುತ್ತಿದೆ.
ಮನೆಯೊಡೆಯನ ಹಾಗೆ ಬಾಗಿಲ ಹತ್ತಿರ ನಿಂತು ನಾಯಿ ಬೊಗಳುತ್ತಲೇ ಇತ್ತು.
ಶ್ವಾಸನಾಳದ ಮೂಲಕ ಮೇಲಕ್ಕೆ ಒತ್ತರಿಸಿ ಬಂದ ಯಾವುದೋ ಮಂಜುಗಟ್ಟಿದ ಭಾವ. ಹಾಗೆ ಸಮತೋಲನ ತಪ್ಪಿಹೋಗದಿರಲು ನೀಲಕಂಠನ್ ಫಕ್ಕನೆ ಹಿಂದಿರುಗಿ ನಡೆದ.
ಮುಂದಿನ ಮನೆ ಕಡೆ ತಿರುಗುವ ಹಾದಿ ತಲುಪಿದಾಗ ಪಂಜಿಯ ಕೈ ಹಿಡಿದು ನೀಲಕಂಠನ್ ವಿನಂತಿಸಿದ:
‘ಸಾಕು ಪಂಜಿ. ಇನ್ನು ಆಗಲಿಕ್ಕಿಲ್ಲ ನೋಡಲಿಕ್ಕೆ.’
ಆ ಹೊತ್ತಿಗೆ ಪಂಜಿಯ ಕಣ್ಣುಗಳಲ್ಲಿ ಅದು ವರೆಗೆ ಕಾಣಿಸದ ಕಾಂತಿ ಕಾಣಿಸಿತು. ಬಹಳ ಕಾಲದ ವರೆಗೆ ಹೇಳದೆ ಅದುಮಿಟ್ಟದ್ದನ್ನು ಹೇಳಲು ತಹತಹಿಸುವ ಹಾಗೆ ಕೆನ್ನೆಯಲ್ಲಿ ರಕ್ತವರ್ಣ ವ್ಯಾಪಿಸಿ ತೋರುಬೆರಳು ತೋರಿಸಿ ಪಂಜಿ ಹೇಳಿದ.
‘ನನಗೆ ನಿಮ್ಮಲ್ಲಿ ಪ್ರಧಾನವಾದ ಒಂದು ವಿಷಯ ಹೇಳುವುದಿದೆ. ನೀವು ಕೇಳಬೇಕು. ನಾನು ಅದನ್ನು ಹೇಳಲೆ?’

ಹೆಚ್ಹಿನ ಓದಿಗಾಗಿ ಅವಧಿ

Advertisements
  1. venkatakrishna.k.k. / ಆಗಸ್ಟ್ 10 2010 2:25 ಅಪರಾಹ್ನ

    ಹೆತ್ತಬ್ಬೆಯಂದಿರ ಎದೆಹಾಲು ವಿಷವಾದ ಗ್ರಾಮ.
    ನಾನು ಎಣ್ಮಕಜೆಯ ಪಕ್ಕದ ಗ್ರಾಮದವನು.
    ನಿಜ ಸಂಗತಿಗಳನ್ನು ಓದುವಾಗ ಸಂಕಟವಾಗುತ್ತದೆ.
    ಮನುಷ್ಯ ಯಾವ ಮಟ್ಟಕ್ಕೆ ಇಳಿಯಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆ!

Trackbacks

  1. ಎಣ್ಮಕಜೆ: ಟಾಪ್‌ಟೆನ್ ಸ್ಥಾನ ಪಡೆದ ಕೃತಿಯಿದು « ಅವಧಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: