Skip to content
ಆಗಷ್ಟ್ 10, 2010 / odubazar

ಜನಪರ ಲೇಖನಗಳ ಸಂಕಲನ ‘ದೇವಕಾರು’

ಸತೀಶ್ ಚಪ್ಪರಿಕೆ ಅವರು ಜನಸಾಮಾನ್ಯರ ಬಗ್ಗೆ ಬರೆದ ಜನಪರ ಲೇಖನಗಳ ಸಂಕಲನ ದೇವಕಾರು ಆಗಸ್ಟ್ 15 ಭಾನುವಾರದಂದು ಬಿಡುಗಡೆಗೊಳುತ್ತಿದೆ. ದೇವಕಾರು ಪುಸ್ತಕದ ಒಂದು ಲೇಖನ ಇಲ್ಲಿದೆ

ಪುಲಕುಂಟ: ಪಾಪದ ಹೂಗಳ ಕೂಪ

ಹೊಸದಾಗಿ ಕಟ್ಟಿಸಿದ ಪುಟ್ಟ ಮನೆ. ಪುಲಕುಂಟದ ದೂಳಿನ ನಡುವೆ ತಲೆ ಎತ್ತಿ ನಿಂತಿದ್ದ ಆ ಮನೆಯ ಮುಂದೆ ಒಂದು ಸಣ್ಣ ಗೂಡಂಗಡಿ. ಪಕ್ಕದಲ್ಲೇ ಒಂದು ಕ್ಯಾಂಟೀನ್. ತಲೆ ತಗ್ಗಿಸಿ ಮನೆಯೊಳಗೆ ಅಡಿಯಿಟ್ಟೆ. ಗೋಡೆಗೆ ಇನ್ನೂ ಸಿಮೆಂಟ್ ಭಾಗ್ಯ ಬಂದಿರಲಿಲ್ಲ. ಮಂದ ಬೆಳಕಿನ ನಡುವೆ ಕೃಶ ದೇಹದ ಆ ಮಹಿಳೆಯ ಎದುರು ಕುಳಿತಾಗ ಎಲ್ಲವೂ ಮಸುಕು, ಮಸುಕು. ತಲೆಯ ಮೇಲೆ ಹೊಸದಾಗಿ ಹಾಸಿದ್ದ ಹೆಂಚುಗಳ ಪೈಕಿ ಒಂದು ಒಡೆದಿತ್ತು. ಒಡೆದ ಹೆಂಚಿನ ನಡುವೆ ತೂರಿ ಬರುತ್ತಿದ್ದ ಸೂರ್ಯನ ಕಿರಣಗಳು ಆ ಕೋಣೆಯೊಳಗೆ ಬೆಳಕು ಹರಡುವ ಯತ್ನ ಮಾಡುತ್ತಿದ್ದವು.

ಜೊತೆಯಲ್ಲಿದ್ದ ಸ್ತ್ರೀ ಸ್ವಯಂಸೇವಾ ಸಂಸ್ಥೆಯ ಬಾನು, ಎದುರಲ್ಲಿ ಕುಳಿತಿದ್ದ ರಮೀಜಾ ಅವರನ್ನು ಉದ್ದೇಶಿಸಿ, ಪರವಾಗಿಲ್ಲ ಹೇಳು ಎಂದಾಗ ಆಕೆ ನಿಧಾನವಾಗಿ ತಲೆ ಎತ್ತಿದಳು. ಕಂದು ಬಣ್ಣದ ಆ ಕಣ್ಣುಗಳಿಂದ ಬೆಂಕಿ ಚಿಮ್ಮುತ್ತಿತ್ತು!

ನನಗಾಗ ಕೇವಲ ೧೪ ವರ್ಷವಾಗಿತ್ತು. ಒಬ್ಬ ಮುದುಕನ ಜೊತೆ ಬಲವಂತವಾಗಿ ಮದುವೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ನನಗೆ ಮದುವೆ ಎಂದರೆ ಏನೆಂದು ಸರಿಯಾಗಿ ತಿಳಿದಿರಲಿಲ್ಲ. ಒಲ್ಲದ ಮನಸ್ಸಿನಿಂದ ನಿಖಾಕ್ಕೆ ಒಪ್ಪಿದೆ. ಕೇವಲ ಎರಡು ತಿಂಗಳಲ್ಲಿ ಅವನ ಕೈಗೆ ಸಿಕ್ಕು ನಾನು ಸೋತು ಸುಣ್ಣವಾಗಿ ಹೋದೆ. ಕೊನೆಗೆ ಹಿಂಸೆ ತಾಳಲಾರದೇ, ಅನಿವಾರ್ಯವಾಗಿ ತಲಾಖ್ ನೀಡಿ ಮರಳಿ ತವರಿಗೆ ಬಂದೆ. ಆ ಹೊತ್ತು ನನ್ನ ಅಪ್ಪ-ಅಮ್ಮ ಮತ್ತು ಮನೆಯವರೆಲ್ಲರ ಪಾಲಿಗೆ ನಾನು ಬೇಡವಾಗಿದ್ದೆ. ಹಾಗೂ ಹೀಗೂ ತವರಿನಲ್ಲಿ ಒಂದಿಷ್ಟು ವರ್ಷ ಕಳೆದೆ. ಅದೇ ಸಂದರ್ಭದಲ್ಲಿ ದೆಹಲಿಯಿಂದ ಊರಿಗೆ ಬಂದಿದ್ದ ಗಂಗುಲಮ್ಮ ನನಗೆ ಅಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದಳು. ಅಂದು ಯಾರಿಗೂ ಹೇಳದಂತೆ ನಾನು ಗಂಗುಲಮ್ಮನ ಜೊತೆ ರೈಲೇರಿ ದೆಹಲಿಗೆ ಹೊರಟೇ ಬಿಟ್ಟೆ ರಮೀಜಾ ತಲೆಯ ಮೇಲಿನ ಸೆರಗನ್ನು ಸರಿಪಡಿಸಿಕೊಂಡರು.

ದೆಹಲಿ ರೈಲು ನಿಲ್ದಾಣದಲ್ಲಿ ಇಳಿಯುವ ಮೊದಲು ಗಂಗುಲಮ್ಮ ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಾಳೆ ಎಂಬ ನಿಜಾಂಶ ಗೊತ್ತಾಯಿತು. ನೀನು ವೇಶ್ಯೆಯಾಗಿ ಕೆಲಸ ಮಾಡಿದರೆ ಹೆಚ್ಚು ಹಣ ಸಂಪಾದನೆ ಮಾಡಬಹುದು ಅಂತ ಗಂಗುಲಮ್ಮ ಉಪದೇಶ ಮಾಡಿದಳು. ರೈಲು ನಿಲ್ದಾಣದಿಂದ ನೇರವಾಗಿ ಹೋಗಿದ್ದು ಜಿ.ಬಿ. (ಗಾರ್ಸ್ಟಿನ್ ಬಾಷನ್ ರೋಡ್) ರಸ್ತೆಯ ೨೪ನೇ ನಂಬರ್ ಕೋಠಿಗೆ. ಅದು ಭಾರತೀ ಮೇಡಂ ಕೋಠಿ. ಎರಡು ದಿನದ ಮಟ್ಟಿಗೆ ನನಗೆ ವಿಶ್ರಾಂತಿ ತೆಗೆದುಕೊಳ್ಳಲು ಹೇಳಲಾಯಿತು. ಮೂರನೇ ದಿನ ಮೇಕಪ್ ಹಚ್ಚಿ ನನ್ನನ್ನು ೬೦ ವರ್ಷ ವಯಸ್ಸಿನ ಮುದುಕನ ತೆಕ್ಕೆಗೆ ತಳ್ಳಿದರು. ಅದಾದ ಮೇಲೆ…

ಚಾಯ್ ತೆಗೆದುಕೊಳ್ಳಿ ರಮೀಜಾ ತಂದೆ ಇಮಾಮ್ ತಟ್ಟೆಯಲ್ಲಿ ಮೂರು ಕಪ್ ಚಹಾ ಹಿಡಿದು ಒಳಬಂದರು. ಮಾತಿಗೆ ಅರ್ಧ ವಿರಾಮ. ನಾವು ಚಹಾ ತೆಗೆದುಕೊಂಡ ಮೇಲೆ ಕೃಶ ದೇಹದ ಇಮಾಮ್ ಹೊರನಡೆದರು.

ನೀವು ದೆಹಲಿಯಲ್ಲಿ ಏನು ಮಾಡುತ್ತಿದ್ದೀರಿ ಎನ್ನುವುದು ನಿಮ್ಮ ತಂದೆ-ತಾಯಿಗೆ ಗೊತ್ತೆ? ಸಂಪೂರ್ಣವಾಗಿ ನಿಜ ಹೇಳಿರಲಿಲ್ಲ. ಅಲ್ಪ-ಸ್ವಲ್ಪ ಮಾಹಿತಿ ಕೊಟ್ಟಿದ್ದೆ ರಮೀಜಾ ಮಾತು ಮುಂದುವರಿಸಿದರು. ಆರಂಭದ ದಿನಗಳಲ್ಲಿ ನಾನು ಸಾಕಷ್ಟು ಪ್ರತಿರೋಧ ಒಡ್ಡಿದ್ದೆ. ಅದಕ್ಕಾಗಿ ಸಾಕಷ್ಟು ಹೊಡೆತ ಕೂಡ ತಿಂದೆ ಎಂದು ಹೇಳಿದ ರಮೀಜಾ ಆಕೆಯ ಬೆನ್ನ ಮೇಲೆ ಹಾಕಿದ್ದ ಬರೆಯನ್ನು ತೋರಿಸಿದರು. ಸುಮಾರು ನಾಲ್ಕು ಇಂಚು ಉದ್ದ ಒಂದೂವರೆ ಇಂಚು ಅಗಲದ ಆ ಬರೆ, ಕೆಂಪುದೀಪಗಳಲ್ಲಿನ ಕ್ರೌರ್ಯದ ಸಂಕೇತವಾಗಿ ಕಣ್ಣಿಗೆ ರಾಚಿತು.

ಕ್ರಮೇಣ ಎಲ್ಲಕ್ಕೂ ಹೊಂದಿಕೊಳ್ಳಲಾರಂಭಿಸಿದೆ. ನನ್ನಂತಹ ನೂರಾರು ಹೆಣ್ಣುಮಕ್ಕಳು ಅಲ್ಲಿದ್ದರು. ನಾವೆಲ್ಲ ಮಧ್ಯಾಹ್ನ ೧೨ ಗಂಟೆಗೆ ಏಳುತ್ತಿದ್ದೆವು. ಮೇಕಪ್ ಮಾಡಿಕೊಂಡು ಕಾದು ಕುಳಿತುಕೊಳ್ಳುತ್ತಿದ್ದೆವು. ಪ್ರತಿ ದಿನವೊಂದಕ್ಕೆ ಹತ್ತರಿಂದ ಹದಿನೈದು ಗಿರಾಕಿಗಳ ಮೈ ತಣಿಸಬೇಕಾಗಿತ್ತು. ವಾರದ ಕೊನೆಯಲ್ಲಿ ದಿನವೊಂದಕ್ಕೆ ೨೦ಕ್ಕೂ ಹೆಚ್ಚು ಮಂದಿಯ ಸೇವೆ ಮಾಡಬೇಕಾಗಿತ್ತು. ಪ್ರತಿಯೊಬ್ಬರೂ ಘರ್‌ವಾಲಿಗೆ ರೂ. ೫೫ ನೀಡುತ್ತಿದ್ದರು. ಕೆಲವೊಮ್ಮೆ ಬಂದವರು ಹತ್ತೋ ಅಥವಾ ಇಪ್ಪತ್ತೋ ನಮ್ಮ ಕೈಗೆ ಹಾಕಿ ಹೋಗುತ್ತಿದ್ದರು ರಮೀಜಾ ಕಣ್ಣಲ್ಲಿ ನೀರ ಹನಿಗಳು ಮೂಡಿದವು. ಪಕ್ಕದಲ್ಲೇ ಕೂತಿದ್ದ ಭಾನು ಆಕೆಯನ್ನು ಸಂತೈಸಿದರು. ಸುಮಾರು ಹತ್ತು ನಿಮಿಷಗಳ ಕಾಲ ಆ ಕೋಣೆಯಲ್ಲಿ ಮೌನವೇ ಮಾತಾಯಿತು. ಸುಧಾರಿಸಿಕೊಂಡ ರಮೀಜಾ ಮತ್ತೆ ಮಾತಿನ ಮನೆಯ ಕದ ತೆರೆದರು.

ಪ್ರತಿ ದಿನವೂ ಅದೇ ಪಾಡು. ಆ ನರಕದಲ್ಲಿ ಹಾಗೂ ಹೀಗೆ ಒಂದಿಷ್ಟು ವರ್ಷ ಕಳೆದ ಮೇಲೆ ನನ್ನ ಕಾಂಟ್ರಾಕ್ಟ್ ಮುಗಿಯಿತು. ೧೫,೦೦೦ ರೂಪಾಯಿ, ಒಂದಿಷ್ಟು ಸೀರೆ ಹಾಗೂ ಜುಮಕಿ ಕೈಗಿತ್ತು ಊರಿಗೆ ಹೋಗಿ ಬಾ ಅಂದ್ರು. ಊರಿಗೆ ಬಂದ ಮೇಲೆ ಕೂಡ ಮತ್ತೆ ಜಿ.ಬಿ. ರಸ್ತೆಗೆ ಹೋಗುವ ಮನಸ್ಸಿತ್ತು ಮತ್ತೆ ಮೌನದ ಮೊರೆ.

ಆದರೆ, ಸ್ತ್ರೀ ಕಾರ್ಯಕರ್ತರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಸರ್ಕಾರದಿಂದ ನನಗೆ ಎಲ್ಲ ಧನಸಹಾಯ ಕೊಡಿಸಿದರು. ಸ್ತ್ರೀ ಸಂಸ್ಥೆ ಕೂಡ ನನಗೆ ಒಂದಿಷ್ಟು ಹಣ ನೀಡಿತು. ನಾನೇ ಒಂದು ಗೂಡಂಗಡಿ ತೆರೆದೆ. ಕ್ಯಾಂಟೀನ್ ಶುರು ಮಾಡಿದೆ. ನನ್ನ ಸ್ವಂತ ದುಡಿಮೆಯಿಂದಲೇ ಮನೆ ಕೂಡ ಕಟ್ಟಿದ್ದೀನಿ. ತವರು ಮನೆಯವರು ಈಗ ನನ್ನನ್ನೇ ಆಶ್ರಯಿಸಿಕೊಂಡಿದ್ದಾರೆ. ಈಗ ನಾನು ಎಲ್ಲರಿಗೂ ಬೇಕು. ಮದುವೆ ಕೂಡ ಆಗಿದ್ದೇನೆ ಎಂದು ರಮೀಜಾ ಕಥೆ ಮುಗಿಸಿ ನಿಟ್ಟುಸಿರುಬಿಟ್ಟರು.

ಇದು ರಮೀಜಾ ಎಂಬ ಒಬ್ಬ ಹೆಣ್ಣು ಮಗಳ ಕಥೆಯಲ್ಲ. ಅನಂತಪುರ ಜಿಲ್ಲೆಯ ಯಾವುದೇ ಗ್ರಾಮಕ್ಕೆ ಹೋದರೂ, ಅಲ್ಲಿ ನೀವು ಪುಲಕುಂಟ ಮತ್ತು ರಮೀಜಾಳ ಪ್ರತಿಬಿಂಬಗಳನ್ನು ಹೇರಳವಾಗಿ ಕಾಣಬಹುದು. ಈ ಗ್ರಾಮಗಳಲ್ಲಿ ಗಂಡ ಬಿಟ್ಟ, ವಿಚ್ಛೇದನೆಗೆ ಒಳಗಾದ, ವಿಧವೆಯರಾದ ಎಳೆಯ ಬಡ ಹೆಣ್ಣು ಮಕ್ಕಳನ್ನು ಹಣದ ಆಸೆ ತೋರಿಸಿ ಬಲೆಗೆ ಹಾಕಿಕೊಂಡು ಕರೆದುಕೊಂಡು ಹೋಗಲಾಗುತ್ತದೆ. ಪುಲಕುಂಟ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದಲೇ ೪೦ಕ್ಕಿಂತಲೂ ಹೆಚ್ಚು ಹೆಣ್ಣು ಮಕ್ಕಳನ್ನು ಕೆಂಪುದೀಪದ ತೆಕ್ಕೆಗೆ ತಳ್ಳಲಾಗಿದೆ. ಈ ಪುಲಕುಂಟವೊಂದರಲ್ಲೇ ನಾಲ್ವರು ಮಾಜಿ ವೇಶ್ಯೆಯರು ಈಗ ಏಜೆಂಟ್ ರೂಪ ಧರಿಸಿ ಕೆಲಸ ಮಾಡುತ್ತಿದ್ದಾರೆ. ಇಂತಹ ಏಜೆಂಟ್ ಬಲೆಗೆ ಬಿದ್ದ ಕೆಲವೇ ದಿನಗಳಲ್ಲಿ ಆ ಯುವತಿಯರು ದೆಹಲಿಯ ಜಿ.ಬಿ. ರಸ್ತೆ, ಮುಂಬೈನ ಕಾಮಾಟಿಪುರ ಅಥವಾ ಪುಣೆಯ ಬುಧವಾರಪೇಟೆ ಸೇರಿ ಬಿಡುತ್ತಾರೆ. ಈಗ ಈ ಪಟ್ಟಿಗೆ ಸಿಲಿಕಾನ್ ವ್ಯಾಲಿ, ಬೆಂಗಳೂರು ಕೂಡ ಸೇರಿದೆ!

ಒಂದು ಅಂದಾಜಿನ ಪ್ರಕಾರ ಅನಂತಪುರ ಜಿಲ್ಲೆಯ ೫೦,೦೦೦ಕ್ಕಿಂತಲೂ ಅಧಿಕ ಹೆಣ್ಣು ಮಕ್ಕಳು ದೇಶದ ಹಲವಾರು ಕೆಂಪುದೀಪ ಪ್ರದೇಶಗಳಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾರೆ. ಇಲ್ಲಿಂದ ಅಲ್ಲಿಗೆ ತಲುಪಿದ ಮೇಲೆ ಕೆಲವು ವರ್ಷಗಳ ಕಾಲ ಆ ನರಕದಲ್ಲಿ ನರಳುವ ಈ ಎಳೆಯ ಕುಸುಮಗಳು ಮರಳಿ ಊರಿಗೆ ಬರುವಾಗ ಸಂಪೂರ್ಣ ಬಾಡಿ ಹೋಗಿರುತ್ತವೆ. ೨೪-೨೫ ವರ್ಷ ವಯಸ್ಸು ದಾಟುವ ಮೊದಲೇ ಎಚ್‌ಐವಿ/ ಏಡ್ಸ್ ಹಣೆಪಟ್ಟಿ ಹಚ್ಚಿಕೊಂಡು ತವರಿಗೆ ಮರಳುವ ಈ ಯುವತಿಯರ ನಂತರದ ಬದುಕು ಯಾರಿಗೂ ಬೇಡ. ಕಳೆದ ಸುಮಾರು ೩೫ ವರ್ಷಗಳಿಂದ ಅನಂತಪುರ ಮತ್ತು ಕಡಪ ಜಿಲ್ಲೆಗಳು ದೇಶದ ಕೆಂಪುದೀಪ ಪ್ರದೇಶಗಳಿಗೆ ಹೆಣ್ಣುಮಕ್ಕಳನ್ನು ಸರಬರಾಜು ಮಾಡುವ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಇದಕ್ಕೆ ಮೂಲ ಕಾರಣ ಬಡತನ. ಇಲ್ಲಿನ ಸಾಕ್ಷರತಾ ಪ್ರಮಾಣ ಶೇಕಡಾ ೫೮ನ್ನು ಮೀರಿಲ್ಲ. ಜೊತೆಗೆ ಹೆಚ್ಚಿನ ಭಾಗ ಬುಡಕಟ್ಟು ಜನಾಂಗವನ್ನು ಹೊಂದಿದೆ. ಸರ್ಕಾರ ಮತ್ತು ಅಧಿಕಾರ ವರ್ಗ ಈ ಸಾಮಾಜಿಕ ಸಮಸ್ಯೆ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿವೆ. ಪರಿಣಾಮ ಇಲ್ಲಿ ಮಾನವ ಕಳ್ಳಸಾಗಣೆ ನಿರಂತರ.

ಇಂತಹ ಬರದ ನಾಡಲ್ಲಿ ಭರವಸೆಯ ದೀಪವಾಗಿ ಮೂಡಿ ಬಂದ ಸ್ತ್ರೀ ಸ್ವಯಂಸೇವಾ ಸಂಸ್ಥೆಯೊಂದೇ ಕಳೆದ ೮ ವರ್ಷಗಳ ಅವಧಿಯಲ್ಲಿ ಸುಮಾರು ಒಂದು ಸಾವಿರಕ್ಕಿಂತಲೂ ಹೆಚ್ಚು ಯುವತಿಯರನ್ನು ಆ ವಿಷವೃತ್ತದಿಂದ ಹೊರತಂದಿದೆ. ಮಾತ್ರವಲ್ಲ ಅವರಿಗೆ ಪುನರ್ ವಸತಿ ಕಲ್ಪಿಸಿಕೊಡುವಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದೆ. ಅನಂತಪುರ ಸಮೀಪ ಕದಿರಿಯಲ್ಲಿ ಇಂತಹವರಿಗಾಗಿಯೇ ಪುನರ್ವಸತಿ ಕೇಂದ್ರ ತೆರೆದಿರುವ ಸ್ತ್ರೀ ತವರಿಗೆ ಮರಳುವ ಹೆಣ್ಣುಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಿದೆ. ಅವರಿಗೆ ವಿವಿಧ ಕುಸುರಿ ಕೆಲಸಗಳ ತರಬೇತಿ ನೀಡಲಾಗುತ್ತಿದೆ. ಬೀದಿನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಾಯಲಸೀಮೆಯ ಎಲ್ಲ ಭಾಗಗಳಲ್ಲಿ ಜನಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಒಂದು ಕಾಲದಲ್ಲಿ ಕೆಂಪುದೀಪಗಳಲ್ಲಿ ನರಳಿದ ಹೆಣ್ಣುಮಕ್ಕಳೇ ಈಗ ಸ್ತ್ರೀ ಪಾಲಿನ ಶಕ್ತಿಯಾಗಿ ನಿಂತಿದ್ದಾರೆ. ಜೊತೆಗೆ ಸ್ತ್ರೀ ೨೩ ಅಕ್ರಮ ಮಾನವ ಕಳ್ಳಸಾಗಣೆ ತಡೆ ಸಮಿತಿಗಳನ್ನು ರಚಿಸಿದೆ. ಬೇರುಮಟ್ಟದಲ್ಲಿ ಈ ಸಮಿತಿಗಳು ಹೆಣ್ಣುಮಕ್ಕಳ ಕಳ್ಳಸಾಗಣೆಯನ್ನು ನಿಯಂತ್ರಿಸುತ್ತಿವೆ. ಆಂಧ್ರಪ್ರದೇಶ ಪೊಲೀಸ್ ಪಡೆಯ ಜೊತೆ ಸೇರಿ ಆಗಾಗ ದೆಹಲಿ, ಪುಣೆ, ಮುಂಬೈಗಳಲ್ಲಿನ ಕೆಂಪುದೀಪಗಳ ಮೇಲೆ ದಾಳಿ ನಡೆಸಿ ಹೆಣ್ಣುಮಕ್ಕಳನ್ನು ರಕ್ಷಿಸಿ ತವರಿಗೆ ಕರೆದುಕೊಂಡು ಬರುತ್ತಿದೆ. ಆದರೂ, ಇಲ್ಲಿ ಹರಡಿರುವ ಪಿಡುಗು ಸುಲಭದಲ್ಲಿ ತೊಲಗುವ ಹಾಗೆ ಕಾಣುತ್ತಿಲ್ಲ.

ಇದೇ (೨೦೦೮ರ) ಜನವರಿ ೮ರ ರಾತ್ರಿ ದೆಹಲಿಯ ಕೆಂಪು ದೀಪ ಪ್ರದೇಶದ ಮೇಲೆ ಇಂತಹ ಒಂದು ದಾಳಿ ನಡೆದಿದ್ದು ಒಟ್ಟು ೧೫೦ ಹೆಣ್ಣುಮಕ್ಕಳನ್ನು ರಕ್ಷಿಸಲಾಗಿದೆ. ಆ ಪೈಕಿ ೮೭ ಯುವತಿಯರು ಅನಂತಪುರ ಜಿಲ್ಲೆಗೆ ಸೇರಿದವರಾಗಿದ್ದರು! ಕಳೆದ ಸುಮಾರು ನಾಲ್ಕು ದಶಕಗಳಿಂದ ಈ ಜಿಲ್ಲೆ ಮಾನವ ಕಳ್ಳ ಸಾಗಣೆಯ ಕೇಂದ್ರವಾಗಿದೆ. ಇದು ಕೇವಲ ಸಾಮಾಜಿಕ ಪಿಡುಗಲ್ಲ. ಆರ್ಥಿಕ ಹಿನ್ನಲೆಯಲ್ಲಿ ಹುಟ್ಟಿಕೊಂಡಿರುವ ಸಂಕೀರ್ಣವಾದ ಸಾಮಾಜಿಕ ಸಮಸ್ಯೆ. ಮೊದಲ ಹಂತದಲ್ಲಿ ನಾವು ಹೆಣ್ಣು ಮಕ್ಕಳ ಅಕ್ರಮ ಕಳ್ಳಸಾಗಣೆ ತಡೆಯುವ ಯತ್ನ ಮಾಡುತ್ತೇವೆ. ನಾವೆಷ್ಟೇ ಪ್ರಯತ್ನ ಮಾಡಿದರೂ, ಭ್ರಷ್ಟ ವ್ಯವಸ್ಥೆ ಅದಕ್ಕೆ ಅವಕಾಶ ಮಾಡಿಕೊಡುತ್ತಿದೆ. ನಿರಂತರವಾಗಿ ಇಲ್ಲಿಂದ ಎಳೆಯ ಹೆಣ್ಣು ಮಕ್ಕಳನ್ನು ಅಕ್ರಮವಾಗಿ ಪುಣೆ, ದೆಹಲಿ ಮತ್ತು ಕೋಲ್ಕತ್ತಕ್ಕೆ ಕರೆದೊಯ್ಯಲಾಗುತ್ತಿದೆ. ಇದನ್ನೇ ವೃತ್ತಿಯನ್ನಾಗಿಸಿಕೊಂಡ ನೂರಾರು ಏಜೆಂಟ್‌ಗಳು ಇದ್ದಾರೆ. ಆ ಪೈಕಿ ಕೆಲವರು ಮಾಜಿ ವೇಶ್ಯೆಯರು. ಅಚ್ಚರಿ ಪಡುವ ವಿಷಯವೆಂದರೆ ಬೆಂಗಳೂರು ಕೂಡ ಈಗ ಇವರ ಪಾಲಿಗೆ ಒಳ್ಳೆಯ ವ್ಯಾಪಾರ ಕೇಂದ್ರವಾಗಿ ಬಿಟ್ಟಿದೆ ಎಂದು ಸಮಸ್ಯೆಯ ಆಳ-ಅಗಲದ ಪರಿಚಯ ಮಾಡಿಕೊಟ್ಟರು ಸ್ತ್ರೀ ಮುಖ್ಯಸ್ಥೆ ಹೇಮಾ ಬೇಡಿ.

ವರ್ಷಕ್ಕೆ ಕನಿಷ್ಠ ಮೂರು ಬಾರಿ ನಾವು ಪುಣೆ, ದೆಹಲಿ ಮತ್ತು ಕೋಲ್ಕತ್ತದ ಕೆಂಪುದೀಪಗಳನ್ನು ಜಾಲಾಡುತ್ತೇವೆ. ಇಲ್ಲಿನ ಪೊಲೀಸರು ಮತ್ತು ಅಲ್ಲಿನ ಸ್ಥಳೀಯ ಪೊಲೀಸರ ಜೊತೆ ನಮ್ಮ ಸಂಸ್ಥೆಯ ಸಿಬ್ಬಂದಿ ಕೆಂಪುದೀಪಗಳ ಮೇಲೆ ದಾಳಿ ನಡೆಸಿ ಬಾಲ ವೇಶ್ಯೆಯರನ್ನು ರಕ್ಷಿಸುವ ಯತ್ನ ಮಾಡುತ್ತೇವೆ. ಅಂತಹ ದಾಳಿ ನಡೆಸಿದ ಪ್ರತಿ ಸಂದರ್ಭದಲ್ಲಿ ಪತ್ತೆಯಾಗುವ ಹುಡುಗಿಯರು ಮತ್ತು ಹೆಂಗಸರ ಪೈಕಿ ಕನಿಷ್ಠ ಶೇಕಡಾ ೫೦ರಷ್ಟು ಮಂದಿ ಅನಂತಪುರ ಅಥವಾ ಆಂಧ್ರಪ್ರದೇಶವರಾಗಿರುತ್ತಾರೆ ಎಂಬ ವಿಷಯ ತಿಳಿಸಿದ ಹೇಮಾ ಬೇಡಿ, ಆತಂಕದ ವಿಷಯವೆಂದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿಗೆ ಸಾಕಷ್ಟು ಹೆಣ್ಣು ಮಕ್ಕಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಐಟಿ-ಬಿಟಿ ಬೂಮ್ ಜೊತೆಗೇ ಬೆಂಗಳೂರಲ್ಲಿ ವೇಶ್ಯಾವೃತ್ತಿಗೆ ಭಾರಿ ಬೇಡಿಕೆ ಉಂಟಾಗಿರುವುದು ನಮ್ಮ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಪುಣೆ, ದೆಹಲಿ ಮತ್ತು ಕೋಲ್ಕತ್ತದಲ್ಲಾದರೆ ಇಂತಹ ನಿರ್ದಿಷ್ಟವಾದ ಕೆಂಪುದೀಪ ಪ್ರದೇಶವಿದೆ. ಅಲ್ಲಿಗೆ ಹೋಗಿ ದಾಳಿ ನಡೆಸಿ ಹೆಣ್ಣು ಮಕ್ಕಳನ್ನು ರಕ್ಷಿಸಿಕೊಂಡು ಬರಬಹುದು. ಆದರೆ, ಬೆಂಗಳೂರಿನಲ್ಲಿ ಯಾವುದೇ ನಿರ್ದಿಷ್ಟ ತಾಣ ಇಲ್ಲ. ಆದ್ದರಿಂದ ನಮಗೆ ಅಲ್ಲಿ ದಾಳಿ ನಡೆಸಿ ಇವರನ್ನು ರಕ್ಷಿಸಲಾಗುತ್ತಿಲ್ಲ ಎಂದು ಹೇಳಿದರು.

ನನಗೆ ಸ್ತ್ರೀಯ ನಿಜವಾದ ಶಕ್ತಿ ಅರಿವಾದದ್ದು ಪುಲಕುಂಟದಲ್ಲಿಯೇ ಗಂಗುಲಮ್ಮ ಅವರನ್ನು ಭೇಟಿ ಮಾಡಿದ ಮೇಲೆ. ರಮೀಜಾ ಅವರನ್ನು ಕತ್ತಲೆಯ ಕೂಪಕ್ಕೆ ತಳ್ಳಿದ ಅದೇ ಗಂಗುಲಮ್ಮ ಈಗ ಸಂಪೂರ್ಣ ಬದಲಾಗಿದ್ದಾರೆ. ನಾನೀಗ ಜಿ.ಬಿ.ರಸ್ತೆಯ ಗಂಗುಲಮ್ಮ ಅಲ್ಲ. ಸ್ತ್ರೀಯಿಂದಾಗಿ ನಾನು ಸಂಪೂರ್ಣ ಪರಿವರ್ತನೆಗೊಂಡಿದ್ದೇನೆ. ಮದುವೆಯಾಗಿದೆ. ಹೆಣ್ಣು ಮಕ್ಕಳ ಕಳ್ಳಸಾಗಣೆ ತಪ್ಪಿಸುವ ನಿಟ್ಟಿನಲ್ಲಿ ಸ್ತ್ರೀಯೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ಗಂಗುಲಮ್ಮ ಹೆಮ್ಮೆಯಿಂದ ಹೇಳಿಕೊಂಡರು.

ಆದರಿಲ್ಲಿ ಎಲ್ಲವೂ ಬದಲಾಗಿಲ್ಲ. ಸ್ತ್ರೀ ಸಹಾಯದಿಂದಲೇ ಕದಿರಿ ಪಟ್ಟಣದ ಹೊರ ವಲಯದಲ್ಲಿ, ರಸ್ತೆಯಂಚಿನಲ್ಲಿ ನಿಂತಿದ್ದ ನಾರಾಯಣಮ್ಮ ಅವರನ್ನು ಭೇಟಿ ಮಾಡಿದೆ. ಈಕೆ ಸ್ಥಳೀಯ ಲೈಂಗಿಕ ಕಾರ್ಯಕರ್ತೆ. ಇವರ ಬದುಕಿಗೂ ಕಾಮಾಟಿಪುರ ಅಥವಾ ಜಿ.ಬಿ. ರೋಡ್‌ನಲ್ಲಿರುವವರ ಬದುಕಿಗೂ ಅಪಾರ ವ್ಯತ್ಯಾಸವಿದೆ. ಇವರಿಗಿನ್ನೂ ೨೨ ವರ್ಷ. ಇಬ್ಬರು ಮಕ್ಕಳಿದ್ದಾರೆ. ಪತಿ ಕೈಬಿಟ್ಟು ನಾಲ್ಕೈದು ವರ್ಷಗಳಾಗಿವೆ. ತಂದೆತಾಯಿಯನ್ನು ಸಾಕುವ ಜವಾಬ್ದಾರಿ ಕೂಡ ನಾರಾಯಣಮ್ಮ ಅವರದ್ದೇ. ಇದೆಲ್ಲದರ ನಡುವೆಯೂ ಬದುಕಿನ ಬಂಡಿ ಸಾಗಲೇಬೇಕಲ್ಲಾ? ಅದಕ್ಕೆ ನಾರಾಯಣಮ್ಮ ಕಂಡುಕೊಂಡ ದಾರಿ ರಸ್ತೆಯಂಚಿನ ವೇಶ್ಯಾ ಜೀವನ. ಹೆದ್ದಾರಿ ವೇಶ್ಯೆಯಾಗಿ ಗುರಿಯಿಲ್ಲದ ಹಾದಿಯಲ್ಲಿ ಹೆಜ್ಜೆ ಹಾಕುತ್ತಿರುವ ನಾರಾಯಣಮ್ಮ ನಮ್ಮ ಸಮಾಜದಲ್ಲಿನ ಕಟು ವಾಸ್ತವದ ಸಂಕೇತ.

ನೀವೇ ಹೇಳಿ ನಾನು ಬೇರೆ ಏನು ಮಾಡಲು ಸಾಧ್ಯ ಅಂತಾ. ನನಗೆ ಬೇರೆ ದಾರಿ ಉಳಿದೇ ಇರಲಿಲ್ಲ. ಅದಕ್ಕಾಗಿ ಹೈವೇ ಕಡೆ ಹೆಜ್ಜೆ ಹಾಕಿದೆ ಸಣಕಲು ದೇಹದ ನಾರಾಯಣಮ್ಮ, ಆತ್ಮವಿಶ್ವಾಸದ ಖನಿಯಂತೆ ಕಂಡು ಬಂದರು. ನಮ್ಮ ಗುಂಪಿನಲ್ಲಿ ಸುಮಾರು ಹತ್ತು ಜನರಿದ್ದೇವೆ. ಸಂಜೆಗತ್ತಲು ಮುಸುಕುವ ಹೊತ್ತಿಗೆ ನಾವು ಹೆದ್ದಾರಿಗಳತ್ತ ಸರಿದು ಹೋಗುತ್ತೇವೆ. ರಾತ್ರಿ ಆವರಿಸಿದಂತೆ ನಮ್ಮ ಜೀವನ ಬಿರುಸಾಗುತ್ತದೆ. ನಿಧಾನವಾಗಿ ಲಾರಿಗಳು ನಿಲ್ಲಲಾರಂಭಿಸುತ್ತವೆ. ಹೆಚ್ಚಿನ ವೇಳೆ ತೆರೆದ ಬಯಲಿನ ನಡುವಿನ ಪೊದೆಗಳ ಹಿಂದೆ, ಇನ್ನೂ ಕೆಲವೊಮ್ಮೆ ಡಾಬಾ ಬಳಿ ಡ್ರೈವರ್‌ಗಳ ಕಾಮ ತೃಷೆ ತೀರಿಸುತ್ತೇವೆ. ಕೆಲವು ದಿನ ಸುಮಾರು ೨೦ ಜನರ ಹಸಿವು ತೀರಿಸುತ್ತೇನೆ. ಶೀಘ್ರ ಕಾಮದಾಹ ತಣಿಸಲು ೫೦ ರೂಪಾಯಿ. ಸಂಪೂರ್ಣ ನಗ್ನವಾಗಿ ಕಾಮತೃಷೆ ತೀರಿಸಲು ನೂರು ರೂಪಾಯಿ, ಚುಂಬನ ನೀಡಲು ೧೦ ರೂ. ಹೆಚ್ಚು ಸೇವೆಯ ವಿವಿಧ ಮಜಲುಗಳ ವಿವರ ನೀಡಿದರು ನಾರಾಯಣಮ್ಮ.

ಇದನ್ನು ಬಿಟ್ಟು ಬೇರೆ ಯಾವುದಾದರೂ ಕೆಲಸ ಮಾಡಲು ನಿಮಗೆ ಆಗುವುದಿಲ್ಲವೇ?

ಎಲ್ಲಿದೆ ಕೆಲಸ? ನೀವೇ ಹೇಳಿ ನೋಡೋಣ. ನನ್ನ ಹಳ್ಳಿಯಲ್ಲಿ ವರ್ಷಕ್ಕೆ ಮೂರು ತಿಂಗಳು ಕೆಲಸ ಸಿಗೋದಿಲ್ಲ. ನನ್ನ ತಂದೆ-ತಾಯಿ, ಮಕ್ಕಳ ಹೊಟ್ಟೆ ತುಂಬಿಸಬೇಕು. ಬಹಳ ಸುಲಭವಾಗಿ ಸಂಪಾದನೆ ಮಾಡುವ ದಂಧೆ ಇದು ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಇದರ ಬಗ್ಗೆ ನನಗೆ ಬೇಸರವಿಲ್ಲ. ನಾನು ಬದುಕಬೇಕು ಮತ್ತು ನನ್ನ ಮಕ್ಕಳನ್ನ ಬೆಳೆಸಬೇಕು ದೃಢವಾಗಿತ್ತು ಆಕೆಯ ದನಿ.

ರಾತ್ರಿಯ ಹೊತ್ತಿನಲ್ಲಿ ಆ ರೀತಿ ಜೀವನ ಸಾಗಿಸಲು ನಿಮಗೆ ಹೆದರಿಕೆ ಆಗೊಲ್ಲವೇ?

ಖಂಡಿತ ಹೆದರಿಕೆಯಾಗುತ್ತೆ. ದಿನವೊಂದಕ್ಕೆ ೧೫-೨೦ ಅಪರಿಚಿತ ಪುರುಷರ ಜೊತೆ ದೇಹ ಹಂಚಿಕೊಳ್ಳುವುದು ಎಷ್ಟು ಕಷ್ಟ ಅನ್ನೋದನ್ನ ನೀವೇ ಯೋಚನೆ ಮಾಡಿ. ಅಕಸ್ಮಾತ್ ನೀವೇ ನನ್ನ ಸ್ಥಿತಿಯಲ್ಲಿದಿದ್ದರೆ ದಿನವೊಂದಕ್ಕೆ ಹದಿನೈದು ಹೆಂಗಸರನ್ನು ತೃಪ್ತಿ ಪಡಿಸಲು ನಿಮ್ಮ ಕೈಯಲ್ಲಿ ಸಾಧ್ಯವಾಗುತ್ತಿತ್ತೇ? ಅದೂ, ತೆರೆದ ಮೈದಾನದಲ್ಲಿ, ಪೊದೆಗಳ ಹಿಂದೆ, ಬಂಡೆಗಲ್ಲುಗಳ ಮೇಲೆ… ಯೋಚನೆ ಮಾಡಿದರೆ ಬೆವರು ಬರುತ್ತಿರಬೇಕಲ್ಲಾ? ಇನ್ನೂ ಕೆಲವು ಸಾರಿ ಸ್ಥಳೀಯ ಗೂಂಡಾಗಳ ಗುಂಪು ನಮ್ಮ ಮೇಲೆ ದಾಳಿಯಿಡುತ್ತದೆ. ನಮ್ಮ ಮೇಲೆ ಗುಂಪು-ಗುಂಪಾಗಿ ಅತ್ಯಾಚಾರ ಮಾಡುವ ಅವರು, ಕಷ್ಟ ಪಟ್ಟು ನಾವು ಸಂಪಾದಿಸಿದ ಹಣ ದೋಚಿ ಕೊಂಡು ಹೋಗುತ್ತಾರೆ. ಇನ್ನು ಕೆಲವೊಮ್ಮೆ ಲಾರಿ ಡ್ರೈವರ್‌ಗಳ ತೃಷೆ ತೀರಿಸಿಕೊಂಡ ಮೇಲೆ ಹಣ ಕೊಡದೆ ನಮ್ಮನ್ನು ಬದಿಗೆ ತಳ್ಳಿ ಹೋಗುತ್ತಾರೆ. ಬಹಳಷ್ಟು ಕಷ್ಟ ಪಟ್ಟೇ ನಾವು ಹಣ ಸಂಪಾದಿಸುವುದು. ಗೊತ್ತಾಯ್ತಾ?

ಸ್ತ್ರೀಯಂತಹ ಸಂಸ್ಥೆಗಳ ಸಹಾಯ ಪಡೆದು ಬದುಕಲ್ಲಿ ನೆಲೆ ನಿಲ್ಲಬಹುದಲ್ಲಾ?

ನಾನು ಅದಕ್ಕೆ ಪ್ರಯತ್ನ ಮಾಡುತ್ತಲೇ ಇದ್ದೇನೆ. ಎಲ್ಲವೂ ನಾನೆಣಿಸಿದಂತೆಯೇ ನಡೆದಲ್ಲಿ, ಖಂಡಿತ ಮರ್ಯಾದೆಯಿಂದ ನಾನು ಬಾಳುವ ಯತ್ನ ಮಾಡುತ್ತೇನೆ. ಆದರೆ, ಒಂದು ಮಾತನ್ನು ನಾನು ಹೇಳ್ತೀನಿ. ನಾನು ಈ ದಂಧೆ ಬಿಡಬಹುದು. ಆದರೂ, ನನ್ನಂತಹ ನೂರಾರು ನಾರಾಯಣಮ್ಮರು ಈ ಸಮಾಜದಲ್ಲಿ ಹುಟ್ಟಿಕೊಳ್ಳುತ್ತಾರೆ. ಅವರೆಲ್ಲ ಬದುಕುವ ಹಟಕ್ಕೆ ಕೈ ಹಾಕಿ ರಸ್ತೆಯಂಚಿನಲ್ಲಿ ನಿಂತೇ ನಿಲ್ಲುತ್ತಾರೆ ನಾರಾಯಣಮ್ಮ ಮಾತಿನಲ್ಲಿ ಸತ್ಯದ ಕಹಿ ರಾಚಿ ಹೊಡೆಯುತ್ತಿತ್ತು.

ಬದುಕಿನ ವಿಪರ್ಯಾಸವೆಂದರೆ ಇಂದು ದೇಶದ ಅತ್ಯಂತ ಪ್ರಮುಖ ಮಾನವ ಕಳ್ಳಸಾಗಣೆ ಕೇಂದ್ರವಾಗಿರುವ ಆಂಧ್ರಪ್ರದೇಶದಲ್ಲಿಯೇ, ನೂರು ವರ್ಷಗಳ ಹಿಂದೆ ದೇಶ ಕಂಡ ಕೆಂಪುದೀಪದ ಮಹಾನ್ ಸಮಾಜ ಸೇವಕನೊಬ್ಬ ಹುಟ್ಟಿದ್ದ. ಆಂಧ್ರದ ನಿಜಾಮಾಬಾದ್‌ನಲ್ಲಿ ಹುಟ್ಟಿದ್ದ ಲಿಂಗಣ್ಣ ಪುಟ್ಟಾಲ್ ಪೂಜಾರಿ ಎಂಬ ಆ ಮಹಾತ್ಮ ಸ್ವಾತಂತ್ರ್ಯೋತ್ತರದಲ್ಲಿ, ಏಷ್ಯಾದ ಅತ್ಯಂತ ದೊಡ್ಡ ಕೆಂಪುದೀಪ ಮುಂಬೈನ ಕಾಮಾಟಿಪುರದ ಏಳಿಗೆಗಾಗಿ ಹಗಲಿರುಳು ದುಡಿದಿದ್ದರು. ದಿವಂಗತ ಲಿಂಗಣ್ಣ ಪುಟ್ಟಾಲ್ ಪೂಜಾರಿ ಕಾಮಾಟಿಪುರದ ಪಾಲಿಗೆ ಅಣ್ಣನಾಗಿ ಜೀವನ ಸಾಗಿಸಿದ ಮಹಾನ್ ರಾಜಕಾರಣಿ. ಅವರು ಕಾಮಾಟಿಪುರದಲ್ಲಿನ ವೇಶ್ಯೆಯರ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರು. ವೇಶ್ಯೆಯರ ಮಕ್ಕಳು ಶಾಲೆಗೆ ಹೋಗಲೇಬೇಕು ಎಂದು ಅಣ್ಣ ಆಗ ಕಟ್ಟಪ್ಪಣೆ ಮಾಡಿದ್ದರಂತೆ. ಆದರಿಂದು ಅದೇ ಅಣ್ಣನ ರಾಜ್ಯದ ಜಿಲ್ಲೆಯೊಂದು ಕಾಮಾಟಿಪುರವನ್ನು ಒಳಗೊಂಡು ದೇಶದ ಹೆಚ್ಚಿನೆಲ್ಲ ಕೆಂಪುದೀಪ ಪ್ರದೇಶಗಳಿಗೆ ವಸ್ತುಗಳನ್ನು ಸರಬರಾಜು ಮಾಡುವ ಕೇಂದ್ರವಾಗಿ ಬಿಟ್ಟಿದೆ. ಈ ನಡುವೆ ಸ್ತ್ರೀ ನಿಂತಿದೆ.

ಈ ನಡುವೆ ಮೊಘಲರ ಕಾಲದಿಂದಲೂ ಮೋಜಿನ ತಾಣವಾಗಿರುವ ದೆಹಲಿಯ ಜಿ.ಬಿ. ರಸ್ತೆಯ ಕಳಂಕ ತೊಡೆಯುವ ಯತ್ನ ಕೂಡ ಕೆಲವು ದಶಕಗಳ ಹಿಂದೆ ನಡೆಯಿತು. ೧೯೬೫ರಲ್ಲಿಯೇ ಜಿ.ಬಿ. ರಸ್ತೆಯ ಹೆಸರನ್ನು ಅಧಿಕೃತವಾಗಿ ಸ್ವಾಮಿ ಶ್ರದ್ಧಾನಂದ ಮಾರ್ಗ ಬದಲಾಯಿಸಲಾಯಿತು. ಹೆಸರು ಬದಲಾದರೂ ಆ ನರಕ ಮಾತ್ರ ಈಗಲೂ ಬದಲಾಗಲಿಲ್ಲ. ಮುಂದಿನ ಬಾರಿ ನಾವು ಜಿ.ಬಿ. ರೋಡ್‌ನಲ್ಲಿ ದಾಳಿ ನಡೆಸಲು ಹೋದಾಗ ನೀವೂ ಜೊತೆಯಲ್ಲಿ ಬನ್ನಿ. ಆಗ ನಿಮಗೆ ನಮ್ಮ ಹೆಣ್ಣು ಮಕ್ಕಳು ಎಂತಹ ನರಕದ ನಡುವೆ ಜೀವನ ಸಾಗಿಸುತ್ತಿದ್ದಾರೆ ಎನ್ನುವುದರ ಅರಿವಾಗಬಹುದು ಕದಿರಿಯಿಂದ ಹೊರಡುವ ಮೊದಲು ಹೇಮಾ ಬೇಡಿ ಮುಕ್ತ ಆಹ್ವಾನ ನೀಡಿದರು. ಕದಿರಿ ಬಿಟ್ಟು ಬಹುದೂರ ಬಂದ ಮೇಲೆ ಕೂಡ ಸ್ತ್ರೀ ಆವರಣದಲ್ಲಿ ನಗು-ನಗುತ್ತಾ ಆಟವಾಡುತ್ತಿದ್ದ ಹದಿಮೂರು ವರ್ಷದ ಶಾಂತಿ (ಹೆಸರು ಬದಲಾಯಿಸಲಾಗಿದೆ) ಕಾಡಲಾರಂಭಿಸಿದಳು. ಆ ಮುಗ್ಧ ಮುಖ ನನ್ನ ಮನದಲ್ಲಿ ಶಾಶ್ವತವಾಗಿ ಅಚ್ಚೊತ್ತಿಕೊಂಡಿತ್ತು. ಎರಡು ವರ್ಷಗಳ ಕಾಲ ಮುಂಬೈನ ಡ್ಯಾನ್ಸ್ ಬಾರ್‌ನಲ್ಲಿ ಮೈ-ಮನಸ್ಸು… ಎಲ್ಲವನ್ನೂ ಕಳೆದುಕೊಂಡಿದ್ದ ಶಾಂತಿ ಈಗ ಮರಳಿ ಶಾಲೆಗೆ ಹೋಗುತ್ತಿದ್ದಾಳೆ.

ಹೆಚ್ಹಿನ ಓದಿಗಾಗಿ ಅವಧಿ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: