Skip to content
ಆಗಷ್ಟ್ 17, 2010 / odubazar

ಹತ್ತಿರದ ಮಾತು…

ತನಗೆ ತಾನೇ ಹತ್ತಿರವಾಗುವ ಅನನ್ಯ ದೃಷ್ಟಿಯಲ್ಲಿ ಈಗಿರುವ ಒಳಗಣ್ಣು ಮಾತ್ರ ನಿತ್ಯ, ಹಾಡುವುದೊಂದೇ ಕವಿತೆ ಬದುಕ ಸತ್ಯ, ನಿಜದ ಬದುಕಿಗೆ ಕಣ್ಣೇ ಕವಿತೆ ಎಂದು ಹಾಡಿಕೊಂಡಿರುವ ಸತ್ಯನ್ ದೇರಾಜೆಗೆ ಈಗ ಕವಿತೆಯೇ ಕಣ್ಣು. ಒಳಗಣ್ಣಿದ್ದವರಿಗೆ ಮಾತ್ರ ತಟ್ಟುತ್ತದೆ ಹತ್ತಿರದ ಮಾತು. ಹತ್ತಿರದ ಮಾತು ಇವರ ಕವನ ಸಂಕಲನ

ನನ್ನೊಳಗಿನ ಮಾತು

-ಸತ್ಯನ್ ದೇರಾಜೆ

ಇನ್ನೂ ವ್ಯಾಸಂಗ ಮಾಡುತ್ತಿದ್ದಾಗಲೇ ಶಾಲೆ ಕಾಲೇಜುಗಳ ಮ್ಯಾಗಜಿನ್‌ಗಳಲ್ಲಿ ಕತೆ ಕವನ ಇತ್ಯಾದಿಗಳು ಪ್ರಕಟವಾಗಿದ್ದರೂ ನನ್ನ ಬರವಣಿಗೆ ಅಧಿಕೃತವಾಗಿ ಆರಂಭವಾದದ್ದು ೧೯೭೪ರಲ್ಲಿ. ಸ್ವಭಾವನಿಷ್ಠ ಬರಹಗಾರ ಜಿ.ಎಸ್.ಉಬರಡ್ಕ ಅವರ ’ಕಾರ್ತಿಕ ಪ್ರಕಾಶನ, ದೊಡ್ಡತೋಟ’ ಮತ್ತು ಖ್ಯಾತ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ನೇತೃತ್ವದ ’ವಸಂತ ಸಾಹಿತ್ಯ ಚೊಕ್ಕಾಡಿ’ ಇವೆರಡೂ ಒಟ್ಟು ಸೇರಿ ನಮ್ಮ ’ಸುಮನಸಾ ವಿಚಾರ ವೇದಿಕೆ’ ಅಸ್ತಿತ್ವಕ್ಕೆ ಬಂದ ಕಾಲ ಅದು.

ಮುಂದೆ ನಾಲ್ಕಾರು ವರ್ಷಗಳ ಕಾಲ ನಮ್ಮ ಹಳ್ಳಿಗಳಲ್ಲಿ ಭರದಿಂದ ನಡೆಯುತ್ತಿದ್ದ ಸುಮನಸಾ ಚಟುವಟಿಕೆಗಳು ಮತ್ತು ಸುಮನಸಾ ಬಳಗದ ಒಡನಾಟ ನಾನು ಹೆಚ್ಚು ಹೆಚ್ಚು ಬರೆಯುವುದಕ್ಕೆ ಬೆಳೆಯುವುದಕ್ಕೆ ಕಾರಣವಾಯಿತು. ನಂತರದ ಹಲವಾರು ವರ್ಷಗಳ ಕಾಲ ಉತ್ತರ ಭಾರತದ ವ್ಯಾಪಾರಿ ವಲಯದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆ ಅವಧಿಯಲ್ಲಿ ನನ್ನ ಬರವಣಿಗೆ ಕುಂಠಿತಗೊಂಡರೂ ೧೯೮೫ರಲ್ಲಿ ಊರಿಗೆ ಹಿಂದಿರುಗಿದ ನಾನು ಮತ್ತೆ ಇಲ್ಲಿನ ಸಾಹಿತ್ಯ ಮತ್ತು ಯಕ್ಷಗಾನ ಕ್ಷೇತ್ರಗಳಲ್ಲಿ ತೊಡಗಿಕೊಂಡೆ.

೧೯೯೧ರಲ್ಲಿ ಅನಿರೀಕ್ಷಿತವಾಗಿ ಕಾಣಿಸಿಕೊಂಡ ದೃಷ್ಟಿದೋಷದ ಕಾರಣರಹಿತ ಕಾಹಿಲೆಯಿಂದ ೯೪ರ ಹೊತ್ತಿಗೆ ಓದಲು ಬರೆಯಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ.

ನನ್ನಿಂದ ಇನ್ನು ಕವನಗಳನ್ನು ಬರೆಯಲು ಸಾಧ್ಯವಾಗದು ಎಂದು ತಲ್ಲಣಗೊಂಡೆ ಯಾಕೆಂದರೆ ಕಾವ್ಯದ ಹುಟ್ಟು ಏಕಾಂತದಲ್ಲೇ ನಡೆಯುವ ಕ್ರಿಯೆ ಅನ್ನುವುದು ಒಮ್ಮತದ ಅಭಿಪ್ರಾಯ. ಆದರೆ ಈ ಏಕಾಂತದಲ್ಲೇ ಭಂಗ ಬಾರದಂತೆ ನನ್ನ ಕಾವ್ಯ ಪ್ರಸವಕ್ಕೆ ಸೂಲಗಿತ್ತಿಯಾಗಿ ಪತ್ನಿ ಮೀನಾ ಸಹಕರಿಸುತ್ತಿರುವುದರಿಂದ ಆಗೀಗ ಬರೆಯುತ್ತಲೇ ಬಂದೆ.

ಇದೀಗ ಸಂಕಲನ ಹೊರತರುವ ಯೋಚನೆ ಮಾಡಿದಾಗ ಕಳೆದ ಮೂವತ್ತು ವರ್ಷಗಳಲ್ಲಿ ಬರೆದ ಹಲವು ಕವನಗಳು ಸಿಕ್ಕಲೇ ಇಲ್ಲ. ಉಳಿದವುಗಳಲ್ಲಿ ಆಯ್ದ ಪದ್ಯಗಳು ಇಲ್ಲಿವೆ. ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ಒಮ್ಮೆ ನನ್ನಲ್ಲಿ ಮಾತನಾಡುತ್ತಾ ಉಪನಿಷತ್ತನ್ನು ಹತ್ತಿರದ ಮಾತು ಎಂದು ಅರ್ಥೈಸಿದ್ದರು.

ಅದು ನನಗೆ ಗಾಢವಾಗಿ ತಟ್ಟಿದ್ದರಿಂದ ಬರೆದ ಕವಿತೆಗೂ ಸಂಕಲನಕ್ಕೂ ಅದೇ ಹೆಸರನ್ನಿಟ್ಟಿದ್ದೇನೆ. ಕಾವ್ಯ ಲೋಕದಲ್ಲಿ ನಾನು ನಡೆದು ಬಂದ ದಾರಿಯನ್ನು ದಾಖಲಿಸುವ ಉದ್ದೇಶದಿಂದ ಇಲ್ಲಿನ ಕವನಗಳನ್ನು ಬರೆದ ಇಸವಿಗಳಿಗೆ ಅನುಗುಣವಾಗಿ ಜೋಡಿಸಿದ್ದೇನೆ.


Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: