Skip to content
ಆಗಷ್ಟ್ 28, 2010 / odubazar

ಸಣ್ಣ ಕತೆಗಳ ಪುಸ್ತಕ ‘ಊರು ಮನೆ’.

ಗ್ರಾಮೀಣ ಬದುಕಿನ ಚಿತ್ರಣ , ಘಟನೆಗಳು , ಊರು ಹಾಗು ಮನೆಯ ನೆನಪುಗಳನ್ನು ಬರಹದ ಮೂಲಕ ಬಿಚ್ಹಿಟ್ಟಿರುವ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರ ಸಣ್ಣ ಕತೆಗಳ ಪುಸ್ತಕ  ‘ಊರು ಮನೆ’. ನಗರೀಕರಣದಿಂದ ಜೀವನ ಮೌಲ್ಯಗಳು ಕುಸಿಯುತ್ತಿರುವುದನ್ನು ದಾಖಲಿಸುತ್ತಲೇ ಗ್ರಾಮೀಣ ನೆಲೆಯಲ್ಲಿ ಸಾಂತ್ವನ ಕಂಡುಕೊಳ್ಳುವ ಪ್ರಯತ್ನ ಅವರ ಬರಹಗಳಲ್ಲಿವೆ. ದೇಸಿ ಪುಸ್ತಕ ಬೆಂಗಳೂರು ಇದನ್ನು ಪ್ರಕಟಿಸಿದೆ.

ಲಕ್ಷ್ಮಣ ಕೊಡಸೆ

ನನ್ನ ಮಾತು

ಇಲ್ಲಿ ಸಂಕಲಿಸಿದ ಕತೆಗಳ ಬಗ್ಗೆ ಹೇಳಬೇಕು. ಗದ್ಯ ಬರಹ ನನಗೆ ಇಷ್ಟವಾದದ್ದು. ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಬರವಣಿಗೆ ಆರಂಭಿಸಿದೆ. ಆಗ ನವ್ಯ ಪ್ರಕಾರ ಅವಸಾನದ ಅಂಚಿಗೆ ಬಂದು ನಿಂತಿತ್ತು. ಆದರೆ ಹೊಸದಾಗಿ ಬರೆಯುವವರಿಗೆ ಅದೇ ಮಾದರಿಯಾಗಿತ್ತು. ಅಂತಹ ಕೆಲವು ಪ್ರಯತ್ನಗಳು ಇಲ್ಲಿವೆ.

ನವ್ಯ ಪ್ರಕಾರ ಮುಟ್ಟಿದ ಕೆಲವು ಅತಿರೇಕಗಳ ಸುಳಿವನ್ನು ಇಲ್ಲಿ ಕಾಣಬಹುದೇನೋ. ಅವನ್ನು ಸಂಕಲನದಲ್ಲಿ ಬಿಟ್ಟು ಬಿಡುವ ಯೋಚನೆಯೂ ಇತ್ತು. ಆದರೆ ಸಾಹಿತ್ಯ ವಿಮರ್ಶೆಗೆ ಕೆಲವರು ಕಾಲಕಾಲಕ್ಕೆ ನಿಗದಿಪಡಿಸಿದ ಮಾನದಂಡಗಳನ್ನು ಅವುಗಳಿಗೆ ಮಾದರಿಯಾದ ಕೃತಿಗಳನ್ನು ನೋಡಿದ ಮೇಲೆ ಇರಲಿ ಎನ್ನಿಸಿ ಅವನ್ನು ಕೂಡಾ ಉಳಿಸಿಕೊಳ್ಳಲಾಗಿದೆ. ಇಲ್ಲಿನ ಕತೆಗಳು ರಚನೆಯಾದ ಕಾಲವನ್ನು ಗಮನಿಸಬೇಕೆಂಬುದು ನಮ್ರ ಸೂಚನೆ. ಕೆಲವು ಕತೆಗಳಿಗೆ ನನ್ನ ಮಲೆನಾಡಿನ ಅನುಭವಗಳ ಹಿನ್ನಲೆ ಇದೆ.

ಹಳ್ಳಿ ಮತ್ತು ನಗರ ಬದುಕಿನ ಹಿನ್ನಲೆಯಲ್ಲಿ ನನ್ನ ಕಥೆಗಳನ್ನು ಹಾಗೆಯೇ ಪ್ರತ್ಯೇಕವಾಗಿ ವಿಭಾಗಿಸಿದ್ದೇನೆ. ಹಳ್ಳಿಯ ಬದುಕು ನನಗೆ ಸ್ವಂತ ಮನೆಯಲ್ಲಿದ್ದಂತೆ ಆಪ್ತವಾಗಿದ್ದರಿಂದ ಗ್ರಾಮೀಣ ಹಿನ್ನಲೆಯ ಕತೆಗಳನ್ನು ಒಂದು ಕಡೆ ಮತ್ತು ಪೇಟೆ ಪಟ್ಟಣದ ಬದುಕಿಗೆ ವ್ಯಾಪಿಸಿದ ಇತರ ಕತೆಗಳನ್ನು ಇನ್ನೊಂದು ಕಡೆ ವಿಭಾಗಿಸಿದ್ದೇನೆ. ಒಟ್ಟು ಸಂಗ್ರಹಕ್ಕೆ ಊರು ಮನೆ ಎಂಬ ಶೀರ್ಷಿಕೆ ಕೊಟ್ಟಿದ್ದೇನೆ.( ಸಿದ್ದಲಿಂಗಯ್ಯ ಅವರ ಆತ್ಮಕತೆ ಊರು ಕೇರಿ ಎಂಬುದು ನನ್ನ ಗಮನದಲ್ಲಿದೆ.).

ನನ್ನ ಮಲೆನಾಡಿನ ಅನುಭವ ಕೆಲವೇ ವರ್ಷಗಳಿಗೆ ಸೀಮಿತವಾದದ್ದು. ಹುಟ್ಟೂರಿನಲ್ಲಿ ಬಾಲ್ಯದ ಕೇವಲ ಹತ್ತು ವರ್ಷಗಳನ್ನಷ್ಟೆ ಕಳೆದವನು ನಾನು. ನಾಲ್ಕನೇ ತರಗತಿ ಮುಗಿಯುತ್ತಲೂ ಮುಂದಿನ ವಿದ್ಯಾಭ್ಯಾಸದ ನೆಪದಲ್ಲಿ ಸೋದರ ಮಾವನ ಮನೆಗೆ ತೆರಳಿದವನಿಗೆ ಇನ್ನೂ ಹುಟ್ಟೂರಿಗೆ ವಾಪಾಸಾಗಲು ಸಾಧ್ಯವಾಗಿಲ್ಲ. ಪಶ್ಚಿಮಾಭಿಮುಖವಾಗಿ ಬಾಗಿಲು ಇರುವ ನಮ್ಮ ಮನೆ ಅತ್ಯಂತ ಪ್ರಶಾಂತವಾಗಿರುವ ತಾಣ. ಮನೆಯ ಪೂರ್ವಕ್ಕೆ ದಿಬ್ಬದಂತಹ ಬ್ಯಾಣ. ಅದಕ್ಕೆ ಒತ್ತಿನಿಂತ ಕಾಡು. ಮನೆಯ ಬಾಗಿಲ ಎದುರಲ್ಲಿ ಒಕ್ಕುವ ಕಣ. ಅದಕ್ಕೆ ಹೊಂದಿಕೊಂಡ ಅಡಿಕೆ ತೋಟ. ಒಂದು ಪಕ್ಕದಲ್ಲಿ ಗದ್ದೆ ಹರ.

ಗದ್ದೆಯ ಅಂಚಿನಿಂದಲೇ ಆರಂಭವಾಗುವ ಕಾಡು. ಕಾಡೆಲ್ಲ ಒತ್ತುವರಿಯಾಗಿ ಸಂಕುಚಿತವಾಗಿದ್ದರೂ ಅದರ ಗಾಂಭೀರ್ಯ ಕುಂದಿಲ್ಲ. ವರ್ಷದಲ್ಲಿ ಯಾವಾಗಲೋ ಅತಿಥಿಯಂತೆ ಒಂದೆರಡು ದಿನಗಳ ಮಟ್ಟಿಗೆ ಮನೆಯಲ್ಲಿ ಉಳಿದುಕೊಳ್ಳಲು ಈವರೆಗೆ ಸಾಧ್ಯವಾಗಿದೆ. ವರ್ಷದ ಎಲ್ಲಾ ಋತುಗಳಲ್ಲಿ ಅಲ್ಲಿನ ಪ್ರಶಾಂತ ಪರಿಸರದಲ್ಲಿ ಕಳೆಯುವ ಕನಸು ಇನ್ನೂ ನನಸಾಗಿಲ್ಲ. ಮಳೆಗಾಲದ ಜಿಟಿ ಜಿಟಿ ಮಳೆ, ಚಳಿಗಾಲದ ಕೊರೆಯುವ ಚಳಿ, ಬೇಸಿಗೆಯ ಧಗೆಯನ್ನು ನಮ್ಮ ಮನೆಯಲ್ಲಿ ಕಳೆಯಬೇಕೆಂಬ ಆಸೆ ಇನ್ನೂ ಈಡೇರಿಲ್ಲ.

ನನಗೆ ಈಗಲೂ ಅನ್ನಿಸುತ್ತಿರುವುದು ಸಾಹಿತ್ಯಕ್ಕಿಂತಲೂ ಬದುಕು ದೊಡ್ಡದು. ಎಂಬುದೇ. ನನ್ನ ಮಟ್ಟಿಗೆ ಬರವಣಿಗೆ ಒಳಗಿನ ಒತ್ತಡವನ್ನು ಹೊರಹಾಕುವ ಪ್ರಯತ್ನ. ಈಚಿನ ವರ್ಷಗಳಲ್ಲಿ ಬರೆದ ಎರಡು ಕಾದಂಬರಿಗಳು, ’ಭೂಮಿ ಹುಣ್ಣಿಮೆ’ ಮತ್ತು ’ಪಾಡು’ ನನ್ನ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಮಾಡಿದ ಪ್ರಯತ್ನಗಳು. ಅಂಥ ಪ್ರಯತ್ನ ಕೆಲವು ಕತೆಗಳ ವಿಷಯದಲ್ಲಿಯೂ ಆಗಿದೆ. ಅವುಗಳಲ್ಲಿನ ಪಾತ್ರಗಳು ಸಹಜವಾಗಿ ಎದ್ದು ಬಂದ ಆಕೃತಿಗಳು.

ಮಲೆನಾಡಿನ ಕುಗ್ರಾಮವೊಂದರಲ್ಲಿ ಬಾಲ್ಯವನ್ನು ಕಳೆದ ನನಗೆ ಅಕ್ಷರ ಕಲಿಕೆ ಹಿರಿಯರ ಔದಾರ‍್ಯದಿಂದ ಲಭಿಸಿದ ಸುವರ್ಣ ಅವಕಾಶ. ಅಷ್ಟೋ ಇಷ್ಟೋ ಓದಿಕೊಂಡು ಪ್ರಾಥಮಿಕ ಶಾಲೆಯ ಮೇಷ್ಟರು ಆದರೆ ತನ್ನ ಕಾಲಮೇಲೆ ನಿಂತುಕೊಳ್ಳುತ್ತಾನೆ. ಇಲ್ಲಿ ದುಡಿಯಲು ಬೇರೆ ಹೆಚ್ಚು ಜಮೀನು ಇಲ್ಲ ಎಂದು ಅಪ್ಪನಿಗೆ ತಿಳಿದಿದ್ದರಿಂದ ನನಗೆ ಓದಲು ಅವಕಾಶವಾಗಿತ್ತು.

ಅಪ್ಪನಿಗೆ ಸಿಕ್ಕಿದ್ದು ಅಂದಿನ ಗಾಂವಟಿ ಶಾಲೆಯಲ್ಲಿ ಎರಡನೇ ತರಗತಿಯವರೆಗಿನ ವಿದ್ಯಾಭ್ಯಾಸ ಮಾತ್ರ. ಆರು ತಿಂಗಳ ಮಗುವಾಗಿದ್ದಾಗಲೇ ತನ್ನ ತಂದೆಯನ್ನು ಕಳೆದುಕೊಂಡಿದ್ದ ಅಪ್ಪ(೧೯೦೪) ಕೂಡುಕುಟುಂಬದ ನಿರ್ಲಕ್ಷಿತ ಕೂಸಾಗಿ ಬೆಳೆದವನು. ಆದರೂ ಕಠಿಣ ಪರಿಶ್ರಮಿ. ಅವನು ಪ್ರಾಯಕ್ಕೆ ಬಂದು ಆಗಿನ ಲೋಕವ್ಯವಹಾರಗಳನ್ನು ಕಣ್ಣಾರೆ ಕಾಣುವ ಅವಕಾಶ ಬಂದಾಗ ಮಕ್ಕಳಿಗೆ ವಿದ್ಯೆ ಕೊಡಿಸಬೇಕು, ಇಲ್ಲದಿದ್ದರೆ ಅವರು ತನ್ನಂತೆಯೇ ಹಗಲು ರಾತ್ರಿಗಳ ಪರಿವೆ ಇಲ್ಲದೆ ಕಂಡವರ ಗದ್ದೆ ತೋಟಗಳಲ್ಲಿ ಜೀತದಾಳುಗಳಂತೆ ದುಡಿಯಬೇಕಾಗುತ್ತದೆ ಎಂದು ಊಹಿಸಿದ್ದ.

ಆದ್ದರಿಂದ ತನ್ನೆಲ್ಲ ಮಕ್ಕಳಿಗೂ ವಿದ್ಯೆ ಕೊಡಿಸಲು ಪ್ರಯತ್ನಿಸಿದ್ದ, ಅವನ ಒಂದು ನಿರ್ಧಾರವೆಂದರೆ ಪಾಸಾಗುವವರೆಗೂ ಮುಂದೆ ಮುಂದೆ ಹೋಗುತ್ತಿರಬೇಕು, ಫೇಲಾದರೆ ಅವನಿಗೆ ವಿದ್ಯೆ ದಕ್ಕುವುದಿಲ್ಲ ಎಂದೇ ತಿಳಿಯಬೇಕು. ಅವನು ಕೃಷಿ ಕೆಲಸಕ್ಕೆ ಹಿಂತಿರುಗಬೇಕು- ಇದು ಅಪ್ಪ ನಂಬಿಕೊಂಡುಬಂದಿದ್ದ ಸಿದ್ಧಾಂತ. ಅಪ್ಪನ ಆರು ಜನ ಗಂಡು ಮಕ್ಕಳು ಹೈಸ್ಕೂಲು ಪಬ್ಲಿಕ್ ಪರೀಕ್ಷೆಯಲ್ಲಿ ಮಾತ್ರವಲ್ಲ, ಯಾವ ಪರೀಕ್ಷೆಗಳಲ್ಲೂ ಫೇಲ್ ಆಗಲೇ ಇಲ್ಲ.

ನನ್ನ ನಾಲ್ವರು ಅಣ್ಣಂದಿರಲ್ಲಿ ಹಿರಿಯ ಮೂವರು ಬೇರೆ ಬೇರೆ ಕಾರಣಗಳಿಂದಾಗಿ ಮುಂದೆ ಓದಲು ಸಾಧ್ಯವಾಗಲಿಲ್ಲ. ಒತ್ತಿನ ಅಣ್ಣ ಕೃಷಿಯಲ್ಲಿ ಪದವೀಧರನಾಗಿ ಬ್ಯಾಂಕ್ ಅಧಿಕಾರಿಯಾಗಿ ನೇಮಕಗೊಂಡ. ತಮ್ಮ ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕಾಲೇಜು ಉಪನ್ಯಾಸಕನಾದ. ಸಾಹಿತ್ಯದ ಅಭಿರುಚಿ ಹತ್ತಿಸಿಕೊಂಡ ನಾನು ಕನ್ನಡ ಎಂ.ಎ ಮಾಡಿದರೂ ಆಗ ತಕ್ಷಣಕ್ಕೆ ಉದ್ಯೋಗ ಸಿಗದೆ, ಪರದಾಟ ನಡೆಸಿ ಪತ್ರಕರ್ತನಾಗಬೇಕಾಯಿತು.

ಸ್ವಂತ ಕಾಲ ಮೇಲೆ ನಿಲ್ಲುವಂಥ ನೌಕರಿ ಹಿಡಿಯುವುದಷ್ಟೇ ಪರಮ ಗಮ್ಯವಾಗಿದ್ದ ನನಗೆ ಈ ಬರವಣಿಗೆಯ ಕ್ಷೇತ್ರ ತುಂಬ ಅಪರಿಚಿತವಾದದ್ದು. ಅನಿರೀಕ್ಷಿತವೂ ಆದದ್ದು ಆದ್ದರಿಂದಲೇ ನನ್ನ ಬರವಣಿಗೆಗೆ ಅಪ್ಪ ಅವ್ವ ಅವರ ಬದುಕು ಎಷ್ಟರಮಟ್ಟಿಗೆ ಒತ್ತಾಸೆಯಾಗಿದೆ ಎಂಬುದರ ಒಂದು ಚಿತ್ರಣವನ್ನು ಪ್ರವೇಶಿಕೆಯಾಗಿ ನೀಡಿದ್ದೇನೆ.

ಏಕೆಂದರೆ, ನಾನು ಬರೆದ ಕತೆಗಳಲ್ಲಿ ಸಾಹಿತ್ಯ ವಲಯದ ಸಹೃದಯರು ಯಾವ ಯಾವ ಅಂಶಗಳನ್ನು ಗಮನಿಸಿ ಅದರ ಬಗ್ಗೆ ಮೆಚ್ಚುಗೆಯನ್ನೋ,ಟೀಕೆಯನ್ನೋ ಹೇಳುತ್ತಿದ್ದರೆ, ನನ್ನ ಮನೆ, ಸಂಬಂಧಿಕರ ಪರಿಸರದಲ್ಲಿ ಬೇರೆಯೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುತ್ತದೆ. ಕತೆಗಳಲ್ಲಿ ಪ್ರಸ್ತಾಪವಾದ ಪಾತ್ರಗಳಲ್ಲಿ ತಮ್ಮ ಗುರುತಿನವರನ್ನು ಹುಡುಕಿದ್ದಾರೆ. ಸ್ವಂತಕ್ಕೆ ಆರೋಪಿಸಿಕೊಂಡಿದ್ದಾರೆ.

ತನ್ನ ಬಗ್ಗೆಯೇ ಬರೆದಿದ್ದಾನೆ ಎಂದು ನಿಷ್ಠುರ ಮಾಡಿಕೊಂಡಿದ್ದಾರೆ. ಸರಳ, ಸ್ನೇಹ ಸಜ್ಜನಿಕೆಯನ್ನು ಜೀವನದಲ್ಲಿ ಬಯಸುವ ನನಗೆ ನನ್ನ ಬರಹಗಳಿಂದ ಹತ್ತಿರದ ಬಂಧುಗಳಲ್ಲಿ ನಿಷ್ಠುರ ವರ್ತನೆಯನ್ನು ಎದುರಿಸಬೇಕಾದ ಪರಿಸ್ಥಿತಿ. ಕತೆಯಲ್ಲೋ, ಕಾದಂಬರಿಯಲ್ಲೋ ಬರುವ ಪಾತ್ರಗಳು ನಿಜಜೀವನದಲ್ಲಿನ ವ್ಯಕ್ತಿಗಳಲ್ಲ.

ಹಾಗೆ ಹೋಲಿಕೆ ಇದ್ದರೆ ಅದು ಆಕಸ್ಮಿಕ. ಏಕೆಂದರೆ ಬರೆಯುವ ವ್ಯಕ್ತಿ ನಮ್ಮ ನಡುವೆಯೇ ಇರುವವನು-ಎಂಬ ಪ್ರಾಥಮಿಕ ಅರಿವನ್ನು ನನ್ನ ಹತ್ತಿರದ ಬಂಧುಗಳಲ್ಲಿ ಮೂಡಿಸುವುದರಲ್ಲಿ ಯಶಸ್ಸು ಸಿಕ್ಕಿಲ್ಲ. ಏನೇ ಇದ್ದರೂ ಇಲ್ಲಿನ ಕತೆಗಳು ನನ್ನ ಆಯಾ ಕಾಲದ ಮನಸ್ಥಿತಿಯ ಅಭಿವ್ಯಕ್ತಿಗಳು. ಓದುವ ಖುಷಿಗಾಗಿ ಕಟ್ಟಿದ ಕಥಾನಕಗಳು

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: