Skip to content
ಸೆಪ್ಟೆಂಬರ್ 17, 2010 / odubazar

ಹೌದೇನೇ:ಅಮ್ಮ ಆಗ್ಲಿಕ್ಕೆ ಹೆರಲೇಬೇಕಾ?…

-ಗಾನಾ ಜೋಯ್ಸ್

ಹೇಳ್ತಾರೆ ಎಲ್ಲರೂ. ಹೆಣ್ಣಿಗೆ ತಾಯ್ತನವೇ ಸಂಪೂರ್ಣತೆಯನ್ನ ತಂದುಕೊಡೋದು ಅಂತ. ಹೌದಲ್ಲಾ? ಮೊಲದ ಮರಿಯಂಥಾ ಮಗು( ಬಿಡು. ಹೆತ್ತೋರಿಗೆ ಹೆಗ್ಗಣ ಮುದ್ದು!), ಅದರ ಅಳು, ನಗು, ಉಚ್ಚೆ,ರಚ್ಚೆ,ಸ್ನಾನದ ಸಂಭ್ರಮ, ಲೋಬಾನದ ಘಮ, ಆಹಾ… ಅದರ ಸವಿಯೇ ಸವಿ.

ನನ್ನದೂ ಒಂದು ಖ್ವಾಯಿಶಿತ್ತು. ಚಳಿಗಾಲದಲ್ಲಿ ಕಂಬಳಿ ಹೊದ್ದು ಮಫ್ಲರ್ ಕಟ್ಕೊಂಡು, ಹುಹ್ಹುಹ್ಹು ಅಂತ ಕಮ್ಮಗೆ ಬಾಣಂತನ ಮಾಡಿಸ್ಕೊಳ್ಳೋದು, ಅತ್ತಿಗೆಗೆ ಅತ್ತೆ ಮಾಡಿದ ಹಾಗೆ ಉಪಚಾರ ಮಾಡಿಸ್ಕೊಳ್ಳೋದು, ಮಗು ಹೆತ್ತು ನೋವು ನುಂಗೋದು, ಸೊಂಟಕ್ಕೆ ಹಳೇಸೀರೆ ಸುತ್ಕೊಂಡು ಪರದಾಡೋದು, ತಿಂಗಳುಗಟ್ಟಲೆ ಅವರನ್ನ ದೂರವಿಟ್ಟು ಕಾಡಿಸಿ ಮುಸಿ ಮುಸಿ ನಗೋದು; ಕರಕಿನ ಪುಡಿ-ತುಪ್ಪ, ಜೀರಿಗೆ ಉಪ್ಪಿಟ್ಟು, ಅಂಟಿನುಂಡೆ ಎಲ್ಲಾ ಬೇಕಿತ್ತು. ನನ್ನದೇ ಜೀವದ ಮುಂದುವರಿಕೆ, ನನ್ನ ನಿರಂತರತೆ ಬೇಕಿತ್ತು.

ಪ್ರಾಬ್ಲಂ ಏನಿದ್ರೂ ಟೈಟು ಜೀನ್ಸ್ ಹಾಕ್ಕೊಂಡು ಕಂಪ್ಯೂಟರೆದುರು ಮೂರು ಹೊತ್ತು ಕೂರುವ ಅವರದ್ದೇ ಅಂದಿದ್ರು ಡಾಕ್ಟರು. ನಾನು ಹೇಳಿದ್ದೆ. ಟೆಸ್ಟ್ ಟ್ಯೂಬ್ ಬೇಬಿ ಮಾಡ್ಕೊಳ್ಳೋಣ ಅಂತ. ಬಹಳ ಒಳ್ಳೆಯವರು ನಮ್ಮವರು. ಆದರೂ (ಹುಟ್ಟಿಸೋ ತಾಕತ್ತು ಇರದಿದ್ರೂ) ಗಂಡಸಲ್ಲವೇ? ಅಪರೂಪಕ್ಕೆ ಉರಿದುಬಿದ್ದರು.

ಯಾವನ್ಯಾವನದೋ ಸ್ಪರ‍್ಮು ತುರುಕಿಸಿಕೊಳ್ಳೋ ಬದಲು ಮಲಗೆದ್ದು ಬಾ ಅಂದುಬಿಟ್ಟರು! ಛೀ ಛೀ ಅಲ್ಲವೇನೇ ಅವನ ಅಂಥಾ ಮಾತು? ನನಗೋ, ಅವನೆಂದರೆ ಹುಚ್ಚಾಪಟ್ಟೆ ಪ್ರೀತಿ, ಮಿಗಿಲಾದ ಮಮತೆ. ಅವರನ್ನ ಕ್ಷಮಿಸಿಬಿಟ್ಟೆ. ಅವರಂದರು-ನಿನ್ನನ್ನು ಕ್ಷಮಿಸಿದ್ದೇನೆ!.

ಪುರಾಣಗಳ ಪುಟ ಮಗುಚಿದೆ ನಾನು. ಕುಂತಿ ಸಿಕ್ಕಳು. ಕೇಳಿದೆ-ನಿನಗೆ ಮಕ್ಕಳು ಹೇಗಾದವು?ಆ ಮಹಾ ಮಾತೆ ಅಂದಳು. ನನ್ನ ಗಂಡ ಪೂರ್ಣ ಪುರುಷನಾಗಿರಲಿಲ್ಲ. ನನಗೋ, ಸಂಪೂರ್ಣ ಸ್ತ್ರೀತ್ವ ಬೇಕಿತ್ತು.

ದೇವ ಪುರುಷರನ್ನು ಕೂಡಿದೆ. ಮಕ್ಕಳಾದವು!. ನಾನು ಕೇಳಿದೆ-ಸ್ತ್ರೀತ್ವಕ್ಕೆ ಒಂದು ಮಗು ಸಾಕಿತ್ತಲ್ಲವೇ? ಮೂವರು ಯಾಕೆ ಬೇಕಿತ್ತು?ಮೊದಲ ತಪ್ಪೂ ಸೇರಿ ನಾಲ್ಕಲ್ಲವೇ ಮಕ್ಕಳು? ಅವಳು ಉತ್ತರಿಸಲಿಲ್ಲ. ಅವಳಿಗೆ ಅವಳಂಥವರಿಗೆಲ್ಲಾ ನಿಮಿತ್ತದ ನೂರೆಂಟು ಕಾರಣಗಳಿದ್ದವು ಮಕ್ಕಳನ್ನ ಹಡೆಯಲಿಕ್ಕೆ

ಪಾಂಡುರಕ್ತವೇ ಇಲ್ಲದ ಆ ಶೂರರನ್ನು ಜಗತ್ತು ಪಾಂಡವರೆಂದೇ ಕರೆಯಲಿಲ್ಲವೇ?

ನಾನು ತೀರಾ ಕುಂತಿಯಾಗ ಬಯಸಲಿಲ್ಲ. ನನಗೆ ಬೇಕಿದ್ದೆಲ್ಲಾ ಒಂದೇ ಒಂದು ಮಗು. ಅದೂ, ನಾನು ಹಡೆದು ಪಡೆಯಬಲ್ಲ ಮಗು. ಆದರೇನು? ಸೋತ ಗಂಡಸಿನ ನೋವು ಸೋತ ಹೆಂಗಸಿನದಕ್ಕಿಂತಾ ದೊಡ್ಡದು. ಗಂಡಸರು ಸೋಲು ಸಹಿಸಲಾರರು. ಎದುರಾಡಲಿಲ್ಲ ನಾನು ಅವರಿಗೆ. ನಾನೇ ಸೋತೆ. ಸೋತು ಗೆದ್ದೆ. ಅವರನ್ನೂ ಗೆಲ್ಲಿಸಿದೆ!.

ನಮಗೀಗ ಮೂರರ ಕಂದ. ಮನೆ ತುಂಬಾ ಅವನ ಹೆಜ್ಜೆಗಳದೇ ಕಚಗುಳಿ. ಅವನದೇ ಚಿಲಿಪಿಲಿ. ನನ್ನವರ ಮುಖದಲ್ಲೂ ನಗೆಮಿಂಚು. ನನ್ನೆದೆಯೂ ಹಗುರ ಹಗುರ.

ಮಗುವಿಲ್ಲದ ಮಂದಿಯಷ್ಟೇ, ತಂದೆ-ತಾಯಿಗಳಿಲ್ಲದ ಮಕ್ಕಳೂ ಇದ್ದಾರಲ್ಲವೇ ಈ ಆಲಮ್‌ನಲ್ಲಿ? ಅಂಥದರಲ್ಲೊಂದು ಈಗ- ನಮ್ಮ ತೆಕ್ಕೆಯಲ್ಲಿ.

Advertisements
  1. ಆನಂದ / ಸೆಪ್ಟೆಂ 17 2010 10:36 ಫೂರ್ವಾಹ್ನ

    ಹೌದೇನೋ? ಗಂಡಸಾಗ್ಲಿಕ್ಕೆ ಹುಟ್ಟಿಸೋ ’ತಾಕತ್ತು’ ಇರಲೇಬೇಕಾ?

  2. Madhu / ಸೆಪ್ಟೆಂ 17 2010 10:59 ಫೂರ್ವಾಹ್ನ

    very well written, and with lot of feelings..

  3. Banu H / ಸೆಪ್ಟೆಂ 17 2010 9:44 ಅಪರಾಹ್ನ

    Thanks for sharing this with us..so well put together. The feelings you have described me touched me so much as I am going through some infertility issues myself. Thanks for giving me the hope that we can be mothers too 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: