Skip to content
ಅಕ್ಟೋಬರ್ 27, 2010 / odubazar

ಪ್ರೊ. ಅಂಬಳಿಕೆ ಹಿರಿಯಣ್ಣ ಅವರೊಂದಿಗೆ ಮಾತುಕತೆ…

-ಡಾ.ಅರುಣ್ ಜೋಳದ ಕೂಡ್ಲಿಗಿ

ಕನ್ನಡ ಜಾನಪದ

(ಈಚೆಗೆ ಜಾನಪದ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿಯನ್ನಾಗಿ ಮೈಸೂರು ವಿವಿಯ ಪ್ರೊ.ಅಂಬಳಿಕೆ ಹಿರಿಯಣ್ಣ ಅವರನ್ನು ನೇಮಿಸಲಾಗಿದೆ. ಪಶ್ಚಿಮದ ಜಾನಪದ ತಿಳುವಳಿಕೆಯನ್ನು ಕನ್ನಡಕ್ಕೆ ತಂದು ಇಲ್ಲಿನ ಆಲೋಚನೆಯ ನೆಲೆಗಳನ್ನು ವಿಸ್ತರಿಸಿದವರಲ್ಲಿ ಇವರು ಪ್ರಮುಖರು. ಜಾನಪದ ವಿಶ್ವವಿದ್ಯಾಲಯವನ್ನು ಕಟ್ಟುವ ಕನಸನ್ನು ಕುರಿತು ಕನ್ನಡ ಜಾನಪದ ಬ್ಲಾಗಿಗಾಗಿ ಅವರು ಮಾತನಾಡಿದ ಮಾತುಕತೆ ಇಲ್ಲಿದೆ.)
ಅರುಣ್- ಸಾರ್, ನಮಸ್ಕಾರ. ನೀವು ಜಾನಪದ ವಿವಿ ಗೆ ವಿಶೇಷ ಅಧಿಕಾರಿಯಾಗಿದ್ದೀರಿ. ಅದಕ್ಕಾಗಿ ಅಭಿನಂದನೆಗಳು. ಕರ್ನಾಟಕ ಜಾನಪದದಲ್ಲಿ ಅಪಾರ ಕೆಲಸ ನಡೆದಿದೆ, ನಡೆಯಬೇಕಾದುದು ಬಹಳಷ್ಟಿದೆ. ಇಲ್ಲಿ ಜಾನಪದದ ಗ್ರಹಿಕೆ ಮತ್ತು ಅಧ್ಯಯನ ವಿಧಾನಗಳಲ್ಲಿ ಹಲವು ತೊಡಕುಗಳಿವೆ, ಹಾಗಾಗಿ ಈ ತನಕದ ಕನ್ನಡ ಜಾನಪದ ಅಧ್ಯಯನಗಳನ್ನು ಜಾನಪದ ವಿವಿ ಹೇಗೆ ಮುಂದುವರೆಸಲು ನೀವು ಬಯಸುತ್ತೀರಿ ?

ಅಂಬಳಿಕೆ ಹಿರಿಯಣ್ಣ- ಹೌದು ಕನ್ನಡದ ಜಾನಪದ ಅಧ್ಯಯನದಲ್ಲಿ ಹೆಚ್ಚು ಕೆಲಸ ನಡೆದಿದೆ, ಅಂತೆಯೇ ನಡೆಯಬೇಕಾದುದು ಇದೆ. ಆದರೆ ಹಿಂದಿನ ಜಾನಪದ ಅಧ್ಯಯನಗಳ ತುರ್ತು ಬೇರೆಯೇ ಆಗಿತ್ತು, ಆ ಅನಿವಾರ್ಯತೆಗೆ ತಕ್ಕ ಹಾಗೆ ಅಧ್ಯಯನ ವಿಧಾನಗಳೂ ರೂಪುಗೊಂಡಿದ್ದವು. ಆದರೆ ಇಂದಿನ ಜಾನಪದ ಅಧ್ಯಯನದ ತುರ್ತು ಬೇರೆಯೇ ಆಗಿದೆ ಹಾಗಾಗಿ ಇದನ್ನು ಗಮನದಲ್ಲಿಟ್ಟುಕೂಂಡು ಈ ಕಾಲಕ್ಕೆ ಹೊಂದಿಕೆಯಾಗುವಂತಹ ಅಧ್ಯಯನ ವಿಧಾನಗಳನ್ನು ಕಂಡುಕೊಳ್ಳಬೇಕಾಗಿದೆ. ಹಿಂದೆ ಕೇವಲ ಜಾನಪದ ಸಂಪತ್ತನ್ನು ಸಂಗ್ರಹಿಸಬೇಕು ಎನ್ನುವ ಜಾನಪದದ ಸಂರಕ್ಷಣೆಯ ಭಾವ ಪ್ರಭಾವಿ ಅಂಶವಾಗಿತ್ತು. ಅಷ್ಟಕ್ಕೂ ಅವುಗಳಲ್ಲಿ ಬಹುಪಾಲು ಮೇಲ್ಪದರದ ಅಧ್ಯಯನಗಳು. ಈಗ ಜಾನಪದ ಸಂಪೂರ್ಣ ಸರ್ವೇಕ್ಷಣೆ ಮಾಡುವ ಅಗತ್ಯವಿದೆ. ಜಾನಪದದ ಮೂಲ ಕಲಾವಿದರನ್ನು ಗುರುತಿಸಬೇಕಿದೆ.

ಅರುಣ್- ಕರ್ನಾಟಕದಲ್ಲಿ ಜಾನಪದ ಸ್ನಾತಕೋತ್ತರ ಪದವಿ ಪಡೆದ ಮತ್ತು ಜಾನಪದದಲ್ಲಿ ಸಂಶೋಧನೆ ಮಾಡಿದ ನಿರುದ್ಯೋಗಿಗಳಿದ್ದಾರೆ, ಇನ್ನೊಂದೆಡೆ ಅಪಾರ ಜಾನಪದ ಜ್ಞಾನವನ್ನಿಟ್ಟುಕೊಂಡ ಕಡು ಬಡವ ಜಾನಪದ ಕಲಾವಿದರಿದ್ದಾರೆ, ಹಾಗೆಯೇ ಕನ್ನಡದಲ್ಲಿ ಶ್ರೀಮಂತ ಜನಪದ ಸಾಹಿತ್ಯವಿದೆ ಅಂತೆಯೇ ಬಹುಪಾಲು ತೀರಾ ಬಡಕಲು ವಿಶ್ಲೇಷಣೆಗಳಿವೆ. ಒಂದೆಡೆ ಆಧುನಿಕತೆಗೆ ಒಗ್ಗಿಕೊಳ್ಳುತ್ತಾ ಕೆಲವು ಜಾನಪದ ಜ್ಞಾನ ಪರಂಪರೆಗೆ ಸಹಜವಾಗಿ ಮರೆವು ಬಂದಿದೆ, ಇನ್ನೊಂದೆಡೆ ಜನಪದರು ಆಧುನಿಕತೆಯನ್ನೇ ತಮ್ಮ ಜ್ಞಾನಲೋಕಕ್ಕೆ ಒಗ್ಗಿಸಿಕೊಂಡು ಹೊಸ ಜಾನಪದವನ್ನು ಸೃಷ್ಟಿಸುತ್ತಿದ್ದಾರೆ. ಈ ಬಗೆಯ ವೈರುಧ್ಯಗಳನ್ನು ಜಾನಪದ ವಿವಿ ಹೇಗೆ ಅರ್ಥೈಸುತ್ತದೆ ?

ಅಂಬಳಿಕೆ ಹಿರಿಯಣ್ಣ – ಈ ಬಗೆಯ ವೈರುದ್ಧ್ಯಗಳಿರುವುದು ನಿಜ. ಜಾನಪದದಲ್ಲಿ ಸಂಶೋಧನೆ ಮಾಡಿದವರು ಅವರವರ ಭಾಗದ ಜಾನಪದವನ್ನೋ, ಅಥವಾ ಯಾವುದಾದರೂ ಒಂದು ಜಾನಪದ ಸಂಗತಿಯನ್ನೋ ಕುರಿತು ಸಂಶೋಧನೆ ಮಾಡಿದ್ದಾರೆ. ಅವುಗಳಲ್ಲಿಯೂ ಸಹ ಮೇಲ್ಮಟ್ಟದ ಅಧ್ಯಯನಗಳೇ ಹೆಚ್ಚಾಗಿವೆ. ಜಾನಪದ ವಿವಿಯ ಮಿತಿಯಲ್ಲಿ ಇಂತವರಿಗೆ ಸಂಶೋಧನೆ ಮಾಡಲು ವಿಫುಲ ಅವಕಾಶಗಳನ್ನು ಒದಗಿಸುವ ಸಾಧ್ಯತೆ ಇದೆ. ಇನ್ನು ಜನಪದ ಕಲಾವಿದರಿಗೆ ನಮ್ಮಲ್ಲಿ ಗೌರವ ಕಡಿಮೆ. ಹಾಗಾಗಿ ಜನಪದ ಕಲಾವಿದರಿಗೆ ಗೌರವ ಸಿಗುವ ವಾತಾವರಣವನ್ನು ಜಾನಪದ ವಿವಿ ನಿರ್ಮಿಸಬೇಕಿದೆ. ಕಲಾವಿದರು ತಮ್ಮ ಕಲೆಯನ್ನೇ ನಂಬಿ ಬದುಕಬಹುದೆಂಬ ಆತ್ಮವಿಶ್ವಾಸವನ್ನು ವಿವಿ ಮೂಡಿಸಬೇಕಿದೆ.

ಅರುಣ್ – ಸಾರ್ ಆಧುನಿಕವಾಗಿ ತಂತ್ರಜ್ಞಾನ ಬಹಳ ಮುಂದುವರೆದಿದೆ. ಇಂತಹ ಹೊತ್ತಲ್ಲಿ ಜಾಗತಿಕವಾಗಿ ಕನ್ನಡ ಜಾನಪದವನ್ನು ಲಭ್ಯವಾಗುವಂತೆ ಮಾಡಲು ವಿಪುಲ ಅವಕಾಶಗಳಿದೆ. ಹಾಗಾಗಿ ಇಪ್ಪತ್ತೊಂದನೇ ಶತಮಾನದ ಜಾನಪದದ ದಾಖಲೀಕರಣ ಹೇಗಿರಬೇಕು ? ಮತ್ತು ಅದನ್ನು ಜಾನಪದ ವಿವಿ ಹೇಗೆ ನಿರ್ವಹಿಸಬೇಕೆಂದು ಬಯಸುತ್ತೀರಿ ?

ಅಂಬಳಿಕೆ ಹಿರಿಯಣ್ಣ – ಆಧುನಿಕವಾಗಿ ತಂತ್ರಜ್ಞಾನ ಬೆಳೆದಿದೆ. ಇದನ್ನು ಸಮರ್ಥವಾಗಿ ಇಂದಿನ ಜಾನಪದ ಅಧ್ಯಯನಗಳಲ್ಲಿ ಬಳಸಿಕೊಳ್ಳಬೇಕಿದೆ. ಮುಖ್ಯವಾಗಿ ಕನ್ನಡ ಜಾನಪದವನ್ನು ಇಂಗ್ಲೀಷಿಗೆ ಮತ್ತು ಭಾರತೀಯ ಇತರೆ ಭಾಷೆಗೆ ಅನುವಾದ ಮಾಡುವ ಅಗತ್ಯವಿದೆ. ಹಾಗಾಗಿ ಜಾನಪದ ವಿವಿಯಲ್ಲಿ ಭಾಷಾಂತರ ವಿಭಾಗವನ್ನು ತೆರೆಯುವ ಆಲೋಚನೆ ಇದೆ. ಅಂತೆಯೇ ಹೀಗೆ ಅನುವಾದವಾದ ಸಾಹಿತ್ಯವನ್ನು ಅಂತರ್ಜಾಲದಲ್ಲಿ ಲಬ್ಯವಾಗುವಂತೆ ಅಂತರ್ಜಾಲ ತಾಣವೊಂದನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ನಾವು ಕೇವಲ ಕನ್ನಡ ಕನ್ನಡ ಎನ್ನುತ್ತಾ ಕೂಪ ಮಂಡೂಕಗಳಾಗಿ ಕೂರುವ ಕಾಲ ಇದಲ್ಲ. ನಮ್ಮ ಜನಪದರ ತಿಳುವಳಿಕೆಯನ್ನು ಜಾಗತಿಕವಾಗಿ ವಿಸ್ತರಿಸಬೇಕಿದೆ. ಈಗ ಏಕಕಾಲದಲ್ಲಿ ಪಠ್ಯ,ವೀಡಿಯೋ, ಆಡಿಯೋ ಈ ಮೂರು ಮಾದ್ಯಮಗಳಲ್ಲಿ ಜಾನಪದ ಸಂಗ್ರಹ ಮಾಡಲು ಅವಕಾಶವಿದೆ. ಇದು ಹೊರಗಿನ ಅಧ್ಯಯನಕಾರರಿಗೆ ಹೆಚ್ಚು ಉಪಯುಕ್ತವಾಗಲಿದೆ.

ಅರುಣ್- ಸಾರ್, 80ರ ದಶಕದಲ್ಲೇ ಸ್ಕ್ಯಂಡಿನೇವಿಯಾ, ಡೆನ್ಮಾರ್ಕ್ ಗಳಲ್ಲಿ ಬಹಳ ದೊಡ್ಡದಾಗಿ ಫೋಕ್ ಸ್ಕೂಲ್ ಮೂವ್ ಮೆಂಟ್ ಆರಂಭವಾಯಿತು. ಈ ಚಳವಳಿ ಮುಖ್ಯವಾಗಿ ಜಾನಪದ ಜ್ಞಾನವನ್ನು ಶಿಕ್ಷಣ ಮಾಧ್ಯಮವನ್ನಾಗಿ ಪರಿವರ್ತಿಸಿದವು. ಇದರಿಂದಾಗಿ ಅಲ್ಲಿ ಹೊಸ ತಲೆಮಾರುಗಳಲ್ಲಿ ಜಾನಪದ ಒಂದು ಜೀವನ ಕ್ರಮವಾಗಿ ಬದಲಾಗುತ್ತಿದೆ. ಇದು ಜಾಗತೀಕರಣಕ್ಕೆ ದೊಡ್ಡ ಪ್ರತಿರೋಧವಾಗಿ ಬೆಳೆದಿದೆ. ಹಾಗಾಗಿ ಕರ್ನಾಟಕದಲ್ಲಿ ಜಾನಪದವನ್ನು ಪ್ರಾಥಮಿಕ ಶಿಕ್ಷಣದಿಂದ ಪದವಿ ತರಗತಿಗಳಿಗೆ ಒಂದು ಪಠ್ಯವನ್ನಾಗಿ ಖಡ್ಡಾಯಗೊಳಿಸಿದರೆ, ಹೊಸ ತಲೆಮಾರುಗಳಲ್ಲಿ ಜಾನಪದ ಜ್ಞಾನ ಲೋಕ ಜೀವನ ಕ್ರಮವಾಗಿ ಬದಲಾಗಲು ಸಾಧ್ಯವಿದೆ, ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ?

ಅಂಬಳಿಕೆ ಹಿರಿಯಣ್ಣ- ಜಾನಪದ ವಿವಿಯ ಮೊದಲ ಹಂತದ ಕೆಲಸದಲ್ಲಿ ಶೈಕ್ಷಣಿಕವಾಗಿ ಜಾನಪದವನ್ನು ಒಂದು ಕಡ್ದಾಯ ಪಠ್ಯವನ್ನಾಗಿಸುವುದು ಮುಖ್ಯವಾಗಿದೆ. ಹಾಗಾದಲ್ಲಿ ಆಯಾ ಭಾಗದ ಜನಪದ ಕಲೆಯನ್ನು ಪ್ರಾಯೋಗಿಕವಾಗಿಯೂ ಕಲಿಯುವ, ಆ ಮೂಲಕ ಹೊಸ ತಲೆಮಾರಿನಲ್ಲಿ ಜನಪದ ಕಲಾವಿದರನ್ನು ಹುಟ್ಟುಹಾಕುವ ಸಾಧ್ಯತೆ ಇದೆ. ಇದನ್ನು ವಿದ್ವಾಂಸರ ಸಮಿತಿ ರಚಿಸಿ ಈ ಬಗ್ಗೆ ಚರ್ಚಿಸಬೇಕಾಗಿದೆ. ಜಾನಪದವನ್ನು ಒಂದು ಪಠ್ಯವನ್ನಾಗಿ ಮಾಡಿದರೆ ಜಾನಪದವನ್ನು ಒಂದು ಶೈಕ್ಷಣಿಕ ಶಿಸ್ತಿನಲ್ಲಿ ಕಲಿಯುವವರ ಸಂಖ್ಯೆ ಹೆಚ್ಚುತ್ತದೆ, ಆಗ ಜನಪದ ವಿದ್ವಾಂಸ ಏಕಕಾಲದಲ್ಲಿ ಕಲಾವಿದನೂ ಆಗುತ್ತಾನೆ. ಕಲಿತವರು ಜಾನಪದ ಕಲೆಗಳನ್ನು ಪ್ರವೇಶಿಸುವುದರಿಂದ ಕಲೆ ಉಳಿಯುತ್ತದೆ. ಅಂತೆಯೇ ಜಾನಪದವನ್ನು ಕಲಿತವರ ನಿರುದ್ಯೋಗ ಸಮಸ್ಯೆಯೂ ಕಡಿಮೆಯಾಗಬಹುದು.

ಅರುಣ್- ಸಾರ್, ಇಂದು ಜಾಗತಿಕವಾಗಿ ಜಾನಪದ ಅಧ್ಯಯನಗಳು ಆನ್ವಯಿಕ ಚಿಂತನೆಯಲ್ಲಿ ಬಹಳ ಮುಂದುವರಿದಿವೆ. ಹಾಗೆ ನೋಡಿದರೆ ಕರ್ನಾಟಕ ಜಾನಪದ ಅಧ್ಯಯನಗಳು ಕನಿಷ್ಟ ಅರ್ಧ ಶತಮಾನದಷ್ಟು ಹಿಂದಿವೆ. ಹೀಗಿರುವಾಗ ಜಾಗತಿಕ ಜಾನಪದ ಅಧ್ಯಯನದ ತಿಳುವಳಿಕೆಯನ್ನು ಕನ್ನಡಕ್ಕೆ ಹೇಗೆ ಅನ್ವಯಿಸಿಕೂಳ್ಳುತ್ತೀರಿ? ಅಂತೆಯೇ ಕನ್ನಡದಲ್ಲಿ ದೇಸಿ ಚಿಂತನಾ ವಿಧಾನ ಇನ್ನು ಗಟ್ಟಿಯಾಗಿ ನೆಲೆಗೊಳ್ಳಬೇಕಿದೆ ಈ ಎರಡೂ ವೈರುದ್ಯಗಳನ್ನು ಹೇಗೆ ಜಾನಪದ ವಿವಿಯಲ್ಲಿ ಸಮನ್ವಯಗೊಳಿಸುತ್ತೀರಿ ?

ಅಂಬಳಿಕೆ ಹಿರಿಯಣ್ಣ- ಹೌದು ಫಿನ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಜಾನಪದವನ್ನು ಪ್ರವಾಸೋಧ್ಯಮದ ಅಭಿವೃದ್ಧಿಗೆ ಬಳಸಿಕೊಂಡು ಯಶಸ್ವಿಯಾಗಿದ್ದಾರೆ. ಅಂತಹ ಕೆಲಸಗಳು ಪ್ರಯೋಗಗಳು ಕನ್ನಡದಲ್ಲಿಯೂ ಆಗಬೇಕಿದೆ. ಆದರೆ ಅಲ್ಲಿ ಜನಪದ ಕಲಾವಿದರಿಗೆ ಹೆಚ್ಚಿನ ಗೌರವವಿದೆ. ನಮ್ಮಲ್ಲಿ ಜನಪದ ಕಲಾವಿದರಿಗೆ ಗೌರವ ಕಡಿಮೆ. ಆನ್ವಯಿಕ ಜಾನಪದ ಕೇವಲ ಚಿಂತನೆಯ ಮಟ್ಟದಲ್ಲಿದ್ದರೆ ಸಾಲದು, ಅದು ಪ್ರಾಯೋಗಿಕ ಹಂತವನ್ನು ತಲುಪಬೇಕಿದೆ. ಜಾನಪದ ವಿವಿ ಈ ಕೆಲಸಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ.

ಅರುಣ್- ಕೊನೆಯದಾಗಿ ಒಂದು ಪ್ರಶ್ನೆ, ಸದ್ಯಕ್ಕೆ ಜಾನಪದ ವಿವಿ ಘೋಷಣೆಯಾದ ನಂತರದ ಬೆಳವಣಿಗೆಗಳೇನು ?

ಅಂಬಳಿಕೆ ಹಿರಿಯಣ್ಣ- ಸದ್ಯಕ್ಕೆ ಪ್ರಾಥಮಿಕ ಕೆಲಸಗಳು ನಡೆಯುತ್ತಿವೆ. ಪಿಡಬ್ಲು.ಡಿ/ ಬಿ.ಬಿ.ಎಂ.ಪಿ ಯವರು ಬೆಂಗಳೂರಿನಲ್ಲಿ ಒಂದು ಕಛೇರಿಯನ್ನು ಕೊಟ್ಟಿದ್ದಾರೆ, ಅಲ್ಲಿ ಕೆಲಸ ಆರಂಭವಾಗಿದೆ. ಕೆಲವು ವಿವಿಯ ಮೊದಲ ಹಂತದ ಕೆಲಸಗಳು ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇವೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: