Skip to content
ಡಿಸೆಂಬರ್ 2, 2010 / odubazar

ಇದೊಂದು ಭಿನ್ನವಾದ ಕಾದಂಬರಿ…

-ಆರ್ .ವಿಜಯರಾಘವನ್
ಸತ್ಯನಾರಾಯಣ ಅವರ ಈವರೆಗಿನ ಕಥೆ/ಕಾದಂಬರಿಗಳಿಗಿಂತ ಭಿನ್ನವಾದ ಕಾದಂಬರಿ ಬರೆದಿದ್ದಾರೆ. ಅದನ್ನು ವಿಚ್ಛೇದನಾ-ಪರಿಣಯವೆಂದು ಕರೆದು ಕಾಲದ ಚಲನೆಯ ಕಾನ್ಸೆಪ್ಟನ್ನೇ ಹಿಂದೆ ಮುಂದೆ ಮಾಡಿದ್ದಾರೆ.

ಹಾಗೆ ಮಾಡುವುದರ ಮೂಲಕ ತಾವು ಕಥೆಗಾರರಾಗಿ (ಕಾದಂಬರಿಕಾರರೂ ಕಥೆಗಾರರೇ ತಾನೆ?) ತಮ್ಮದೇ ರೂಢಿಗೆ ಸಂದಿದ್ದ ಆಲೋಚನೆಯ ಕ್ರಮವನ್ನು, ಅಭಿವ್ಯಕ್ತಿಯ ಸ್ವರೂಪವನ್ನು ಬದಲಾಯಿಸಿಕೊಂಡಿರುವುದಾಗಿಯೂ, ಓದುಗರು ಕೂಡ ಈ ಬದಲಾವಣೆಗೆ ತೆರೆದುಕೊಳ್ಳಬೇಕೆಂದೂ ಆಶಿಸುತ್ತಿರುವರೆಂದು ನಂಬಲು ಕಾರಣಗಳಿವೆ ಈ ಹಿಂದೆ ಮುಂದಾಗುವುದನ್ನು ಕುರಿತು ಕಾದಂಬರಿಯ ನಾಮಾಂಕಿತ ಅಧ್ಯಾಯಗಳು ವಿವರಿಸುವುದಿಲ್ಲ.

ಅಲ್ಲಿ ಹೆಸರುಗಳೂ ನೆಪಗಳಾಗಿ ಒದಗುತ್ತವೆ.  ವಿಚ್ಛೇದನಾ ಪರ್ವದ ನಾಂದಿಯೆಂದು ಹೆಸರುಗೊಂಡ ಅಧ್ಯಾಯದಲ್ಲಿ ಆಯುಮಾನ ಹೆಚ್ಚಾಗಿ ಆ ಕಾರಣದಿಂದ ದಾಂಪತ್ಯ ಜೀವನದ ಕಾಲವು ಹೆಚ್ಚಾಗಿ -ಅದು ನಾವು ಡಾಕ್ಯುಮೆಂಟರಿ ಉದ್ದದ ಸಿನಿಮಾ ನೋಡಲು ಹೋಗಿ ಅದು ಇಡೀ ರಾತ್ರಿ ನಡೆವ ಕೇಳಿಕೆಯಾಗಿಹೋದ ಹಾಗೆ- ಅದು ಸೇರದೆ ವಿಚ್ಛೇದನಗಳು ಕಾದಂಬರಿಯ ದೇಶದ ಸಂದರ್ಭದಲ್ಲಿ ಬೇಕಾಯಿತೆನ್ನುವ ಪ್ರಸ್ತಾವನೆಯಿದೆ ಮತ್ತು ಕಾಲ ಬದಲಾಗಿರುವುದರಿಂದ ಮನುಷ್ಯನ ಬದುಕು ಸರಳವಾಗಿರುವುದು ಸಾಧ್ಯವೇ ಇಲ್ಲ ಎನ್ನುವ ನಿಲುವು ತಳೆಯುವ ಸಾಹಿತ್ಯ ಪ್ರಪಂಚವನ್ನು ಇಲ್ಲಿ ಕಟ್ಟಲಾಗಿದೆ.

ಈ ಮೂಲದಿಂದಲೇ ವಿಚ್ಛೇದನಾ-ಪರಿಣಯವೆಂದು ಹೆಸರುಗೊಂಡಿರುವುದು ಮಹಾನ್ ಆಂತರಿಕ ವ್ಯವಸ್ಥೆಯೊಂದರ ಪರ್ವ. ಅದು ಒಳಗೊಳ್ಳುವೆಲ್ಲವೂ ಎಂದೆಂದಿಗೂ ಘಟಿಸುತ್ತ ಇರುವ ಮಹಾ… ಭಾರತದ ಕಥಾನಕದ ಒಂದು ಅಂದಿನ ಹಾಗೆ. ಕೊನೆಯೆನ್ನುವುದು ನಶ್ವರ. ಆದ್ದರಿಂದಲೇ ಇಲ್ಲಿ ಕಥೆಯನ್ನುವುದು ಹಿಂದಿನ ಅನಂತವನೂ ಮುಂದಿನ ಅನಂತವನ್ನೂ ಒಂದುದಿನದಲ್ಲಿ ಇರಿಸಿ ನೋಡುವ ಸನ್ನಾಹ.

ಕಾದಂಬರಿಯ ಕೊನೆಯಲ್ಲಿಯೂ ಒಂದು ವಿಚ್ಛೇದನದ ಪ್ರಸ್ತಾಪವಿದೆ. ಅದು ಫಾತಿಮಾಳದ್ದು. ಶ್ರೀರಾಮಚಂದ್ರನ ಸರಯೂ ನದಿಯಲ್ಲಿ ಅವಳ ವಿಚ್ಛೇದನವೂ ಸರಿದುಹೋಗುತ್ತದೆ. ಈ ಸರಯೂ ನದಿ ಕಾಲರೂಪಿಯಾಗಿ ನಿರಂತರ ಹರಿಯುತ್ತ ಏನೊಂದು ಬದಲಾವಣೆಯೂ ತನ್ನಲ್ಲಿ ಘಟಿಸುತ್ತಲಿಲ್ಲ ಎನ್ನುವುದಕ್ಕೆ ಕೊರಗದೆ ಇರುತ್ತಿದೆ. ವಿಚ್ಛೇದನವೂ ರಾಮನಿಂದ ಫಾತಿಮಾಳವರೆಗೂ ಮುಂದುವರಿಯುತ್ತಲೇ ಇದೆ.

ಕಾದಂಬರಿ ಶುರುವಾಗುವುದು ಕೋದಂಡರಾಮಪುರವೆಂಬ -ಪ್ರಾಯಶಃ- ದೇಶದಲ್ಲಿ ಉಲ್ಬಣಗೊಂಡ ವಿಚ್ಛೇದನಗಳ ದಾವೆಗಳನ್ನು ಇತ್ಯರ್ಥಗೊಳಿಸುವ ವ್ಯವಸ್ಥೆಗೆ ಒಂದು ಜಾಗ ಹುಡುಕುವುದರ ಮೂಲಕ. ಅದು ಹಳೆಯ ವಾಡೆಯೊಂದರಲ್ಲಿ ಸಿಕ್ಕಿಬಿಡುತ್ತದೆ. ಮುಂದೆ ಮುಂದೆ ಕಥೆಯಲ್ಲಿ ಕಾಲದ ಚೌಕಟ್ಟಿನೊಳಗೆ ಬೀಗ ಜಡಿಸಿಕೊಂಡಿದ್ದ ಹಿಂದಿನ ವಾಡೆಯಲ್ಲಿನ ನಿಲುವುಗನ್ನಡಿ ಹೊರತು ಉಳಿದೆಲ್ಲ ಹೊಸತರಂತಿದ್ದ ವಸ್ತುಗಳು ವಾಡೆಯ ಬೀಗ ತೆಗೆದ ಬಳಿಕ ಧೂಳೀಪಟವಾಗಿಹೋಗುತ್ತವೆ.

ನಾನು ಬಲ್ಲಂತೆ ಕನ್ನಡಿಗಳು ಹಾಳಾಗುವುದಿಲ್ಲ. ಅವುಗಳ ಕಣಕಣವೂ ಹೊಸಕನ್ನಡಿಗಳಾಗಿ ಇರುತ್ತವೆ. ಒಳಗೆ ನುಸುಳುವ ಬಿಂಬಗಳನ್ನು ತಿಂದುಕೊಂಡು ಬದುಕುತ್ತವೆ. ಇಲ್ಲಿಯೂ ನಿಲುವುಗನ್ನಡಿ ಹುಡಿಯಾಗದೆ ಉಳಿಯುತ್ತದೆ.
ಅವರ ಈ ಕಾದಂಬರಿ ವಿಚ್ಛೇದನ-ಪರಿಣಯ ಕಾಲಬದ್ಧವಾದದ್ದಲ್ಲ. ನದಿಯ ಹೆಸರು ಅದೇ ಆದರೂ ನೀರು ಅದಲ್ಲ. ಅಲ್ಲಿ ನಿನ್ನೆಯ ಶಾಂತಾಬಾಯಿಯ ಜೊತೆ ನಾಳೆಯೂ ಇವತ್ತಿನ ಜೊತೆ ಮುನ್ನೂರು ವರ್ಷಗಳ ಹಿಂದಿನ ಏನೋ ಸೇರಿಕೊಳ್ಳುತ್ತದೆ.

ಒಟ್ಟು ಕಾದಂಬರಿಯಲ್ಲಿನ ಚಟುವಟಿಕೆಗಳು ಮ್ಯಾಜಿಕಲ್ ರಿಯಲಿಸಂನ ಮಾರ‍್ಕ್ವೆಜ್‌ನನ್ನು ನೆನಪಿಗೆ ತರುತ್ತವೆ. ಭಾರತದ ಒಟ್ಟಂದದ ಸ್ತ್ರೀಕೇಂದ್ರಿತ ಸಮಸ್ಯೆಗಳನ್ನು ಅದು ಭಿನ್ನ ರೀತಿಯಲ್ಲಿ ಅಂದರೆ ಈವರೆಗೆ ಯಾರೂ ಹೇಳದ ರೀತಿಯಲ್ಲಿ ನಮ್ಮ ಮುಂದಿಡುತ್ತದೆ.

ನನಗೆ ಅದರಲ್ಲಿ ತುಂಬಾ ಡಿಸ್ಟರ್ಬ್ ಮಾಡಿದ್ದು ವಾಡೆ ಮತ್ತು ಅದು ವರ್ತಮಾನದವರೆಗೂ ಒಡಲಲ್ಲಿ ಇಟ್ಟುಕೊಂಡು ಬಂದ ಹಿಂಸೆ. ಆಧುನಿಕವಾದಕ್ಕೆ ತೆರೆದುಕೊಂಡ ವಾಡೆಯ ಮಂಚವೇ ಮುಂತಾದ ಭೋಗೋಪಯೋಗಿ ವಸ್ತುಗಳೆಲ್ಲ ಧೂಳೀಪಟವಾಗುವುದು ಒಂದು ರೂಪಕವಾಗಿದೆ. ಇಡೀ ಕಾದಂಬರಿಯೇ ರೂಪಕಗಳನ್ನು ಹೊತ್ತು, ಹೊದ್ದು ಜೀವಿಸಿದೆ.
ಅದು ಅವರ ಹೊಸ ಕಾದಂಬರಿ ವಿಚ್ಛೇದನಾ-ಪರಿಣಯದ ನದಿಯಲ್ಲಿ ಪದರಗಳು ಏಳುವ ರೂಪಕದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ವಿಚ್ಛೇದನ-ಪರಿಣಯವೆಂಬ ಅದರ ಹೆಸರೇ ಅದರ ಟೆನ್ಷನ್ ಅನ್ನು ನಮ್ಮ ಮುಂದಿಡುತ್ತದೆಯಾಗಿ ಓದಿಗೆ ಹೊಸಬಗೆಯ ಸಿದ್ಧತೆಯನ್ನು ಬೇಡುತ್ತದೆ. ಕಥೆ ಎಲ್ಲಿಗೆ ಹೋಗಬೇಕೆಂದು ಅವರು ಅಂದುಕೊಂಡಿದ್ದಾರೋ ಅದನ್ನು ಆ ರೂಪಕ ಹೇಳುತ್ತದೆ.
ಸತ್ಯನಾರಾಯಣರಿಗೆ ಕಥೆಗಳ ಕೊರತೆ ಇಲ್ಲ. ಅವರು ಯಾವಾಗಲೂ ಸಿಂಗಲ್ ಲೇಯರಿನ ಬರೆಹ ಬರೆಯುವುದಿಲ್ಲ. ಅವರ ಬಹುಪಾಲು ಬರೆಹಗಳಲ್ಲಿ ನಾನು ಬಹಳ ಸ್ಪಷ್ಟ ಯೋಜನೆಯನ್ನು ಕಾಣುತ್ತೇನೆ. ಅವರಿಗೆ ಕಥಾಹಂದರ ಬೇರೆ ಏನನ್ನೋ ಹೇಳುವುದಕ್ಕೆ ಇರುವ ಮಾಧ್ಯಮ ಎಂದು ನನಗೆ ಅನ್ನಿಸಿದೆ. ಕಥೆಗಳಲ್ಲಿ ಅವರು ಮಾಸ್ತಿಯವರ ಉತ್ತರಾಧಿಕಾರಿಯಂತೆ ಬರೆಯುತ್ತಾರೆ ಎನ್ನುವುದರಲ್ಲಿ ನನಗೆ ಸಂದೇಹವೇನೂ ಇಲ್ಲ. ಅದು ತೊಡಕೂ ಅಲ್ಲ. ಉತ್ತರಾಧಿಕಾರಿಗಳ ಜವಾಬ್ದಾರಿ ದೊಡ್ಡದು ಎಂದು ನಾನು ಬಲ್ಲೆ.

ಉತ್ತರಾಧಿಕಾರಿ ಯಾವತ್ತೂ ಕಡಿಮೆಯಾದ ಪಾತ್ರವನ್ನು ನಿರ್ವಹಿಸಬಾರದು. ನನ್ನ ದಾರಿಯ ಹಿಡಿದು ನಡೆ, ನಿನಗೆ ತೋರಲಿ ನಾ ಕಾಣದ ದಾರಿ ಎಂದು ನಾನು ಒಂದು ಕವಿತೆಯಲ್ಲಿ ಬರೆದಿದ್ದೇನೆ. ಅಂದರೆ ನಿಜ ಕಥೆಗಾರರ ನಡುವೆ ಸಾತತ್ಯವೊಂದು ಯಾವಾಗಲೂ ಏರ್ಪಡುತ್ತಾ ಇರುತ್ತದೆ.

ಅಡಗೂಲಜ್ಜಿಯ ಮನೆಗಳಲ್ಲಿ ಇದ್ದ ಕಥೆಗಳು ಪ್ರತಿ ರಾತ್ರಿ ಮೆಲ್ಲಗೆ ಹೊರಹೋಗಿ ಊರು ತಿರುಗಿ ಹೊಸಕಥೆಗಳನ್ನು ಹೊತ್ತು ತರುತ್ತಿದ್ದವು ಎಂದು ನಾನು ಕಲ್ಪಿಸಿಕೊಂಡಿದ್ದೇನೆ. ಮತ್ತು ಮಾಸ್ತಿಯ ನಂತರದ ಲೇಖಕರು (ನಾನು ಕೂಡಿ ಎಲ್ಲರೂ) ಮಾಡಬೇಕಾದ ಅದನ್ನು ಸತ್ಯನಾರಾಯಣ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ನಾನು ಇಷ್ಟಪಟ್ಟಿದ್ದೇನೆ.
ಸತ್ಯನಾರಾಯಣ ಅವರ ಕಾದಂಬರಿ ಅವರ ಕಥೆಗಳಿಗಿಂತ ಹೇಗೆ ಭಿನ್ನ (ಕಾಕತಾಳೀಯವಾಗಿ ಅವರ ಕಥಾಸಂಕಲನ ನಕ್ಸಲ್ ವರಸೆ ಕೂಡಾ ಈಗಲೇ ಬಿಡುಗಡೆಯಾಗಿದೆ.) ಎನ್ನುವುದನ್ನು ಗುರುತಿಸಿಕೊಳ್ಳಲು ನಾನು ಯತ್ನಿಸಿದ್ದೇನೆ. ಅದಕ್ಕೆ ಹಿನ್ನೆಲೆ ಅವರ ಕಾದಂಬರಿ ಕಾಲಜಿಂಕೆ ಮತ್ತು ಇದು. ಅವರ ಕಥೆಗಳನ್ನು ಅವರು ಪೂರ್ಣವಾಗಿ ಕಟ್ಟಿ ಬರೆಯುತ್ತಾರೆ.

ಅವಕ್ಕೆ ಸರಿಯಾದ ಅಳತೆಯ ಕ್ಯಾನವಾಸುಗಳನ್ನು ಹರಡಿಕೊಳ್ಳುತ್ತಾರೆ. ಅಲ್ಲಿ ಯಾವುದನ್ನೂ ಅಡಕಮಾಡುವುದಿಲ್ಲ, ಏನನ್ನೂ ಆಚೆ ಚೆಲ್ಲುವಂತೆ ಹರಡುವುದೂ ಇಲ್ಲ. ಅವಕ್ಕೆ ಕ್ಲುಪ್ತತೆ ಪ್ರಾಪ್ತಿಯಾಗುವುದು ಹಾಗೆಯೇ. ಅವುಗಳ ಸಂರಚನೆಯಲ್ಲಿ ನನಗೆ ಒಡಕಂತೂ ಕಂಡೇ ಇಲ್ಲ. ಅವರ ಕಥೆಗಳು ಮಾಸ್ತಿಯವರ ಸಂಪ್ರದಾಯಕ್ಕೆ ಹೊಂದುತ್ತವೆ ಎಂದರೂ – ಅದು ಅದಷ್ಟೇ ಎಂಬ ಅಭಿಪ್ರಾಯ ಸಲ್ಲದು.

ನನಗೆ ಮುಖ್ಯವಾಗಿ ಕಾಣುವ ಒಂದು ವಿಚಾರವೆಂದರೆ ಮಾಸ್ತಿ ಮ್ಯಾಜಿಕಲ್ ರಿಯಲಿಸಂನ  ಹಾದಿಯನ್ನು ಹಿಡಿದವರಲ್ಲ. ಕಾಲದ ಜೊತೆ ಸಾಗುವುದನ್ನು ಕಥೆಗಾರಿಕೆಯ ಮತ್ತು ವಾಸ್ತವ ಪ್ರಪಂಚದಲ್ಲಿ ಏನು ಜರುಗುತ್ತಿದೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇರುವುದನ್ನು ಸತ್ಯನಾರಾಯಣ ಎಂದೂ ಬಿಡುವುದಿಲ್ಲ. ಅವರ ಗ್ರಹಿಕೆಯ ಜಗತ್ತು ವಿಸ್ತಾರವೂ, ಆಧುನಿಕವೂ ಆಗಿರುವಂತೆಯೇ ಪಾತಾಳಗರಡಿಯಂತೆ ಸಂಬಂಧಗಳ, ಪರಂಪರೆಯ ಆಳಕ್ಕಿಳಿದು ಹೆಕ್ಕಿ ತರಬಲ್ಲದ್ದೂ, ಶೋಧನಾತ್ಮಕವಾದದ್ದೂ ಆಗಿದೆ.
ಅವರ ಕಥೆಗಳು ಅವರ ಕಾದಂಬರಿಗಳಿಗಿಂತ ಭಿನ್ನವಾಗಿ ಮಾತಾಡುತ್ತವೆ ಎಂದು ನನಗೆ ಅನ್ನಿಸಿದೆ. ಅವರ ಕಾದಂಬರಿಗಳ ಲೋಕ ಹಾಗೂ ಶಿಲ್ಪ ಕಥೆಗಳಿಗಿಂತ ಬೇರೆಯೇ ಎಂದೂ ನನಗೆ ತೋರಿದೆ. ಅವರು ಕಾದಂಬರಿಗಳಿಗೆ ಹಾಸುವ ಕ್ಯಾನವಾಸು ಚಿಕ್ಕದೆನ್ನಿಸುವಂತಿದೆ. ಅವಸರದ ಓದಿಗೆ ಈ ಶಿಲ್ಪದಿಂದ ಒದಗುವ ಸಂಕಟವೊಂದಿದೆ. ಗಮನ ಹಾರಿಹೋಗುವುದು ಅದರ ಸ್ವ-ಆಹ್ವಾನಿತ ತೊಂದರೆ.

ಆಧುನಿಕ ಭಾರತದ ಬಿಕ್ಕಟ್ಟೊಂದನ್ನು ಕುರಿತು ಸಂವಾದಕ್ಕೆಳೆಸುವ ಸತ್ಯನಾರಾಯಣ ಅದಕ್ಕೊಂದು ಪುರಾಣದ ವ್ಯಾಪ್ತಿಯಿರುವುದನ್ನು ಮನಗಂಡಿದ್ದಾರೆ. ಆದರೆ ಅದನ್ನು ಉದ್ದೇಶಪೂರ್ವಕವಾಗಿ ಎಪಿಟೊಮೈಸ್ ಮಾಡಿಬಿಡುತ್ತಾರೆ. ನನಗೆ ಚಿಕ್ಕಂದಿನಲ್ಲಿ ಕೇಳಿದ ಗಜೇಂದ್ರ ಮೋಕ್ಷದ ಕಥೆ ನೆನಪಿಗೆ ಬರುತ್ತದೆ: ತೆಲುಗಿನ ಅದು ಸರಿಸುಮಾರು ಹೀಗಿದೆ:
ಎಂಥ ದಯೋ ದಾಸುಲ ಪೈ
ದಂತಂಬುನ ಮಕರಂಬಟ್ಟಿ ಬಾಧಿಂಪಂಗಾ
ಶ್ರೀಕಾಂತುಡು ಚಕ್ರಮಂಪೆನು
ದಂತಾವಳಿ ರಾಜುಡಾಯ ದತ್ತಾತ್ರೇಯಾ

ಪರ್ಯಾಯ ನಿರೂಪಣಾ ಮಾಧ್ಯಮವನ್ನು ಕಂಡುಕೊಳ್ಳುವುದು ಈ ಹೊತ್ತಿನ ಭಾರತೀಯ ಭಾಷಾ ಲೇಖಕರಿಗೆಲ್ಲರಿಗೂ ಸಧ್ಯದ ತುರ್ತು ಮತ್ತು ಅಗತ್ಯವಾಗಿ ಕಂಡಿದೆ. ಸತ್ಯನಾರಾಯಣ ಅವರಿಗೆ ಸಹ ಅದರ ಅರಿವಿರುವುದು ಕಾಲಜಿಂಕೆಯಿಂದಲೇ ವೇದ್ಯವಾಗಿತ್ತು. ಈ ಬೆಳೆದ ಅಂತರದಲ್ಲಿ ಅದಕ್ಕಿಂತಲೂ ಭಿನ್ನ ಮಾರ್ಗಗಳ ಶೋಧನೆಯ ಅನಿವಾರ್ಯತೆಯನ್ನು ಅವರು ಮನಗಂಡಿರಬಹುದೆಂದು ವಿಚ್ಛೇದನ ಕಾದಂಬರಿಯ ಶಿಲ್ಪದಿಂದ ಸ್ಪಷ್ಟವಾಗಿದೆ.

ಆ ಹಾದಿಯ ಈ ಕಾದಂಬರಿಯಲ್ಲಿ ರಂಜಕ ನಿರೂಪಣೆಯ ಎಲ್ಲ ಮಾರ್ಗಗಳನ್ನೂ ಅವರು ತ್ಯಜಿಸಿಬಿಟ್ಟಿದ್ದಾರೆ. ಅಲ್ಲದೆ ಕೈಲಿ ಪೆನ್ಸಿಲ್ ಹಿಡಿದು ಪದಗಳು ತಪ್ಪದಂತೆ ನಿಲ್ಲಿಸಿ, ನಿಲ್ಲಿಸಿ ಓದಬೇಕಾದ ಅನಿವಾರ್ಯ ಸ್ವರೂಪದ ಸನ್ನದ್ದನ್ನು ಈ ಕಾದಂಬರಿಯಲ್ಲಿ ಜಾರಿಗೊಳಿಸಿದ್ದಾರೆ. ಇದು ಭಿನ್ನವಾಗಿ ಓದುವ ಕ್ರಮವನ್ನು ಬೇಡುತ್ತದೆ.

ಹಾಗಾಗಿ ಅಂತಹ ಭಿನ್ನ ಓದುಗರ ಹುಡುಕಾಟವೂ ಲೇಖಕರಿಗೆ ಅಗತ್ಯವಾಗುವುದೇನೋ ಎನ್ನುವ ಆತಂಕವನ್ನು ಕೃತಿ ಮೂಡಿಸುತ್ತದೆ. ಬಹುಶಃ ಇದು ಜಾಡಿಗೆ ಬಿದ್ದು ಬರೆಯುವುದನ್ನು ಹೊರಗಿಡುವ ಎಲ್ಲ ಲೇಖಕರಿಗೂ ಅನಿವಾರ್ಯವೂ, ಅದೇ ಸಮಯ ಆತಂಕಕಾರಿಯೂ ಆದ ವಿಚಾರವಾಗಿರಲು ಸಾಧ್ಯ.
ವಿಚ್ಛೇದನ-ಪರಿಣಯದ ಫೋಕಲ್ ಪಾಯಿಂಟ್ ಸಂಬಂಧಗಳನ್ನು ಹೆಣ್ಣಿನ ದೃಷ್ಟಿಕೋನದಿಂದ ನೋಡುವುದಾಗಿದೆ. ಆದರೆ ಇದು ಸ್ತ್ರೀವಾದಿ ನೆಲೆಯಿಂದ ಹೊರಡುವುದಲ್ಲ. ಬದಲಿಗೆ ಸ್ತ್ರೀ ಪುರುಷ ಸಂಬಂಧಗಳಲ್ಲಿ ಅಗತ್ಯವಾದ ಮನೋದೈಹಿಕ ಹೊಂದಾಣಿಕೆಗಳನ್ನು, ಆ ಸಂಬಂಧಗಳನ್ನು ಅರ್ಥಪೂರ್ಣವಾಗಿಸುವುದು ಹೇಗೆಂದು ಕುರಿತು ಯೋಚಿಸುವುದಾಗಿದೆ. ಕಾಲಕ್ರಮದ ಶತಮಾನಗಳ ಅಳತೆಯಲ್ಲಿ ನಾಗರಿಕತೆಯು ಮುಂದೆ ತಂದಿರುವ ಸುಳ್ಳುಗಳನ್ನು ಸತ್ಯನಾರಾಯಣ ವಿವೇಚಿಸುತ್ತಾರೆ.

ನಾಗರಿಕತೆಯ ಬೆಳಕಿನಲ್ಲಿ ನಮ್ಮಲ್ಲಿನ ಎಷ್ಟೋ ವಾಡೆಗಳ ಬೀಗಗಳನ್ನು ತೆರೆದು ಅಲ್ಲಿನ ಕೊಳಕು ತೊಳೆದು ಸಿಕ್ಕಿಕೊಂಡಿರುವ ಆತ್ಮಗಳ ಬಿಡುಗಡೆ ಮಾಡಬೇಕಾಗಿದೆ. ಈ ವಿಶ್ಲೇಷಣೆಯಲ್ಲಿ ಅವರ ಒಲವು ನಾಗರಿಕವಾಗಿದೆ. ಈ ಹಳೆಯದರೊಂದಿಗೆ ಸಂಬಂಧವಿರಿಕೊಂಡೂ ಅದನ್ನು ಹೇಗೆ ಸಹ್ಯವೂ, ವಿವೇಕಯುತವೂ ಆಗಿ ಮಾಡಬಹುದು ಎನ್ನುವುದರಲ್ಲಿ ಅವರ ಯೋಚನೆಯ ಬೀಜಗಳು ಮೊಳೆಯಲು ಕಾತುರವಾಗಿವೆ. ಹೊಸ ಓದಿಗೆ ಯಾವಾಗಲೂ ಮಿಡಿಯುವವರು ಗಮನಿಸಲೇಬೇಕಾದ ಕೃತಿ ಇದು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: