Skip to content
ಡಿಸೆಂಬರ್ 4, 2010 / odubazar

ಹೊಸ ಮಡಿಯ ಮೇಲೆ ಚದುರಂಗ …

-ಡಾ.ಅರುಣ್ ಜೋಳದ ಕೂಡ್ಲಿಗಿ

ಕನ್ನಡ ಜಾನಪದ

ಇತ್ತೀಚೆಗೆ ಕನ್ನಡದಲ್ಲಿ ಜಾನಪದ ಅಧ್ಯಯನ ಕುರಿತು ಬಂದ ಗಂಭೀರ ಪುಸ್ತಕಗಳಲ್ಲಿ ಕನ್ನಡದ ವಿಮರ್ಶಕರಾದ ಡಾ. ಸಿ.ಎನ್. ರಾಮಚಂದ್ರನ್ ಅವರ ಕೃತಿ ‘ಹೊಸಮಡಿಯ ಮೇಲೆ ಚದುರಂಗ’ . ಇದು ಜಗತ್ತಿನ ಇಪ್ಪತ್ತೈದು ಜನಪದ ಮಹಾಕಾವ್ಯಗಳನ್ನು ಅಧ್ಯಯನ ಮಾಡಿದ ಕೃತಿ.

ಈ ಕೃತಿಯಲ್ಲಿ ಕನ್ನಡದ ಮಲೆ ಮದೇಶ್ವರ, ಮಂಟೇಸ್ವಾಮಿ, ಹಾಲುಮತ ಮಹಾಕಾವ್ಯ, ಜುಂಜಪ್ಪ, ಕುಮಾರರಾಮ, ಕೃಷ್ಣಗೊಲ್ಲರ ಕಾವ್ಯ, ತುಳು ಭಾಷೆಯ ಸಿರಿ, ತೆಲುಗಿನ ಪಲ್ನಾಟಿ ವೀರುಲ ಕಥಾ, ತಮಿಳಿನ ಅಣ್ಣನ್ ಮಾರ್ ಕತೈ, ರಾಜಾಸ್ಥಾನಿಯಪಾಬೂಜಿ, ಅವಧಿ ಭಾಷೆಯ ಚನೈನಿ, ಟಿಬೆಟನ್ ಮಂಗೋಲಿಯನ್ ನ ಗೆಸೆರ್ ರಾಜ, ಅರಾಬಿಕ್ ನ ಅಂತರ್,ಕಿರ್ಘೀಜ್ ನ ಮನಸ್, ಫಿನಿಷ್ ನ ಕಲೆವಲ, ಮಾಲಿಯ ಸುನ್ಜಾತ, ದಕ್ಷಿಣ ಅಮೇರಿಕಾದ ಮೊಹಾವೆ ಮಹಾಕಾವ್ಯ, ಜಪಾನ್ ಐನು ಕೋಟನ್ ಉಟುನ್ನೈ ಇಷ್ಟು ಮಹಾಕಾವ್ಯಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.

ಕನ್ನಡದ ಜಾನಪದ ಮಹಾಕಾವ್ಯಗಳ ಅಧ್ಯಯನ ಕುರಿತಂತೆ ಇದೊಂದು ಮಹಾತ್ವಾಕಾಂಕ್ಷೆಯ ಕೃತಿ. ಕನ್ನಡದ ಜನಪದ ಮಹಾಕಾವ್ಯಗಳನ್ನು ಜಾಗತಿಕ ಜನಪದ ಮಹಾಕಾವ್ಯಗಳ ಜತೆ ಅಧ್ಯಯನ ಮಾಡಿರುವುದು ಈ ಕೃತಿಯ ಮೌಲ್ಯ ಹೆಚ್ಚಲು ಕಾರಣವಾಗಿದೆ. ಸಿ.ಎನ್. ಆರ್ ಅವರು ಮೂಲತಃ ಸೃಜನಶೀಲ ಸಾಹಿತ್ಯ, ವಿಮರ್ಶೆ, ಅನುವಾದ ಕ್ಷೇತ್ರದಲ್ಲಿ ಪರಿಚಿತರು. ಇವರು ಜಾನಪದ ಅಧ್ಯಯನದ ಸೆಳೆತಕ್ಕೆ ಒಳಗಾದದ್ದು ಈ ಕ್ಷೇತ್ರಕ್ಕೆ ಒಳ್ಳೆಯದೇ ಆಗಿದೆ. ಕಾರಣ ಕನ್ನಡದ ಸಾಹಿತ್ಯ ವಿಮರ್ಶೆಯು ಸಾಂಸ್ಕೃತಿಕ ವಿಮರ್ಶೆಯಾಗಿ ರೂಪಾಂತರಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಇಂತಹ ಬಹುಶಿಸ್ತೀಯ ಸೆಳೆತ ಸಹಜವಾಗಿದೆ.

ಅದು ಎಲ್ಲರೊಳಗೂ ಆಗಬೇಕಾದುದೆ. ಕನ್ನಡದಲ್ಲಿ ಶಂಬಾ ಜೋಶಿ, ಡಿ. ಆರ್.ನಾಗರಾಜ್ ಮುಂತಾದವರನ್ನು ಮೊದಲುಗೊಂಡಂತೆ, ಕೆ.ವಿ. ನಾರಾಯಣ, ಎಚ್.ಎಸ್.ಆರ್ , ರಹಮತ್ ತರೀಕೆರೆ, ರಾಜೇಂದ್ರ ಚೆನ್ನಿ , ಮೊಗಳ್ಳಿ ಗಣೇಶ್ ಮುಂತಾದವರ ಸಂಶೋಧನೆ, ವಿಮರ್ಶೆಯಲ್ಲಿ ದೇಸಿ ಚಿಂತನೆಯ ಹುಡುಕಾಟದ ನೆಲೆಗಳು ಭಿನ್ನ ದಾರಿಗಳಲ್ಲಿ ಕ್ರಮಿಸಿವೆ ಮತ್ತು ಕ್ರಮಿಸುತ್ತಿವೆ. ಅದು ಸಿ.ಎನ್. ಆರ್ ಅವರಲ್ಲಿ ಇನ್ನೊಂದು ಮಗ್ಗಲು ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ.

ಈ ಕೃತಿಯನ್ನು ಕುರಿತಂತೆ ” ಜನಪದ ಮಹಾಕಾವ್ಯಗಳನ್ನು ವಿಶ್ವಾತ್ಮಕ ನೆಲೆಯಲ್ಲಿ, ಭಾರತೀಯ ನೆಲೆಯಲ್ಲಿ, ಮತ್ತು ಸ್ಥಳೀಯ ನೆಲೆಯಲ್ಲಿ ನೋಡಿದ ಕ್ರಮಗಳಿಂದಾಗಿ ಹೊಸ ಅನುಭವಗಳು ಇಲ್ಲಿ ದೊರೆಯುತ್ತವೆ. ಬದಲಾದ ನಿ ಯೋಗಗಳಿಂದಾಗಿ ಹೊಸ ಸಾಹಿತ್ಯ ನಿರ್ಮಾಣವಾಗುವುದು, ಹೊಸ ರಂಗ ಹುಟ್ಟಿಕೊಳ್ಳುವುದು, ಗಂಡು ಹೆಣ್ಣಿನ ಸಂಬಂಧಗಳು ಪಲ್ಲಟಗೊಳ್ಳುವುದು, ಜನಾಂಗಿಕ ಅಸ್ಮಿತೆಯನ್ನು ಕಟ್ಟಿಕೊಳ್ಳುವುದು –ಹೀಗೆ ಆಧುನಿಕತೆಯ ಜಗತ್ತಿನಲ್ಲಿ ಆಧುನಿಕ ರೂಪಕಗಳು ಇಂತಹ ಮೌಖಿಕ ಮಹಾಕಾವ್ಯಗಳಿಂದ ನಿರಂತರವಾಗಿ ಹುಟ್ಟಿಕೊಳ್ಳುತ್ತಲೇ ಇರುತ್ತವೆ.

ಡಾ. ಸಿ.ಎನ್. ರಾಮಚಂದ್ರನ್ ಅವರು ಬದಲಾಗುತ್ತಿರುವ ಇಂತಹ ನಿಯೋಗಗಳನ್ನು ಮತ್ತು ರೂಪಾಂತರಗಳನ್ನು ಹಿಡಿದಿಟ್ಟಿದ್ದಾರೆ. ಮತ್ತು ನಾವು ಹೊಸದಾಗಿ ಹಿಡಿಯಲು ಅವಕಾಶ ಕಲ್ಪಿಸಿದ್ದಾರೆ” ಎಂದು ಪ್ರೊ.ಬಿ.ಎ. ವಿವೇಕ ರೈ ಅವರು ಮುನ್ನುಡಿಯಲ್ಲಿ ಹೇಳುತ್ತಾರೆ. ಇದು ಈ ಕೃತಿಯ ಪ್ರಾಮುಖ್ಯತೆಯನ್ನು ಗುರುತಿಸುತ್ತದೆ. ಮುಖ್ಯವಾಗಿ ಕನ್ನಡದಲ್ಲಿ ಜಾಗತಿಕ ಜಾನಪದ ಮಹಾಕಾವ್ಯಗಳ ಹೊಟ್ಟೆಯೊಳಗಿಂದ ಹುಟ್ಟಿದ ವ್ಯಾಖ್ಯಾನಗಳ ಮೂಲಕ ಜನಪದ ಮಹಾಕಾವ್ಯಗಳನ್ನು ಪರಿಶೀಲಿಸುವ ತೀರಾ ಸವಕಲು ವಿಶ್ಲೇಷಣಾ ವಿಧಾನವೊಂದಿತ್ತು. ಅಂತಹ ಹಳೆ ವಿಧಾನವನ್ನು ಸಿ.ಎನ್.ಆರ್ ಅವರು ಬಳಸಿಲ್ಲ ಎನ್ನುವುದು ಸಮಾಧಾನಕರ ಸಂಗತಿ. ಹಾಗಾಗಿ ಅವರ ವಿಶ್ಲೇಷಣೆಯಲ್ಲಿ ಹೊಸ ಹುಡುಕಾಟದ ಸೆಳಕುಗಳು ಕಾಣಿಸಿಕೊಳ್ಳುತ್ತವೆ.

 

ಮಹಾಕಾವ್ಯಗಳ ಕುರಿತಂತೆ ಇಂತಹ ವ್ಯಾಪಕ ಅಧ್ಯಯನದಿಂದ ಹುಟ್ಟಬಹುದಾದ ಫಲಿತಗಳು ಈ ಕೃತಿಯಲ್ಲಿ ಸಾಧ್ಯವಾಗಿಲ್ಲ.ಕಾರಣ ಇಲ್ಲಿನ ವಿಶ್ಲೇಷಣೆಯಲ್ಲಿ ಜನಪದ ಮಹಾವ್ಯಗಳ ಪರಿಚಯ, ಹೋಲಿಕೆ ಸಾಮ್ಯಗಳ ತುಲನೆಯ ಆಚೆ ಗಂಭೀರ ಒಳನೋಟಗಳು ಕಾಣುವುದಿಲ್ಲ. ಆಯಾ ಜನಪದ ಮಹಾಕಾವ್ಯಗಳು ಅಲ್ಲಲ್ಲಿನ ಸಾಂಸ್ಕೃತಿಕ ಮತ್ತು ರಾಜಕೀಯದ ಚಾರಿತ್ರಿಕ ಕಾರಣದ ಹಿನ್ನೆಯಲ್ಲಿ ಹುಟ್ಟಿರುತ್ತವೆ, ಆ ಚಾರಿತ್ರಿಕ ಹಿನ್ನೆಲೆಯ ಪರಿಚಯವಿಲ್ಲದೆ ಕೇವಲ ಮಹಾಕಾವ್ಯಗಳನ್ನು ವಿಶ್ಲೇಷಣೆಗೆ ಒಳಗು ಮಾಡಿದರೆ ಉಂಟಾಗಬಹುದಾದ ಅಪಾಯ ಈ ಕೃತಿಯಲ್ಲಿ ಕಾಣುತ್ತದೆ.

ಮುಖ್ಯವಾಗಿ ಒಟ್ಟು ಜನಪದ ಮಹಾಕಾವ್ಯಗಳ ಒಳನೇಯ್ಗೆಯಲ್ಲಿ ಇರಬಹುದಾದ ಸಮಾನ ಎಳೆ ಯಾವುದು ಎನ್ನುವುದು ಕೃತಿಯಲ್ಲಿ ಸ್ಪಷ್ಟಗೊಳ್ಳುವುದಿಲ್ಲ. ಹಾಗಾಗಿ ಇಲ್ಲಿ ವಿಮರ್ಶಾತ್ಮಕ ನೆಲೆ ಹೆಚ್ಚಾಗಿ, ಸಂಶೋಧನಾತ್ಮಕ ಅಧ್ಯಯನದ ಆಳ ಇಲ್ಲವಾಗಿದೆ. ಸಿ.ಎನ್.ಆರ್ ಕೃತಿಯ ಮೊದಲಿಗೆ ತಮ್ಮ ಅಧ್ಯಯನಕ್ಕೆ ಇರಬಹುದಾದ ಮಿತಿಗಳನ್ನು ವಿನಯದಿಂದಲೇ ಹೇಳಿಕೊಂಡಿದ್ದಾರೆ. ಅಂತೆಯೇ ಇಂತಹ ಬೃಹತ್ ಕಥನಗಳನ್ನು ಅಧ್ಯಯನಕ್ಕೆ ಆಯ್ದುಕೊಂಡಾಗ ಇರಬಹುದಾದ ಸಮಸ್ಯೆಯೂ ಇಲ್ಲಿ ಕಾಣುತ್ತದೆ.

ಇಂತಹ ಕೆಲವು ಮಿತಿಗಳಾಚೆಯೂ ಕೃತಿಯ ಹೆಚ್ಚುಗಾರಿಕೆಯ ದೃಷ್ಟಿಯಿಂದ ಇದೊಂದು ಮಹತ್ವದ ಕೃತಿಯಾಗಿದೆ. ಜನಪದ ಮಹಾಕಾವ್ಯದ ಅಧ್ಯಯನಕಾರರಿಗೊಂದು ಉತ್ತಮ ಪ್ರವೇಶಿಕೆಯನ್ನೂ ಇದು ಒದಗಿಸುತ್ತದೆ. ಡಾ. ಸಿ.ಎನ್. ರಾಮಚಂದ್ರನ್ ಅವರ ಅಪಾರ ಶ್ರಮ, ಶ್ರದ್ಧೆ ಈ ಅಧ್ಯಯನದಲ್ಲಿ ಕಾಣುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಅವರು ಅಭಿನಂದನಾರ್ಹರು

 

  1. vijayaraghavan / ಡಿಸೆ 6 2010 9:44 ಅಪರಾಹ್ನ

    ಸಿ.ಎನ್. ಆರ್ ಅವರು ಮೂಲತಃ ಸೃಜನಶೀಲ ಸಾಹಿತ್ಯ, ವಿಮರ್ಶೆ, ಅನುವಾದ ಕ್ಷೇತ್ರದಲ್ಲಿ ಪರಿಚಿತರು. ಇವರು ಜಾನಪದ ಅಧ್ಯಯನದ ಸೆಳೆತಕ್ಕೆ ಒಳಗಾದದ್ದು ಈ ಕ್ಷೇತ್ರಕ್ಕೆ ಒಳ್ಳೆಯದೇ ಆಗಿದೆ. ಕಾರಣ ಕನ್ನಡದ ಸಾಹಿತ್ಯ ವಿಮರ್ಶೆಯು ಸಾಂಸ್ಕೃತಿಕ ವಿಮರ್ಶೆಯಾಗಿ ರೂಪಾಂತರಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಇಂತಹ ಬಹುಶಿಸ್ತೀಯ ಸೆಳೆತ ಸಹಜವಾಗಿದೆ. this comment I find highly justified as I know CNR is a great absorber and developer. I am eager to read the book

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: