Skip to content
ಡಿಸೆಂಬರ್ 17, 2010 / odubazar

ಟಿ .ಎನ್ .ವಾಸುದೇವ ಮೂರ್ತಿ ಅವರ ಹುಚ್ಚು ತನವೇ ಅನುಗ್ರಹ ನೀಷೆ…

ಟಿ .ಎನ್ .ವಾಸುದೇವ ಮೂರ್ತಿ ಅವರ ‘ಹುಚ್ಚು ತನವೇ ಅನುಗ್ರಹ ನೀಷೆ’ ಪುಸ್ತಕ ಹೊರ ಬಂದಿದೆ . ನೀಷೆ ಯನ್ನು ಓದುಗರಿಗೆ ಅಪ್ತವಾಗುವಂತೆ ಪರಿಚಯಿಸಿದ ಹಾಗು ಅದರ ಬಗ್ಗೆ ಅಧ್ಯಯನಕ್ಕೆ ನಮ್ಮನ್ನು ಪ್ರೇರೇಪಿಸುವಂತಹ ಪುಸ್ತಕ ಇದಾಗಿದೆ . ಅಹರ್ನಿಶಿ ಪುಸ್ತಕ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿದೆ.

ದೇವರನ್ನು ಅರಸುತ್ತಾ ಹೋದ ಹುಚ್ಚ

ನೀಷೆಯ ಗೇ ಸೈನ್ಸ್’ ಕೃತಿಯಲ್ಲಿ ಹಗಲು ಹೊತ್ತಿನಲ್ಲೆ ದೀಪ ಬೆಳಗಿಸಿಕೊಂಡು ಜನಜಂಗುಳಿಯ ನಡುವೆ ದೇವರನ್ನು ಅರಸುತ್ತಾ ಹೋದ ಹುಚ್ಚನೊಬ್ಬನನ್ನು ಕಂಡು ಎಲ್ಲರು ನಗುತ್ತಾರೆ. ಆ ಹುಚ್ಚ `ದೇವರು ಸತ್ತಿದ್ದಾನೆ’ ಎಂದರೆ ಯಾರೂ ಪ್ರತಿಕ್ರಿಯಿಸುವುದಿಲ್ಲ. ತನ್ನ ಕೈಲಿದ್ದ ಹಣತೆಯನ್ನೆಸೆದು ಆತ `ನಾನು ಬಹುಬೇಗ ಬಂದುಬಿಟ್ಟೆ, ನನ್ನ ಸರದಿ ಇನ್ನೂ ಬರಲಿಲ್ಲವೇನೋ’ ಎಂದುಕೊಳ್ಳುತ್ತಾನೆ.

ಆ ಹುಚ್ಚ ನೀಷೆಯೇ? ತನ್ನ ಜೀವಿತಾವಧಿಯಲ್ಲಿ ವಿದ್ವತ್ ವಲಯದಲ್ಲಿ ಅಷ್ಟೊಂದು ಪ್ರಚಾರ ಪಡೆಯದ ನೀಷೆ ತನ್ನ ಸರದಿಗೆ ಮುನ್ನವೇ ಬಂದು ಹೋದನೆ? ಹಗಲು ಹೊತ್ತಿನಲ್ಲೇ ದೀಪವೊಂದನ್ನು ಕೈಯಲ್ಲಿ ಹಿಡಿದುಕೊಂಡು ಆತ ಯಾವ ದೇವರನ್ನು ಅರಸುತ್ತಿದ್ದ? ಯಾವ ದೇವರು ಸತ್ತ ವಿಚಾರವನ್ನು ಸೂಚಿಸುತ್ತಿದ್ದ?.

`ತಾನು ಏನಾಗಿಲ್ಲವೋ, ಅದುವೇ ನನ್ನ ಪಾಲಿನ ದೇವರು’ ಎಂದು ಝರತುಷ್ಟ್ರನ ಮುಖಾಂತರ ನುಡಿದ ನೀಷೆ ತಾನಲ್ಲದ ತನ್ನನ್ನು ಅರಸುತ್ತಿದ್ದನೇ? ಅದನ್ನೇ `ಅತಿಮಾನವ’ ಎಂದು ಕರೆದನೇ?

ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ ನೆರಳಿನಲ್ಲಿ ಬೆಳೆದ ನೀಷೆಯೊಳಗಿದ್ದದು ಹೆಂಗರಳು. ಬಾಲ್ಯದಿಂದಲೇ ನೀಷೆ ತನ್ನ ಸುತ್ತಲು ಇದ್ದ ತೋಟ ಲೂಟಿ ಮಾಡುವ, ಹಕ್ಕಿಯ ಗೂಡುಗಳನ್ನು ಕದಿಯುವ, ಸೈನಿಕ ಆಟ ಆಡುವ, ಸುಳ್ಳು ಹೇಳುವ ಹುಡುಗರನ್ನು ತಿರಸ್ಕಾರ ಭಾವದಿಂದ ನೋಡುತ್ತಿದ್ದ. ಈ ಎಲ್ಲವುಗಳಿಂದ ದೂರವುಳಿದು ಬೈಬಲ್ ಓದುವುದನ್ನು ಆನಂದಿಸುತ್ತಿದ್ದ. ಅಲ್ಲದೆ ಕೇಳುಗರ ಕಣ್ಣಲ್ಲಿ ಮಂಜು ಹನಿ ಮೂಡುವಷ್ಟು ಸೊಗಸಾಗಿ ಓದಿ ಹೇಳುತ್ತಿದ್ದ.

ಹೀಗೊಮ್ಮೆ ನೀಷೆ ಹೇಳಿದ ಗೇಯಸ್ ಮ್ಯೂಸಿಯಸ್ ಕಿವೊಲನ ಕಥೆಯನ್ನು ಆತನ ಮಿತ್ರರು ನಂಬದೇ ಹೋದಾಗ ಬೆಂಕಿಕಡ್ಡಿಯ ಕಟ್ಟೊಂದನ್ನು ಹೊತ್ತಿಸಿ ಅದು ಆರಿಹೋಗುವ ತನಕ ತನ್ನ ಅಂಗೈ ಮೇಲಿರಿಸಿಕೊಂಡಿದ್ದನಂತೆ! ತನ್ನನ್ನು ಗಟ್ಟಿಗೊಳಿಸಿಕೊಂಡು ಆದರ್ಶ ಗಂಡುತನ ಸಿದ್ಧಿಸಿಕೊಳ್ಳುವ ತುಡಿತ ಆತನೊಳಗೆ ಬಹಳವೇ ಇತ್ತು.

ನೀಷೆಯನ್ನು ಅವನ ಇಪ್ಪತ್ಮೂರನೇ ವಯಸ್ಸಿಗೆ ಒತ್ತಾಯ ಪೂರ್ವಕವಾಗಿ ಸೈನ್ಯಕ್ಕೆ ಸೇರಿಸಲಾಯಿತು. ಆದರೆ ಅಲ್ಲಿ ಕುದುರೆಯಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದರ ಪರಿಣಾಮವಾಗಿ ಸೈನ್ಯವನ್ನು ತೊರೆಯಬೇಕಾಯಿತು. ನಂತರದಲ್ಲಿ ಆತ ಸೈನ್ಯ ಮತ್ತು ಸೈನಿಕರನ್ನು ಬಹಳ ಆರಾಧ್ಯ ಭಾವದಿಂದ ನೋಡಲಾರಂಭಿಸಿದ. ಏಕೆಂದರೆ ಅವನಿಗೆ ಸೈನಿಕನಾಗಲು ಸಾಧ್ಯವಿರಲಿಲ್ಲ. ಕೆಲವು ವರ್ಷಗಳ ಬಳಿಕ ಅಶ್ವಸೈನ್ಯವೊಂದರ ಪಥಸಂಚಲನ ಮತ್ತು ಪ್ರದರ್ಶನ ನೋಡಿದ ನೀಷೆ ತನ್ನ ವಿಚಾರ ಯಾವ ರೂಪ ತಾಳಬೇಕೆಂಬ ಸ್ಪಷ್ಟತೆ ಕಂಡುಕೊಂಡ. `ಪ್ರಪ್ರಥಮ ಬಾರಿಗೆ ನನಗನ್ನಿಸಿತು ಅಸ್ತಿತ್ವಕ್ಕಾಗಿ ಹೋರಾಡುವುದರಲ್ಲಿ ಜೀವಿತದ ಸಂಕಲ್ಪ ವ್ಯಕ್ತಗೊಳ್ಳುವುದಿಲ್ಲ. ಬದಲಾಗಿ ಅದು ವ್ಯಕ್ತಗೊಳ್ಳುವುದು ಯುದ್ಧ ಸಂಕಲ್ಪ, ಶಕ್ತಿ ಸಂಕಲ್ಪ ಹಾಗೂ ಅಧೀನ ಪಡಿಸಿಕೊಳ್ಳುವ ಸಂಕಲ್ಪದಲ್ಲಿ. ನಂತರದಲ್ಲಿ ನಸರ್್ ಆಗಿ ಸೈನ್ಯ ಸೇರಿದ ನೀಷೆ ರಕ್ತ ನೋಡಲಾಗದೆ ಅನಾರೋಗ್ಯಕ್ಕೆ ಒಳಗಾದ.

ಹೀಗೆ ತಾನಲ್ಲದ ತಾನಾಗಲು ಹೊರಟ ನೀಷೆ `ದೇವರು ಸತ್ತ’ ಎಂದು ಘೋಷಿಸಿ `ಅತಿಮಾನವ’ ಎಂಬ ಪರ್ಯಾಯ  ದೇವರನ್ನು ಸೃಷ್ಟಿಸಿದ್ದು ಆಶ್ಚರ್ಯಕರವೇನಲ್ಲ. ಈ `ಅತಿಮಾನವ’ ಕಲ್ಪನೆಯನ್ನು ಹಿಟ್ಲರ್ ಅರ್ಥೈಸಿಕೊಂಡ  ರೀತಿ ಜಗತ್ತನ್ನೇ ನಡುಗಿಸಿತು. ತನ್ನನ್ನು ತಾನೇ `ಅತಿಮಾನವ’ ಎಂದುಕೊಂಡ ಹಿಟ್ಲರ್ ನೀಷೆಯಂತೆ ದುರ್ಬಲತೆಯನ್ನು ತುಚ್ಚವಾಗಿ ಕಾಣುತ್ತಿದ್ದ. ನೀಷೆಯಂತೆ ಸಾಮಾಜಿಕ ಮೌಲ್ಯಗಳನ್ನು ಪುರ್ನನವೀಕರಿಸಿ ಅಗ್ರೆಸ್ಸಿವ್ ಆದ ಮೂಲಪ್ರಕೃತಿಯನ್ನು ಬೆಂಬಲಿಸುವ ಮೌಲ್ಯಗಳನ್ನು ಸ್ಥಾಪಿಸಬೇಕೆಂದು ನಿರ್ಧರಿಸಿ ಕಾರ್ಯಾಚರಣೆಗೆ ಇಳಿದ. ನೀಷೆಯ `ದಸ್ ಸ್ಪೋಕ್ ಝರತುಷ್ಟ್ರ’ ಕೃತಿಯನ್ನು ತನ್ನ ಸೈನಿಕರಿಗೆ ಹಂಚಿದ ಹಿಟ್ಲರ್, ನೀಷೆ ಸಂಗ್ರಹಾಲಯಕ್ಕೆ ಆಗಾಗ ಭೇಟಿ ನೀಡಿ ನೀಷೆಯ ಮೂರ್ತಿಯ ಪಕ್ಕದಲ್ಲಿ ನಿಂತು ತನ್ನ ಫೋಟೊ ತೆಗೆಸಿಕೊಳ್ಳುತ್ತಿದ್ದನಂತೆ. ಡೇವಿಡ್ ಐರ್ವಿನ್ ಎಂಬ ಹಿಟ್ಲರನ ಸೆಕ್ರೆಟರಿ ಹಿಟ್ಲರ್ ಉಪಯೋಗಿಸುತ್ತಿದ್ದ ವಾಕಿಂಗ್ ಸ್ಟಿಕ್ ಹಿಂದೊಮ್ಮೆ ನೀಷೆ ಬಳಸುತ್ತಿದ್ದದಾಗಿತ್ತು ಎಂದು ಹೇಳಿಕೆ ನೀಡಿದ್ದಿದೆ. ನೀಷೆ ತನ್ನ `ಅತಿಮಾನವ’ನನ್ನು ಕಲ್ಪಿಸಿಕೊಳ್ಳುವಾಗ ಹಿಟ್ಲರನಂತಹ ವ್ಯಕ್ತಿಯನ್ನು ಕಲ್ಪಿಸಿಕೊಂಡಿರಲಿಲ್ಲ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರಾದರೂ ಹಿಟ್ಲರ್

ತನಗೆ ಬೇಕಾದ ನೀಷೆಯನ್ನು ಅರ್ಥೈಸಿ ಕೊಂಡಿದ್ದು ಹಾಗೂ ಬಳಸಿಕೊಂಡಿದ್ದು ಸತ್ಯ ಇದಕ್ಕೆ ನೀಷೆಯ ತಂಗಿ ಎಲಿಜಬತ್ ಸಹ ಜವಾಬ್ದಾರಳು. ನೀಷೆಯ ಝರತುಷ್ಟ್ರ ತನ್ನ ಸೃಷ್ಟಿಕರ್ತನ ಕೈ ಮೀರಿ ಆಶಯ ಮೀರಿ ಉಪಯೋಗಿಸಲ್ಪಟ್ಟ.

ಈ ಝರತುಷ್ಟ್ರ ಯಾರು? ಕ್ರಿಸ್ತಪೂರ್ವ 11 ಮತ್ತು 10 ನೇ ಶತಮಾನದ ನಡುವೆ ಇದ್ದನೆಂದು ನಂಬಲಾಗಿರುವ ಇರಾನಿ ಪ್ರವಾದಿಯೇ ಝರತುಷ್ಟ್ರ. ಝೋರಾಷ್ಟ್ರಿಯನಿಸಮ್ನ ಸ್ಥಾಪಕ ಈತ. ನೀಷೆ ಆತನಿಗೆ ಗೌರವ ಸಲ್ಲಿಸುವುದಕ್ಕಾಗಿ ಆತನ ಹೆಸರು ಹೊತ್ತ ವ್ಯಕ್ತಿಯನ್ನು ತನ್ನ ಕೃತಿಯಲ್ಲಿ ಸೃಷ್ಟಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದಾನೆ. `ಆತನ ಬೋಧನೆಯಲ್ಲೇ ಸತ್ಯವನ್ನು ಅತ್ಯುನ್ನತ ಧರ್ಮವೆಂದು ತೊರಿಸಲಾಗಿರುವುದು’ ಎನ್ನುವ ನೀಷೆ ಝರತುಷ್ಟ್ರನ ನೈತಿಕತೆಯನ್ನು ಮೀರಲು ಜರತುಷ್ಟ್ರನ ಸತ್ಯಪಥ ಹಿಡಿದು ಝರತುಷ್ಟ್ರನನ್ನು ಪುನರ್ ರಚಿಸಿ, ಪುನರ್ ವ್ಯಾಖ್ಯಾನಿಸುತ್ತಾನೆ. ಹಿಟ್ಲರ್ ಕೈಲಿ ನಡೆದದ್ದು ಒಂದು ರೀತಿಯಲ್ಲಿ ಪುನರ್ ವ್ಯಾಖ್ಯಾನವೇ ಎನ್ನಬಹುದಾಗಿದೆ. ಅದೇ ಹಿಟ್ಲರನನ್ನು ತನ್ನ`ಗ್ರೇಟ್ ಡಿಕ್ಟೇಟರ್’ ಚಿತ್ರದಲ್ಲಿ ಅಣಕಿಸುವ ಚಾಪ್ಲಿನ್ ಆ ಸಿನಿಮಾದ ಕೊನೆಯಲ್ಲಿ ಮಾಡುವ ಭಾಷಣ ಹಿಟ್ಲರ್ ತನ್ನ ಸೈನಿಕರಿಗೆ ಹಂಚಿದ `ದಸ್ ಸ್ಪೋಕ್ ಝರತುಷ್ಟ್ರ’ ದ `ಹೊಸ ಪ್ರತಿಮೆ’ ಎಂಬ ಅಧ್ಯಾಯವನ್ನು ನೆನಪಿಸುವಂತಿದೆ.

ಝೊಹರಾಷ್ಟ್ರಿಯನಿಸಮ್ ಮತದವರು ಪೂಜಿಸುವುದು ಅಹುರ್ ಮಜ್ಡಾನನ್ನು. ಆತ ಸತ್ಯವನ್ನೇ ಎತ್ತಿಹಿಡಿಯುವಾತ ಎಂದು. ಅಲ್ಲಿ ಪೂಜನೀಯವಾದ ಅಹುರ್ ನಮ್ಮಲ್ಲಿ ಅಸುರ ಆಗಿದ್ದಾನೆ ಎಂಬ ಅಭಿಪ್ರಾಯವಿದೆ. ಅಹುರ್ ಅಸುರನಾಗುವುದು, ಝರತುಷ್ಟ್ರ ನೀಷೆಯ ಮುಖಾಂತರ ಅನೈತಿಕತೆಯನ್ನು ಎತ್ತಿಹಿಡಿಯುವುದು, ಹಿಟ್ಲರ್ ತನಗೆ ಬೇಕಾದಂತೆ ನೀಷೆಯ ಬರವಣಿಗೆಯನ್ನು ಬಳಸಿಕೊಳ್ಳುವುದು, ಚಾಪ್ಲಿನ್ ಹಿಟ್ಲರನನ್ನು ಅಣಕವಾಡುತ್ತ ಅವನ ಬಾಯಿಂದ ಝರತುಷ್ಟ್ರನ ಮಾತುಗಳನ್ನು ನೆನಪಿಸುವುದು ಇವೆಲ್ಲವು ನನ್ನನ್ನು ಚಕಿತಗೊಳಿಸುತ್ತವೆ. ಅಷ್ಟಲ್ಲದೆ `ದಸ್ ಸ್ಪೋಕ್ ಝರತುಷ್ಟ್ರ’ ಕೃತಿಯನ್ನು ನೀಷೆ ರಚಿಸಿರುವುದು ಬೈಬಲ್ ಶೈಲಿಯಲ್ಲಿ.

ಇಂಥ ವಿರೋಧ `ದಸ್ ಸ್ಪೋಕ್ ಝರತುಷ್ಟ್ರ’ ಕೃತಿಯೊಳಗೂ ಇದೆ ಎಂದು ವಿಮರ್ಶಕರ ಅಭಿಪ್ರಾಯ. `ಮೊದಲಿಗನಾಗಿರಬೇಕು’, `ಉಳಿದವರನ್ನು ಹಿಮ್ಮೆಟ್ಟಬೇಕು’, ಯುದ್ಧವನ್ನು ಸಾರುವ ಈ ಕೃತಿ ಸ್ವನಾಶ, ತ್ಯಾಗವನ್ನು (ಅತಿಮಾನವ ಮಟ್ಟಕ್ಕೇರಲು) ಪ್ರತಿಪಾದಿಸುತ್ತದೆ… ಹೀಗೆ.

ನೀಷೆ ಝರುತುಷ್ಟ್ರನನ್ನು ನೆನಪಿಸಿಕೊಳ್ಳುವುದು ಸತ್ಯದತ್ತ ಸಾಗಲು. ಝರತುಷ್ಟ್ರ ಸತ್ಯವನ್ನು ಪ್ರತಿಪಾದಿಸುವಾತ ಎಂದು. ಇದು ನೀಷೆಗೆ ಸತ್ಯದ ಬಗ್ಗೆ ಇರುವ ನಿಷ್ಟೆ!ಯೂ ಹೌದು. 1879 ರಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಕುಸಿದ ನೀಷೆ ತನ್ನ ಸಾವು ಸಮೀಪದಲ್ಲಿದೆ ಎಂದು ಭಾವಿಸಿ ತನ್ನ ತಂಗಿಯ ಕೈ ಹಿಡಿದು `ನಾನು ಸತ್ತಾಗ ನನ್ನ ಶವದ ಬಳಿ ಕೇವಲ ಆತ್ಮೀಯರು ಮಾತ್ರ ಇರುವಂತೆ ನೋಡಿಕೋ. ಕುತೂಹಲಕ್ಕಾಗಿ ಬರುವ ಜನ ಸಮೂಹಕ್ಕೆ ಅವಕಾಶ ಮಾಡಿಕೊಡಬೇಡ. ಯಾವ ಪುರೋಹಿತನೂ ನನ್ನ ಶವ ಪೆಟ್ಟಿಗೆಯ ಬಳಿ ನಿಂತು ಯಾವುದೇ ರೀತಿಯ ಅಸತ್ಯ ನುಡಿಯದಿರಲಿ. ಒಬ್ಬ ನಿಷ್ಟಾವಂತ ಪೇಗನ್ ಆಗಿಯೇ ಮಣ್ಣಾಗುವಂತೆ ನೋಡಿಕೊ’ ಎಂದು ಮಾತು ಪಡೆದಿದ್ದನಂತೆ.

ತಾನು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿಲ್ಲ ಎಂದು ಆತ ಭಾವಿಸಿದ್ದರೂ ಸಾವಿಗೆ ಹತ್ತಿರವಾಗುತ್ತಿದ್ದಂತೆ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದ. ಹುಚ್ಚುತನವನ್ನೇ ಅನುಗ್ರಹ ಎಂದು ತಿಳಿದಿದ್ದ ನೀಷೆ ತನ್ನ ದೇವರು ಸತ್ತಿದ್ದಾನೆ ಎಂಬ ಘೋಷ ವಾಕ್ಯವನ್ನು

ಹೊರಡಿಸುವುದು ಒಬ್ಬ ಹುಚ್ಚನಿಂದಲೇ. ಆದರೂ ತನ್ನ ಹುಚ್ಚುತನವನ್ನು ಯಾಕೆ ನಿರಾಕರಿಸತೊಡಗಿದ? ತಾನಲ್ಲದ ತಾನಾಗುವ ಹಂಬಲ ಹುಚ್ಚುತನದೊಳಗಡೆಯೂ, ಸಾವಿನ ಸಮ್ಮುಖದಲ್ಲಿಯೂ ಆತನಲ್ಲಿದ್ದಿತೇ?

ತನ್ನನ್ನು ತಾನೇ `ಅನೈತಿಕ’ ಎಂದು ಘೋಷಿಸಿಕೊಂಡ ನೀಷೆಗೆ ತಾನು ಸತ್ತಬಳಿಕ ತನ್ನನ್ನು `ಪವಿತ್ರಾತ್ಮ’ ಎಂದು ಜನ ಕರೆಯಬಹುದೆಂಬ ಆತಂಕ ಕಾಡುತ್ತಿತ್ತು. ಆತನ ಬಾಲ್ಯದಲ್ಲೇ ಆತನ ಗೆಳೆಯರು ಆತನನ್ನು `ಮಂದಿರದೊಳಗಿನ ಏಸು’ ಎಂದು ಅಣಕಿಸುತ್ತಿದ್ದರಂತೆ. ಮಂದಿರದೊಳಗಿನ ಏಸು ದೇವರು ಸತ್ತ ಸುದ್ದಿಯನ್ನು ತರುವುದು, ದೇವರು ಸತ್ತ ಸುದ್ದಿಯನ್ನು ತಂದಾತ ಪವಿತ್ರಾತ್ಮ ಆಗುವುದು ಎಂಥ ವಿಪರ್ಯಾಸ !

ಮಂದಿರದೊಳಗಿನಿಂದ ಬಂದು ದೇವರು ಸತ್ತ ಸುದ್ದಿ ನೀಡಿದ ಅನೈತಿಕ ಪವಿತ್ರಾತ್ಮನನ್ನು ಇದೀಗ ಕನ್ನಡ ಲೋಕಕ್ಕೆ ಪರಿಚಯಿಸಲಾಗುತ್ತಿದೆ. ಓ. ಎನ್. ವಾಸುದೇವಮೂತರ್ಿಯವರು ಬಹಳ ಪ್ರೀತಿಯಿಂದ ನೀಷೆ ಹಾಗೂ ನೀಷೆಯ ಲೋಕವನ್ನು ಕನ್ನಡಕ್ಕೆ ತಂದಿದ್ದಾರೆ. ಅವರ ಈ ಅನುವಾದ ಆಪ್ತವಾಗಿದೆ. ನೀಷೆ ಬಳಸುವ ascetic ideal ಪದಕ್ಕೆ ಸಮನಾರ್ಥಕವಾಗಿ ವಾಸುದೇವಮೂತರ್ಿಯವರು ತಪಶ್ಚರಣ ಎಂಬ ಪದವನ್ನು ಬಳಸಿದ್ದಾರೆ. ಈ ಪದದ ಮಾಧುರ್ಯಕ್ಕೆ ಮನಸೋತು ಅದರ ಬೇರು ಅರಸುತ್ತಾ ಹೋದಾಗ(ಹಿರಿಯ ಮಿತ್ರ ಮಹಾಲಿಂಗಭಟ್ಟರ ಕೈ ಹಿಡಿದು) ಸಿಕ್ಕಿದ್ದು ಪಂಪ. ಬಾಹುಬಲಿಯ ತಪಸ್ಸನ್ನು ವರ್ಣಿಸುವಾಗ ಪಂಪ ಬಳಸುವುದು ಇದೇ ತಪಶ್ಚರಣ ಪದವನ್ನಂತೆ.

ನೀಷೆ ತನ್ನ ಆತ್ಮ ಚರಿತ್ರೆಯಲ್ಲಿ ತನ್ನ ಬರವಣಿಗೆಗಳ ಕುರಿತು `ಇವುಗಳನ್ನು ಓದಲು ಸಿದ್ಧತೆ ಇಲ್ಲವಾದಲ್ಲಿ ಇವು ಪ್ರಾಣ ಹಿಂಡಬಲ್ಲವು’ ಎನ್ನುತ್ತಾನೆ. ಇಂಥ ಪ್ರಾಣ ಹಿಂಡಬಲ್ಲ ನೀಷೆಯನ್ನು ನಮಗೆ ಆಪ್ತವಾಗುವಂತೆ ಪರಿಚಯಿಸಿ ಮತ್ತಷ್ಟು ಆಳವಾದ ನೀಷೆಯ ಅಧ್ಯಯನಕ್ಕೆ ನಮ್ಮನ್ನು ಸಿದ್ಧಪಡಿಸುವ ಪುಸ್ತಕ ಇದಾಗಿದೆ. ಇಂಥದೊಂದು ಕೃತಿಯನ್ನು ಕನ್ನಡ ಲೋಕಕ್ಕೆ ನೀಡಿದ ಲೇಖಕ ವಾಸುದೇವ ಮೂರ್ತಿ ಹಾಗೂ ಪ್ರಕಟಿಸುತ್ತಿರುವ ಅಹರ್ನಿಶಿ  ಬಳಗಕ್ಕೆ ನನ್ನ ಅಭಿನಂದನೆಗಳು ಸಲ್ಲುತ್ತವೆ.

-ಸಂವರ್ಥ `ಸಾಹಿಲ್’

Advertisements
  1. Ramrsh H / ಡಿಸೆ 18 2010 10:02 ಫೂರ್ವಾಹ್ನ

    The German Philosopher Nietzsche should be pronounced as ನೀಚ್ಹ ಅಥವಾ ನೀಚೀ
    ಈ ನೀಷೆ ಅನ್ನುವ ಪದ ಎಲ್ಲಿಂದ ಬಂತು?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: