Skip to content
ಡಿಸೆಂಬರ್ 8, 2010 / odubazar

ಬಂದಿದೆ ವಿಳಾಸ ಇಲ್ಲದವರ ಹುಡುಕುತ್ತ

ಪತ್ರಕರ್ತ ಗವಿಸಿದ್ದ ಬಿ ಹೊಸಮನಿ ಅವರ ವಿಳಾಸ ಇಲ್ಲದವರ ಹುಡುಕುತ್ತ ಕಥಾ ಸಂಕಲನ ಪುಸ್ತಕ ಇತ್ತೀಚೆಗೆ ಧಾರವಾಡ ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಸಾಹಿತ್ಯ ಭವನದಲ್ಲಿ ಬಿಡುಗಡೆ ಗೊಂಡಿತು .

ಹಿರಿಯ ಕತೆಗಾರ ಅಮರೇಶ ನುಗಡೋಣಿ, ಕಥೆಗಾರರಾದ ಸರ್ಜಾಶಂಕರ ಹರಳಿಮಠ, ಅಬ್ಬಾಸ ಮೇಲಿನಮನಿ, ಸುನಂದಾ ಪ್ರಕಾಶ ಕಡಮೆ, ಅರುಣ ಜೋಳದ ಕೂಡ್ಲಿಗಿ, ಪತ್ರಕರ್ತ ಕೆ.ಕರಿಸ್ವಾಮಿ, ಪ್ರೊ.ಅಶೋಕ ಶೆಟ್ಟರ್, ಬಸು ಬೇವಿನಗಿಡದ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು

ಇನ್ನಷ್ಟು ಫೋಟೋಗಳು : ಅವಧಿ


Advertisements
ಡಿಸೆಂಬರ್ 4, 2010 / odubazar

ಹೊಸ ಮಡಿಯ ಮೇಲೆ ಚದುರಂಗ …

-ಡಾ.ಅರುಣ್ ಜೋಳದ ಕೂಡ್ಲಿಗಿ

ಕನ್ನಡ ಜಾನಪದ

ಇತ್ತೀಚೆಗೆ ಕನ್ನಡದಲ್ಲಿ ಜಾನಪದ ಅಧ್ಯಯನ ಕುರಿತು ಬಂದ ಗಂಭೀರ ಪುಸ್ತಕಗಳಲ್ಲಿ ಕನ್ನಡದ ವಿಮರ್ಶಕರಾದ ಡಾ. ಸಿ.ಎನ್. ರಾಮಚಂದ್ರನ್ ಅವರ ಕೃತಿ ‘ಹೊಸಮಡಿಯ ಮೇಲೆ ಚದುರಂಗ’ . ಇದು ಜಗತ್ತಿನ ಇಪ್ಪತ್ತೈದು ಜನಪದ ಮಹಾಕಾವ್ಯಗಳನ್ನು ಅಧ್ಯಯನ ಮಾಡಿದ ಕೃತಿ.

ಈ ಕೃತಿಯಲ್ಲಿ ಕನ್ನಡದ ಮಲೆ ಮದೇಶ್ವರ, ಮಂಟೇಸ್ವಾಮಿ, ಹಾಲುಮತ ಮಹಾಕಾವ್ಯ, ಜುಂಜಪ್ಪ, ಕುಮಾರರಾಮ, ಕೃಷ್ಣಗೊಲ್ಲರ ಕಾವ್ಯ, ತುಳು ಭಾಷೆಯ ಸಿರಿ, ತೆಲುಗಿನ ಪಲ್ನಾಟಿ ವೀರುಲ ಕಥಾ, ತಮಿಳಿನ ಅಣ್ಣನ್ ಮಾರ್ ಕತೈ, ರಾಜಾಸ್ಥಾನಿಯಪಾಬೂಜಿ, ಅವಧಿ ಭಾಷೆಯ ಚನೈನಿ, ಟಿಬೆಟನ್ ಮಂಗೋಲಿಯನ್ ನ ಗೆಸೆರ್ ರಾಜ, ಅರಾಬಿಕ್ ನ ಅಂತರ್,ಕಿರ್ಘೀಜ್ ನ ಮನಸ್, ಫಿನಿಷ್ ನ ಕಲೆವಲ, ಮಾಲಿಯ ಸುನ್ಜಾತ, ದಕ್ಷಿಣ ಅಮೇರಿಕಾದ ಮೊಹಾವೆ ಮಹಾಕಾವ್ಯ, ಜಪಾನ್ ಐನು ಕೋಟನ್ ಉಟುನ್ನೈ ಇಷ್ಟು ಮಹಾಕಾವ್ಯಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.

ಕನ್ನಡದ ಜಾನಪದ ಮಹಾಕಾವ್ಯಗಳ ಅಧ್ಯಯನ ಕುರಿತಂತೆ ಇದೊಂದು ಮಹಾತ್ವಾಕಾಂಕ್ಷೆಯ ಕೃತಿ. ಕನ್ನಡದ ಜನಪದ ಮಹಾಕಾವ್ಯಗಳನ್ನು ಜಾಗತಿಕ ಜನಪದ ಮಹಾಕಾವ್ಯಗಳ ಜತೆ ಅಧ್ಯಯನ ಮಾಡಿರುವುದು ಈ ಕೃತಿಯ ಮೌಲ್ಯ ಹೆಚ್ಚಲು ಕಾರಣವಾಗಿದೆ. ಸಿ.ಎನ್. ಆರ್ ಅವರು ಮೂಲತಃ ಸೃಜನಶೀಲ ಸಾಹಿತ್ಯ, ವಿಮರ್ಶೆ, ಅನುವಾದ ಕ್ಷೇತ್ರದಲ್ಲಿ ಪರಿಚಿತರು. ಇವರು ಜಾನಪದ ಅಧ್ಯಯನದ ಸೆಳೆತಕ್ಕೆ ಒಳಗಾದದ್ದು ಈ ಕ್ಷೇತ್ರಕ್ಕೆ ಒಳ್ಳೆಯದೇ ಆಗಿದೆ. ಕಾರಣ ಕನ್ನಡದ ಸಾಹಿತ್ಯ ವಿಮರ್ಶೆಯು ಸಾಂಸ್ಕೃತಿಕ ವಿಮರ್ಶೆಯಾಗಿ ರೂಪಾಂತರಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಇಂತಹ ಬಹುಶಿಸ್ತೀಯ ಸೆಳೆತ ಸಹಜವಾಗಿದೆ.

ಅದು ಎಲ್ಲರೊಳಗೂ ಆಗಬೇಕಾದುದೆ. ಕನ್ನಡದಲ್ಲಿ ಶಂಬಾ ಜೋಶಿ, ಡಿ. ಆರ್.ನಾಗರಾಜ್ ಮುಂತಾದವರನ್ನು ಮೊದಲುಗೊಂಡಂತೆ, ಕೆ.ವಿ. ನಾರಾಯಣ, ಎಚ್.ಎಸ್.ಆರ್ , ರಹಮತ್ ತರೀಕೆರೆ, ರಾಜೇಂದ್ರ ಚೆನ್ನಿ , ಮೊಗಳ್ಳಿ ಗಣೇಶ್ ಮುಂತಾದವರ ಸಂಶೋಧನೆ, ವಿಮರ್ಶೆಯಲ್ಲಿ ದೇಸಿ ಚಿಂತನೆಯ ಹುಡುಕಾಟದ ನೆಲೆಗಳು ಭಿನ್ನ ದಾರಿಗಳಲ್ಲಿ ಕ್ರಮಿಸಿವೆ ಮತ್ತು ಕ್ರಮಿಸುತ್ತಿವೆ. ಅದು ಸಿ.ಎನ್. ಆರ್ ಅವರಲ್ಲಿ ಇನ್ನೊಂದು ಮಗ್ಗಲು ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ.

ಈ ಕೃತಿಯನ್ನು ಕುರಿತಂತೆ ” ಜನಪದ ಮಹಾಕಾವ್ಯಗಳನ್ನು ವಿಶ್ವಾತ್ಮಕ ನೆಲೆಯಲ್ಲಿ, ಭಾರತೀಯ ನೆಲೆಯಲ್ಲಿ, ಮತ್ತು ಸ್ಥಳೀಯ ನೆಲೆಯಲ್ಲಿ ನೋಡಿದ ಕ್ರಮಗಳಿಂದಾಗಿ ಹೊಸ ಅನುಭವಗಳು ಇಲ್ಲಿ ದೊರೆಯುತ್ತವೆ. ಬದಲಾದ ನಿ ಯೋಗಗಳಿಂದಾಗಿ ಹೊಸ ಸಾಹಿತ್ಯ ನಿರ್ಮಾಣವಾಗುವುದು, ಹೊಸ ರಂಗ ಹುಟ್ಟಿಕೊಳ್ಳುವುದು, ಗಂಡು ಹೆಣ್ಣಿನ ಸಂಬಂಧಗಳು ಪಲ್ಲಟಗೊಳ್ಳುವುದು, ಜನಾಂಗಿಕ ಅಸ್ಮಿತೆಯನ್ನು ಕಟ್ಟಿಕೊಳ್ಳುವುದು –ಹೀಗೆ ಆಧುನಿಕತೆಯ ಜಗತ್ತಿನಲ್ಲಿ ಆಧುನಿಕ ರೂಪಕಗಳು ಇಂತಹ ಮೌಖಿಕ ಮಹಾಕಾವ್ಯಗಳಿಂದ ನಿರಂತರವಾಗಿ ಹುಟ್ಟಿಕೊಳ್ಳುತ್ತಲೇ ಇರುತ್ತವೆ.

ಡಾ. ಸಿ.ಎನ್. ರಾಮಚಂದ್ರನ್ ಅವರು ಬದಲಾಗುತ್ತಿರುವ ಇಂತಹ ನಿಯೋಗಗಳನ್ನು ಮತ್ತು ರೂಪಾಂತರಗಳನ್ನು ಹಿಡಿದಿಟ್ಟಿದ್ದಾರೆ. ಮತ್ತು ನಾವು ಹೊಸದಾಗಿ ಹಿಡಿಯಲು ಅವಕಾಶ ಕಲ್ಪಿಸಿದ್ದಾರೆ” ಎಂದು ಪ್ರೊ.ಬಿ.ಎ. ವಿವೇಕ ರೈ ಅವರು ಮುನ್ನುಡಿಯಲ್ಲಿ ಹೇಳುತ್ತಾರೆ. ಇದು ಈ ಕೃತಿಯ ಪ್ರಾಮುಖ್ಯತೆಯನ್ನು ಗುರುತಿಸುತ್ತದೆ. ಮುಖ್ಯವಾಗಿ ಕನ್ನಡದಲ್ಲಿ ಜಾಗತಿಕ ಜಾನಪದ ಮಹಾಕಾವ್ಯಗಳ ಹೊಟ್ಟೆಯೊಳಗಿಂದ ಹುಟ್ಟಿದ ವ್ಯಾಖ್ಯಾನಗಳ ಮೂಲಕ ಜನಪದ ಮಹಾಕಾವ್ಯಗಳನ್ನು ಪರಿಶೀಲಿಸುವ ತೀರಾ ಸವಕಲು ವಿಶ್ಲೇಷಣಾ ವಿಧಾನವೊಂದಿತ್ತು. ಅಂತಹ ಹಳೆ ವಿಧಾನವನ್ನು ಸಿ.ಎನ್.ಆರ್ ಅವರು ಬಳಸಿಲ್ಲ ಎನ್ನುವುದು ಸಮಾಧಾನಕರ ಸಂಗತಿ. ಹಾಗಾಗಿ ಅವರ ವಿಶ್ಲೇಷಣೆಯಲ್ಲಿ ಹೊಸ ಹುಡುಕಾಟದ ಸೆಳಕುಗಳು ಕಾಣಿಸಿಕೊಳ್ಳುತ್ತವೆ.

 

ಮಹಾಕಾವ್ಯಗಳ ಕುರಿತಂತೆ ಇಂತಹ ವ್ಯಾಪಕ ಅಧ್ಯಯನದಿಂದ ಹುಟ್ಟಬಹುದಾದ ಫಲಿತಗಳು ಈ ಕೃತಿಯಲ್ಲಿ ಸಾಧ್ಯವಾಗಿಲ್ಲ.ಕಾರಣ ಇಲ್ಲಿನ ವಿಶ್ಲೇಷಣೆಯಲ್ಲಿ ಜನಪದ ಮಹಾವ್ಯಗಳ ಪರಿಚಯ, ಹೋಲಿಕೆ ಸಾಮ್ಯಗಳ ತುಲನೆಯ ಆಚೆ ಗಂಭೀರ ಒಳನೋಟಗಳು ಕಾಣುವುದಿಲ್ಲ. ಆಯಾ ಜನಪದ ಮಹಾಕಾವ್ಯಗಳು ಅಲ್ಲಲ್ಲಿನ ಸಾಂಸ್ಕೃತಿಕ ಮತ್ತು ರಾಜಕೀಯದ ಚಾರಿತ್ರಿಕ ಕಾರಣದ ಹಿನ್ನೆಯಲ್ಲಿ ಹುಟ್ಟಿರುತ್ತವೆ, ಆ ಚಾರಿತ್ರಿಕ ಹಿನ್ನೆಲೆಯ ಪರಿಚಯವಿಲ್ಲದೆ ಕೇವಲ ಮಹಾಕಾವ್ಯಗಳನ್ನು ವಿಶ್ಲೇಷಣೆಗೆ ಒಳಗು ಮಾಡಿದರೆ ಉಂಟಾಗಬಹುದಾದ ಅಪಾಯ ಈ ಕೃತಿಯಲ್ಲಿ ಕಾಣುತ್ತದೆ.

ಮುಖ್ಯವಾಗಿ ಒಟ್ಟು ಜನಪದ ಮಹಾಕಾವ್ಯಗಳ ಒಳನೇಯ್ಗೆಯಲ್ಲಿ ಇರಬಹುದಾದ ಸಮಾನ ಎಳೆ ಯಾವುದು ಎನ್ನುವುದು ಕೃತಿಯಲ್ಲಿ ಸ್ಪಷ್ಟಗೊಳ್ಳುವುದಿಲ್ಲ. ಹಾಗಾಗಿ ಇಲ್ಲಿ ವಿಮರ್ಶಾತ್ಮಕ ನೆಲೆ ಹೆಚ್ಚಾಗಿ, ಸಂಶೋಧನಾತ್ಮಕ ಅಧ್ಯಯನದ ಆಳ ಇಲ್ಲವಾಗಿದೆ. ಸಿ.ಎನ್.ಆರ್ ಕೃತಿಯ ಮೊದಲಿಗೆ ತಮ್ಮ ಅಧ್ಯಯನಕ್ಕೆ ಇರಬಹುದಾದ ಮಿತಿಗಳನ್ನು ವಿನಯದಿಂದಲೇ ಹೇಳಿಕೊಂಡಿದ್ದಾರೆ. ಅಂತೆಯೇ ಇಂತಹ ಬೃಹತ್ ಕಥನಗಳನ್ನು ಅಧ್ಯಯನಕ್ಕೆ ಆಯ್ದುಕೊಂಡಾಗ ಇರಬಹುದಾದ ಸಮಸ್ಯೆಯೂ ಇಲ್ಲಿ ಕಾಣುತ್ತದೆ.

ಇಂತಹ ಕೆಲವು ಮಿತಿಗಳಾಚೆಯೂ ಕೃತಿಯ ಹೆಚ್ಚುಗಾರಿಕೆಯ ದೃಷ್ಟಿಯಿಂದ ಇದೊಂದು ಮಹತ್ವದ ಕೃತಿಯಾಗಿದೆ. ಜನಪದ ಮಹಾಕಾವ್ಯದ ಅಧ್ಯಯನಕಾರರಿಗೊಂದು ಉತ್ತಮ ಪ್ರವೇಶಿಕೆಯನ್ನೂ ಇದು ಒದಗಿಸುತ್ತದೆ. ಡಾ. ಸಿ.ಎನ್. ರಾಮಚಂದ್ರನ್ ಅವರ ಅಪಾರ ಶ್ರಮ, ಶ್ರದ್ಧೆ ಈ ಅಧ್ಯಯನದಲ್ಲಿ ಕಾಣುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಅವರು ಅಭಿನಂದನಾರ್ಹರು

 

ಡಿಸೆಂಬರ್ 2, 2010 / odubazar

ಮತ್ತೆ ಮತ್ತೆ ಬೇಂದ್ರೆ ಮತ್ತು ಹುಚ್ಚುತನವೇ ಅನುಗ್ರಹ ನೀಷೆ

ಮತ್ತೆ ಮತ್ತೆ ಬೇಂದ್ರೆ ಮತ್ತು ಹುಚ್ಚುತನವೇ ಅನುಗ್ರಹ ನೀಷೆ ಕೃತಿಗಳ ಬಿಡುಗಡೆ ಕಾರ್ಯಕ್ರಮ ಇತ್ತೀಚಿಗೆ ಶಿವಮೊಗ್ಗದಲ್ಲಿ ನಡೆಯಿತು .ಕವಿ ಚೆನ್ನವೀರ ಕಣವಿ ,ಕೆ.ಸಿ.ಶಿವಾರೆಡ್ಡಿ , ಎಸ್. ಗಂಗಾಧರಯ್ಯ , ಎಂ.ಬಿ ನಟರಾಜ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ.

ಡಿಸೆಂಬರ್ 2, 2010 / odubazar

ಇದೊಂದು ಭಿನ್ನವಾದ ಕಾದಂಬರಿ…

-ಆರ್ .ವಿಜಯರಾಘವನ್
ಸತ್ಯನಾರಾಯಣ ಅವರ ಈವರೆಗಿನ ಕಥೆ/ಕಾದಂಬರಿಗಳಿಗಿಂತ ಭಿನ್ನವಾದ ಕಾದಂಬರಿ ಬರೆದಿದ್ದಾರೆ. ಅದನ್ನು ವಿಚ್ಛೇದನಾ-ಪರಿಣಯವೆಂದು ಕರೆದು ಕಾಲದ ಚಲನೆಯ ಕಾನ್ಸೆಪ್ಟನ್ನೇ ಹಿಂದೆ ಮುಂದೆ ಮಾಡಿದ್ದಾರೆ.

ಹಾಗೆ ಮಾಡುವುದರ ಮೂಲಕ ತಾವು ಕಥೆಗಾರರಾಗಿ (ಕಾದಂಬರಿಕಾರರೂ ಕಥೆಗಾರರೇ ತಾನೆ?) ತಮ್ಮದೇ ರೂಢಿಗೆ ಸಂದಿದ್ದ ಆಲೋಚನೆಯ ಕ್ರಮವನ್ನು, ಅಭಿವ್ಯಕ್ತಿಯ ಸ್ವರೂಪವನ್ನು ಬದಲಾಯಿಸಿಕೊಂಡಿರುವುದಾಗಿಯೂ, ಓದುಗರು ಕೂಡ ಈ ಬದಲಾವಣೆಗೆ ತೆರೆದುಕೊಳ್ಳಬೇಕೆಂದೂ ಆಶಿಸುತ್ತಿರುವರೆಂದು ನಂಬಲು ಕಾರಣಗಳಿವೆ ಈ ಹಿಂದೆ ಮುಂದಾಗುವುದನ್ನು ಕುರಿತು ಕಾದಂಬರಿಯ ನಾಮಾಂಕಿತ ಅಧ್ಯಾಯಗಳು ವಿವರಿಸುವುದಿಲ್ಲ.

ಅಲ್ಲಿ ಹೆಸರುಗಳೂ ನೆಪಗಳಾಗಿ ಒದಗುತ್ತವೆ.  ವಿಚ್ಛೇದನಾ ಪರ್ವದ ನಾಂದಿಯೆಂದು ಹೆಸರುಗೊಂಡ ಅಧ್ಯಾಯದಲ್ಲಿ ಆಯುಮಾನ ಹೆಚ್ಚಾಗಿ ಆ ಕಾರಣದಿಂದ ದಾಂಪತ್ಯ ಜೀವನದ ಕಾಲವು ಹೆಚ್ಚಾಗಿ -ಅದು ನಾವು ಡಾಕ್ಯುಮೆಂಟರಿ ಉದ್ದದ ಸಿನಿಮಾ ನೋಡಲು ಹೋಗಿ ಅದು ಇಡೀ ರಾತ್ರಿ ನಡೆವ ಕೇಳಿಕೆಯಾಗಿಹೋದ ಹಾಗೆ- ಅದು ಸೇರದೆ ವಿಚ್ಛೇದನಗಳು ಕಾದಂಬರಿಯ ದೇಶದ ಸಂದರ್ಭದಲ್ಲಿ ಬೇಕಾಯಿತೆನ್ನುವ ಪ್ರಸ್ತಾವನೆಯಿದೆ ಮತ್ತು ಕಾಲ ಬದಲಾಗಿರುವುದರಿಂದ ಮನುಷ್ಯನ ಬದುಕು ಸರಳವಾಗಿರುವುದು ಸಾಧ್ಯವೇ ಇಲ್ಲ ಎನ್ನುವ ನಿಲುವು ತಳೆಯುವ ಸಾಹಿತ್ಯ ಪ್ರಪಂಚವನ್ನು ಇಲ್ಲಿ ಕಟ್ಟಲಾಗಿದೆ.

ಈ ಮೂಲದಿಂದಲೇ ವಿಚ್ಛೇದನಾ-ಪರಿಣಯವೆಂದು ಹೆಸರುಗೊಂಡಿರುವುದು ಮಹಾನ್ ಆಂತರಿಕ ವ್ಯವಸ್ಥೆಯೊಂದರ ಪರ್ವ. ಅದು ಒಳಗೊಳ್ಳುವೆಲ್ಲವೂ ಎಂದೆಂದಿಗೂ ಘಟಿಸುತ್ತ ಇರುವ ಮಹಾ… ಭಾರತದ ಕಥಾನಕದ ಒಂದು ಅಂದಿನ ಹಾಗೆ. ಕೊನೆಯೆನ್ನುವುದು ನಶ್ವರ. ಆದ್ದರಿಂದಲೇ ಇಲ್ಲಿ ಕಥೆಯನ್ನುವುದು ಹಿಂದಿನ ಅನಂತವನೂ ಮುಂದಿನ ಅನಂತವನ್ನೂ ಒಂದುದಿನದಲ್ಲಿ ಇರಿಸಿ ನೋಡುವ ಸನ್ನಾಹ.

ಕಾದಂಬರಿಯ ಕೊನೆಯಲ್ಲಿಯೂ ಒಂದು ವಿಚ್ಛೇದನದ ಪ್ರಸ್ತಾಪವಿದೆ. ಅದು ಫಾತಿಮಾಳದ್ದು. ಶ್ರೀರಾಮಚಂದ್ರನ ಸರಯೂ ನದಿಯಲ್ಲಿ ಅವಳ ವಿಚ್ಛೇದನವೂ ಸರಿದುಹೋಗುತ್ತದೆ. ಈ ಸರಯೂ ನದಿ ಕಾಲರೂಪಿಯಾಗಿ ನಿರಂತರ ಹರಿಯುತ್ತ ಏನೊಂದು ಬದಲಾವಣೆಯೂ ತನ್ನಲ್ಲಿ ಘಟಿಸುತ್ತಲಿಲ್ಲ ಎನ್ನುವುದಕ್ಕೆ ಕೊರಗದೆ ಇರುತ್ತಿದೆ. ವಿಚ್ಛೇದನವೂ ರಾಮನಿಂದ ಫಾತಿಮಾಳವರೆಗೂ ಮುಂದುವರಿಯುತ್ತಲೇ ಇದೆ.

ಕಾದಂಬರಿ ಶುರುವಾಗುವುದು ಕೋದಂಡರಾಮಪುರವೆಂಬ -ಪ್ರಾಯಶಃ- ದೇಶದಲ್ಲಿ ಉಲ್ಬಣಗೊಂಡ ವಿಚ್ಛೇದನಗಳ ದಾವೆಗಳನ್ನು ಇತ್ಯರ್ಥಗೊಳಿಸುವ ವ್ಯವಸ್ಥೆಗೆ ಒಂದು ಜಾಗ ಹುಡುಕುವುದರ ಮೂಲಕ. ಅದು ಹಳೆಯ ವಾಡೆಯೊಂದರಲ್ಲಿ ಸಿಕ್ಕಿಬಿಡುತ್ತದೆ. ಮುಂದೆ ಮುಂದೆ ಕಥೆಯಲ್ಲಿ ಕಾಲದ ಚೌಕಟ್ಟಿನೊಳಗೆ ಬೀಗ ಜಡಿಸಿಕೊಂಡಿದ್ದ ಹಿಂದಿನ ವಾಡೆಯಲ್ಲಿನ ನಿಲುವುಗನ್ನಡಿ ಹೊರತು ಉಳಿದೆಲ್ಲ ಹೊಸತರಂತಿದ್ದ ವಸ್ತುಗಳು ವಾಡೆಯ ಬೀಗ ತೆಗೆದ ಬಳಿಕ ಧೂಳೀಪಟವಾಗಿಹೋಗುತ್ತವೆ.

Read more…

ನವೆಂಬರ್ 30, 2010 / odubazar

ಕಾಡಿನ ಹುಡುಗನ ಓದಿನ ಹಾದಿ – ಲೇರಿಯೊಂಕ

-ಡಾ. ನಾ. ಸೋಮೇಶ್ವರ

ಯಕ್ಷ ಪ್ರಶ್ನೆ

“ಕೇವಲ ಶಿಕ್ಷಣವೊಂದೇ ಮುಚ್ಚಿದ ಬಾಗಿಲುಗಳನ್ನು ತೆಗೆಯುವ ಕೀಲಿಕೈ ಆಗಿದೆ. ಒಂದು ಕಾಲಕ್ಕೆ ಶಿಕ್ಷಣವನ್ನು ವಿರೋಧಿಸಿದ್ದ, ಮಕ್ಕಳನ್ನು ಕಳೆದುಕೊಳ್ಳುವ ಭಯ ಹೊಂದಿದ್ದ ಮಾಸಯಿಗಳು ಈಗ ವ್ವಾಸ್ತವವನ್ನು ಒಪ್ಪಿಕೊಳ್ಳೂತ್ತಿದ್ದಾರೆ. ಸಹಾಯಕ್ಕಾಗೊ ಮೊರೆಯಿಡುತ್ತಿದ್ದಾರೆ. ಆದರೆ ಬದುಕುಳಿಯಲು ನಿರ್ಧರಿಸಿದ್ದಾರೆ.”-ಟೆಪಿಲಿಟ್ ಓಲೆ ಸಾಯ್ ತೋತಿ
ಟೆಪಿಲಿಟ್ ಓಲೆ ಸಾಯ್‍ತೋತಿಯ ಮಾತುಗಳು ಇಡೀ  ಕಾದಂಬರಿಯ ಹೂರಣವನ್ನು ನಮ್ಮತೆರೆದಿಡುತ್ತದೆ.  ಮಾಸಯಿ, ಆಪ್ರಿಕದ ಕೀನ್ಯಾ ದೇಶದಲ್ಲಿರುವ ಒಂದು ಗುಡ್ಡಗಾಡು ಜನಾಂಗದ ಹೆಸರು. ಲೇರಿಯೊಂಕ, ಓರ್ವ ಮಾಸಯಿ ಬುಡಕಟ್ಟಿನ ದನಗಾಹಿ ಹುಡುಗ. ಬಿಳಿಯರು ಮಾಸಯಿ ಹುಡುಗರನ್ನು ಶಾಲೆಗೆ ಕರೆದುಕೊಂಡು ಹೋಗಿ ಶಿಕ್ಷಣವನ್ನು ನೀಡಬಯಸುತ್ತಾರೆ.

ಆದರೆ ಮಾಸಯಿ ಜನಾಂಗದವರು ಬಿಳಿಯರನ್ನು ನಂಬುವುದಿಲ್ಲ. ತಮ್ಮ ಮಕ್ಕಳನ್ನು ಕಳುಹಿಸಿಕೊಡಲು ಇಷ್ಟಪಡುವಿದಿಲ್ಲ.  ಆದರೆ ಬಿಳಿಯರ ‘ಬೆಂಕಿ ಉಗುಳುವ ಅಸ್ತ್ರ’ಕ್ಕೆ ಹೆದರಿ ಮಕ್ಕಳನ್ನು ಕಳುಹಿಸಿಕೊಡುತ್ತಾರೆ. ಹೀಗೆ ಹೋಗುವ ಮಕ್ಕಳಲ್ಲಿ ಒಬ್ಬ ಲೇರಿಯೊಂಕಆಗರುತ್ತಾನೆ. ಇವನೇ ಕಥಾನಾಯಕ. ಅವನು ಶಿಕ್ಷಣವನ್ನು ಕಲಿಯುವ ಪರಿಯೇ ಕಾದಂಬರಿಯ ಪ್ರಮುಖ ವಸ್ತು. ಅದೊಂದು ದೀರ್ಘ ಪಯಣದ ರೂಪದಲ್ಲಿದೆ. ಲೇರಿಯೊಂಕ, ಇಡೀ ಆಫ್ರಿಕದ ಕಪ್ಪು ವರ್ಣೀಯರ ಸಾಂಕೇತಿಕ ರೂಪದಲ್ಲಿದ್ದಾನೆ. ಇದು ಕಲ್ಪನೆಯ ಕಥೆಯಲ್ಲ. ವಾಸ್ತವ.

ಈ ಕಾದಂಬರಿಯನ್ನು ಕೀನ್ಯಾದ ಹೆಸರಾಂತ ಕಾದಂಬರೀಕಾರ ಹೆನ್ರಿ ಆ. ಓಲೆ ಕುಲೆಟ್ ಬರೆದಿದ್ದಾರೆ. ಇವರು ಈ ಕಾದಂಬರಿಯನ್ನು ಇಂಗ್ಲೀಷಿನಲ್ಲಿಯೇ ಬರೆದಿದ್ದಾರೆ. ಇದು ಓಲೆ ಕುಲೆಟ್ ಅವರ ಪ್ರಥಮ ಕಾದಂಬರಿ. ೧೯೭೧ರಲ್ಲಿ ಈಸ್ ಇಟ್ ಪಾಸಿಬಲ್? ಎನ್ನುವ ಹೆಸರನಿನಲ್ಲಿ ಪ್ರಕಟವಾಗಿದೆ. ‘ಅಕ್ಷರ ಕ್ಷೀರಕ್ಕೆ ಹಾತೊರೆದ ಮಾಸಯಿ ತರುಣ ಹೃದಯಸ್ಪರ್ಶೀ ಕತೆಯು’ ರೋಚಕವೂ, ಮಾನವೀಯವೂ, ವಿನೋದಪೂರ್ಣವೂ ಹಾಗೂ ಕರುಣಾಜನಕವೂ ಆಗಿದೆ. ಜೊತೆಗೆ ಕೀನ್ಯಾ ದೇಶದ ರಾಜಕೀಯ ಸ್ಥಿತ್ಯಂತರದ ಚರಿತ್ರೆಯೂ ಆಗಿದೆ.

ಪ್ರಶಾಂತ್ ಬೀಚಿಯವರು, ಅಂದರೆ ಪ್ರಶಾಂತ್ ಬೀರೂರು ಚಿಕ್ಕಣ್ಣನವರು ಲೇರಿಯೊಂಕ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ. ಬೀರೂರು, ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಶಿಕ್ಷಣ ಪಡೆದು ಈಗ ತಾಂಜಾನಿಯ ವಾಸಿ. ಇದು ಪ್ರಶಾಂತ ಮೊದಲ ಕೃತಿ. ಆದರೆ ಪ್ರಶಾಂತರ ಅನುವಾದ ಸೊಗಸ್ದಾಗಿ ಮೂಡಿ ಬಂದಿದೆ. ಓದಿದರೆ, ಅನುವಾದವೊಂದನ್ನು ಓದುತ್ತಿದ್ದೇವೆ ಎಂದು ಅನಿಸುವುದಿಲ್ಲ. ಇಲ್ಲಿರುವ ಊರು, ಪಾತ್ರಗಳ ಹೆಸರನ್ನು ಬದಲಾಯಿಸಿ ನಮ್ಮ ಕನ್ನಡದ ಹೆಸರನ್ನು ನೀಡಿದರೆ, ಇದು ಕನ್ನಡದ ಕಾದಂಬರೀ ಎಂದೇ ಅನಿಸುತ್ತದೆ. ಅಷ್ಟು ಉತ್ತಮವಾಗಿ ಅನುವಾದ ಮೂಡಿಬಂದಿದೆ.

ಇದು ಕೀನ್ಯಾ ದೇಶದ ಕಥೆಯಾದರೂ, ವಾಸ್ಥವದಲ್ಲಿ ಎಲ್ಲ ಬುಡಕಟ್ಟು ಜನರ ಕಥೆಯಾಗಿದೆ. ನೋವಾಗಿದೆ.
ಕನ್ನಡಿಗರು ಈ ಕೃತಿಯನ್ನು ಓದಬೇಕು

ಪುಸ್ತಕದ ಶೀರ್ಷಿಕೆ ಲೇರಿಯೊಂಕ-ಕಾಡಿನ ಹುಡುಗನ ಓದಿನ ಹಾದಿ
ಇಂಗ್ಲೀಷ್ ಮೂಲ ಹೆನ್ರಿ ಆರ್. ಓಲೆ ಕುಲೆಟ್
ಕನ್ನಡ ಅನುವಾದ ಪ್ರಶಾಂತ್ ಬೀಚಿ (ಪ್ರಶಾಂತ್ ಬೀರೂರು ಚಿಕ್ಕಣ್ಣ)
prashanthbc@hotmail.com
ನನ್ನ ಮಾತು ಪ್ರಶಾಂತ್ ಬೀಚಿ (ಪ್ರಶಾಂತ್ ಬೀರೂರು ಚಿಕ್ಕಣ್ಣ)
ಮಹಾಪಯಣ ಹಾಗೂ ಬೆನ್ನುಡಿ ರಹಮತ್ ತರೀಕೆರೆ
ರೇಖಾ ಚ
ಿತ್ರಗಳು
ಸೃಜನ್
ಪ್ರಕಾರ ಕಾದಂಬರಿ
ಮೊದಲ ಮುದ್ರಣ ೨೦೦೮
ಪುಟಗಳು ೨೫೦
ಬೆಲೆ ರೂ.೧೦೦/-
ಪ್ರತಿಗಳಿಗೆ ಸಂಪರ್ಕ ಛಂದ ಪುಸ್ತಕ ಐ-೦೦೪, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-೭೬
chandapustaka@yahoo.com
ಮೊಬೈಲ್ ೯೮೪೪೪ ೨೨೭೮೨


ನವೆಂಬರ್ 30, 2010 / odubazar

‘ಅಮ್ಮ’ ಪ್ರಶಸ್ತಿ ಪ್ರದಾನ ಸಮಾರಂಭ …

ಗುಲ್ಬರ್ಗ ಜಿಲ್ಲೆಯ ಸೇಡಂ ನ  ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ,ರಾಜ್ಯಮಟ್ಟದ ಪ್ರತಿಷ್ಠಿತ ‘ಅಮ್ಮ’ ಪ್ರಶಸ್ತಿ ಪ್ರದಾನ ಸಮಾರಂಭ ಸೇಡಂ ನ ಪಂಚಲಿಂಗೇಶ್ವರ  ದೇವಾಲಯದ ಶಾಂಭವಿ ರಂಗ ಮಂಟಪದಲ್ಲಿ ನಡೆಯಿತು.ಸಾಹಿತಿಗಳಾದ ಡಿ.ಬಿ.ರಜಿಯಾ,ಬಿ.ಎನ್.ಮಲ್ಲೇಶ್ , ಡಾ.ಲಕ್ಷ್ಮಣಕೌಂಟೆ, ಮತ್ತು ಎ.ಆರ್.ಮಣಿಕಾಂತ ಇವರುಗಳಿಗೆ ಅಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನವೆಂಬರ್ 29, 2010 / odubazar

ಬರುತ್ತಿದೆ ಕಾಯ್ಕಿಣಿ ಚಿತ್ರಗೀತೆಗಳ ವಿಮರ್ಶಾ ಪುಸ್ತಕ

ಸಾಹಿತಿ , ಕವಿ ಜಯಂತ್ ಕಾಯ್ಕಿಣಿ ಅವರ ಆಯ್ದ ಚಿತ್ರಗೀತೆ ಗಳ ಬಗೆಗಿನ ವಿಮರ್ಶಾ ಪುಸ್ತಕ ‘ಈ ನಯನ ನೂತನ’ ಅವಿನಾಶ್ ಕಾಮತ್ ಅವರ ಸಂಪಾದಕತ್ವದಲ್ಲಿ ಹೊರ ಬರುತ್ತಿದೆ .ಡಿಸೆಂಬರ್ 5ರಂದು ಕೋಟ ದ ಪ್ರೌಢ ಶಾಲಾ ಆವರಣದಲ್ಲಿ ಈ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ .ನ್ಯೂ ವೇವ್ ಬುಕ್ಸ್ ಈ ಪುಸ್ತಕವನ್ನು ಪ್ರಕಟಿಸಿದೆ