ವಿಷಯದ ವಿವರಗಳಿಗೆ ದಾಟಿರಿ
ಆಗಷ್ಟ್ 12, 2010 / odubazar

ಜಲನಯನ

 ಡಾ.ಆಜಾದ್ ಅವರ ಕವನ ಸಂಕಲನಕ್ಕೆ ಮುನ್ನುಡಿಯ ರೂಪದಲ್ಲಿ ಕೆಲವು ಮಾತುಗಳನ್ನು ಬರೆಯಲು ತುಂಬಾ ಸಂತೋಷವೆನಿಸುತ್ತದೆ. ಮೀನುಗಾರಿಕಾ ವಿಜ್ಞಾನದಲ್ಲಿ ಉನ್ನತ ವ್ಯಾಸಂಗ ಮಾಡಿರುವ ಆಜಾದ್ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿರುವುದು, ಪರದೇಶದಲ್ಲಿದ್ದರೂ ಸಾಹಿತ್ಯಾಭಿಮಾನ ಉಳಿಸಿಕೊಂಡಿರುವುದು ಮೆಚ್ಚಬೇಕಾದ ಸಂಗತಿ. ಇದಕ್ಕಾಗಿ ಒಳನಾಡಿನ ಕನ್ನಡಿಗರೆಲ್ಲರೂ ಅವರ ಬೆನ್ನು ತಟ್ಟಲೇಬೇಕು.

ಹುಟ್ಟು ಗುಣ ಘಟ್ಟ ಹತ್ತ್ತಿದರೂ ಹೋಗುವುದಿಲ್ಲ ಎಂಬ ಗಾದೆಯಿದೆ. ಇದು ಸತ್ಯ. ಆಜಾದ್ ಅಂತವರನ್ನು ನೋಡಿದರೆ ಹುಟ್ಟುಗುಣ ಸಮುದ್ರ ದಾಟಿದರೂ ಹೋಗುವುದಿಲ್ಲ ಅನ್ನಬಹುದು.

    ಯೌವನದಲ್ಲಿ ,ಕಾಲೇಜು ದಿನಗಳಲ್ಲಿ ಎಲ್ಲರೂ ಕವಿಗಳಾಗಿರುತ್ತಾರೆ. ಆದರೆ ನಂತರವೂ ಅಷ್ಟೇ ಸಂಭ್ರಮದಿಂದ, ಮುಗ್ಧತೆಯಿಂದ ಸಾಹಿತ್ಯವನ್ನು ಆರಾಧಿಸುವವರು ಕಡಿಮೆ. ಜೀವನದ ಜಂಜಾಟಗಳಲ್ಲಿ,ಅಥವಾ ದುಡ್ಡು ಮತ್ತು ಅಧಿಕಾರದ ವ್ಯಾಮೋಹದಲ್ಲಿ ಸಾಹಿತ್ಯ,ಸಂಗೀತ, ನಾಟಕ,ಕಲೆ ಮುಂತಾದವುಗಳಿಗೆ ಅಗತ್ಯವಾದ ಸೃಜನಶೀಲ ಮನಸ್ಸನ್ನು ,ಸೂಕ್ಷ್ಮ ಸಂವೇದನೆಗಳನ್ನು ಉಳಿಸಿಕೊಳ್ಳುವುದು ಸುಲಭವಲ್ಲ. ಗೆಳೆಯ ಆಜಾದ್ ಐವತ್ತರ ಹರಯದಲ್ಲೂ ಕಾಲೇಜು ದಿನಗಳ ಉತ್ಸಾಹವನ್ನು ಉಳಿಸಿಕೊಂಡಿದ್ದಾರೆ ಎನ್ನುವುದು ಅವರ ಕವನಗಳನ್ನು ಓದಿದಾಗ ತಿಳಿಯುತ್ತದೆ.

      ಕವಿತೆಗಳು ಹೇಗಿರಬೇಕು? ಯಾವುದು ಒಳ್ಳೆಯ ಕವಿತೆ? ಮುಂತಾದ ಪ್ರಶ್ನೆಗಳಿಗೆ ನಿರ್ದಿಷ್ಟವಾದ ಉತ್ತರವಿಲ್ಲ. ಎಲ್ಲ ವಿಮರ್ಶಕರ ಅಥವಾ ಸಹೃದಯರ ಮಾನದಂಡಗಳು ಒಂದೇ ಆಗಿರುವುದಿಲ್ಲ. ಒಬ್ಬ ಕವಿ ಹೀಗೆಯೇ ಬರೆಯಬೇಕು ಎಂದು ಅಪ್ಪಣೆ ಕೊಡುವ ಅಧಿಕಾರ ಯಾರಿಗೂ ಇಲ್ಲ.

ಬೇಂದ್ರೆ ಮತ್ತು ಅಡಿಗರು ಶ್ರೇಷ್ಠ ಕವಿಗಳು ನಿಜ. ಹಾಗಂತ ಎಲ್ಲರೂ ಬೇಂದ್ರೆ ಅಥವಾ ಅಡಿಗರ ಹಾಗೆ ಬರೆಯ ಬೇಕೆಂದು ಅಪೇಕ್ಷಿಸುವುದು ಎಷ್ಟು ಸರಿ? ಈ ಹಿನ್ನೆಲೆಯಲ್ಲಿ ನಾನು ಆಜಾದರ ಕವಿತೆಗಳನ್ನು ಓದಿದ್ದೇನೆ. ಇಲ್ಲಿನ ಕವಿತೆಗಳ ವಸ್ತು ವೈವಿಧ್ಯ ಮೆಚ್ಚುವಂತಿದೆ. ನಿಸರ್ಗ,ಮಾನವ ಸಂಬಂಧಗಳು,ದೇಶಾಭಿಮಾನ, ಭಾಷಾಭಿಮಾನ , ಹಳೆಯ ನೆನಪುಗಳು,ಪರಿಸರ ಪ್ರೇಮ, ಕ್ರೀಡೆ…ಎಲ್ಲವೂ ಇಲ್ಲಿವೆ. ಕೆಲವು ಕಡೆಗಳಲ್ಲಿ ತೀರಾ ಭಾವುಕರಾಗಿ ಬರೆಯುವ ಆಜಾದ್, ಎಲ್ಲಿ ಪ್ರಳಯ-ಎಲ್ಲ ಸುಳ್ಳಯ್ಯ ಎಂದು ವೈಚಾರಿಕತೆಯನ್ನೂ ಪ್ರಕಟಿಸಿದ್ದಾರೆ. ಇವರ ಕವಿತೆಗಳ ಶೈಲಿಯಲ್ಲೂ ವೈವಿಧ್ಯವಿದೆ.

ಗಾಂಭೀರ್ಯ,ತಮಾಷೆ, ಗ್ರಾಂಥಿಕ ಭಾಷೆ, ಗ್ರಾಮ್ಯ ಭಾಷೆ, ಲಯ ಬದ್ಧ ರಚನೆಗಳು, ಬಂಧದ ಹಂಗಿಲ್ಲದ ಗಪದ್ಯ ಮುಂತಾದ ವಿವಿಧ ಮಾದರಿಗಳಲ್ಲಿ ಕವಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದಾರೆ. ಇಡಿಗವನ ಅಣಕುವಾಡುಗಳನ್ನೂ ನೀಡಿದ್ದಾರೆ.  ಕರೋಕೆ ಪ್ರಿಯರಿಗಾಗಿ ಬರೆದ ಹಾಡುಗಳು ತಮ್ಮ ಉದ್ದೇಶದಲ್ಲಿ ಯಶಸ್ವಿಯಾಗಿವೆ. ಇಡಿಗವನಗಳಲ್ಲೆ ಆಜಾದ್ ಹೆಚ್ಚು ಇಷ್ಟವಾಗುತ್ತಾರೆ.

     ದೇಶದ ಹೊರಗಿದ್ದು ತಮ್ಮ ವೃತ್ತಿ ಜೀವನದ ಗುರುತರ ಜವಾಬ್ದಾರಿಯ ನಡುವೆಯೂ ಕವಿತೆಯನ್ನು ಪ್ರೀತಿಸುತ್ತಿರುವುದಕ್ಕೆ, ಕಾವ್ಯೋತ್ಸಾಹವನ್ನು ಉಳಿಸಿಕೊಂಡಿರುವುದಕ್ಕೆ ಡಾ.ಆಜಾದ್ ಅವರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಮುಂಬರುವ ದಿನಗಳಲ್ಲಿ ಅವರಿಂದ ಇನ್ನಷ್ಟು ಉತ್ತಮವಾದ ಕವಿತೆಗಳು ಮೂಡಿಬರಲಿ ಎಂದು ಹಾರೈಸುತ್ತೇನೆ.
-ಎಚ್.ಡುಂಡಿರಾಜ್

ನಿಮ್ಮ ಟಿಪ್ಪಣಿ ಬರೆಯಿರಿ